ಭಾನುವಾರ, ಮಾರ್ಚ್ 7, 2021
27 °C

‘ಮಾತೃಪೂರ್ಣದ ಹೊಣೆ ಬೇಡ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮಾತೃಪೂರ್ಣದ ಹೊಣೆ ಬೇಡ’

ಬೆಂಗಳೂರು: ‘ಮಾತೃಪೂರ್ಣ ಯೋಜನೆಯ ಹೊಣೆಗಾರಿಕೆಯನ್ನು ನಮ್ಮ ಮೇಲೆ ಹೇರಬೇಡಿ’ ಎಂದು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತರು ಹಾಗೂ ಅಡುಗೆ ಸಹಾಯಕರು ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಇದಕ್ಕೂ ಮುನ್ನ, ನಗರದ ಸಿಟಿ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಅವರು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಮಹಾ ಮಂಡಳಿ, ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘ, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ಹಾಗೂ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಕ್ಷೇಮಾಭಿವೃದ್ಧಿ ಸಂಘಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದವು.

ಚುನಾವಣೆ ದೃಷ್ಟಿಯಿಂದ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡದೆ ಹಾಗೂ ಜನಾಭಿಪ್ರಾಯ ಸಂಗ್ರಹಿಸದೆ ಅನುಷ್ಠಾನಗೊಳಿಸಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ದೂರಿದರು.

‘ಗರ್ಭಿಣಿಯರು ಹಾಗೂ ಬಾಣಂತಿಯರು ಈ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿಲ್ಲ. ಯೋಜನೆ ಅನುಷ್ಠಾನಗೊಂಡ ದಿನದಿಂದ (ಅ.2) ಬಹುತೇಕ ಫಲಾನುಭವಿಗಳು ಆಹಾರ ಸೇವಿಸಲು ಅಂಗನವಾಡಿಗಳಿಗೆ ಬರುತ್ತಿಲ್ಲ. ಹೀಗಾಗಿ, ಹಿಂದಿನ ರೀತಿಯಲ್ಲೇ ಮನೆಗಳಿಗೆ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗುವ ಪದ್ಧತಿಯನ್ನು ಜಾರಿಗೊಳಿಸಬೇಕು. ಫಲಾನುಭವಿಗಳ ಬೇಡಿಕೆಯೂ ಇದೇ ಆಗಿದೆ’ ಎಂದು ಮಾಲೂರಿನ ದೊಡ್ಡಕಡತೂರಿನ ಕಾರ್ಯಕರ್ತೆ ಗೀತಾ ಹೇಳಿದರು.

ಫಲಾನುಭವಿಗಳು ಅಂಗನವಾಡಿ ಕೇಂದ್ರಗಳಿಗೆ ಬರಲು ಅವರ ಆಚಾರ–ವಿಚಾರಗಳು ತೊಡಕಾಗಿವೆ. ಅವರನ್ನು ಕೇಂದ್ರಗಳಿಗೆ ಕಳುಹಿಸಲು ಕುಟುಂಬಸ್ಥರು ಸಹ ಹಿಂದೇಟು ಹಾಕುತ್ತಿದ್ದಾರೆ. ಓಡಾಟಕ್ಕೂ ತೊಂದರೆಯಾಗಿದೆ. ಹೀಗಾಗಿ, ಸರ್ಕಾರ ಯೋಜನೆಯನ್ನು ಮರುಪರಿಶೀಲನೆ ನಡೆಸಬೇಕು ಎಂದರು.

ಸ್ವಂತ ಕಟ್ಟಡ ಕಲ್ಪಿಸಿ: ರಾಜ್ಯದಲ್ಲಿ ಒಟ್ಟು 65,911 ಅಂಗನವಾಡಿ ಕೇಂದ್ರಗಳಿವೆ. ಆ ಪೈಕಿ 34 ಸಾವಿರ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿದ್ದು, ಉಳಿದ ಅಂಗನವಾಡಿ ಕೇಂದ್ರಗಳನ್ನು ಬಾಡಿಗೆ ಕಟ್ಟಡಗಳು ಹಾಗೂ ಸಮುದಾಯ ಭವನಗಳಲ್ಲಿ ನಡೆಸಲಾಗುತ್ತಿದೆ. ಸ್ವಂತ ಕಟ್ಟಡಗಳಿಗೆ ಸರ್ಕಾರ ವ್ಯವಸ್ಥೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ಅಧ್ಯಕ್ಷ ಬಿ.ಆರ್.ಶಿವಶಂಕರ್ ಒತ್ತಾಯಿಸಿದರು.

ಕೆಲವು ಕಡೆ ಅಂಗನವಾಡಿ ಕೇಂದ್ರಗಳ ಕೊಠಡಿಗಳು ಚಿಕ್ಕದಾಗಿವೆ. ಫಲಾನುಭವಿಗಳು ಕೇಂದ್ರಗಳಿಗೆ ಬಂದರೆ ಸ್ಥಳಾವಕಾಶದ ಕೊರತೆಯಿಂದ ಮಕ್ಕಳನ್ನು ಹೊರ ಕಳುಹಿಸಬೇಕಾಗುತ್ತದೆ. ಮಕ್ಕಳನ್ನು ಹೊರ ಕಳುಹಿಸಿದರೆ, ಪೋಷಕರು ಗಲಾಟೆ ಮಾಡುತ್ತಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯೋಜನೆಯಲ್ಲಿನ ತೊಡುಕುಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರಿಗೆ ಅನೇಕ ಬಾರಿ ತಿಳಿಸಿದ್ದೇವೆ. ಸಾಕಷ್ಟು ಬಾರಿ ಪ್ರತಿಭಟನೆ ಹಾಗೂ ಸಮಾವೇಶಗಳನ್ನು ನಡೆಸಿದ್ದೇವೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಇಲಾಖೆಯ ಜಂಟಿ ಕಾರ್ಯದರ್ಶಿ ರತ್ನಾ ಕಲಂದಾನಿ ಅವರು ಸ್ಥಳಕ್ಕೆ ಬಂದು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.

ಅಂಗನವಾಡಿ ಕಾರ್ಯಕರ್ತರ ಹಕ್ಕೊತ್ತಾಯಗಳು

* ಯೋಜನೆಯ ಬಗ್ಗೆ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ಮಾಡಬೇಕು

* ಅಧ್ಯಯನ ಪೂರ್ಣಗೊಳ್ಳುವ ವರೆಗೆ ‘ಟೇಕ್ ಹೋಮ್’ ಪದ್ಧತಿ ಜಾರಿಗೊಳಿಸಬೇಕು

* ಅಂಗನವಾಡಿ ಕೇಂದ್ರಗಳ ಕೆಲಸದ ಅವಧಿ ಬೆಳಿಗ್ಗೆ 9.30ರಿಂದ ಮದ್ಯಾಹ್ನ 1.30ಕ್ಕೆ ನಿಗದಿ ಮಾಡಬೇಕು

* ಕಾರ್ಯಕರ್ತೆಯರಿಗೆ ಕನಿಷ್ಠ ವೇತನ (₹18,000) ಜಾರಿ

* ಮಿನಿ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಪ್ರಮಾಣದ ಅಂಗನವಾಡಿಗಳೆಂದು ಘೋಷಿಸಬೇಕು

* ಬಾಲವಿಕಾಸ ಸಮಿತಿಯಲ್ಲಿ ಜನ ಪ್ರತಿನಿಧಿಗಳು ಕಡ್ಡಾಯ ಆದೇಶ ಹಿಂಪಡೆಯಬೇಕು

* ಅಗತ್ಯ ಸಿಬ್ಬಂದಿ ಹಾಗೂ ಮೂಲಸೌಲಭ್ಯ ಒದಗಿಸಬೇಕು

‘ಇಂದಿರಾ ಕ್ಯಾಂಟಿನ್‌ಗಳನ್ನಾಗಿಸುವ ಹುನ್ನಾರ’

‘ಬೆಂಗಳೂರಿನಲ್ಲಿ ಜಾರಿಗೊಳಿಸಿರುವ ಇಂದಿರಾ ಕ್ಯಾಂಟಿನ್ ಯೋಜನೆ ಯಶಸ್ವಿಯಾಗಿದೆ. ಜನರಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ. ಹೀಗಾಗಿ, ಅಂಗನವಾಡಿ ಕೇಂದ್ರಗಳನ್ನು ಮುಂಬರುವ ದಿನಗಳಲ್ಲಿ ಇಂದಿರಾ ಕ್ಯಾಂಟಿನ್ ಮಾದರಿಯಾಗಿಸುವ ಹುನ್ನಾರವನ್ನು ಸರ್ಕಾರ ನಡೆಸಿದೆ’ ಎಂದು ಶಿವಕುಮಾರ್ ಆರೋಪಿಸಿದರು.

‘ಪ್ರತಿ ಫಲಾನುಭವಿಗಳಿಗೆ ನೀಡುವ 100 ಗ್ರಾಂ ತರಕಾರಿಗೆ ₹ 2.60 ಪೈಸೆ ಹಾಗೂ ಪ್ರತಿ ಮೊಟ್ಟೆಗೆ ₹ 4 ನಿಗದಿ ಪಡಿಸಿದೆ. ಈ ಹಣದಲ್ಲಿ ಇವುಗಳನ್ನು ಖರೀದಿಸಲು ಸಾಧ್ಯವಿಲ್ಲ. ಮೊಟ್ಟೆ ಬೆಲೆ 7 ರೂಪಾಯಿಯ ಗಡಿ ದಾಟಿದೆ. ಸರ್ಕಾರವೇ ಮೊಟ್ಟೆ ಹಾಗೂ ತರಕಾರಿಗಳನ್ನು ಪೂರೈಸಲಿ. ಅದರ ಉಸಾಬರಿ ನಮಗೆ ಬೇಡ’ ಎಂದು ಕಾರ್ಯಕರ್ತೆಯರು ಸಮಸ್ಯೆಯನ್ನು ಬಿಚ್ಚಿಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.