ಅಂಬರ ದೇವಿ ಜಾತ್ರೆ

ಅಂಬರ ನಾಡೊಳು ನಡೆದಿತ್ತಲ್ಲಿ
ಚಂದದ ಜಾತ್ರೆಯು
ಗಗನದ ಎಲ್ಲಾ ಬಳಗವು ಅಲ್ಲಿಗೆ
ಬಂದು ಸೇರಿದವು
ಅಂಬರ ದೇವಿಗೆ ತೊಡಿಸಿದರಂದದಿ
ನೀಲಿಯ ಸೀರೆಯನು
ಚುಕ್ಕಿಗಳವಳ ಉಡುಗೆ ತೊಡುಗೆಗೆ
ಚಿತ್ತಾರವಾದರು
ಅಂಬರ ದೇವಿಯ ನೊಸಲಿಗೆ ಬೊಟ್ಟು
ಆದನು ಭಾಸ್ಕರನು
ಬಂಗಾರದೊಳಪಿನ ಬಣ್ಣವ ಹೊಮ್ಮಿ
ಚೆಲುವನು ಹೆಚ್ಚಿದನು
ಇರುಳಲಿ ಚಂದಿರ ಹಾಲಿನ ಬೆಳಕನು
ಹರುಷದಿ ಹರಡಿದನು
ತಣ್ಣನೆ ಗಾಳಿಯ ತೀಡುತ ಪವನ
ಮುದವನು ನೀಡಿದನು
ಕರಿ ಬಿಳಿ ಮೋಡಗಳೆಲ್ಲವೂ ಸೇರಿ
ಹೆಣೆದವು ಮಾಲೆಯನು
ಅಂಬರ ದೇವಿಯ ಕೊರಳಿಗೆ ತೊಡಿಸಿ
ಸಿಂಗರಗೊಳಿಸಿದವು
ನಭದೊಳು ಇರುವಾ ಗ್ರಹಗಳು ಹಿಗ್ಗುತ
ಬಂದವು ಓಡೋಡಿ
ಜಾತ್ರೆಯೊಳಲ್ಲಿ ಯಾತ್ರಿಕರಾಗಿ
ನಲಿದವು ಉಂಡಾಡಿ
ಶಿಸ್ತಿನಿಂದಲಿ ಅಂಬರ ಬಳಗವು
ಜಾತ್ರೆಯ ಮಾಡಿದವು
ಅಂಬರದೇವಿಯ ಜಾತ್ರೆಯ ಸಿರಿಯನು
ಲೋಕಕೆ ಸಾರಿದವು
ಜಾತ್ರೆಯಲ್ಲಿ ಬಾನಿನ ಪರಿವಾರ
ಸಂಭ್ರಮ ಪಟ್ಟಿತ್ತು
ಅಂಬರದೇವಿಯ ಕೃಪೆಯನು ಗಳಿಸಿ
ಧನ್ಯತೆ ಪಡೆದಿತ್ತು
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.