ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಪ್ರತ್ಯೇಕ ಧರ್ಮ; ಕೇಂದ್ರಕ್ಕೆ ಶಿಫಾರಸು ಖಚಿತ

Last Updated 4 ಡಿಸೆಂಬರ್ 2017, 5:39 IST
ಅಕ್ಷರ ಗಾತ್ರ

ವಿಜಯಪುರ: ‘ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ, ಮುಂಬರುವ ಜನವರಿ ತಿಂಗಳೊಳಗಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎನ್ನುವ ಆಶಾಭಾವನೆ ನಮ್ಮದಾಗಿದೆ. ಈ ನಿಟ್ಟಿನಲ್ಲಿ ನಾವು ಸಕಾರಾತ್ಮಕವಾಗಿ ಚಿಂತಿಸುತ್ತಿದ್ದೇವೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

‘ಐತಿಹಾಸಿಕ ಹಿನ್ನೆಲೆ ಆಧರಿಸಿ, ಪಾರದರ್ಶಕವಾಗಿ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ನಾವು ಹಕ್ಕೊತ್ತಾಯ ಮಂಡಿಸುತ್ತಿದ್ದೇವೆ. ಯಾವುದೇ ಒತ್ತಡವನ್ನು ಸರ್ಕಾರದ ಮೇಲೆ ಹೇರುತ್ತಿಲ್ಲ. ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ರ‍್ಯಾಲಿ ಸಂದರ್ಭ ಈ ಬಗ್ಗೆ ಚಿಂತನ–ಮಂಥನ ನಡೆಸಿ ಮುಂದಿನ ಹೆಜ್ಜೆ ಇಡುತ್ತೇವೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ 1963ರಲ್ಲಿ ಸಿಖ್ ಧರ್ಮಕ್ಕೆ, 1993ರಲ್ಲಿ ಬೌದ್ಧ, 2014ರಲ್ಲಿ ಜೈನ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಕೇಂದ್ರ ನೀಡಿದ್ದು, ಲಿಂಗಾಯತಕ್ಕೂ ಸ್ವತಂತ್ರ ಮಾನ್ಯತೆ ಸಿಕ್ಕೇ ಸಿಗುತ್ತದೆ, ಸಿಗಲೇಬೇಕು. ಇಲ್ಲದಿದ್ದರೇ ನ್ಯಾಯಾಲಯದ ಮೆಟ್ಟಿಲೇರಿ, ನಮ್ಮಲ್ಲಿ ರುವ ದಾಖಲೆಗಳಿಂದ ನಾವು ಮಾನ್ಯತೆ ಪಡೆಯುತ್ತೇವೆ’ ಎಂದು ತಿಳಿಸಿದರು.

‘12ನೇ ಶತಮಾನದಲ್ಲಿ ಬಸವಾದಿ ಶರಣರ ಸಾಮಾಜಿಕ ಚಳವಳಿಯಿಂದ, ವಿವಿಧ ವೃತ್ತಿಗಳಲ್ಲಿದ್ದ ನೂರಾರು ಶರಣರ ಆಶಯದಿಂದ ಅಸ್ತಿತ್ವಕ್ಕೆ ಬಂದ ಲಿಂಗಾಯತ ಧರ್ಮ 1871ರವರೆಗೆ ಸ್ವತಂತ್ರ ಧರ್ಮವಾಗಿತ್ತು. 1881ರ ಜನಗಣತಿಯಲ್ಲಿ ಸಿ.ರಂಗಚಾರ್ಲು ಲಿಂಗಾಯತರನ್ನು ಒಡೆದು, ಹಿಂದೂ ಧರ್ಮದಲ್ಲಿ ಸೇರಿಸಿ ಶೂದ್ರ ಜಾತಿಯಲ್ಲಿ ನಮೂದಿಸಿದರು.

ಅಲ್ಲಿಂದ ಆರಂಭವಾದ ಒಡೆದು ಆಳುವ ನೀತಿ ಇಂದಿಗೂ ಮುಂದು ವರೆದಿದೆ. ಇನ್ಮುಂದೆ ಇದಕ್ಕೆ ಅವಕಾಶ ನೀಡದೆ ಎಲ್ಲ ಲಿಂಗಾಯತ ಉಪ ಪಂಗಡಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಮುಂದುವರೆಯಲಾಗುವುದು. ಆ ಪ್ರಯತ್ನ ವಿಜಯಪುರದಿಂದಲೇ ಆರಂಭ ಗೊಳ್ಳುವುದು’ ಎಂದು ಪಾಟೀಲ ಹೇಳಿದರು.

‘1881ರಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನ-ಮಾನ ಕಸಿದುಕೊಂಡ ನಂತರ ಸ್ವಾತಂತ್ರ್ಯ ಪೂರ್ವದಲ್ಲಿಯೇ ನಮ್ಮ ಹಲ ಹಿರಿಯರು ಈ ಕುರಿತಂತೆ ಧ್ವನಿ ಎತ್ತಿದ್ದಾರೆ. 1928, 1938, 1942ರಲ್ಲಿ ಈ ಕುರಿತು ವಿವಿಧ ಸರ್ಕಾರಗಳ ಮುಖ್ಯಸ್ಥರಿಗೆ ಲಿಖಿತ ಮನವಿ ಸಲ್ಲಿಸಲಾಗಿದೆ.

1942ರಲ್ಲಿ ಮಹಾರಾಷ್ಟ್ರ, ಆಂಧ್ರ, ಕರ್ನಾಟಕ, ತಮಿಳುನಾಡಿನ 52 ಗಣ್ಯರು ಮನವಿಯನ್ನು ಸಲ್ಲಿಸಿ, ದೇಶದ ಸಂವಿಧಾನ ರಚನೆಯಲ್ಲಿ ಲಿಂಗಾಯತರಿಗೆ ಸ್ಥಾನ ಕೊಡಬೇಕು. ಪ್ರತ್ಯೇಕ ಚುನಾವಣಾ ಪ್ರಾತಿನಿಧ್ಯ ನೀಡಬೇಕು. ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿದ್ದು, ಈ ಎಲ್ಲ ದಾಖಲೆಗಳನ್ನು ಕೇಂದ್ರ ಸರ್ಕಾರದ ರಾಷ್ಟ್ರೀಯ ಸಂಗ್ರಹಾಲಯದಿಂದ ಪಡೆದುಕೊಂಡಿದ್ದೇನೆ’ ಎಂದು ಮಾಹಿತಿ ನೀಡಿದರು.

ಬಟ್ಟೆ ಹಾವು ಬಿಟ್ಟ ಬಿ.ಎಸ್‌.ವೈ
ಹಲ ದಿನಗಳಿಂದ ನಾನು ನಡೆಸಿರುವೆ ಎನ್ನಲಾದ ಹಗರಣಗಳ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಎಲ್ಲೆಡೆ ಡಂಗುರ ಸಾರಿದ್ದರು. ಆದರೆ ಇದೀಗ ಬಟ್ಟೆ ಹಾವು ಬಿಟ್ಟಿದ್ದಾರೆ. ನಾನು ಯಾವುದೇ ರೀತಿಯ ಹಗರಣದಲ್ಲಿ ಭಾಗಿಯಾಗಿಲ್ಲ. ಆದ್ದರಿಂದ ಅವರು ದಾಖಲೆ ಬಿಡುಗಡೆ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಸಚಿವ ಎಂ.ಬಿ.ಪಾಟೀಲ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

* * 

ಮೂರು ವರ್ಷಗಳ ಹಿಂದೆ ಯುಪಿಎ ಆಡಳಿತಾವಧಿಯಲ್ಲಿ ಸುಶೀಲ್‌ಕುಮಾರ ಶಿಂಧೆ ಗೃಹ ಸಚಿವರಿದ್ದಾಗ ಜೈನ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ದೊರಕಿದೆ.      ಅಮಿತ್ ಷಾ ಈ ಹೋರಾಟದಲ್ಲಿದ್ದರು 
ಎಂ.ಬಿ.ಪಾಟೀಲ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT