7
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಮಗಳ ನೆನಪಿನಲ್ಲಿ ಬಿಕ್ಕಿದ ತಾಯಿ

Published:
Updated:
ಮಗಳ ನೆನಪಿನಲ್ಲಿ ಬಿಕ್ಕಿದ ತಾಯಿ

ಹರಿಹರ: ಮಗುವನ್ನು ಕಳೆದುಕೊಂಡು ಇಪ್ಪತ್ತು ದಿನಗಳಾದರೂ ಮನೆಯಲ್ಲಿ ಮಾಸದ ದುಃಖ, ಆಕ್ರೋಶದಲ್ಲಿ ಒಡೆದು ಹಾಕಿದ ಟಿ.ವಿ, ಮೊಮ್ಮಗಳನ್ನು ಕಳೆದುಕೊಂಡ ಅಜ್ಜಿಯ ನೋವು–ಇವೆಲ್ಲವೂ ಆಶ್ರಯ ಬಡಾವಣೆಯಲ್ಲಿ ಸೂತಕದ ವಾತಾವರಣ ಸೃಷ್ಟಿಯಾಗಿರುವುದಕ್ಕೆ ಕನ್ನಡಿ ಹಿಡಿಯುತ್ತವೆ.

ಸಾಲ ಮಾಡಿ, ₹40 ಸಾವಿರ ಖರ್ಚು ಮಾಡಿದರೂ ಮಗಳನ್ನು ಉಳಿಸಿಕೊಳ್ಳಲು ಆಗಲಿಲ್ಲವಲ್ಲ ಎಂಬ ನೋವು, ಉಳಿದ ಮಕ್ಕಳ ಶಿಕ್ಷಣಕ್ಕೆ ಹಣ ಹೊಂದಿಸುವುದು ಹೇಗೆ ಎಂಬ ಆತಂಕ ಪ್ರಾರ್ಥನಾ ತಾಯಿ ಚೈತ್ರಾ ಅವರ ಮಾತಿನಲ್ಲಿ ವ್ಯಕ್ತವಾಯಿತು. ಮುದ್ದಿನ ಮಗಳನ್ನು ಕಳೆದುಕೊಂಡ ಶೋಕದಲ್ಲಿಯೇ ಪ್ರಾರ್ಥನಾಳ ತಾಯಿ ಚೈತ್ರಾ ನಡೆದ ಅವಘಡವನ್ನು ಗುರುವಾರ ಹಂಚಿಕೊಂಡಿದ್ದು ಹೀಗೆ:

‘ನ.11ರಂದು ನಾನು ಮತ್ತು ಯಜಮಾನರು ಶಾಲೆಗೆ ಹೋಗಿದ್ದೆವು. ಅದೇ ಮೊದಲ ಬಾರಿ ನಮ್ಮ ಯಜಮಾನರು ಶಾಲೆಗೆ ಬಂದಿದ್ದರು. 2ನೇ ತರಗತಿ ಶಿಕ್ಷಕಿ ವನಜಾಕ್ಷಿ ಅವರು, ಪ್ರಾರ್ಥನಾಳ ಅಂಕ ಪಟ್ಟಿಯನ್ನು ತೋರಿಸಿದರು. ತುಂಬಾ ಚೂಟಿ ಹುಡುಗಿ, ಆಟಪಾಠಗಳಲ್ಲಿ ಸದಾ ಮುಂದಿರುತ್ತಾಳೆ ಎಂದು ಅಭಿಮಾನದಿಂದ ಮಾತನಾಡಿದರು. ಅದನ್ನು ಕೇಳಿ ನಮ್ಮ ಯಜಮಾನರಿಗೆ ಖುಷಿಯಾಗಿತ್ತು. ಆಮೇಲೆ ಅವರು ಗಾರೆ ಕೆಲಸಕ್ಕೆ ತೆರಳಿದರು.

ನಾನು ಮನೆಗೆಲಸಕ್ಕೆ ಹೋದೆ. ಒಂದು ಗಂಟೆ ಕಳೆಯುತ್ತಿದ್ದಂತೆ ಮಗಳು ಅನಾಹುತ ಮಾಡಿಕೊಂಡಿರುವ ಮಾಹಿತಿ ದೊರೆಯಿತು. ಎಲ್ಲವನ್ನೂ ತೊರೆದು ಓಡೋಡಿ ಬಂದೆ. ನಗರದ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಸಿ.ಜೆ. ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದರು. ಅಲ್ಲಿ ಸೂಕ್ತ ವ್ಯವಸ್ಥೆಯಿಲ್ಲದ ಕಾರಣ, ಅಲ್ಲಿನ ವೈದ್ಯರು, ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ಕಳುಹಿಸಿದರು.

‘ನಮ್ಮ ಬಳಿ ಇದ್ದ ಬಿಪಿಎಲ್ ಕಾರ್ಡ್‌ಗೆ ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ದೊರೆಯುತ್ತದೆಂದು ಭಾವಿಸಿದ್ದೆವು. ಅವಳಿಗೆ ಪ್ಲಾಸ್ಟಿಕ್ ಸರ್ಜರಿ ಅಗತ್ಯವಿದ್ದು, ಹಣ ಪಾವತಿಸಿದರೆ ಮಾತ್ರ ಚಿಕಿತ್ಸೆ ನೀಡುವುದಾಗಿ ಹೇಳಿದರು. ಕಷ್ಟಪಟ್ಟು ಹಣ ಪಾವತಿಸಿದೆವು’ ಎನ್ನುತ್ತಾರೆ ಅವರು.

‘ಶಸ್ತ್ರಚಿಕಿತ್ಸೆಗೆ ಹೋಗುವ ಮುನ್ನ ಅವಳು ನನ್ನೊಂದಿಗೆ ಮಾತನಾಡಿದ್ದಳು. ಕುಡಿಯಲು ನೀರು ಬೇಕು ಎಂಬ ಹಂಬಲಿಸಿದ್ದಳು. ವೈದ್ಯರ ಆದೇಶದ ಮೇರೆಗೆ ನೀರನ್ನೂ ಕೊಡಲಿಲ್ಲ. ಶಸ್ತ್ರಚಿಕಿತ್ಸೆಯ ನಂತರ ಶನಿವಾರ ತಡರಾತ್ರಿಯೇ ತೀರಿಕೊಂಡಿದ್ದಾಳೆ ಎಂದು ಗೊತ್ತಾಯಿತು. ಆದರೂ, ಮಗಳ ಶವ ನೀಡಲು ಆಸ್ಪತ್ರೆಯ ಸಿಬ್ಬಂದಿ ಭಾನುವಾರ ಮಧ್ಯಾಹ್ನದವರೆಗೆ ಪೀಡಿಸಿದರು. ಚಿಕಿತ್ಸೆಗಾಗಿ ಸುಮಾರು ₹ 40 ಸಾವಿರ ವೆಚ್ಚ ಮಾಡಿದರೂ, ಮಗಳು ಜೀವಂತವಾಗಿ ಹಿಂತಿರುಗಲಿಲ್ಲ’.

‘ನಂದಿನಿ ಧಾರಾವಾಹಿಯ ದೇವ ಸೇನೆ ಪಾತ್ರ ಪ್ರಾರ್ಥನಾಗೆ ಇಷ್ಟವಾಗಿತ್ತು. ‘ನೀಲಿ’ ಧಾರಾವಾಹಿಯಲ್ಲಿರುವಂಥ ಮಾತನಾಡುವ ಗೊಂಬೆ ಕೊಡಿಸುವಂತೆ ಪೀಡಿಸುತ್ತಿದ್ದಳು. ಶಾಲೆಯಲ್ಲಿ ನಡೆಯುವ ನೃತ್ಯಗಳಿಗೆ ಸೇರಿಸುವಂತೆ ಅಂಗಲಾಚುತ್ತಿದ್ದಳು. ನಮ್ಮ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದ ಕಾರಣ ಅವಳ ಆಸೆ ಈಡೇರಿಸಲು ಆಗಲಿಲ್ಲ. ಎಷ್ಟೋ ಸಂದರ್ಭದಲ್ಲಿ ಅವಳೇ ಮನೆಯ ಕಸ ಗುಡಿಸಿ, ನೆಲ ಒರೆಸಿ ನನಗೆ ಸಹಾಯ ಮಾಡುತ್ತಿದ್ದಳು. ಹಾಳಾದ ನಂದಿನಿ ಧಾರಾವಾಹಿ ನನ್ನ ಮಗಳ ಜೀವ ಬಲಿ ತೆಗೆದುಕೊಂಡಿತು’ ಎಂದು ಶಪಿಸಿದರು.

ಮೂರು ತಿಂಗಳಲ್ಲಿ ಎರಡನೇ ಸಾವು

‘ಯಜಮಾನರಿಗೆ ಮಳೆಗಾಲದಲ್ಲಿ ಕೆಲಸ ಸಿಗುವುದಿಲ್ಲ. ನಾನು, ಕಂಡ ಕಂಡವರ ಮನೆ ಪಾತ್ರೆ ತಿಕ್ಕಿ ಅಷ್ಟಿಷ್ಟು ಸಂಪಾದಿಸುತ್ತೇನೆ. ಸಾಲಸೋಲ ಮಾಡಿ ಮೂವರು ಮಕ್ಕಳನ್ನು ಉತ್ತಮ ಶಾಲೆಗೆ ಸೇರಿಸಿದ್ದೆ. ಮೈದುನ ರಾಮು ಅನಾರೋಗ್ಯದಿಂದ ತೀರಿಕೊಂಡು ಮೂರು ತಿಂಗಳೂ ಕಳೆದಿಲ್ಲ. ಆ ದುಃಖದಿಂದ ಹೊರಬರುವಷ್ಟರಲ್ಲೇ ಮತ್ತೊಂದು ದುರ್ಘಟನೆ ಸಂಭವಿಸಿದೆ. ದೇವರಿಗೂ ನಮ್ಮ ಮೇಲೆ ಕರುಣೆ ಇಲ್ಲ’ ಎಂದು ಚೈತ್ರಾ ಅವಲತ್ತುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry