7

ಅಂಗವಿಕಲರಿಗೆ ಬೇಕಿರುವುದು ಅನುಕಂಪವಲ್ಲ; ಅವಕಾಶ

Published:
Updated:

ಚನ್ನಗಿರಿ: ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶಿಕ್ಷಕರು ಶ್ರಮಿಸಬೇಕು. ಅವರಿಗೆ ಬರೀ ಅನುಕಂಪ ತೋರಿಸದೆ, ಅವಕಾಶ ಕಲ್ಪಿಸಿಕೊಡಬೇಕು ಎಂದು ಶಾಸಕ ವಡ್ನಾಳ್ ರಾಜಣ್ಣ ಕರೆ ನೀಡಿದರು.

ಪಟ್ಟಣದ ಗುರುಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಭಾನುವಾರ ನಡೆದ ವಿಶ್ವ ಅಂಗವಿಕಲರ ದಿನಾಚರಣೆ ಹಾಗೂ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಗವಿಕಲರಿಗೆ ಸರ್ಕಾರದಿಂದ ಸಿಗಬೇಕಾದಂತಹ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಶಿಕ್ಷಕರು ಅಂಗವಿಕಲ ಮಕ್ಕಳನ್ನು ತಮ್ಮ ಮಕ್ಕಳೆಂದು ಭಾವಿಸಿ, ಗುಣಮಟ್ಟದ ಶಿಕ್ಷಣ ಕೊಡಬೇಕು.

ಇತರೆ ಮಕ್ಕಳಂತೆ ಅವರಿಗೂ ಮುಕ್ತ ಶಿಕ್ಷಣ ನೀಡುವ ಕಡೆಗೆ ಗಮನಹರಿಸುವುದು ಅಗತ್ಯ. ಅಂಗವಿಕಲರ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅರ್ಹ ಅಂಗವಿಕಲರನ್ನು ಗುರುತಿಸಿ ಅವರಿಗೆ ಸೌಕರ್ಯಗಳನ್ನು ವಿತರಣೆ ಮಾಡುವ ಹೊಣೆಗಾರಿಕೆ ಅಧಿಕಾರಿಗಳ ಮೇಲಿದೆ.

ಗ್ರಾಮ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿಗಳ ಶೇ 18ರ ನಿಧಿಯನ್ನು ಈ ಕಾರ್ಯಕ್ಕಾಗಿ ಕಡ್ಡಾಯವಾಗಿ ಬಳಸುವಂತಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಳ್ಳಬೇಕು’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್. ಪರಮೇಶ್ವರಪ್ಪ ಮಾತನಾಡಿ, ‘ಸರ್ವ ಶಿಕ್ಷಣ ಹಾಗೂ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆ ಅಡಿ 5ರಿಂದ 10ನೇ ತರಗತಿಯ ಅಂಗವಿಕಲ ಮಕ್ಕಳಿಗೆ ಕ್ರೀಡೆಗಳನ್ನು ಹಮ್ಮಿಕೊಂಡು, ಬಹುಮಾನಗಳನ್ನು ನೀಡಲಾಗುತ್ತಿದೆ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಇ.ಆರ್. ಸುಜಾತಾ ಬಸವರಾಜ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಯಶೋದಮ್ಮ ಮರುಳಪ್ಪ, ಮಂಜುಳಾ ಟಿ.ವಿ. ರಾಜು ಪಟೇಲ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಡಿ. ನಾಗರಾಜ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವಿ. ಸ್ವಾಮಿ, ಕಾರ್ಯದರ್ಶಿ ಬಿ. ಕುಮಾರ್, ಸಮನ್ವಯಾಧಿಕಾರಿ ಆರ್.ಆರ್. ಪ್ರಕಾಶ್, ದೇವೇಂದ್ರಪ್ಪ, ಎ.ಎಸ್. ರಂಗನಾಥ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry