ಭಾನುವಾರ, ಮಾರ್ಚ್ 7, 2021
32 °C

ರಾಹುಲ್‌ ಆಯ್ಕೆ ಖಚಿತ

ಪಿಟಿಐ Updated:

ಅಕ್ಷರ ಗಾತ್ರ : | |

ರಾಹುಲ್‌ ಆಯ್ಕೆ ಖಚಿತ

ನವದೆಹಲಿ: ಶತಮಾನದಷ್ಟು ಹಳೆಯದಾದ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿ 47 ವರ್ಷದ ರಾಹುಲ್‌ ಗಾಂಧಿ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೋಮವಾರ ರಾಹುಲ್‌ ಗಾಂಧಿ ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಮಂಗಳವಾರ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಸಹಜವಾಗಿ ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.

ನಾಮಪತ್ರ ವಾಪಸ್‌ ಪಡೆಯಲು ಮುಂದಿನ ಸೋಮವಾರ (ಡಿ.11ಕ್ಕೆ) ಕೊನೆಯ ದಿನವಾಗಿದ್ದು ಅಂದು ಅಧಿಕೃತ ಘೋಷಣೆ ಹೊರಬೀಳಲಿದೆ.

ಔರಂಗಜೇಬ್‌ಗೆ ಹೋಲಿಕೆ

ಗುಜರಾತ್‌ನ ಧರಮ್‌ಪುರದ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಆಂತರಿಕ ಚುನಾವಣೆಯನ್ನು ತಮ್ಮದೇ ಧಾಟಿಯಲ್ಲಿ ಲೇವಡಿ ಮಾಡಿದ್ದಾರೆ.

ರಾಹುಲ್‌ ಪದೋನ್ನತಿಯನ್ನು ಮೊಘಲ್‌ ಸಾಮ್ರಾಜ್ಯಕ್ಕೆ ಹೋಲಿಸಿ ಸಮರ್ಥಿಸಿಕೊಂಡ ಕಾಂಗ್ರೆಸ್‌ ಮುಖಂಡ ಮಣಿಶಂಕರ್‌ ಅಯ್ಯರ್‌ ಅವರನ್ನು ಮೋದಿ ತರಾಟೆಗೆ ತೆಗೆದುಕೊಂಡರು.

‘ಮೊಘಲ್‌ ಸಾಮ್ರಾಜ್ಯದಲ್ಲಿ ಜಹಾಂಗೀರ್ ಮತ್ತು ಶಹಜಹಾನ್ ಉತ್ತರಾಧಿಕಾರಿ ಯಾರು ಎಂಬುದು ಗೊತ್ತಿತ್ತು. ಅದೇ ರೀತಿ ಕಾಂಗ್ರೆಸ್ ವಂಶಪಾರಂಪರ್ಯ ಆಡಳಿತದಲ್ಲೂ ಉತ್ತರಾಧಿಕಾರಿ ಯಾರು ಎನ್ನುವುದು ಪೂರ್ವನಿರ್ಧರಿತ’ ಎಂದು ಮೋದಿ ಹೇಳಿದರು.

ಜಹಾಂಗೀರ್‌ ನಂತರ ಶಾಜಹಾನ್‌, ಶಾಜಹಾನ್‌ ನಂತರ ಔರಂಗಜೇಬ್‌ ಅಧಿಕಾರಕ್ಕೆ ಬಂದಂತೆ ಕಾಂಗ್ರೆಸ್‌ನಲ್ಲಿ ರಾಹುಲ್‌ ಅಧಿಕಾರಕ್ಕೆ ಬರುತ್ತಾರೆ. ಇದರಲ್ಲಿ ಅಂತಹ ವಿಶೇಷವೇನಿಲ್ಲ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಹಬ್ಬದ ವಾತಾವರಣ

ರಾಹುಲ್‌ ಗಾಂಧಿ ಸೋಮವಾರ ಕಾಂಗ್ರೆಸ್‌ ಪ್ರಧಾನ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವಾಗ ಹಬ್ಬದ ಸಂಭ್ರಮ ಮನೆ ಮಾಡಿತ್ತು. ನಾಮಪತ್ರ ಸಲ್ಲಿಸುವ ವೇಳೆ ಪಕ್ಷದ ಹಿರಿಯ ಮತ್ತು ಕಿರಿಯ ನಾಯಕರು ಹಾಜರಿದ್ದರು.

ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಆಡಳಿತದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌, ಕಾಂಗ್ರೆಸ್‌ ಕಾರ್ಯಕಾರಿಣಿ ಸದಸ್ಯರು ನಾಮಪತ್ರಕ್ಕೆ ಅನುಮೋದಕರಾಗಿ ಸಹಿ ಹಾಕಿದರು.

ಕಾಂಗ್ರೆಸ್‌ನ ಡಾರ್ಲಿಂಗ್‌

ನವದೆಹಲಿ(ಪಿಟಿಐ): ‘ರಾಹುಲ್‌ ಗಾಂಧಿ ಕಾಂಗ್ರೆಸ್‌ನ ಡಾರ್ಲಿಂಗ್‌’ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಸೋಮವಾರ ಬಣ್ಣಿಸಿದ್ದಾರೆ.

‘ರಾಹುಲ್‌ ಒಬ್ಬ ಸಮರ್ಥ ನಾಯಕ. ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ ಉತ್ತಮ ಪ್ರಧಾನಿಯಾಗುವ ಎಲ್ಲ ಅರ್ಹತೆ, ಸಾಮರ್ಥ್ಯ ಮತ್ತು ಲಕ್ಷಣಗಳು ಅವರಲ್ಲಿವೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಹುಲ್‌ ಗಾಂಧಿ ಸಲ್ಲಿಸಿದ ನಾಮಪತ್ರಕ್ಕೆ ಅನುಮೋದಕರಾಗಿ ಸಹಿ ಹಾಕಿದ ನಂತರ  ಸಿಂಗ್‌, ‘ಅವರು ಪಕ್ಷದ ಶ್ರೇಷ್ಠ ಸಂಪ್ರದಾಯ, ಘನತೆ ಮುಂದುವರಿಸಿಕೊಂಡು ಹೋಗಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭವಿಷ್ಯದ ಪ್ರಧಾನಿ

ಪಕ್ಷದ ಮುಖಂಡರಾದ ಆನಂದ ಶರ್ಮಾ ಮತ್ತು ಕಪಿಲ್‌ ಸಿಬಲ್‌, ‘ಇದೊಂದು ಐತಿಹಾಸಿಕ ಕ್ಷಣ’ ಎಂದು ಬಣ್ಣಿಸಿದ್ದಾರೆ.

‘ರಾಹುಲ್‌ ಅತ್ಯಂತ ಸಮರ್ಥ ಮತ್ತು ಯಶಸ್ವಿ ನಾಯಕರಾಗಿ ಹೊರಹೊಮ್ಮಲಿದ್ದಾರೆ’ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಅಭಿಪ್ರಾಯಪಟ್ಟಿದ್ದಾರೆ.

‘ರಾಹುಲ್‌ ಅತ್ಯುತ್ತಮ ಪ್ರಧಾನಿಯಾಗಲಿದ್ದಾರೆ’ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಪ್ರತಿಕ್ರಿಯಿಸಿದರು.

ಹಿರಿಯ ನಾಯಕ ಪಿ.ಚಿದಂಬರಂ, ಪಂಜಾಬ್‌ನ ಸಚಿವ ನವಜ್ಯೋತ್‌ ಸಿಂಗ್‌ ಸಿಧು, ಸಂಸದ ಜೋತಿರಾದಿತ್ಯ ಸಿಂಧ್ಯಾ, ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸುಶ್ಮಿತಾ ದೇವ್‌ ಕೂಡ ರಾಹುಲ್‌ ಹೊಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ‘ರಾಹುಲ್‌ ಭರವಸೆಯ ಹೊಸ ಆಶಾಕಿರಣ, ಉತ್ತಮ ಗುಣವುಳ್ಳ ವಿಶೇಷ ನಾಯಕ’ ಎಂದೆಲ್ಲ ಅವರು ಹಾಡಿ ಹೊಗಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು ರಾಹುಲ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ.

* ಕಾಂಗ್ರೆಸ್‌ಗೆ ರಾಹುಲ್‌ ಗಾಂಧಿ ಹೈಕಮಾಂಡ್‌. ನಮಗೆ 125 ಕೋಟಿ ಭಾರತೀಯರು ಹೈಕಮಾಂಡ್‌. ಕಾಂಗ್ರೆಸ್‌ನ ಔರಂಗಜೇಬ್‌ ಆಡಳಿತಕ್ಕೆ ಶುಭ ಕೋರುವೆ

– ನರೇಂದ್ರ ಮೋದಿ, ಪ್ರಧಾನಿ

ರಾಹುಲ್‌ ಮೇಲೆ ನಿರೀಕ್ಷೆಗಳ ಭಾರವೇ ಇದೆ. ಅದೇ ರೀತಿ ಸಾವಿರಾರು ಸವಾಲುಗಳೂ  ಅವರ ಮುಂದಿವೆ. ಅವರ ಯಶಸ್ಸಿಗಾಗಿ ಪ್ರಾರ್ಥಿಸುವೆ

–ಒಮರ್‌ ಅಬ್ದುಲ್ಲಾ, ನ್ಯಾಶನಲ್‌ ಕಾನ್ಫರೆನ್ಸ್‌ ನಾಯಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.