3

ಬಾಳು ಬೆಳಗಿದ ಬದನೆ ಕೃಷಿ

Published:
Updated:
ಬಾಳು ಬೆಳಗಿದ ಬದನೆ ಕೃಷಿ

ಓದಿದ್ದು ಬಿ.ಕಾಂ ಪದವಿ. ಆದರೆ ನೌಕರಿಯ ಬೆನ್ನು ಬೀಳದೇ ಬದನೆ ಬೆಳೆ ಬೆಳೆದು ಅಲ್ಪಾವಧಿಯಲ್ಲಿಯೇ ಅಧಿಕ ಲಾಭ ಗಳಿಸುವ ಮೂಲಕ ಇತರ ಕೃಷಿಕರು ಹುಬ್ಬೇರಿಸುವಂತೆ ಮಾಡಿದ್ದಾರೆ!

ಚಿಕ್ಕೋಡಿ ತಾಲ್ಲೂಕಿನ ಪೋಗತ್ಯಾನಟ್ಟಿ ಗ್ರಾಮದ ಪದವೀಧರ ಯುವಕ ಹನುಮಂತ ಮಲ್ಲಪ್ಪ ರಂಗಾಪುರೆ ಈ ಸಾಧಕರು. ಸಾಂಪ್ರದಾಯಿಕ ವಾಣಿಜ್ಯ ಬೆಳೆಗಳಿಗೆ ಮಾರು ಹೋಗದೇ ತರಕಾರಿ ಬೆಳೆದು ಅಲ್ಪಾವಧಿಯಲ್ಲಿಯೇ ಅಧಿಕ ಲಾಭ ಗಳಿಸುವ ಮೂಲಕ ಇತರ ಕೃಷಿಕರಿಗೆ ಮಾದರಿಯಾಗಿದ್ದಾರೆ.

ಇಡೀ ಪರಿಸರದಲ್ಲಿ ಕಬ್ಬು, ಗೋವಿನಜೋಳ ಬೆಳೆದು ನಿಂತ ಭೂಮಿ. ಅದರ ಮಧ್ಯೆ ರಂಗಾಪುರೆ ಅವರ ನಾಲ್ಕಾರು ಎಕರೆ ಭೂಮಿಯಲ್ಲಿ ಮಾತ್ರ ಮಾರುದ್ದ ಬೆಳೆದು ನಿಂತಿರುವ ಬದನೆ ಗಿಡಗಳು ತೆಂಗಿನಕಾಯಿ ಗಾತ್ರದ ಬದನೆಕಾಯಿಗಳನ್ನು ಮೈತುಂಬ ಹೊತ್ತು ನಿಂತಿವೆ. ವಾರಕ್ಕೆ ಎರಡು ಬಾರಿ ಟನ್‌ಗಟ್ಟಲೆ ಬದನೆ ಕಟಾವು ಮಾಡಿ ಮಾರಾಟ ಮಾಡಿ ಕೈತುಂಬ ಕಾಸು ಎಣಿಸುತ್ತಿದ್ದಾರೆ.

‘ಮೂರು ಎಕರೆ ಭೂಮಿಯಲ್ಲಿ ಗ್ಯಾಲಾಯಿನ್ ತಳಿಯ ಬದನೆ ಬೆಳೆದಿದ್ದೇನೆ. ಹನಿ ನೀರಾವರಿ ಅಳವಡಿಸಲಾಗಿದೆ. ಸಾಲಿನಿಂದ ಸಾಲಿಗೆ 5 ಅಡಿ ಅಂತರ ಮತ್ತು ಸಸಿಯಿಂದ ಸಸಿಗೆ 3 ಅಡಿ ಅಂತರದಲ್ಲಿ ಒಂದು ಎಕರೆಯಲ್ಲಿ 4200 ಸಸಿಗಳನ್ನು ನೆಡಲಾಗಿದೆ. ಸಸಿ ನೆಟ್ಟ 2 ತಿಂಗಳ ನಂತರ ಫಲ ಕೊಡಲಾರಂಭಿಸುತ್ತದೆ. 6 ತಿಂಗಳವರೆಗೆ ಬದನೆ ಗಿಡಗಳು ಬಾಳುತ್ತಿದ್ದು, ಕನಿಷ್ಠ ಒಂದು ಗಿಡಕ್ಕೆ 20 ಕಿ.ಗ್ರಾಂ ಬದನೆ ಪಡೆಯಬಹುದಾಗಿದೆ. ಮಾರುಕಟ್ಟೆಯಲ್ಲಿ ಪ್ರತಿ ಕಿ.ಗ್ರಾಂ ಬದನೆ ₹10ರಿಂದ ₹30ರವರೆಗೆ ಮಾರಾಟವಾಗುತ್ತದೆ. ಬೆಳಗಾವಿಯ ಮಾರುಕಟ್ಟೆಗೆ ಬದನೆ ಸಾಗಿಸುತ್ತೇನೆ. ಎಕರೆವೊಂದಕ್ಕೆ ₹1.5 ಲಕ್ಷ ಉತ್ಪಾದನಾ ವೆಚ್ಚವಾಗುತ್ತಿದ್ದು, ಆರು ತಿಂಗಳಿನಲ್ಲಿ ಖರ್ಚು ವೆಚ್ಚ ಕಳೆದು ₹2 ಲಕ್ಷವರೆಗೆ ಆದಾಯ ಗಳಿಸಬಹುದು’ ಎನ್ನುತ್ತಾರೆ ಹನುಮಂತ ರಂಗಾಪುರೆ.

‘ತಂದೆ ಮಲ್ಲಪ್ಪ ರಂಗಾಪುರೆ ಮೂಲತಃ ರೈತರು. ನಾನು ಬಿ.ಕಾಂ ಪದವಿ ಪಡೆದರೂ ಕೃಷಿಯಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕು ಎಂದು ಕಳೆದ ಆರು ವರ್ಷಗಳಿಂದ ಈ ಕ್ಷೇತ್ರಕ್ಕೆ ಬಂದಿದ್ದೇನೆ. 16 ಎಕರೆ ಜಮೀನು ಪೈಕಿ ಸುಮಾರು 8 ಎಕರೆ ಭೂಮಿಯಲ್ಲಿ ಗ್ಯಾಲಾಯಿನ್, ಮೈಸೂರು ಕುಟ್ಟಾ, ಮಂಜುಳಾ ತಳಿಯ ಬದನೆ ಬೆಳೆ ಮಾಡಿದ್ದು, ಉತ್ತಮ ಇಳುವರಿ ಪಡೆಯುತ್ತಿದ್ದೇನೆ. ಶ್ರದ್ಧೆಯಿಂದ ಕೆಲಸ ಮಾಡಿದರೆ ಯಾವ ಕ್ಷೇತ್ರದಲ್ಲಾದರೂ ಯಶಸ್ಸು ಗಳಿಸಬಹುದು. ಪದವಿ ಪಡೆದ ತಕ್ಷಣ ನಗರಗಳಲ್ಲೇ ಕೆಲಸ ಮಾಡಬೇಕು ಎಂಬ ಭ್ರಮೆಯಿಂದ ನಮ್ಮ ಯುವಕರು ಹೊರಬರಬೇಕು’ ಎನ್ನುವುದು ಅವರ ಅನುಭವದ ಮಾತು.

ಹನುಮಂತ ಅವರ ಸಂಪರ್ಕ ಸಂಖ್ಯೆ 9008376240.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry