ಗುರುವಾರ , ಮಾರ್ಚ್ 4, 2021
18 °C
ಉಪನ್ಯಾಸ ಕಾರ್ಯಕ್ರಮದಲ್ಲಿ ಮಾನವಶಾಸ್ತ್ರಜ್ಞೆ ಡಾ.ಎ.ಆರ್‌.ವಾಸವಿ ಅಭಿಪ್ರಾಯ

‘ಮಕ್ಕಳ ಮೇಲಿನ ಕ್ರೌರ್ಯ ದೇಶ ತಲೆತಗ್ಗಿಸುವ ಸಂಗತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮಕ್ಕಳ ಮೇಲಿನ ಕ್ರೌರ್ಯ ದೇಶ ತಲೆತಗ್ಗಿಸುವ ಸಂಗತಿ’

ಬೆಂಗಳೂರು: ‘ಮಕ್ಕಳ ಪೋಷಣೆ ಮತ್ತು ಅವರ ಹಕ್ಕುಗಳ ರಕ್ಷಣೆಗೆ ಹಲವು ಕಾಯ್ದೆ, ಕಾನೂನು ರೂಪಿಸಿದರೂ ಮಕ್ಕಳ ಮೇಲೆ ಹಿಂಸೆ, ಕ್ರೌರ್ಯ ನಿರಂತರ ನಡೆಯುತ್ತಿರುವುದು ದೇಶವೇ ತಲೆತಗ್ಗಿಸುವ ಸಂಗತಿ’ ಎಂದು ಮಾನವಶಾಸ್ತ್ರಜ್ಞೆ ಡಾ.ಎ.ಆರ್‌.ವಾಸವಿ ತಿಳಿಸಿದರು.

ನಗರದಲ್ಲಿ ಶನಿವಾರ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಆಯೋಜಿಸಿದ್ದ ‘ಚೈಲ್ಡ್‌ಹುಡ್ಸ್‌ ಇನ್‌ ಇಂಡಿಯಾ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ‘ಚೈಲ್ಡ್‌ ಸಿಟಿಜನ್‌ ಅಂಡ್‌ ದಿ ನೇಷನ್’ ವಿಷಯ ಕುರಿತು ಮಾತನಾಡಿದರು.

ಜಾರ್ಖಂಡ್‌ನ ಸಿಮ್‌ಡೇಗಾ ಜಿಲ್ಲೆಯ ಗ್ರಾಮವೊಂದರಲ್ಲಿ ಪಡಿತರ ಚೀಟಿಗೆ ಆಧಾರ್ ಕಾರ್ಡ್ ಜೋಡಣೆ ಮಾಡದ ಬಡ ಕುಟುಂಬಕ್ಕೆ ಕೆಲವು ತಿಂಗಳುಗಳಿಂದ ಪಡಿತರ ಆಹಾರ ವಿತರಿಸದೆ, 11 ವರ್ಷದ ಬಾಲಕಿ ಸಂತೋಷಿ ಕುಮಾರಿ ಇತ್ತೀಚೆಗೆ ಹಸಿವಿನಿಂದ ಮೃತಪಟ್ಟ ದಾರುಣ ಘಟನೆ ನಡೆಯಿತು. ಆದರೆ, ಇದು ದೇಶದಾದ್ಯಂತ ಚರ್ಚೆಯೇ ಆಗಲಿಲ್ಲ. ಇಂತಹ ಮಾನವಾಸಕ್ತಿ ಸಂಗತಿಗಳ ಮೇಲೆ ಮಾಧ್ಯಮಗಳೂ ಬೆಳಕು ಚೆಲ್ಲುತ್ತಿಲ್ಲ ಎಂದು ವಿಷಾದಿಸಿದರು.

ಬರೋಡ ಮಹರಾಜಾ ಸಯ್ಯಾಜಿರಾವ್‌ ವಿಶ್ವವಿದ್ಯಾಲಯದ ಮಾನವ ಅಭಿವೃದ್ಧಿ ಮತ್ತು ಕುಟುಂಬ ಅಧ್ಯಯನ ವಿಭಾಗದ ನಿವೃತ್ತರಾದ ಪ್ರೊ.ಟಿ.ಎಸ್‌.ಸರಸ್ವತಿ, ತೆಲಂಗಾಣದ ಹೈದರಾಬಾದ್‌ ಟಾಟಾ ಇನ್‌ಸ್ಟಿಟ್ಯೂಟ್ ಆಫ್‌ ಸೋಷಿಯಲ್‌ ಸೈನ್ಸ್‌ಸ್‌ ಸ್ಕೂಲ್‌ ಆಫ್‌ ಎಜುಕೇಷನ್‌ ವಿಭಾಗದ ಪ್ರೊ.ಶೈಲಜಾ ಮೆನನ್‌, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕಿ ಅಂಕುರ್‌ ಮದನ್‌ ಅವರು ಸಂಪಾದಿಸಿರುವ ‘ಚೈಲ್ಡ್‌ಹುಡ್ಸ್‌ ಇನ್‌ ಇಂಡಿಯಾ’ ದಕ್ಷಿಣ ಏಷ್ಯ ಆವೃತ್ತಿಯ ಪುಸ್ತಕವನ್ನು ವಾಸವಿ ಅವರು ಇದೇ ಸಂದರ್ಭ ಬಿಡುಗಡೆ ಮಾಡಿದರು.

ಲೇಖಕಿ ಶೈಲಜಾ ‘ಮಕ್ಕಳು ಮತ್ತು ಬಾಲ್ಯವನ್ನು ಭಾರತೀಯ ದೃಷ್ಟಿಕೋನದಲ್ಲಿ ಅರ್ಥ ಮಾಡಿಕೊಳ್ಳುವ ಬಗೆ ಕುರಿತು ಈ ಪುಸ್ತಕ ಬೆಳಕು ಚೆಲ್ಲುತ್ತದೆ. ಮಕ್ಕಳ ಅಭಿವೃದ್ಧಿ, ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರಿಗೆ, ನೀತಿನಿರೂಪಕರಿಗೆ ಈ ಪುಸ್ತಕ ಬಹಳಷ್ಟು ಉಪಯುಕ್ತವಾಗಿದೆ’ ಎಂದರು.

***

ಪುಸ್ತಕ ಶೀರ್ಷಿಕೆ: ಚೈಲ್ಡ್‌ಹುಡ್ಸ್‌ ಇನ್‌ ಇಂಡಿಯಾ (ಟ್ರೆಡಿಷನ್ಸ್‌, ಟ್ರೆಂಟ್ಸ್‌ ಅಂಡ್‌ ಟ್ರಾನ್ಸ್‌ಫಾರ್ಮೆಷನನ್ಸ್‌)

ಸಂಪಾದಕರು: ಟಿ.ಎಸ್‌.ಸರಸ್ವತಿ, ಶೈಲಜಾ ಮೆನನ್‌, ಅಂಕುರ್‌ ಮದನ್‌

ಪ್ರಕಾಶಕರು: ರೌಟಲೆಡ್ಜ್‌ (ಟೇಲರ್‌ ಅಂಡ್‌ ಫ್ರಾನ್ಸಿಸ್‌ ಗ್ರೂಫ್)

ದಕ್ಷಿಣ ಏಷ್ಯಾ ಆವೃತ್ತಿ ಬೆಲೆ: ₹1395

ಸಂಪರ್ಕ: WWW.TandFindia.com

***

ಮಕ್ಕಳ ಪೋಷಣೆ ಮತ್ತು ಅವರ ಹಕ್ಕುಗಳ ರಕ್ಷಣೆಗೆ ಹಲವು ಕಾಯ್ದೆ, ಕಾನೂನುಗಳಿದ್ದರೂ ಮಕ್ಕಳ ಮೇಲಿನ ಹಿಂಸೆ, ಕ್ರೌರ್ಯ ಕಡಿಮೆಯಾಗುತ್ತಿಲ್ಲ. ಅಂತಹ ಮಕ್ಕಳ ಪರಿಸ್ಥಿತಿಯನ್ನು ತೆರೆದಿಡುವ ಅಂಕಿಅಂಶ ಇಲ್ಲಿದೆ.

* ದೇಶದ ಜನಸಂಖ್ಯೆಯಲ್ಲಿ  ಇರುವ ಮಕ್ಕಳು– ಶೇ 37

* ಶಾಲೆಯಿಂದ ಹೊರಗುಳಿದ ಮಕ್ಕಳು– 3 ಕೋಟಿ

* ಬಾಲಕಾರ್ಮಿಕರು (6 ವರ್ಷದಿಂದ 14 ವರ್ಷ) –1 ಕೋಟಿ

* ವೈಶ್ಯಾವಾಟಿಕೆ ದಂಧೆಗೆ ತಳ್ಳಲ್ಪಟ್ಟವರು– ಸುಮಾರು 5 ಲಕ್ಷ ಬಾಲಕಿಯರು

* ದೇಶದಲ್ಲಿ ಪ್ರತಿ ವರ್ಷ ನಾಪತ್ತೆಯಾಗುತ್ತಿರುವರು– ಸುಮಾರು 44,000

* ದೈಹಿಕ ಕಿರುಕುಳ– ಶೇ 69

* ಲೈಂಗಿಕ ಕಿರುಕುಳ– ಶೇ 53

* ಮಾನಸಿಕ ಕಿರುಕುಳ– ಶೇ 48

(ರಾಷ್ಟ್ರಮಟ್ಟದ ವಿವಿಧ ಸಮೀಕ್ಷಾ ವರದಿಗಳನ್ನು ಆಧರಿಸಿ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.