7

ಏಡ್ಸ್: ಜಿಲ್ಲೆಯಲ್ಲಿ ಈ ವರ್ಷ 361 ಸಾವು

Published:
Updated:

ಹಾವೇರಿ: ಜಿಲ್ಲೆಯಲ್ಲಿ 8,929 ಎಚ್‌ಐವಿ ಸೋಂಕಿತರು ಪತ್ತೆಯಾಗಿದ್ದು, 2008ರಿಂದ ಈ ತನಕ 1,636 ಮಂದಿ ಮೃತಪಟ್ಟಿದ್ದಾರೆ. ಈ ವರ್ಷವೇ ಗರಿಷ್ಠ ಸಾವುಗಳು ವರದಿಯಾಗಿದ್ದು, ನವೆಂಬರ್ ತನಕ 361ಕ್ಕೇರಿದೆ.

ಜಿಲ್ಲಯಲ್ಲಿ 2002ರಲ್ಲಿ ಎಚ್ಐವಿ– ಏಡ್ಸ್‌ ಕಾರ್ಯಕ್ರಮ ಆರಂಭಗೊಂಡಿದ್ದು, ಈ ತನಕ 3.12 ಲಕ್ಷ ಸಾಮಾನ್ಯರು ಹಾಗೂ 3.13 ಲಕ್ಷ  ಗರ್ಭಿಣಿಯರನ್ನು ಪರೀಕ್ಷಿಸಲಾಗಿದೆ. ಈ ಪೈಕಿ 7,833 ಸಾಮಾನ್ಯರು ಹಾಗೂ 619 ಗರ್ಭಿಣಿಯರಲ್ಲಿ ಸೋಂಕು ಪತ್ತೆಯಾಗಿತ್ತು. 9,827 ಮಕ್ಕಳ ಪೈಕಿ 477 ಮಕ್ಕಳು ಸೋಂಕಿತರಾಗಿದ್ದು, 424 ಮಕ್ಕಳು ಎ.ಆರ್.ಟಿಯಲ್ಲಿ ನೋಂದಾಯಿಸಿದ್ದು, 322 ಮಕ್ಕಳು ಎ.ಆರ್.ಟಿ ಚಿಕಿತ್ಸೆ ಪಡೆಯುತ್ತಿದ್ದಾರೆ.

2008ಕ್ಕಿಂತ ಮೊದಲು ಎಚ್ಐವಿ ಬಾಧಿತರು ಚಿಕಿತ್ಸೆಗಾಗಿ ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಬಳ್ಳಾರಿಗೆ ಹೋಗಬೇಕಾಗಿತ್ತು. 2007ರಲ್ಲಿ ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕವು ಜಿಲ್ಲೆಯಲ್ಲಿ ಆರಂಭಗೊಂಡಿತು. 2008ರ ಜನವರಿ 17ರಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಎ.ಆರ್.ಟಿ ಕೇಂದ್ರ ಪ್ರಾರಂಭವಾಯಿತು. ಸದ್ಯ ಜಿಲ್ಲೆಯಲ್ಲಿ 11 ಉಪ ಎಆರ್‌ಟಿ ಕೇಂದ್ರಗಳಿವೆ.

ಆ ಬಳಿಕ ಮರಣ ಪ್ರಮಾಣ ದಾಖಲಿಸಲಾಗುತ್ತಿದೆ. ಬಹುತೇಕರು ನೋಂದಣಿ ಮಾಡಿಕೊಂಡಿದ್ದರೂ, ಔಷಧಿ ಕೊರ್ಸ್ ಮುಂದುವರಿಸದ ಕಾರಣ ಮೃತಪಟ್ಟಿದ್ದಾರೆ. ಎಚ್ಐವಿ ಸೋಂಕಿತರ ಪೈಕಿ ಜಿಲ್ಲೆಯು ರಾಜ್ಯದಲ್ಲಿ 25ನೇ ಸ್ಥಾನದಲ್ಲಿದೆ.

ವಿಶ್ವದಲ್ಲಿ 3.4 ರಿಂದ 3.6 ಕೋಟಿ ಎಚ್‌ಐವಿ ಸೋಂಕಿತರಿದ್ದರೆ, ಭಾರತದಲ್ಲಿ 25ರಿಂದ 31 ಲಕ್ಷ ಎಂದು ಅಂದಾಜಿಸಲಾಗಿದೆ. ರಾಜ್ಯದಲ್ಲಿ 2.5 ಲಕ್ಷ ಸೋಂಕಿತರಿದ್ದು, ರಾಜ್ಯವು ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ಜಿಲ್ಲೆಯ ಎ.ಆರ್.ಟಿ ಕೇಂದ್ರಗಳಲ್ಲಿ 7,006 ಸೋಂಕಿತರು ನೋಂದಣಿ ಆಗಿದ್ದರೆ, ಪ್ರಸ್ತುತ 3,432 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರ್ಯಕ್ರಮ: 2004ರಲ್ಲಿ ಶಿಗ್ಗಾವಿ ಮತ್ತು ಹಿರೇಕೆರೂರಿನಲ್ಲಿ ಐಸಿಟಿಸಿ ಕೇಂದ್ರ ಪ್ರಾರಂಭವಾಗಿದೆ. ನಂತರ 2006ರಲ್ಲಿ ರಾಣೆಬೆನ್ನೂರು, ಸವಣೂರು, ಬ್ಯಾಡಗಿ, ಹಾನಗಲ್ ತಾಲ್ಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಾದ ಗುತ್ತಲ, ಮಾಸೂರು, ರಟ್ಟೀಹಳ್ಳಿ ಅಕ್ಕಿಆಲೂರು ಆಸ್ಪತ್ರೆಗಳಲ್ಲಿ ಪ್ರಾರಂಭವಾದವು ಎಂದು ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತ ನಿಯಂತ್ರಣ ಘಟಕದ ಅಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿ ಸೌಲಭ್ಯಗಳು: ಜಿಲ್ಲೆಯಲ್ಲಿ 13- ಐಸಿಟಿಸಿ, 64 ಎಫ್ ಐಸಿಟಿಸಿ (24X7 ) ಹಾಗೂ 11 ಪಿಪಿಪಿ ಕೇಂದ್ರಗಳಿವೆ. ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ ತಾಲ್ಲೂಕು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಐಸಿಟಿಸಿ ಕೇಂದ್ರಗಳಿವೆ. 1 ಎಸ್.ಟಿ.ಡಿ ಕೇಂದ್ರ, 1-ರಕ್ತ ನಿಧಿ ಕೇಂದ್ರ, 7 ರಕ್ತ ಸಂಗ್ರಹಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ.

ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ 29 ಹಾಗೂ ದೇವರಾಜ ಅರಸು ವಸತಿ ನಿಗಮದಡಿ 35 ಮನೆಗಳನ್ನು ಬಾಧಿತರಿಗೆ ನೀಡಲಾಗಿದೆ. ಧನಶ್ರೀ ಯೋಜನೆಯಲ್ಲಿ 27 , ಚೇತನಾ ಅಡಿ 35 ಮತ್ತು ಉದ್ಯೋಗಿನಿ ಅಡಿ 25 ಮಹಿಳೆಯರು ಫಲಾನುಭವಿಗಳಿದ್ದಾರೆ. ಪುನರ್ವಸತಿ ಅಡಿ 94, ಮೈತ್ರಿ ಅಡಿಯಲ್ಲಿ 65 ಹಾಗೂ ವಸತಿ ಯೋಜನೆಯಡಿಯಲ್ಲಿ 18 ಲಿಂಗತ್ವ ಅಲ್ಪಸಂಖ್ಯಾತರು ಫಲಾನುಭವಿಗಳಿದ್ದಾರೆ. ಸೋಂಕಿತ 695 ಮಕ್ಕಳಿಗೆ ತಿಂಗಳಿಗೆ ತಲಾ ₨650ರಿಂದ ₨700 ಸಹಾಯಧನ ನೀಡಲಾಗುತ್ತಿದೆ. 42 ಮಕ್ಕಳು ವಸತಿ ನಿಲಯದಲ್ಲಿ ಇದ್ದಾರೆ ಎಂದು ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತ ನಿಯಂತ್ರಣ ಘಟಕದ ಅಧಿಕಾರಿಗಳು ಮಾಹಿತಿ ನೀಡಿದರು.

ಆಚರಣೆ: ಎಚ್‌ಐವಿ ವಿಶ್ವಸಂಸ್ಥೆಯು ‘ಸೊನ್ನೆಗೆ ತನ್ನಿ’ ಎಂಬ ಘೋಷಣೆ ಮಾಡಿದ್ದರೆ, ದೇಶದಲ್ಲಿ ‘ನನ್ನ ಆರೋಗ್ಯ ನನ್ನ ಹಕ್ಕು’ ಎಂಬ ಘೋಷವಾಕ್ಯ ‘ಆರೋಗ್ಯ ಎಲ್ಲರ ಹಕ್ಕು’ ಧ್ಯೇಯವಾಕ್ಯದೊಂದಿಗೆ ವಿಶ್ವ ಏಡ್ಸ್ ದಿನವನ್ನು ಡಿ.1ರಂದು ಆಚರಿಸಲಾಗುತ್ತಿದೆ.

ಆದರೆ, ತಮ್ಮ ಜೀವದ ಹಂಗು ತೊರೆದು ಎಚ್ಐವಿ ಸೋಂಕಿತರಿಗೆ ಚಿಕಿತ್ಸೆ, ಸಮಾಲೋಚನೆ, ನಿಯಂತ್ರಣಕ್ಕೆ ಯತ್ನಿಸುತ್ತಿರುವ ಅಧಿಕಾರಿ–ಸಿಬ್ಬಂದಿಯನ್ನು ಸರ್ಕಾರವು ದಶಕಗಳ ಬಳಿಕವೂ ಕಾಯಂ ಮಾಡಿಲ್ಲ. ಅವರ ಭವಿಷ್ಯವೂ ತೂಗುಗತ್ತಿ ಅಡಿ ಇದೆ.

ಕಾನೂನು ಸಲಹೆಯೂ ಲಭ್ಯ; ತ್ವರಿತ ಕ್ಷಯ ಪತ್ತೆ!

ಎಚ್‌ಐವಿ ಸೋಂಕಿತರಿಗೆ ಕಾನೂನು ಸೇವೆ ನೀಡಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ‘ಉಚಿತ ಕಾನೂನು ಸಲಹಾ ಕೇಂದ್ರ’ ತೆರೆಯಲಾಗಿದೆ. ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ರತನಕ ವಕೀಲರು ಸಲಹೆ ನೀಡುತ್ತಾರೆ.

ವಲಸಿಗರು, ಹೊರ ಪ್ರದೇಶಗಳಿಗೆ ಉದ್ಯೋಗಕ್ಕೆ ಹೋದವರು, ಚಾಲಕ ಮತ್ತಿತರ ವೃತ್ತಿಯಲ್ಲಿ ವಿವಿಧ ಊರು ಸುತ್ತುವವರು, ಲೈಂಗಿಕ ಕಾರ್ಯಕರ್ತೆಯರು, ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದವರಲ್ಲಿ ಎಚ್ಐವಿ ಸೋಂಕು ಹೆಚ್ಚಾಗಿ ಕಂಡುಬರುತ್ತಿದೆ ಎನ್ನುತ್ತಾರೆ ಹಿರಿಯ ಆಪ್ತ ಸಮಾಲೋಚಕ ಸುಧಾಕರ್.

ಜೀನ್ ಎಕ್ಸ್‌ಪರ್ಟ್ ಯಂತ್ರವು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಆರಂಭಗೊಂಡಿದ್ದು, ತ್ವರಿತ ಕ್ಷಯ ಪತ್ತೆ ಸಾಧ್ಯವಾಗಿದೆ. ಹಲವರಿಗೆ ತ್ವರಿತ ಚಿಕಿತ್ಸೆ ಆರಂಭಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry