ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುವ ಅನಾರೋಗ್ಯ, ಕುಗ್ಗದ ಆತ್ಮವಿಶ್ವಾಸ

Last Updated 2 ಡಿಸೆಂಬರ್ 2017, 9:15 IST
ಅಕ್ಷರ ಗಾತ್ರ

ದಾವಣಗೆರೆ: ಬಾಗದ ಬೆನ್ನು, ನೇರವಾಗಿ ಚಾಚಲೂ ಅಸಮರ್ಥವಾದ ಕೈಗಳು, ಪದೇಪದೆ ಕೈ ಕೊಡುವ ಆರೋಗ್ಯ, ಅಂಗವಿಕಲತೆಯ ನಡುವೆಯೂ ಸ್ವಂತ ಕಾಲ ಮೇಲೆ ಬದುಕು ಕಟ್ಟಿಕೊಳ್ಳುವ ಛಲ.

ಎಸ್‌.ಎಸ್‌.ಬಡಾವಣೆಯ ಕುಂದವಾಡ ಕೆರೆ ರಸ್ತೆಯಲ್ಲಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡು ಮೊಬೈಲ್‌ ರಿಪೇರಿ, ಕರೆನ್ಸಿ ಮಾರುವ ಕಾಯಕ ನಡೆಸುವ ವೆಂಕಟೇಶ್ವರ ಅವರ ವ್ಯಕ್ತಿ ಚಿತ್ರಣವಿದು.

ಅರಳು ಉರಿದಂತೆ ಮಾತನಾಡುವ ವೆಂಕಟೇಶ ಅವರದ್ದು, ಕೇವಲ ಮೂರುವರೆ ಅಡಿ ಎತ್ತರದ ಶರೀರ. ಆದರೆ, ಅವರ ಆತ್ಮವಿಶ್ವಾಸ ಸಣ್ಣದಲ್ಲ. ನಲವತ್ತು ವರ್ಷದ ವೆಂಕಟೇಶ ಅವರಿಗೆ ನಡೆಯಲೂ ಆಗದು. ಗಾಲಿ ಕುರ್ಚಿಯನ್ನು ಅವಲಂಬಿಸಿರುವ ಅವರಿಗೆ ಅದನ್ನು ದೂಡಿಕೊಂಡು ಹೋಗುವ ಶಕ್ತಿಯೂ ಇಲ್ಲ. ಊಟ ಮಾಡುವುದನ್ನು ಬಿಟ್ಟು ಇನ್ನುಳಿದ ಎಲ್ಲಾ ಕ್ರಿಯೆಗಳಿಗೂ ಸಹಾಯಕರು ಬೇಕೇ ಬೇಕು. ಇಷ್ಟೆಲ್ಲಾ ಅಸಮರ್ಥತೆ ಇದ್ದರೂ ಸ್ವಂತ ಉದ್ಯೋಗ ನಡೆಸುವಲ್ಲಿ ವೆಂಕಟೇಶ ಯಶ ಕಂಡಿದ್ದಾರೆ.

‘ಚನ್ನಗಿರಿ ತಾಲ್ಲೂಕಿನ ಬೆಳಲಗೆರೆ ನನ್ನೂರು. ಸ್ಥಿತಿವಂತ ಕುಟುಂಬ ನಮ್ಮದು. ಎಂಟು ಎಕರೆ ನೀರಾವರಿ ಜಮೀನು, ತಾರಸಿ ಮನೆ ಎಲ್ಲವೂ ಇತ್ತು. ಮಗ ಹುಷಾರಾದರೆ ಇದರ ಎರಡು ಪಟ್ಟು ದುಡಿಯುತ್ತಾನೆ ಎಂದು ಚಿಕಿತ್ಸೆಗಾಗಿ ನನ್ನಪ್ಪ, ಅಮ್ಮ ಎಲ್ಲಾ ಆಸ್ತಿ ಕಳೆದರು. ಚಿಕಿತ್ಸೆಯಿಂದ ನನ್ನ ನಿಶಕ್ತಿ ಸ್ವಲ್ಪ ಕಡಿಮೆಯಾಯಿತು. ಆದರೆ, ಅಂಗವಿಕಲತೆ ನಿವಾರಣೆಯಾಗಲಿಲ್ಲ’ ಎಂದು ವೆಂಕಟೇಶ ತಮ್ಮ ಹಿನ್ನೆಲೆ ಹೇಳಿಕೊಂಡರು.

‘ತಂದೆ ತೀರಿಕೊಂಡ ಬಳಿಕ, ತಾಯಿ ಅನಸೂಯಮ್ಮ ನನ್ನನ್ನು ಆಶಾಕಿರಣ ಅಂಗವಿಕಲರ ಟ್ರಸ್ಟ್‌ಗೆ ಸೇರಿಸಿದರು. ಎರಡು ವರ್ಷ ಟ್ರಸ್ಟ್‌ನ ಶಾಲೆಯಲ್ಲಿಯೇ ಇರುತ್ತಿದ್ದೆ. ನನ್ನ ಉತ್ಸಾಹ ಕಂಡ ಟ್ರಸ್ಟಿ ಕಾಗಲ್‌ಕರ್‌, ಮೊಬೈಲ್‌ ದುರಸ್ತಿ ತರಬೇತಿ ಕೊಡಿಸಿದರು. ದಾನಿಗಳಿಂದ ಹಣ ಸಂಗ್ರಹಿಸಿ, ಪೆಟ್ಟಿಗೆ ಅಂಗಡಿ ಇಟ್ಟುಕೊಟ್ಟರು. ನಾಲ್ಕು ವರ್ಷಗಳಿಂದ ಮೊಬೈಲ್‌ ರಿಪೇರಿ ಮಾಡುವ ಹಾಗೂ ಕರೆನ್ಸಿ ಹಾಕುವ ಕೆಲಸ ಮಾಡುತ್ತಿದ್ದೇನೆ. ದಿನಕ್ಕೆ ₹ 100 ದುಡಿಯುತ್ತೇನೆ’ ಎಂದು ಆತ್ಮವಿಶ್ವಾಸದ ನಗೆ ಬೀರಿದರು.

‘ಆಶಾಕಿರಣ ಅಂಗವಿಕಲರ ಟ್ರಸ್ಟ್‌ನವರು ಉಚಿತ ಊಟ, ವಸತಿ ವ್ಯವಸ್ಥೆ ಮಾಡಿದ್ದಾರೆ. ಚಿಕಿತ್ಸೆ, ಬಟ್ಟೆಗೆ, ಕೈ ಖರ್ಚಿಗೆ ದುಡಿಮೆಯ ಹಣ ಬಳಸುತ್ತೇನೆ’ ಎಂದರು. ‘ಈ ಭಾಗದ ನಿವಾಸಿಗಳು, ನನಗೆ ಕಾಯಂ ಗ್ರಾಹಕರಾಗಿದ್ದಾರೆ. ನನ್ನ ಬಳಿಯೇ ಮೊಬೈಲ್‌ ಕರೆನ್ಸಿ ಹಾಕಿಸಿಕೊಳ್ಳುತ್ತಾರೆ. ಕರೆನ್ಸಿ ಕಳುಹಿಸುವುದು ತಡವಾದರೂ ಕಾಯುತ್ತಾರೆ. ನಾನು ಅಂಗಡಿ ನಡೆಸಲು ಜನರ ಪ್ರೀತಿಯೇ ಪ್ರೇರಣೆ’ ಎನ್ನುತ್ತಾರೆ ಅವರು.

‘ವೆಂಕಟೇಶನ ಅಣ್ಣನಿಗೂ ಅಂಗವಿಕಲತೆಯಿತ್ತು. ಆತ ಎಂಟನೇ ವಯಸ್ಸಿಗೆ ತೀರಿಕೊಂಡ. ವೆಂಕಟೇಶ ಕೂಡ ಹೆಚ್ಚೆಂದರೆ ಹತ್ತು ವರ್ಷ ಬದುಕಬಹುದು ಎಂದು ವೈದ್ಯರು ಹೇಳಿದ್ದರು. ಆದರೆ, ಅವನ ಆತ್ಮಬಲ ದೊಡ್ಡದು. ದುಡಿದು ಬದುಕಲು ಹೋರಾಡುತ್ತಿದ್ದಾನೆ. ಎಲ್ಲಾ ಸರಿಯಿರುವವರೂ ಸೋಮಾರಿಯಂತೆ ಕಾಲ ಕಳೆಯುತ್ತಾರೆ. ಆದರೆ, ಈತ ಆರೋಗ್ಯವಂತರೂ ನಾಚುವಂತೆ ಬಾಳುತ್ತಿದ್ದಾನೆ’ ಎಂದು ವೆಂಕಟೇಶ ಅವರ ಮಾವ ಜಯಪ್ರಕಾಶ ಹೆಮ್ಮೆಪಟ್ಟರು.

ಶಾಶ್ವತ ಪರಿಹಾರ ಬೇಕು
‘ಅಂಗವಿಕಲರ ಕಲ್ಯಾಣ ಇಲಾಖೆಯಿಂದ ಅಂಗಡಿ ನಡೆಸಲು ಯಾವ ನೆರವೂ ಸಿಕ್ಕಿಲ್ಲ. ದಾನಿಗಳು ನೀಡಿದ ಹಣದಿಂದಲೇ ಪೆಟ್ಟಿಗೆ ಅಂಗಡಿ ಮಾಡಿಸಿಕೊಂಡಿದ್ದೆ. ರಸ್ತೆ ದುರಸ್ತಿ, ರಸ್ತೆ ಬದಿಯ ನಿವೇಶನಗಳ ಮಾಲೀಕರ ಒತ್ತಡದಿಂದಾಗಿ ಪೆಟ್ಟಿಗೆ ಅಂಗಡಿಯನ್ನು ಮೂರು ಬಾರಿ ಸ್ಥಳಾಂತರಿಸಿಕೊಂಡೆ. ಹೀಗಾಗಿ ಪೆಟ್ಟಿಗೆಯ ಹಲಗೆಗಳು ಮುರಿದು ಹೋದವು. ಈಗ ₹ 15,000 ಖರ್ಚು ಮಾಡಿ, ಹೊಸ ಪೆಟ್ಟಿಗೆ ಮಾಡಿಸಿಕೊಂಡಿದ್ದೇನೆ. ಈಗ ಅಂಗಡಿ ಇಟ್ಟಿರುವ ಸ್ಥಳದ ಪಕ್ಕದ ನಿವೇಶನದ ಮಾಲೀಕರೂ ಪೆಟ್ಟಿಗೆ ತೆಗೆಯಿರಿ ಎನ್ನುತ್ತಿದ್ದಾರೆ. ಒಂದು ಶಾಶ್ವತ ನೆಲೆ ಒದಗಿಸುವ ಉಪಕಾರವನ್ನು ಪಾಲಿಕೆ ಮಾಡಿಕೊಡಬೇಕು’ ಎಂದು ವೆಂಕಟೇಶ ಮನವಿ ಮಾಡಿದರು.

‘ದುಡಿದು ತಿನ್ನುವವನೇ ದೇಶದ ದೊರೆ’ ಎಂಬುದು ನನ್ನ ಧ್ಯೇಯ. ದುಡಿದು ತಿನ್ನಲು ಸರ್ಕಾರ ನನಗೆ ಸಹಕಾರ ನೀಡಬೇಕು ಎಂದು ಕೇಳಿಕೊಂಡರು. ವೆಂಕಟೇಶ ಅವರ ಸಂಪರ್ಕಕ್ಕೆ ಮೊಬೈಲ್‌ ಸಂಖ್ಯೆ: 99025 58718.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT