7

ಲಘುಲಾಠಿ ಪ್ರಹಾರ: ಪ್ರತಾಪಸಿಂಹ ಬಂಧನ, ಕಲ್ಲು ತೂರಾಟ; ಮೂರು ಬಸ್‌ ಜಖಂ

Published:
Updated:
ಲಘುಲಾಠಿ ಪ್ರಹಾರ: ಪ್ರತಾಪಸಿಂಹ ಬಂಧನ, ಕಲ್ಲು ತೂರಾಟ; ಮೂರು ಬಸ್‌ ಜಖಂ

ಮೈಸೂರು: ಹುಣಸೂರು ಪಟ್ಟಣದ ಹನುಮಜಯಂತಿಯ ಮೆರವಣಿಗೆಯಲ್ಲಿ ಪೊಲೀಸರ ಸೂಚನೆಯನ್ನು ಪಾಲಿಸದ ಆರೋಪದ ಮೇರೆಗೆ ಸಂಸದ ಪ್ರತಾಪಸಿಂಹ ಸೇರಿ 200ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಇದರಿಂದ ಆಕ್ರೋಶಗೊಂಡ ಸಂಘಪರಿವಾರದ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ಎಸ್‌.ಪಿ. ರವಿ ಡಿ.ಚನ್ನಣ್ಣನವರ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಮೂರು ಬಸ್‌ಗಳು ಜಖಂಗೊಂಡಿವೆ. ಮಹಿಳೆಯೊಬ್ಬರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಹುಣಸೂರು ಪಟ್ಟಣದಲ್ಲಿ ಹನುಮ ಜಯಂತಿಯ ಅಂಗವಾಗಿ ಭಾನುವಾರ ಮೆರವಣಿಗೆ ಆಯೋಜಿಸಲಾಗಿತ್ತು. ಈದ್‌ ಮಿಲಾದ್‌ ಹಾಗೂ ಹನುಮಜಯಂತಿ ಒಟ್ಟಿಗೆ ಬಂದಿದ್ದರಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ಪಟ್ಟಣದಲ್ಲಿ ಶನಿವಾರದಿಂದ ನಿಷೇಧಾಜ್ಞೆ ಹೇರಲಾಗಿತ್ತು.

ಪೊಲೀಸರು ಅನುಮತಿ ನೀಡಿದ ಮಾರ್ಗವನ್ನು ಬಿಟ್ಟು ಮೆರವಣಿಗೆ ನಡೆಸಲು ಸಂಘಪರಿವಾರ ಮುಂದಾಗಿತ್ತು ಎನ್ನಲಾಗಿದೆ.

 

ಪ್ರತಾಪಸಿಂಹ ವಿರುದ್ಧ ಪ್ರಕರಣ ದಾಖಲು

ಹುಣಸೂರು ಪಟ್ಟಣಕ್ಕೆ ತೆರಳುತ್ತಿದ್ದ ಸಂಸದರನ್ನು ಪೊಲೀಸರು ಬಿಳಿಕೆರೆ ಬಳಿ ಬಂಧಿಸಲು ಮುಂದಾದರು. ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಪ್ರತಾಪಸಿಂಹ ಅವರ ಕಾರು ಅತಿ ವೇಗವಾಗಿ ಸಾಗಿದೆ. ರಸ್ತೆಯ ಬದಿ ಇದ್ದ ಬ್ಯಾರಿಕೇಡ್‌ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಪೊಲೀಸರಿಗೆ ಗಾಯಗಳಾಗಿವೆ ಎನ್ನಲಾಗಿದೆ.

ಹುಣಸೂರು ಗಲಭೆ ಹಿಂದೆ ರಾಜ್ಯ ಸರ್ಕಾರದ ವ್ಯವಸ್ಥಿತ ಸಂಚು: ಅನಂತ್‌ಕುಮಾರ್ ಹೆಗಡೆ

ಹುಣಸೂರಿಗೆ ಭೇಟಿ ನೀಡಿದ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ, ಮಂಜುನಾಥ ದೇವಾಲಯ ಬಳಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಲಾಠಿ ಚಾರ್ಜ್ ಹಾಗೂ ಸಂಸದ ಪ್ರತಾಪ್ ಸಿಂಹ ಅವರ ಬಂಧನದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸಂಪೂರ್ಣ ಬಂದೂಬಸ್ತ್ ನಡುವೆ ಭೇಟಿ ನೀಡಿರುವ ಅನಂತ್‌ಕುಮಾರ್ ಹೆಗಡೆ, ಹುಣಸೂರು ಗಲಭೆ ಹಿಂದೆ ರಾಜ್ಯ ಸರ್ಕಾರದ ವ್ಯವಸ್ಥಿತ ಸಂಚು ಇದೆ ಎಂದು ಆರೋಪಿಸಿದರು.

ಇದೊಂದು ಧಮನಕಾರಿ ಬೆಳವಣಿಗೆ. ರಾಜ್ಯ ಸರ್ಕಾರ ಹಿಂದೂ ಆಚರಣೆಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ನಿಗಧಿತವಾಗಿ ಇದ್ದ ಕಾರ್ಯಕ್ರಮದಲ್ಲಿ ಲಾಠಿ ಚಾರ್ಜ್ ಮಾಡುವ ಅನಿವಾರ್ಯತೆ ಇರಲಿಲ್ಲ. ಜನರು ಕೆರಳುವಂತ ಕೆಲಸವನ್ನು ಸರ್ಕಾರ ಮಾಡಿದೆ. ಅದಕ್ಕೆ ಸೂಕ್ತ ಉತ್ತರ ನೀಡುತ್ತೇವೆ. ಘಟನೆ ಖಂಡಿಸಿ ನಾಳೆ ಹುಣಸೂರು ಬಂದ್ ಕರೆ ನೀಡಿದ್ದೇವೆ ಎಂದರು.

ಒಬ್ಬ ಸಂಸದರನ್ನ ಬಂಧಿಸಿಡೋದು ಪ್ರಜಾಪ್ರಭುತ್ವದ ಕೊಲೆ‌. ಒಬ್ಬ ಜನಪ್ರತಿನಿಧಿಯನ್ನ ಹೇಗೆ ನಡೆಸಿಕೊಳ್ಳಬೇಕು ಅನ್ನೋದು ಸರ್ಕಾರಕ್ಕೆ ಗೊತ್ತಿರಬೇಕು. ಸಂಸದರ ಮೇಲೆ ಆರೋಪ ಮಾಡಬಾರದು ಎಂದು ಅನಂತ್‌ಕುಮಾರ್ ಹೆಗಡೆ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry