ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲಕರಿಗೆ ದಾರಿದೀಪವಾದ ಸಾಧಕಿ

Last Updated 2 ಡಿಸೆಂಬರ್ 2017, 5:55 IST
ಅಕ್ಷರ ಗಾತ್ರ

ತುಮಕೂರು: ಅಂಗವಿಕಲ ಮಗನನ್ನು ಓದಿಸಲು ಹೋಗಿ ತಾನೇ ಕಲಿಯುವುದರ ಮೂಲಕ ಹೆಲನ್‌ ಕೆಲರ್‌ ಎಂಬ ಸಮನ್ವಯ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಅಂಗವಿಕಲರಿಗೆ ದಾರಿದೀಪವಾದ ಸಾಧಕಿ ಇವರು. ಕಿವುಡು ಮಕ್ಕಳಿಗೆ ಕಿವಿಯಾದರೆ, ಮೂಕ ಮಕ್ಕಳಿಗೆ ದನಿಯಾಗಿದ್ದಾರೆ.

‘ನನ್ನ ಹನ್ನೊಂದು ತಿಂಗಳ ಮಗುವಿಗೆ ಕಿವಿ ಕೇಳುವುದಿಲ್ಲ, ಮಾತು ಬರುವುದಿಲ್ಲ ಎಂದು ಗೊತ್ತಾದಾಗ ಅಕಾಶವೇ ಕಳಚಿ ಬಿದ್ದಂತಾಯಿತು. ಚಿಕಿತ್ಸೆಗಾಗಿ ಅಲೆದಾಡಿದ ಊರುಗಳಿಲ್ಲ. ಬೇಡಿಕೊಳ್ಳದ ದೇವರುಗಳಿಲ್ಲ. ಇನ್ನು, ಮಗುವಿಗೆ ಚಿಕಿತ್ಸೆ ಕೊಡಿಸಿದರೂ ಪ್ರಯೋಜನವಿಲ್ಲ ಎಂದಾಗ ನನ್ನಲ್ಲೊಂದು ಹಟ ಹುಟ್ಟಿತು. ನನ್ನ ಮಗುವೂ ಸಾಮಾನ್ಯ ಮಗುವಿನಂತೆಯೇ ಬೆಳೆಯಬೇಕು. ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ನಿರ್ಧರಿಸಿದೆ’ ಎಂದು ಸಾಧಕಿ ಗಾಯತ್ರಿ ರವೀಶ್‌  ಕ್ಷಣ ಮೌನವಾದರು.

ನಗರದಲ್ಲಿ ಹೆಲನ್ ಕೆಲರ್‌ ಸಂಸ್ಥೆಯ ಬಗ್ಗೆ ಕೇಳದವರೇ ಇಲ್ಲ. ಗಾಯತ್ರಿ ಅವರ ಮೂಕ ಮಕ್ಕಳಿಗಾಗಿ ಇಡೀ ಬದುಕನ್ನೇ ಮೀಸಲಿಟ್ಟರು. ಇದಕ್ಕಾಗಿ ಅಂಗವಿಕಲರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಡಿಪ್ಲೊಮಾ ಮಾಡಿದರು. ನಂತರ ಬಿ.ಇಡಿ, ಎಂ.ಇಡಿ ಅಧ್ಯಯನ ಮಾಡಿದರು. ಈಗವರು ’ಮೂಕ ಹಕ್ಕಿಗಳಿಗೆ ಮಾತು ನೀಡುವ ದೇವತೆ’.

ನನ್ನ ಮಕ್ಕಳಂತೆಯೇ ಬೇರೆ ಮಕ್ಕಳು ಶಿಕ್ಷಣ ಪಡೆಯಬೇಕು ಎಂಬ ಆಸೆಯಿಂದ ಅವರು 1997ರಲ್ಲಿ ವಸತಿ ರಹಿತ ಶಾಲೆ ತೆರೆದರು. ದು ಸಾಮಾಜಿಕ ಕಾಳಜಿ ಮೆರೆಯುತ್ತಿದ್ದಾರೆ. ಶಕ್ತ ಪೋಷಕರಿಂದ ಹಣ ಎತ್ತಿದರು.ಉಳಿದನ್ನು ತಮ್ಮದೇ ಹಣ ಹೊಂದಿಸಿದರು. ಕೆಲವು ಜನಪ್ರತಿನಿಧಿಗಳು ಅವರ ಕೈ ಹಿಡಿದರು.

‘ ಶಾಲೆ ತೆರೆದು 21 ವರ್ಷ ಕಳೆದಿವೆ. ಪ್ರಸ್ತುತ ಶಾಲೆಯಲ್ಲಿ 30 ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ. 36 ಮಕ್ಕಳು ಉನ್ನತ ವಿದ್ಯಾಭ್ಯಾಸ ಹೊಂದಿ ಉತ್ತಮ ಹುದ್ದೆ ಹೊಂದಿದ್ದಾರೆ. ಕೆಲವರು ಸ್ವಂತ ಉದ್ಯೋಗ ಮಾಡುತ್ತಿದ್ದಾರೆ’ ಎಂದು ವಿವರಿಸಿದರು.

’ ಶಾಲೆಗೆ ಸೇರುವ ಮಕ್ಕಳಿಗೆ ಓದು, ಬರಹದೊಂದಿಗೆ ಭಾಷಾ ಬೆಳವಣಿಗೆ ರೂಢಿಸಲಾಗುತ್ತದೆ. ಜತೆಗೆ ‘ಸೈನ್‌ ಲಾಂಗ್ವೇಜ್‌’ ಕಲಿಸಿಕೊಡುತ್ತೇವೆ. ಜತೆಗೆ  ನೃತ್ಯ, ಕ್ರೀಡಾ ತರಬೇತಿ ನೀಡುತ್ತೇವೆ.  ನನ್ನ ಗಂಡ ಮತ್ತು ಮಗನ ಸಹಕಾರದಿಂದ ಈ ಸಂಸ್ಥೆ ನಡೆಸಿಕೊಂಡು ಬರುತ್ತಿದ್ದೇನೆ. ನನ್ನ ಮಗನೇ ನನಗೆ ಮೂಲ ಪ್ರೇರಣೆ’ ಎಂದರು.

ಜಿಲ್ಲೆಯಲ್ಲಿ 6 ಸಾವಿರ ಕಿವುಡರಿದ್ದಾರೆ. ಅವರಲ್ಲಿ ಶೇ 90ರಷ್ಟು ಮಂದಿ ಉತ್ತಮ ಶಿಕ್ಷಣ ಹೊಂದಿಲ್ಲ. ಇದು ಬೇಸರದ ಸಂಗತಿ. ಎಲ್ಲರಂತೆ ಅವರು ಸಹ ಶಿಕ್ಷಣ ಹೊಂದಬೇಕು. ‘ಸೈನ್‌ ಲಾಂಗ್ವೇಜ್‌’ನ ಡಿಪ್ಲೊಮಾ ಕೋರ್ಸ್‌ ತೆರೆಯುವ ಆಸೆ ಕೂಡ ಇದೆ ಎಂದರು.

ಗಾಯತ್ರಿ ಅವರು ಕರ್ನಾಟಕ ರಾಜ್ಯ ಕಿವುಡು ಮಕ್ಕಳ ಸಂಘದ ಅಧ್ಯಕ್ಷೆಯಾಗಿದ್ದಾರೆ. ಮಾರ್ಧನಿ ಕಿವುಡು ಪೋಷಕರ ಸಂಘದ ಅಧ್ಯಕ್ಷೆ ಹಾಗೂ ಜಿಲ್ಲಾ ತುಮಕೂರು ಕಿವುಡು ಮಕ್ಕಳ ಸಂಘದ ಸಲಹೆಗಾರಗಿದ್ದಾರೆ. ಇವರನ್ನು ಅನೇಕ ಸಾಮಾಜಿಕ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.

ವೈಫಲ್ಯ ಮೆಟ್ಟಿ ಬದುಕು ಕಟ್ಟಿಕೊಂಡ ಅವಿನಾಶ್‌
ಅವಿನಾಶ್‌ ಕೌಶಲ ವೃತ್ತಿಯಲ್ಲಿ ತೊಡಗಿರುವ ಜಿಲ್ಲೆಯ ಮೊದಲ ಮೂಕರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಬೆಂಗಳೂರಿನಲ್ಲಿ ಮತ್ತು ಚೈನ್ನೈನಲ್ಲಿ ಪಡೆದಿದ್ದಾರೆ. ತುಮಕೂರಿನಲ್ಲಿ ‘ಡಿಪ್ಲೊಮಾ ಇನ್‌ ಕಂಪ್ಯೂಟರ್‌ ಸೈನ್ಸ್‌ ಎಂಜಿನಿಯರಿಂಗ್‌’ ಪದವಿ ಪಡೆದಿದ್ದಾರೆ.

ವಿದ್ಯಾವಾಹಿನಿಯಲ್ಲಿ ಬಿಸಿಎ ಮಾಡುತ್ತಿರುವಾಗ ಕ್ಯಾಂಪಸ್‌ ಆಯ್ಕೆಯಾಗಿ ಗುಬ್ಬಿ ಸಿಐಟಿ ಕಾಲೇಜಿನಲ್ಲಿ  ಕಂಪ್ಯೂಟರ್‌ ಲ್ಯಾಬ್‌ನಲ್ಲಿ ಬೋಧಕರಾಗಿದ್ದಾರೆ. ಕಲಿಕೆಯನ್ನು ಅವರು ಮುಂದುವರೆಸಿದ್ದು, ಬಿಬಿಎ ಅಧ್ಯಯನ ಮಾಡುತ್ತಿದ್ದಾರೆ.

ಕಿವುಡರ ಸಂಘ ಇಂಧೋರನಲ್ಲಿ ಆಯೋಜಿಸಿದ್ದ ಚೆಸ್‌ನಲ್ಲಿ ಹಾಗೂ ತುಮಕೂರಿನಲ್ಲಿ ನಡೆದ ವಾಲಿಬಾಲ್‌ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇದಲ್ಲದೆ ಕ್ರಿಕೆಟ್‌ನಲ್ಲಿ ಆಸಕ್ತಿ ಹೊಂದಿದ್ದು, ರಾಷ್ಟ್ರಮಟ್ಟದ ಪಂಧ್ಯಗಳಲ್ಲಿ ಭಾಗವಹಿಸಿದ್ದಾರೆ.

ಜಿಲ್ಲಾ ಕಿವುಡರ ಸಂಘದ ಸಹ ಕಾರ್ಯದರ್ಶಿಯಾಗಿರುವ ಅವಿನಾಶ್, ತುಮಕೂರು ಜಿಲ್ಲೆಯಲ್ಲಿ ಕಿವುಡ ಮಕ್ಕಳಿಗೆ ಒಂದು ಉತ್ತಮ ಶಾಲೆ ತೆರೆಯಬೇಕು ಎಂಬ ಮಹಾದಾಸೆ ಹೊಂದಿದ್ದಾರೆ.

ಅಂಗವಿಕಲ ಮಕ್ಕಳಿಗೆ  ಇಂಗ್ಲಿಷ್‌ನಲ್ಲಿ ಕಲಿಕೆ ನೀಡಬೇಕು. ಎಲ್ಲ ಕಡೆ ‘ಸೈನ್‌ ಲಾಂಗ್ವೇಜ್‌ ಇಂಟರ್ಪ್ರಿಟರ್’ ಇರಬೇಕು. ಅಂಗವಿಕಲರನ್ನು ಗೌರವಿಸಿ, ಸಾಮಾನ್ಯರಂತೆ ಗುರತಿಸಬೇಕು ಎಂದು ಹೇಳುತ್ತಾರೆ. ಸ್ವಕಲಿಕೆ ಹಾಗೂ ತಂದೆ ತಾಯಿಯ ಸಹಕಾರದಿಂದ ಉತ್ತಮ ಶಿಕ್ಷಣ ಪಡೆದೆ.  ಮನೋಸ್ಥೆರ್ಯ ಇದ್ದರೆ ಏನು ಬೇಕಾದರ ಸಾಧಿಸಬಹುದು ಎಂದು ನಗುತ್ತಾರೆ.

* * 

ಅಂಗವಿಕಲರನ್ನು ಅನುಕಂಪದಿಂದ ನೋಡಿದರೆ ಸಾಲದು. ಅವರ ಬದುಕಿಗೆ ಸಾಧ್ಯವಿರುವ ಎಲ್ಲ ಪೂರಕ ನೆರವನ್ನು ನೀಡುವ ಹೊಣೆ ಎಲ್ಲರದ್ದಾಗಬೇಕು. ಅವರನ್ನು ಬೆಳೆಸಬೇಕು. ಅವರ ಹಿಂದೆ ನಾವಿದ್ದು ಕೆಲಸ ಮಾಡಬೇಕು
ಗಾಯತ್ರಿ ರವೀಶ್‌, ಹೆಲನ್‌ ಕೆಲರ್‌ ಶಾಲೆ ಸ್ಥಾಪಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT