ಶುಕ್ರವಾರ, ಮಾರ್ಚ್ 5, 2021
30 °C

ಕಾರವಾರದಲ್ಲಿ ಗಾಳಿ ಸಹಿತ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರದಲ್ಲಿ ಗಾಳಿ ಸಹಿತ ಮಳೆ

ಕಾರವಾರ/ಬೆಳಗಾವಿ: ಒಖಿ ಚಂಡಮಾರುತ ಪ್ರಭಾವದಿಂದಾಗಿ ಉತ್ತರ ಕನ್ನಡ, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಮಂಗಳವಾರ ಅಲ್ಲಲ್ಲಿ ತುಂತುರು ಮಳೆಯಾಗಿದೆ.

ಕಾರವಾರದಲ್ಲಿ ಬೆಳಿಗ್ಗೆ ನಾಲ್ಕೈದು ತಾಸು ಗಾಳಿ ಸಹಿತ ಮಳೆಯಾಗಿದ್ದು, ಗಾಳಿಯ ಆರ್ಭಟಕ್ಕೆ ಒಣಗಿದ ಎಲೆಗಳು ಹಾಗೂ ಮರದ ಕೊಂಬೆಗಳು ನೆಲಕ್ಕೆ ಉದುರಿದವು. ಭಟ್ಕಳ, ಕುಮಟಾ ಹಾಗೂ ಹಳಿಯಾಳದಲ್ಲಿ ತುಂತುರು ಮಳೆಯಾಗಿದೆ.

ಲಂಗರು ಹಾಕಿದ ದೋಣಿಗಳು: ಸಮುದ್ರದಲ್ಲಿ ಅಲೆಗಳ ಆರ್ಭಟ ಜೋರಾಗಿದೆ. ಅಲ್ಲದೇ ಗಾಳಿ ವೇಗವೂ ಅಧಿಕವಾಗಿದೆ. ಸುರಕ್ಷತೆ ದೃಷ್ಟಿಯಿಂದ ಕಳೆದ ನಾಲ್ಕು ದಿನಗಳಿಂದ ದೋಣಿಗಳು ಮತ್ಸ್ಯಶಿಕಾರಿಗೆ ತೆರಳದೇ ಬಂದರಿನಲ್ಲೇ ಬೀಡುಬಿಟ್ಟಿವೆ. ಬುಧವಾರ ಕೂಡ ಪ್ರತಿಕೂಲ ವಾತಾವರಣ ಇರುವ ಮುನ್ಸೂಚನೆ ಇದ್ದು, ದೋಣಿಗಳು ಕಡಲಿಗಿಳಿಯುವುದು ಅನುಮಾನ.

ಬಂದರಿಗೆ ನುಗ್ಗಿದ ನೀರು: ಗೋಕರ್ಣದ ತದಡಿ ಬಂದರಿನ ಧಕ್ಕೆಗೆ ಸೋಮವಾರ ರಾತ್ರಿ ಸುಮಾರು 3 ಅಡಿ ನೀರು ನುಗ್ಗಿದೆ. ಕುಡ್ಲೆ ಬೀಚ್, ಓಂ ಬೀಚ್‌ಗಳಲ್ಲಿಯೂ ಸಮುದ್ರದ ನೀರು ಮೇಲಕ್ಕೆ ಬಂದಿದ್ದು, ಪ್ರವಾಸಿಗರಿಗೆ ನೀರಿಗೆ ಇಳಿಯದಂತೆ ಎಚ್ಚರಿಸಲಾಗಿದೆ. ಬೇಲೆಕಾನ್ ಸಮುದ್ರದಲ್ಲಿ ಅಲೆಗಳು ರಸ್ತೆಯ ಮೇಲೆ ಉಕ್ಕಿದ್ದರಿಂದ ಸಂಚಾರಕ್ಕೆ ಅಡಚಣೆ ಯಾಗಿದೆ.

ಹೊನ್ನಾವರ ತಾಲ್ಲೂಕಿನ ಕರ್ಕಿ ಗ್ರಾಮದ ತೊಪ್ಪಲಕೇರಿಯಲ್ಲಿ ಸಮುದ್ರದ ಅಲೆಗಳು ಅಪ್ಪಳಿಸಿ ನಾಗಪ್ಪ ಪಾಂಡು ಮೇಸ್ತ ಎಂಬುವವರ ಮನೆಗೆ ಭಾಗಶಃ ಹಾನಿಯಾಗಿದೆ. ಅಲೆಗಳ ಅಬ್ಬರಕ್ಕೆ ಬೆದರಿ, ಸಮುದ್ರ ತೀರದ ನಾಲ್ಕು ಮನೆಗಳ ಜನರು ಅಲ್ಲಿಂದ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ. ಬೆಳಗಾವಿ ಸೇರಿದಂತೆ ಜಿಲ್ಲೆಯ ಖಾನಾಪೂರ, ಕಿತ್ತೂರ, ಹಿರೇಬಾಗೇವಾಡಿ, ಎಂ.ಕೆ. ಹುಬ್ಬಳ್ಳಿ, ಬೈಲಹೊಂಗಲ, ಹುಕ್ಕೇರಿಯಲ್ಲಿ ತುಂತುರು ಮಳೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.