ಗುರುವಾರ , ಮಾರ್ಚ್ 4, 2021
28 °C
ರಾಜ್ಯದ ನಾಲ್ಕು ಭಾಗಗಳಲ್ಲಿ ಆಧುನಿಕ ಗುರುಕುಲ ಆರಂಭ

ಅಕ್ಷಯ ಪಾತ್ರದಿಂದ 25 ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ

ಕೆ.ಎಂ.ಸಂತೋಷ್‌ಕುಮಾರ್‌ Updated:

ಅಕ್ಷರ ಗಾತ್ರ : | |

ಅಕ್ಷಯ ಪಾತ್ರದಿಂದ 25 ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ

ಬೆಂಗಳೂರು: ಮಧ್ಯಾಹ್ನ ಬಿಸಿಯೂಟ ಯೋಜನೆಯಲ್ಲಿ ಕ್ರಾಂತಿ ಮಾಡಿರುವ ಇಸ್ಕಾನ್‌ ‘ಅಕ್ಷಯ ಪಾತ್ರ’ ಪ್ರತಿಷ್ಠಾನವು ಪ್ರತಿ ರಾಜ್ಯದಲ್ಲೂ ಉಚಿತ ಶಿಕ್ಷಣ ನೀಡಲು ಸಿದ್ಧತೆ ನಡೆಸಿದ್ದು, ಶಿಕ್ಷಣ ವ್ಯವಸ್ಥೆಗೆ ಹೊಸ ರೂಪ ಕೊಡಲು ಮುಂದಾಗಿದೆ.

‘ಮಹಾನ್‌ ಭಾರತದ ಪ್ರತಿಭಾ ಶಾಲೆ ಹೆಸರಿನಲ್ಲಿ ಆಧುನಿಕ ಗುರುಕುಲಗಳಿಗೆ ಅಕ್ಷಯ ಪಾತ್ರ ಬುನಾದಿ ಹಾಕುತ್ತಿದೆ. ಪರಂಪರೆ, ಸಂಸ್ಕೃತಿ ಮತ್ತು ಅಧ್ಯಾತ್ಮ ಮೌಲ್ಯಗಳನ್ನು ಶಿಕ್ಷಣದ ಮೂಲಕ ಮುಂದಿನ ಪೀಳಿಗೆಯಲ್ಲಿ ಬಿತ್ತಿ ಬೆಳೆಸುವುದು ಈ ಯೋಜನೆಯ ಉದ್ದೇಶ. ಆಧುನಿಕ ಗುರುಕುಲಗಳನ್ನು ಮುಂದಿನ ವರ್ಷ ದೇಶದಾದ್ಯಂತ ತೆರೆಯಲಾಗುತ್ತಿದೆ’ ಎಂದು ಇಸ್ಕಾನ್‌ ಮತ್ತು ಅಕ್ಷಯ ಪಾತ್ರ ಪ್ರತಿಷ್ಠಾನದ ಮಾಧ್ಯಮ ವಿಭಾಗದ ಮುಖ್ಯಸ್ಥ ಕುಲಶೇಖರ ಚೈತನ್ಯದಾಸ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯದ ನಾಲ್ಕು ಭಾಗಗಳಲ್ಲಿ ತಲೆ ಎತ್ತಲಿರುವ ಆಧುನಿಕ ಗುರುಕುಲಗಳಲ್ಲಿ (ವಸತಿ ಶಿಕ್ಷಣ ಶಾಲೆ) 1ನೇ ತರಗತಿಯಿಂದ 10ನೇ ತರಗತಿವರೆಗೆ ಸುಮಾರು 8,000 ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ ಎನ್ನುತ್ತಾರೆ ಅವರು.

‘ಮಂಗಳೂರು, ಹುಬ್ಬಳ್ಳಿ, ಬಳ್ಳಾರಿ ಭಾಗದಲ್ಲಿ ಗುರುಕುಲಗಳು ಆರಂಭವಾಗಲಿವೆ. ಒಂದೊಂದು ಗುರುಕುಲದಲ್ಲಿ ತಲಾ 2,000 ಮಕ್ಕಳಿಗೆ ಉಚಿತ ವಸತಿ, ಊಟ, ಶಿಕ್ಷಣ ದೊರೆಯಲಿದೆ. ಶ್ರೀರಂಗಪಟ್ಟಣದ ಬನ್ನೂರು ರಸ್ತೆಯ ಮಹದೇವಪುರದಲ್ಲಿ ಗುರುಕುಲ ಆರಂಭಕ್ಕೆ 19 ಎಕರೆ ಗುರುತಿಸಲಾಗಿದೆ. ಒಂದೂವರೆ ವರ್ಷದಲ್ಲಿ ಅಲ್ಲಿ ವಸತಿ ಶಾಲೆ ಆರಂಭವಾಗಲಿದೆ’ ಎಂದರು.

25,000 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ:

ದೇಶದಾದ್ಯಂತ ಸುಮಾರು 25,000 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಪ್ರತಿಷ್ಠಾನ ಸಿದ್ಧತೆ ಮಾಡಿಕೊಳ್ಳುತ್ತಿದೆ. ಪರೀಕ್ಷೆ ನಡೆಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುಕುಲಕ್ಕೆ ದಾಖಲಿಸಿಕೊಳ್ಳಲಾಗುತ್ತದೆ. ಎಲ್‌ಕೆಜಿಯಿಂದ ಸ್ನಾತಕೋತ್ತರ ಪದವಿ, ವೈದ್ಯಕೀಯ, ಎಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸ್‌ಗಳವರೆಗೆ ಉಚಿತ ಶಿಕ್ಷಣ ನೀಡಲಾಗುತ್ತದೆ. ಮಕ್ಕಳ ಕಲಿಕೆಯ ಹಂಬಲ ಗುರುತಿಸಿ, ಅವರು ಭವಿಷ್ಯದಲ್ಲಿ ಏನಾಗಬೇಕೆಂದು ಬಯಸುತ್ತಾರೋ ಅದರಂತೆ, ಅವರ ಕನಸುಗಳನ್ನು ಈಡೇರಿಸಲು ಪ್ರತಿಷ್ಠಾನ ಸಂಕಲ್ಪ ಮಾಡಿದೆ.

ಪ್ರತಿಷ್ಠಾನದ ಮನವಿ ಮೇರೆಗೆ ಗುರುಕುಲ ವಿಶ್ವವಿದ್ಯಾಲಯ ಆರಂಭಿಸಲು ಆಂಧ್ರಪ್ರದೇಶ ಸರ್ಕಾರವು ಅನಂತಪುರ ಜಿಲ್ಲೆಯ ಪೆನುಕೊಂಡದಲ್ಲಿ 200 ಎಕರೆ ಮಂಜೂರು ಮಾಡಿದೆ. ಕಳಿಂಗ ವಿಶ್ವವಿದ್ಯಾಲಯದ ಪ್ರೇರಣೆಯಿಂದ ಈ ವಿಶ್ವವಿದ್ಯಾಲಯಕ್ಕೆ ಬುನಾದಿ ಹಾಕಲಾಗುತ್ತಿದೆ ಎನ್ನುತ್ತಾರೆ ಕುಲಶೇಖರ ಚೈತನ್ಯದಾಸ.

ಪ್ರತಿಷ್ಠಾನವು, ಅಂಕ ಗಳಿಕೆ ಯಂತ್ರಗಳಾಗಿ ವಿದ್ಯಾರ್ಥಿಗಳನ್ನು ರೂಪಿಸುವುದಿಲ್ಲ. ಪ್ರತಿಭೆ ಮತ್ತು ಕೌಶಲ ಪ್ರೋತ್ಸಾಹಿಸಲಿದೆ. ಸಂಸ್ಕೃತಿ, ಪರಂಪರೆ ಪ್ರೀತಿಸುವಂತೆ ಮಾಡಲಿದೆ 

– ಮಧುಪಂಡಿತ ದಾಸ, ಅಕ್ಷಯಪಾತ್ರ ಪ್ರತಿಷ್ಠಾನ ಅಧ್ಯಕ್ಷ

‘ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿನ ಮಕ್ಕಳ ಮೇಲೆ ಹೆಚ್ಚುತ್ತಿರುವ ಒತ್ತಡದಿಂದ ಪಾರು ಮಾಡಲು, ಒತ್ತಡ ಮತ್ತು ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸಲು ಆಧುನಿಕ ಗುರುಕುಲಗಳ ಅವಶ್ಯಕತೆ ಇದೆ’ ಎನ್ನುತ್ತಾರೆ ಅಕ್ಷಯಪಾತ್ರ ಪ್ರತಿಷ್ಠಾನದ ಅಧ್ಯಕ್ಷ ಮಧುಪಂಡಿತ ದಾಸ.

‘ಪ್ರತಿ ವಿದ್ಯಾರ್ಥಿಗೂ ಕಡ್ಡಾಯ ಶಿಕ್ಷಣ ಮತ್ತು ಪೌಷ್ಟಿಕ ಆಹಾರ ನೀಡುವುದು ಸರ್ಕಾರದ ಉದ್ದೇಶವೂ ಆಗಿದೆ. ಈಗಾಗಲೇ ಅಕ್ಷಯ ಪಾತ್ರ ಪ್ರತಿಷ್ಠಾನ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ಪೂರೈಸುವ ಮೂಲಕ ಸರ್ಕಾರದ ಆಶಯ ಸಾಕಾರಗೊಳಿಸುತ್ತಿದೆ. ಪ್ರತಿ ವಿದ್ಯಾರ್ಥಿಗೂ ಉಚಿತ ಶಿಕ್ಷಣ ನೀಡುವ ಗುರುಕುಲಗಳನ್ನು ಎಲ್ಲ ರಾಜ್ಯಗಳಲ್ಲೂ ಸರ್ಕಾರಗಳ ನೆರವಿನೊಂದಿಗೆ ಆರಂಭಿಸುತ್ತೇವೆ’ ಎನ್ನುತ್ತಾರೆ ಅವರು.

13,900 ಶಾಲೆಗಳಿಗೆ ಉಚಿತ ಊಟ

ಅಕ್ಷಯ ಪಾತ್ರ ಪ್ರತಿಷ್ಠಾನ 13 ರಾಜ್ಯಗಳಲ್ಲಿ 13,900 ಶಾಲೆಗಳಿಗೆ ಉಚಿತವಾಗಿ ಮಧ್ಯಾಹ್ನದ ಬಿಸಿಯೂಟ ಪೂರೈಸುತ್ತಿದೆ.

ಬೆಂಗಳೂರಿನ ರಾಜಾಜಿನಗರ ಘಟಕದಿಂದ 475 ಶಾಲೆಗಳ 90,000 ಮಕ್ಕಳಿಗೆ, ವಸಂತಪುರ ಘಟಕದಿಂದ 580 ಶಾಲೆಯ 92,000 ಮಕ್ಕಳಿಗೆ, ಹುಬ್ಬಳ್ಳಿಯಲ್ಲಿ 810 ಶಾಲೆಗಳ 1.50 ಲಕ್ಷ ಮಕ್ಕಳಿಗೆ, ಮಂಗಳೂರಿನಲ್ಲಿ 140 ಶಾಲೆಗಳ 25,000 ಮಕ್ಕಳಿಗೆ, ಮೈಸೂರಿನಲ್ಲಿ 90 ಶಾಲೆಗಳ 25,000 ಮಕ್ಕಳಿಗೆ ಹಾಗೂ ಬಳ್ಳಾರಿಯಲ್ಲಿ 580 ಶಾಲೆಗಳ 1.30 ಲಕ್ಷ ಮಕ್ಕಳಿಗೆ ಅಕ್ಷಯ ಪಾತ್ರ ಮಧ್ಯಾಹ್ನ ಬಿಸಿಯೂಟ ಪೂರೈಸುತ್ತಿದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಧ್ಯಾಹ್ನ ಬಿಸಿಯೂಟದ ಪ್ರಯೋಜನ ಪಡೆಯುತ್ತಿದ್ದಾರೆ. ಒಂದು ಗಂಟೆ ಅವಧಿಯಲ್ಲಿ 50,000 ಜನರಿಗೆ ಊಟ ತಯಾರಿಸುವಂತಹ ಬೃಹತ್‌ ಅಡುಗೆ ಮನೆಯನ್ನು ಪ್ರತಿಷ್ಠಾನ ಹೊಂದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.