ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ಗೆ ಮಣಿದ ಭಾರತ

ವಿಶ್ವ ಹಾಕಿ ಲೀಗ್‌ ಫೈನಲ್‌; ಆಕಾಶ್‌ದೀಪ್‌, ರೂಪಿಂದರ್ ಗೋಲು
Last Updated 2 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಭುವನೇಶ್ವರ: ರೋಮಾಂಚಕ ಘಟಕ್ಕೆ ತಲುಪಿದ್ದ ವಿಶ್ವ ಹಾಕಿ ಲೀಗ್‌ ಫೈನಲ್ ಟೂರ್ನಿಯ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಪುರುಷರ ತಂಡ ಶನಿವಾರ ಸೋತಿತು.

‘ಬಿ’ ಗುಂಪಿನ ಪಂದ್ಯದಲ್ಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾದ ಎದುರು ಶುಕ್ರವಾರ ಡ್ರಾ ಮಾಡಿಕೊಂಡಿದ್ದ ಭಾರತ ತಂಡ ಇಂಗ್ಲೆಂಡ್ ತಂಡದ ಪ್ರಬಲ ರಕ್ಷಣಾ ಗೋಡೆಯನ್ನು ದಾಟಿ ಗೋಲು ಗಳಿಸುವಲ್ಲಿ ವಿಫಲವಾಯಿತು. ಇದರಿಂದಾಗಿ ಪ್ರವಾಸಿ ತಂಡ 3–2 ಗೋಲುಗಳಲ್ಲಿ ಜಯಿಸಿದೆ.

ಪಂದ್ಯದ ಆರಂಭದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನಡೆಸಿದವು. ಮೊದಲ 24 ನಿಮಿಷ ಯಾವುದೇ ಗೋಲು ದಾಖಲಾಗಲಿಲ್ಲ. 25ನೇ ನಿಮಿಷದಲ್ಲಿ ಇಂಗ್ಲೆಂಡ್‌ ಆಕ್ರಮಣಕಾರಿಯಾಗಿ ಆಡುವ ಮೂಲಕ ಫೀಲ್ಡ್‌ಗೋಲು ದಾಖಲಿಸಿತು. ಈ ತಂಡದ ಗುಡ್‌ಫೀಲ್ಡ್ ಡೇವಿಡ್‌ ಆರಂಭಿಕ ಗೋಲು ಗಳಿಸಿದರು.

43ನೇ ನಿಮಿಷದಲ್ಲಿ ಇಂಗ್ಲೆಂಡ್‌ಗೆ ವಾರ್ಡ್‌ ಸ್ಯಾಮ್‌ ಎರಡನೇ ಫೀಲ್ಡ್ ಗೋಲು ತಂದುಕೊಟ್ಟರು. ಇದರಿಂದ ಇಂಗ್ಲೆಂಡ್‌ 2–0ರಲ್ಲಿ ಮೇಲುಗೈ ಸಾಧಿಸಿತು. ಮೂರನೇ ಕ್ವಾರ್ಟರ್‌ನಲ್ಲಿ ಭಾರತ ತಿರುಗೇಟು ನೀಡಿತು. ಆಕಾಶ್‌ ದೀಪ್ ಸಿಂಗ್‌ 47ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲಿನ ಆರಂಭ ನೀಡಿದರು.

ಅಂತಿಮ ಕ್ವಾರ್ಟರ್‌ನಲ್ಲಿ ಆತಿಥೇಯ ಭಾರತ ತಂಡ ಸಮಬಲ ಮಾಡಿಕೊಂಡಿತು. ಅನುಭವಿ ಆಟಗಾರ ರೂಪಿಂದರ್ ಪಾಲ್ ಸಿಂಗ್‌ 50ನೇ ನಿಮಿಷದಲ್ಲಿ ಫೀಲ್ಡ್‌ ಗೋಲು ದಾಖಲಿಸಿ ಭಾರತದ ಪಾಳಯದಲ್ಲಿ ಸಂಭ್ರಮ ಮೂಡುವಂತೆ ಮಾಡಿದರು.

ಆದರೆ ಭಾರತದ ಆಟಗಾರರ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಪಂದ್ಯದ 57ನೇ ನಿಮಿಷದಲ್ಲಿ ಭಾರತದ ರಕ್ಷಣಾ ಗೋಡೆಯನ್ನು ಭೇದಿಸಿದ ಇಂಗ್ಲೆಂಡ್ ತಂಡ ಮತ್ತೊಮ್ಮೆ ಮುನ್ನಡೆ ಗಳಿಸುವಲ್ಲಿ ಯಶಸ್ವಿಯಾಯಿತು. ವಾರ್ಡ್‌ ಸ್ಯಾಮ್‌ ಫೀಲ್ಡ್ ಗೋಲು ದಾಖಲಿಸಿ ಇಂಗ್ಲೆಂಡ್ ತಂಡದ ಜಯದ
ರೂವಾರಿ ಎನಿಸಿದರು. ಕೊನೆಯ ನಿಮಿಷಗಳಲ್ಲಿ ಭಾರತ ಎದುರಾಳಿ ತಂಡಕ್ಕೆ ಆತಂಕ ಹೆಚ್ಚುವಂತೆ ಮಾಡಿತು. ಆದರೆ ಗೋಲು ಗಳಿಸುವ ಪ್ರಯತ್ನಗಳು ವಿಫಲವಾದವು.

ಇಂದಿನ ಪಂದ್ಯಗಳು

‘ಎ’ ಗುಂಪು

ಬೆಲ್ಜಿಯಂ–ಸ್ಪೇನ್‌

ಸಮಯ: ಸಂಜೆ 5.30

ನೆದರ್ಲೆಂಡ್ಸ್‌–ಅರ್ಜೆಂಟೀನಾ

ಸಮಯ: ರಾತ್ರಿ 7.30
*
ಬೆಲ್ಜಿಯಂ, ಸ್ಪೇನ್‌ ತಂಡಗಳಿಗೆ ಜಯ
ಬೆಲ್ಜಿಯಂ ಹಾಗೂ ಸ್ಪೇನ್ ತಂಡಗಳು ಶನಿವಾರ ನಡೆದ ಹಾಕಿ ವಿಶ್ವ ಲೀಗ್ ಫೈನಲ್‌ ಟೂರ್ನಿಯ ‘ಎ’ ಗುಂಪಿನ ಪಂದ್ಯಗಳಲ್ಲಿ ಗೆದ್ದಿವೆ.

ಬೆಲ್ಜಿಯಂ 3–2 ಗೋಲುಗಳಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿರುವ ಅರ್ಜೆಂಟೀನಾ ಎದುರು ಜಯ ದಾಖಲಿಸಿದೆ. ವಿಶ್ವಕಪ್‌ನಲ್ಲಿ ಬೆಳ್ಳಿ ಜಯಿಸಿದ್ದ ನೆದರ್ಲೆಂಡ್ಸ್‌ ಎದುರು ಸ್ಪೇನ್‌ 3–2 ಗೋಲುಗಳಲ್ಲಿ ಗೆದ್ದಿದೆ.

ರಿಯೊ ಒಲಿಂಪಿಕ್ಸ್‌ನಲ್ಲಿ ಅರ್ಜೆಂಟೀನಾ ಎದುರು ಸೋತಿದ್ದ ಬೆಲ್ಜಿಯಂ ತಂಡ ಮೊದಲ ಪಂದ್ಯದಲ್ಲಿ ಉತ್ತಮವಾಗಿ ಆಡಿತು. ಪಂದ್ಯ ಆರಂಭವಾದ ಒಂಬತ್ತನೇ ನಿಮಿಷಕ್ಕೆ ಬೆಲ್ಜಿಯಂ ತಂಡದ ಲೂಪರ್ಟ್ ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲು ದಾಖಲಿಸಿ ಆರಂಭಿಕ ಮುನ್ನಡೆ ತಂದುಕೊಟ್ಟರು. 51ನೇ ನಿಮಿಷದಲ್ಲಿ ಅಮೂರಿ ಫೀಲ್ಡ್‌ ಗೋಲು ದಾಖಲಿಸಿ ಬೆಲ್ಜಿಯಂ ತಂಡಕ್ಕೆ 2–0 ಮುನ್ನಡೆ ಒದಗಿಸಿದರು.

52ನೇ ನಿಮಿಷದಲ್ಲಿ ಅರ್ಜೆಂಟೀನಾ ಖಾತೆ ತೆರೆಯಿತು. ಈ ತಂಡದ ಕ್ಯಾಸಿಲಾ ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ತಂದಿತ್ತರು. 56ನೇ ನಿಮಿಷದಲ್ಲಿ ಬೆಲ್ಜಿಯಂಗೆ ಬೂನ್ ಟಾಮ್ ಇನ್ನೊಂದು ಗೋಲಿನ ಮುನ್ನಡೆ ತಂದರು. ಗೊಂಜಲೊ 57ನೇ ನಿಮಿಷದಲ್ಲಿ ಅರ್ಜೆಂಟೀನಾಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಹೊಡೆದರು. ಆದರೆ ಈ ತಂಡಕ್ಕೆ ಜಯಿಸಲು ಸಾಧ್ಯವಾಗಲಿಲ್ಲ.

ಸ್ಪೇನ್‌ ತಂಡದ ಪರ ಕೆಮಾಡ (7ನೇ ನಿ.), ಗೊಂಜೆಲೆನ್‌ (28ನೇ ನಿ.), ಅರಾನಾ ಡೀಗೊ (39ನೇ ನಿ.) ಗೋಲು ದಾಖಲಿಸಿದರು.

ಮುಂದಿನ ಪಂದ್ಯದಲ್ಲಿ ಭಾನುವಾರ ಸ್ಪೇನ್ ತಂಡ ಅರ್ಜೆಂಟೀನಾ ಮೇಲೂ, ಬೆಲ್ಜಿಯಂ ತಂಡ ನೆದರ್ಲೆಂಡ್ಸ್ ವಿರುದ್ಧವೂ ಆಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT