ಗುರುವಾರ , ಫೆಬ್ರವರಿ 25, 2021
29 °C
ನೀನಾ, ನೇಹಾ 105 ರನ್‌ ಜೊತೆಯಾಟ

ಮಹಿಳಾ ಕ್ರಿಕೆಟ್‌: ಭಾರತದ ಮುಡಿಗೆ ಏಕದಿನ ಸರಣಿ

ಪ್ರಮೋದ ಜಿ.ಕೆ. Updated:

ಅಕ್ಷರ ಗಾತ್ರ : | |

ಮಹಿಳಾ ಕ್ರಿಕೆಟ್‌: ಭಾರತದ ಮುಡಿಗೆ ಏಕದಿನ ಸರಣಿ

ಹುಬ್ಬಳ್ಳಿ: ಹಸಿರಿನಿಂದ ಕಂಗೊಳಿಸುತ್ತಿರುವ ಇಲ್ಲಿನ ರಾಜನಗರದ ಕೆ.ಎಸ್‌.ಸಿ.ಎ ಕ್ರೀಡಾಂಗಣದಲ್ಲಿ ಆಲ್‌ರೌಂಡ್‌ ಪ್ರದರ್ಶನ ನೀಡಿದ ಭಾರತ ಮಹಿಳಾ ‘ಎ’ ತಂಡ ಬಾಂಗ್ಲಾದೇಶ ‘ಎ’ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿ ತನ್ನದಾಗಿಸಿಕೊಂಡಿದೆ.

ಮಂಗಳವಾರ ನಡೆದ ಎರಡನೇ ಪಂದ್ಯದಲ್ಲಿ ಟಾಸ್‌ ಜಯಿಸಿ ಬ್ಯಾಟ್‌ ಮಾಡಿದ ಪ್ರವಾಸಿ ಬಳಗ 50 ಓವರ್‌ಗಳಲ್ಲಿ ಏಳು ವಿಕೆಟ್‌ ನಷ್ಟಕ್ಕೆ 195 ರನ್ ಗಳಿಸಿತು. ಭಾರತ ‘ಎ’ 48.1 ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.

ಈ ಮೂಲಕ ಆತಿಥೇಯರು ಮೂರು ಪಂದ್ಯಗಳ ಸರಣಿಯಲ್ಲಿ 2–0ರಲ್ಲಿ ಮುನ್ನಡೆ ಪಡೆದು, ಒಂದು ಪಂದ್ಯ ಬಾಕಿ ಇರುವ ಮೊದಲೇ ಸರಣಿ ಜಯಿಸಿದರು. ಮೊದಲ ಪಂದ್ಯದಲ್ಲಿ 32 ರನ್‌ಗಳಿಂದ ಬಾಂಗ್ಲಾವನ್ನು ಮಣಿಸಿದ್ದರು.

ಆರಂಭಿಕ ಬ್ಯಾಟ್ಸ್‌ವುಮನ್‌ಗಳಾದ ಶರ್ಮಿನ್‌ ಸುಲ್ತಾನ (7) ಮತ್ತು ಮುರ್ಷಿದಾ ಕಾತೂನ್‌ (17) ಅವರನ್ನು ಬೇಗನೆ ಕಳೆದುಕೊಂಡು ಬಾಂಗ್ಲಾ ಸಂಕಷ್ಟಕ್ಕೆ ಸಿಲುಕಿತ್ತು. ಫರ್ಗಾನಾ ಹಕ್ (9) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ಆರಂಭದಲ್ಲಿ ಪ್ರಮುಖ ವಿಕೆಟ್‌ ಕಳೆದುಕೊಂಡಿದ್ದರಿಂದ ಪ್ರವಾಸಿ ತಂಡ 25 ಓವರ್‌ಗಳು ಪೂರ್ಣಗೊಂಡರೂ 74 ರನ್‌ಗಳಷ್ಟೇ ಗಳಿಸಿತ್ತು. ಆಗ ಲತಾ ಮಂಡಲ್‌ (71, 120ಎಸೆತ, 5 ಬೌಂಡರಿ) ಮತ್ತು ರುಮಾನಾ ಅಹ್ಮದ್‌ (65, 83ಎ, 3 ಬೌಂ,) ನಡುವೆ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ ಬಂದ 107 ರನ್‌ನಿಂದ ತಂಡ ಚೇತರಿಸಿಕೊಂಡಿತು.

ಸಾಧಾರಣ ಗುರಿ ಭಾರತ ‘ಎ’ ತಂಡಕ್ಕೆ ಸವಾಲು ಎನಿಸಲಿಲ್ಲ. ವಿ.ಆರ್‌. ವನಿತಾ (42, 42 ಎ, 4 ಬೌಂ, 2 ಸಿ,) ಮತ್ತು ಎಸ್‌. ಮೇಘನಾ (14) ಮೊದಲ ವಿಕೆಟ್‌ಗೆ 50 ರನ್‌ ಕಲೆ ಹಾಕಿದರು.

ಟಿ–20 ಮಾದರಿ ನೆನಪಿಸುವಂತೆ ಬ್ಯಾಟಿಂಗ್‌ ಮಾಡಿದ ವನಿತಾ ಮೊದಲ ಓವರ್‌ನಿಂದಲೇ ವೇಗದ ಆಟಕ್ಕೆ ಒತ್ತುಕೊಟ್ಟರು. ಇದರಿಂದ ಆತಿಥೇಯ ತಂಡಕ್ಕೆ ಮೊದಲ 10 ಓವರ್‌ಗಳಲ್ಲಿ 50 ರನ್‌ ಗಳಿಸಲು ಸಾಧ್ಯವಾಯಿತು. ಎಂಟು ಮತ್ತು ಒಂಬತ್ತನೇ ಓವರ್‌ನಲ್ಲಿ ವನಿತಾ ಮತ್ತು 10ನೇ ಓವರ್‌ನಲ್ಲಿ ಮೇಘನಾ ಸಿಕ್ಸರ್ ಸಿಡಿಸಿದರು.

ಆರಂಭಿಕ ಜೋಡಿ ಹಾಕಿಕೊಟ್ಟ ಗಟ್ಟಿ ಬುನಾದಿಯ ಮೇಲೆ ನೀನಾ ಚೌಧರಿ ಮತ್ತು ನೇಹಾ ತನ್ವಾರ್‌ ಗೆಲುವಿನ ಸೌಧ ನಿರ್ಮಿಸಿದರು. ಇವರು ನಾಲ್ಕನೇ ವಿಕೆಟ್‌ಗೆ 105 ರನ್‌ ಕಲೆ ಹಾಕಿ ಜಯದ ಹಾದಿ ಸುಲಭ ಮಾಡಿದರು.

ಬೌಲರ್‌ಗಳ ಸವಾಲನ್ನು ಸುಲಭವಾಗಿ ಎದುರಿಸುತ್ತಿದ್ದ ಇವರು ಬಾಂಗ್ಲಾದ ಚುರುಕಿನ ಫೀಲ್ಡಿಂಗ್‌ನಿಂದ ರನ್‌ ಔಟ್‌ ಬಲೆಗೆ ಬಿದ್ದರು. ಫಾಹಿಮಾ ಕಾತೂನ್‌ ಮತ್ತು ಸುಲ್ತಾನಾ ಜೂಟಿ ಅವರ ನೇರ ಎಸೆತಕ್ಕೆ ಔಟಾದರು. ಈ ವೇಳೆ ಭಾರತದ ಗೆಲುವಿಗೆ 34 ರನ್‌ಗಳಷ್ಟೇ ಅಗತ್ಯವಿದ್ದವು. ಕೊನೆಯಲ್ಲಿ ಅನುಜಾ ಪಾಟೀಲ್‌ ತಂಡವನ್ನು ಗುರಿ ಸೇರಿಸಿದರು. ಬಿಸಿಸಿಐ ಆಯ್ಕೆ ಸಮಿತಿ ಸದಸ್ಯೆ ಶಶಿ ಗುಪ್ತಾ ಪಂದ್ಯ ವೀಕ್ಷಿಸಿದರು.

ಸಂಕ್ಷಿಪ್ತ ಸ್ಕೋರು

ಬಾಂಗ್ಲಾದೇಶ ‘ಎ’ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 195 (ಮುರ್ಷಿದಾ ಕಾತೂನ್‌ 17, ಲತಾ ಮಂಡಲ್‌ 71, ರುಮಾನಾ ಅಹ್ಮದ್‌ 65, ಶೈಲಾ ಶರ್ಮಿನ್‌ ಔಟಾಗದೆ 14; ಸುಕನ್ಯಾ ಫರೀದ್‌ 34ಕ್ಕೆ1).

ಭಾರತ ‘ಎ’ 48.1 ಓವರ್‌ಗಳಲ್ಲಿ 5 ವಿಕೆಟ್‌ಗೆ 196 (ವಿ.ಆರ್‌. ವನಿತಾ 42, ಎಸ್‌. ಮೇಘನಾ 14, ನೀನಾ ಚೌಧರಿ 56, ನೇಹಾ ತನ್ವಾರ್‌ 44, ಅನುಜಾ ಪಾಟೀಲ್‌ ಔಟಾಗದೆ 18, ಆರ್‌. ರೋಡ್ರಿಗಸ್‌ ಔಟಾಗದೆ 10; ಖಾದಿಜಾ ಕುಬ್ರಾ 28ಕ್ಕೆ1).

ಫಲಿತಾಂಶ: ಭಾರತ ‘ಎ’ ತಂಡಕ್ಕೆ 5 ವಿಕೆಟ್‌ ಗೆಲುವು. ಮುಂದಿನ ಪಂದ್ಯ ಡಿ. 7ರಂದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.