ಸೋಮವಾರ, ಮಾರ್ಚ್ 8, 2021
24 °C

ಮುದ್ದುಮಗುವಿಗೂ ಬೇಕು ಕಾಯಕದ ಕಲಿಕೆ

ಸ್ಮಿತಾ ಅಮೃತರಾಜ್ Updated:

ಅಕ್ಷರ ಗಾತ್ರ : | |

ಮುದ್ದುಮಗುವಿಗೂ ಬೇಕು ಕಾಯಕದ ಕಲಿಕೆ

‘ಮಕ್ಕಳಿರಲವ್ವ ಮನೆ ತುಂಬಾ.’ ಇದು ಹಳೇ ಮಾತಾಯಿತು; ಈಗ ಏನಿದ್ದರೂ ‘ನಾವಿಬ್ಬರು, ನಮಗಿಬ್ಬರು’. ಹಾಗಾಗಿ ಈಗ ಇರುವ ಒಂದೋ ಎರಡು ಮಕ್ಕಳನ್ನು ಸುಧಾರಿಸುವುದರಲ್ಲೇ ಬದುಕು ಸಾಕು ಬೇಕಾಗಿ ಬಿಡುತ್ತದೆ. ಅಂತಹುದರಲ್ಲಿ ಈ ಹಿಂದೆ ನಮ್ಮ ಹಿರಿಯರು ತಮ್ಮ ಅದೆಷ್ಟೋ ಕೆಲಸಗಳ ನಡುವೆ ಡಜನ್‌ಗಟ್ಟಲೆ ಮಕ್ಕಳನ್ನು ಹೊತ್ತು ಹೆತ್ತು ಅವರನ್ನು ಪಾಲನೆ ಪೋಷಣೆ ಮಾಡುತ್ತಿದ್ದರೆಂಬುದನ್ನು ನೆನೆದರೆ ನಿಜಕ್ಕೂ ಅಚ್ಚರಿಯಾಗುತ್ತದೆ! ಹಾಗೇ ನೋಡಿದರೆ ಅಸಲಿಗೆ ಮನೆಯ ಹಿರಿಮಕ್ಕಳೇ ತಾನೇ ಉಳಿದ ಪುಟಾಣಿ ಮಕ್ಕಳ ಹಿರಿತನವಹಿಸಿಕೊಂಡು ಅಮ್ಮನ ಪಟ್ಟಕ್ಕೇರಿಬಿಡುತ್ತಿದ್ದದ್ದು.

ಹಿರಿಯ ಮಗು ಸಣ್ಣದೇ ಆಗಿದ್ದರೂ ಅದರ ಹಿಂದೆ ಒಂದು ತಮ್ಮನೋ ತಂಗಿಯೋ ಇತ್ತೆಂದರೆ ಅದಕ್ಕೆ ತನ್ನಿಂತಾನೇ ಜವಾಬ್ದಾರಿ ರವಾನೆಯಾಗಿಬಿಡುತ್ತಿತ್ತು. ಬಿಡಿ, ಅದು ಹಿಂದಿನ ಕಾಲವಾಯಿತು. ಈಗ ಇಂದಿನ ಕಾಲಕ್ಕೆ ಬರೋಣ. ಈಗ ಚಿಕ್ಕ ಕುಟುಂಬ. ಇರುವ ಒಂದೋ ಎರಡೋ ಮಕ್ಕಳ ಆಸೆ ಆಕಾಂಕ್ಷೆಗಳನ್ನು ಪೂರೈಸುತ್ತಾ, ಅವರ ಬೇಕು ಬೇಡಗಳನ್ನು ಗಮನಿಸುತ್ತಾ ಅವರ ಹಿಂದೆ ಬಿದ್ದು ಓಡುವುದರಲ್ಲಿಯೇ ದಿನದ ಮುಕ್ಕಾಲು ಪಾಲು ಮುಗಿದು ಬಿಡುತ್ತದೆ. ಯಾವ ಪ್ರಾಥಾಮಿಕ ಕೆಲಸಗಳನ್ನು ಮಾಡಲು ಅವರಿಗೆ ಗೊತ್ತಿಲ್ಲ. ಮಕ್ಕಳು ಹೇಳಿದ ಕೆಲಸವನ್ನು ಮಾಡುವುದಿಲ್ಲವೋ? ಅಥವಾ ನಾವೇ ಕಲಿಸುವುದಿಲ್ಲವೋ ಗೊತ್ತಿಲ್ಲ. ಇಂತಹುದರಲ್ಲಿ ಮೊನ್ನೆ ಗೆಳತಿಯೊಬ್ಬಳಿಗೆ ಹುಷಾರು ತಪ್ಪಿದಾಗ ಅವಳ ಪುಟ್ಟ ಮಗಳೊಬ್ಬಳು ಮನೆಮಂದಿಗೆಲ್ಲಾ ತಿಂಡಿ, ಅಡುಗೆ ಮಾಡಿ, ಮನೆಗೆಲಸ ಮಾಡಿಟ್ಟು ತಾನೇ ಸ್ವತಃ ಶಾಲೆಗೆ ತಯಾರಿಯಾಗಿ ಹೋಗುವ ವಿಚಾರ ಕೇಳಿದಾಗ ನಿಜಕ್ಕೂ ಹೆಮ್ಮೆ, ಸಂತಸ ಒಟ್ಟಿಗೇ ಆಯಿತು. ಈ ಕಾಲದಲ್ಲಿ ಕಣ್ಣರಳಿಸಿ ಹೆಮ್ಮೆ ಪಡಬೇಕಾದ ಅಪರೂಪದ ಸಂಗತಿ.

ನಾವು ಎಳವೆಯಲ್ಲಿರುವಾಗ ಕೂಡ ಎಲ್ಲಾ ಕೆಲಸಗಳನ್ನು ಹೀಗೆಯೇ ಮಾಡಿ ಮುಗಿಸಿಬಿಡುತ್ತಿದ್ದೆವು. ಅಮ್ಮನ ಗೈರುಹಾಜರಿಯಿದ್ದ ದಿನಗಳಲ್ಲಿ ಅಮ್ಮನ ಎಲ್ಲಾ ಕೆಲಸಗಳು ನಮ್ಮ ಮೇಲೆಯೇ ಬೀಳುತ್ತಿದ್ದವು. ಇಷ್ಟೆಲ್ಲ ಕೆಲಸಗಳನ್ನು ಅಮ್ಮನಂತೆ ಏಕಕಾಲದಲ್ಲಿ ಮಾಡಲು ನಾವು ಹೇಗೆ ಕಲಿತುಕೊಂಡೆವು ಎಂದರೆ ಉತ್ತರ ಸುಲಭ. ಮಕ್ಕಳು ದೊಡ್ಡವರನ್ನು ಅನುಕರಿಸುವುದು ಸಹಜ. ಅವರಂತೆ ಕೆಲಸ ಮಾಡುವುದು ಎಲ್ಲ ಮಕ್ಕಳಿಗೆ ಪ್ರಿಯವೇ. ಅಮ್ಮ ಬಟ್ಟೆ ತೊಳೆಯಲು ಹೊರಟಳೆಂದರೆ ನಾವೂ ಒಂದು ಗೀಟು ಸೋಪು ಹಿಡಿದುಕೊಂಡು ಅವಳನ್ನೇ ಹಿಂಬಾಲಿಸುತ್ತಿದ್ದೆವು. ಸೋಪು ಮುಗಿಯುವಲ್ಲಿಯವರೆಗೂ ತಿಕ್ಕಿತಿಕ್ಕಿ ತೊಳೆದರೂ ಮಡಿಯಾಗದ ಅಡುಗೆಮನೆಯ ಕೈ ಒರಸು, ಮಸಿ ಬಟ್ಟೆಗಳನ್ನು ತೊಳೆಯುತ್ತಾ ಬಟ್ಟೆ ಒಗೆಯಲು ಕಲಿಯುತ್ತಿದ್ದೆವು. ಅರೆಯುವ ಕಲ್ಲಿನ ಮುಂದೆ ಪದ ಹೇಳುತ್ತಾ ಅಮ್ಮನ ಜೊತೆ ಕೈ ಜೋಡಿಸುತ್ತಿದ್ದೆವು. ಕೆಲವೊಮ್ಮೆ ಸೊಪ್ಪಿಗೆ ಸೌದೆಗೆ ಅಂತ ಹಿರಿಯರ ಜೊತೆ ನಾವೂ ಕತ್ತಿ ಹಿಡಿದು ತಯಾರಾಗಿ ನಿಲ್ಲುತ್ತಿದ್ದೆವು. ಆಗೆಲ್ಲಾ ಹಿರಿಯರು ಯಾವ ಕೆಲಸಕ್ಕೂ ನಮ್ಮನ್ನು ಅಡ್ಡಿಪಡಿಸುತ್ತಿರಲಿಲ್ಲ. ಕತ್ತಿ ಹಿಡಿಯುವಾಗಲೂ ಅಷ್ಟೆ, ಜಾಗ್ರತೆ ವಹಿಸಲಿಕ್ಕೆ ಹೇಳುತ್ತಿದ್ದರೇ ವಿನಾ ‘ಕತ್ತಿ ಮುಟ್ಟಿದರೆ ರಕ್ತ ಬರುತ್ತೆ, ಬೆರಳು ತುಂಡಾಗುತ್ತೆ’ ಅಂತ ಹೆದರಿಸುತ್ತಿರಲಿಲ್ಲ. ‘ಸೋಪು ಮುಗಿದು ಹೋಗುತ್ತೆ, ನೀರು ಖರ್ಚಾಗುತ್ತೆ, ಬಟ್ಟೆ ಕೊಳೆ ಹೋಗಲ್ಲ’ – ಅಂತ ತಗಾದೆ ತೆಗೆಯುತ್ತಿರಲಿಲ್ಲ.

ಹಾಗಾಗಿ ನಾವುಗಳು ಮುಸುರೆ ತಿಕ್ಕುವಲ್ಲಿಂದ ಹಿಡಿದು ಹುಲ್ಲು–ಸೊಪ್ಪು ಮಾಡುವಲ್ಲಿಯವರೆಗೆ, ಅನೇಕ ಕೆಲಸಗಳನ್ನು ನಿರಾಯಸವಾಗಿ ಕಲಿತು ಬಿಡುತ್ತಿದ್ದೆವು. ಆಮೇಲೆ ದೊಡ್ಡವರಾಗುತ್ತಿದ್ದಂತೆ ಅದೇ ಕೆಲಸವನ್ನು ಮಾಡಲು ಹಿಂದೇಟು ಹಾಕಿ ಸೋಮಾರಿತನ ಮಾಡುತ್ತಿದ್ದದ್ದು ಬೇರೆ ಮಾತು. ಆದರೂ ಅಗತ್ಯ ಬಿದ್ದಾಗ ಯಾವ ಕೆಲಸವೂ ಮಾಡಲು ಗೊತ್ತಿಲ್ಲ ಅನ್ನುವ ಸ್ಥಿತಿಯಲ್ಲಿ ನಾವಿರಲಿಲ್ಲ.

ಈಗ ಅಮ್ಮಂದಿರಿಗೆ ಹುಷಾರು ತಪ್ಪಿದರೆ, ತನ್ನ ಆರೋಗ್ಯಕ್ಕಿಂತ ಹೆಚ್ಚು ಯಾವ ಕೆಲಸವನ್ನೂ ಮಾಡಿ ನಿಭಾಯಿಸಲು ಗೊತ್ತಿಲ್ಲದ ಮಕ್ಕಳದೇ ಚಿಂತೆ. ಕಾರಣ ಇಷ್ಟೆ – ನಾವು ನಮ್ಮ ಮಕ್ಕಳನ್ನು ಅತಿ ಮುದ್ದಿನಿಂದ ಬೆಳೆಸುತ್ತಾ ‘ಅದು ಮುಟ್ಟಿದರೆ ನೋವಾಗುತ್ತೆ, ಇದು ಹಿಡಿದರೆ ಸುಸ್ತಾಗುತ್ತೆ, ಕೆಲಸ ಮಾಡಿದರೆ ಓದಿನಲ್ಲಿ ಹಿಂದೆ ಬಿದ್ದು ಹೋಗಿ ಬಿಡುತ್ತಾರೆ’ – ಎಂಬ ಹುಚ್ಚು ಕಲ್ಪನೆಯಲ್ಲಿ ಯಾವ ಕೆಲಸದಲ್ಲೂ ತೊಡಗಿಸುವುದಿಲ್ಲ. ಮುಂದೆ ಅವರಿಗೆ ಕೆಲಸ ಮಾಡಿಕೊಳ್ಳಬೇಕಾದ ಅಗತ್ಯ ಬಿದ್ದಾಗ ಅವರಿಗೆ ಮಾಡಲು ಏನೂ ಮಾಡಲು ತೋಚದೆ ತಬ್ಬಿಬ್ಬಾಗುತ್ತಾರೆ. ಆಗ ನಾವುಗಳು ಅವರ ಮೇಲೆ ವೃಥಾ ಗೊಣಗಾಡುತ್ತಾ ಹೆಣಗಾಡುವುದು ನಡೆದೇ ಇದೆ. ಆಮೇಲೆ ತಪ್ಪನ್ನೆಲ್ಲಾ ಅವರ ಮೇಲೆ ಹೊರೆಸುತ್ತಾ, ನಮ್ಮ ಮಾನಸಿಕ ಆರೋಗ್ಯವನ್ನೂ ಕೆಡಿಸಿಕೊಳ್ಳುತ್ತೇವೆ.

ಮೊನ್ನೆ ಮೊನ್ನೆ ಎನ್.ಎಸ್.ಎಸ್. ಶಿಬಿರಾರ್ಥಿಗಳು ನಮ್ಮ ಊರಿನಲ್ಲಿ ವಾಸ್ತವ್ಯ ಹೂಡಿದ್ದರು. ಮಕ್ಕಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲು ಬಂದಂತಹ ಉಪನ್ಯಾಸಕಿಯೊಬ್ಬರೊಂದಿಗೆ ನಾನು ಔಪಚಾರಿಕವಾಗಿ ಮಾತನಾಡುತ್ತಾ, ‘ಬಟ್ಟೆ ತೊಳೆ ಯೋದಿದ್ರೆ – ಇಲ್ಲೇ ಪಕ್ಕದಲ್ಲಿ ನದಿ ಇದೆ; ಅಲ್ಲಿ ತೊಳೆಯಬಹುದು. ಇಲ್ಲ ಅಂದರೆ ನಮ್ಮ ಮನೆಯಲ್ಲೂ ಬಂದು ತೊಳೆದು ಹೋಗಬಹುದು’ ಅಂದೆ. ‘ಪರವಾಗಿಲ್ಲ, ಮನೆಗೆ ಹೋಗಿ ಮೆಷಿನ್‌ಗೆ ಬಟ್ಟೆ ಹಾಕಿ ಬಿಡುವೆ. ನನಗೆ ಕೈಯಲ್ಲಿ ಬಟ್ಟೆ ತೊಳೆದು ಅಭ್ಯಾಸವೇ ಇಲ್ಲ’ ಅಂದರು. ಯಾಕೆ ಗೊತ್ತಿಲ್ಲ, ಅಂದರೆ ಅವರ ಅಮ್ಮ ಕೂಡ ಬಟ್ಟೆ ತೊಳೆಯುತ್ತಲಿರಲ್ಲವಂತೆ, ಕೆಲಸದವಳು ತಪ್ಪಿದರೆ ಮೆಷಿನ್‌ಗೆ ಬಟ್ಟೆ ಹಾಕಿ ಅಭ್ಯಾಸವಂತೆ. ಹಾಗಾಗಿ ಅವರಿಗೆ ಬಟ್ಟೆ ತೊಳೆಯುವ ಪರಿಪಾಠವೇ ಗೊತ್ತಿಲ್ಲ.

ಬಿಚ್ಚಿಟ್ಟ ಬಟ್ಟೆಗಳನ್ನೆಲ್ಲಾ ತೊಳೆಯಲು ಮೆಷಿನ್‌ಗೆ ಹಾಕುವುದನ್ನು ನೋಡುತ್ತಾ ಬೆಳೆದ ಮಗು, ಅದನ್ನೇ ಕಲಿಯುತ್ತಾ ತನ್ನ ಮುಂದಿನ ಪೀಳಿಗೆಗೆ ಅದೇ ಪಾಠವನ್ನು ರವಾನಿಸುತ್ತಾ ಬಟ್ಟೆ ತೊಳೆಯುವ ಸುಂದರ ಪ್ರಕ್ರಿಯೆ, ಅದರ ಹಿಂದಿನ ಕುತೂಹಲ ಬೆರಗುಗಳೆಲ್ಲಾ ಯಾಂತ್ರಿಕ ಯಂತ್ರದಲ್ಲಿ ಗುರು ಗುರು ತಿರುಗಿ, ಕೈಯೊಳಗೆ ಸೋಪಿನ ಬುರುಗೇ ಅಂಟಿಕೊಳ್ಳದೆ ಹಾಗೇ ಒಣಗಿಕೊಳ್ಳುತ್ತವಲ್ಲ ಅಂತ ವಿಷಾದವೂ ಆಗುತ್ತದೆ.

ಈಗ ಮಕ್ಕಳಿಗೆ ತಿಂಡಿ ತಿನ್ನಿಸಿ, ಶೂ–ಟೈ ಕಟ್ಟಿ ಶಾಲಾ ವಾಹನ ಏರಿಸಿ ಕುಳ್ಳಿರಿಸುವವರೆಗೆ ಹೆತ್ತವರಿಗೆ ಪುರುಸೊತ್ತಿಲ್ಲ.ನಮ್ಮನ್ನೆಲ್ಲಾ ತಿಂದೆವಾ? ಬುತ್ತಿ ಕಟ್ಟಿಕೊಂಡೆವಾ? – ಅಂತ ಕೇಳುವವರೇ ಇರಲಿಲ್ಲ. ಅನಗತ್ಯ ಶಿಸ್ತನ್ನು ಹೇರದೆ, ಒಂದಷ್ಟು ಸ್ವಾತಂತ್ರ್ಯ ಕೊಟ್ಟ ಕಾರಣವೇ ನಮ್ಮಗಳಿಗೆ ಸ್ವಾವಲಂಬನೆಯ ಬದುಕು ಅರಿವಿಲ್ಲದೆಯೇ ರಕ್ತಗತವಾಗಿ ಹರಿದು ಬಂದದ್ದು. ಪರೀಕ್ಷೆ ಬಂತೆಂದರೆ, ಅದಕ್ಕೆ ಬೇಕಾದ ಸಿದ್ಧತೆಗಳಿಗೆಲ್ಲಾ ನಾವೇ ಹೊಣೆ. ಆ ಮೂಲಕ ಜವಾಬ್ದಾರಿಯನ್ನು ನಿಭಾಯಿಸಲು ನಾವು ಶಕ್ತರಾಗುತ್ತಿದ್ದೆವು. ಮೊನ್ನೆ ಮಗನ ತರಗತಿಯ ಸಹಪಾಠಿಯೊಬ್ಬಳು ಪುಸ್ತಕ ಮರೆತು ಬಂದಿದ್ದಳಂತೆ. ಯಾಕೆ ಪುಸ್ತಕ ತರಲಿಲ್ಲ ಅಂತ ಟೀಚರ್ ಗದರಿದ್ದಕ್ಕೆ ಅಮ್ಮ ಬ್ಯಾಗಿಗೆ ತುಂಬಿಸಲಿಲ್ಲ ಅಂತ ಅಷ್ಟೇ ತಣ್ಣಗೆ ಉತ್ತರ ಕೊಟ್ಟಳಂತೆ. ಮರೆವಿಗೆ ಕಾರಣವಾದ ಸಬೂಬು ಅಮ್ಮನ ಹೆಗಲೇರಿದೆ. ಮರೆವಿಗೆ ಯಾರನ್ನು ಹೊಣೆಯಾಗಿಸುವುದು?!

ಮೊಳಕೆಯೊಡೆಯುವ ಕಾಲಕ್ಕೆ ಮೊಳಕೆಯೊಡೆದು, ಅದು ಚಿಗುರಿ, ಮರವಾಗಿ, ಹೂ ಕಾಯಿ ಹಣ್ಣು ಬಿಡುವುದು ಆಯಾಯ ಕಾಲಕ್ಕೆ ನಡೆದರೇ ಚೆಂದ. ಹಾಗೆಯೇ ಮಕ್ಕಳು ಕಲಿತುಕೊಳ್ಳುವ ಕೆಲಸವೂ ಅಷ್ಟೆ. ಅವರಿಗೆ ಆಸಕ್ತಿಯಿರುವ ಸಮಯದಲ್ಲಿ ಕಲಿಯಲು ಬಿಟ್ಟು, ಅಥವಾ ಆಯಾಯ ಸಮಯದಲ್ಲಿ ನಾವೇ ಅವರನ್ನು ಹದವರಿತು ಕೆಲಸಕ್ಕೆ ಹಚ್ಚಿದರೆ, ಕೆಲಸದ ಕಲಿಯುವಿಕೆಯೊಂದು ಅರಿವಿಲ್ಲದೆಯೇ ಸಹಜ ಕ್ರಿಯೆಯಾಗಬಲ್ಲದು; ಇಲ್ಲದಿದ್ದರೆ ಯಾಂತ್ರಿಕ ಹೊರೆಯಷ್ಟೆ. ನಾವೂ ಯಂತ್ರಗಳಾಗಬಲ್ಲೆವು ಅಷ್ಟೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.