7

ತೃಪ್ತಿ, ಮಾನವೀಯ ಸಮಾಜ ನಿರ್ಮಾಣ ಇಂದಿನ ಅಗತ್ಯ

Published:
Updated:
ತೃಪ್ತಿ, ಮಾನವೀಯ ಸಮಾಜ ನಿರ್ಮಾಣ ಇಂದಿನ ಅಗತ್ಯ

ದಾವಣಗೆರೆ: ‘ನಮ್ಮದು ಒಂದು ಭಾಷೆ, ಸಂಸ್ಕೃತಿ, ಧರ್ಮಕ್ಕೆ ಸೀಮಿತವಾದ ದೇಶವಲ್ಲ. ಬಹುಸಂಸ್ಕೃತಿಯ ತವರು. ಆದರೂ ರಾಷ್ಟ್ರವನ್ನು ಛಿದ್ರಗೊಳಿಸುವ ಪ್ರಯತ್ನ ನಡೆಯುತ್ತಿದ್ದು, ಅದನ್ನು ತಡೆಯಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ನಿವೃತ್ತ ಲೋಕಾಯುಕ್ತ ಡಾ.ಎನ್‌.ಸಂತೋಷ್‌ ಹೆಗ್ಡೆ ಕಿವಿಮಾತು ಹೇಳಿದರು.

ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್‌ ಜೆಜೆಎಂ ಮೆಡಿಕಲ್‌ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ, ಭ್ರಷ್ಟರನ್ನು, ದರೋಡೆಕೋರರನ್ನು, ಅತ್ಯಾಚಾರಿಗಳನ್ನು ಬಹಿಷ್ಕರಿಸಲಾಗುತ್ತಿತ್ತು. ಪ್ರಸ್ತುತ, ಜೈಲಿಗೆ ಹೋಗಿ ಹೊರಬಂದವರನ್ನು ಸನ್ಮಾನಿಸಲಾಗುತ್ತಿದೆ. ಅಧಿಕಾರ ಹಾಗೂ ಶ್ರೀಮಂತಿಕೆಯನ್ನು ಪೂಜಿಸಲಾಗುತ್ತಿದೆ ಎಂದು ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.

ತೃಪ್ತಿ ಹಾಗೂ ಮಾನವೀಯತೆ ಒಳಗೊಂಡ ಸಮಾಜ ನಿರ್ಮಾಣ ಇಂದಿನ ಅಗತ್ಯ. ಜೀವನ ಪಥದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಮಾನವಂತರಾಗಿಯೇ ಸತ್ತರೆ ಅದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ. ಸಮಾಜವನ್ನು ಬದಲಾಯಿಸುವ ಶಕ್ತಿ ಯುವಕರಲ್ಲಿದ್ದು, ಮೌಲ್ಯಗಳನ್ನು ಮರುಸ್ಥಾಪಿಸಲು ಶ್ರಮಿಸಬೇಕು ಎಂದರು.

ಎಸ್‌ಎಸ್‌ ಜನಕಲ್ಯಾಣ ಟ್ರಸ್ಟ್‌ನ ಸಂಸ್ಥಾಪಕರಾದ ಶಾಮನೂರು ಶಿವಶಂಕರಪ್ಪ ಮಾತನಾಡಿ, ‘ಟ್ರಸ್ಟ್ ಹೆಸರಿನಲ್ಲಿ ₹ 6 ಠೇವಣಿ ಇಡಲಾಗಿದ್ದು, ಬರುವ ಬಡ್ಡಿಯಿಂದ ಬಡ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಲಾಗುತ್ತಿದೆ’ ಎಂದರು.

ಐದತ್ತು ಸಾವಿರ ವಿದ್ಯಾರ್ಥಿ ವೇತನ ನೀಡಿದರೆ ಹೆಚ್ಚು ಪ್ರಯೋಜನವಾಗುವುದಿಲ್ಲ. ಬಡ ವಿದ್ಯಾರ್ಥಿಗಳ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಸಂಪೂರ್ಣ ಶಿಕ್ಷಣ ವೆಚ್ಚ ಭರಿಸುವ ವ್ಯವಸ್ಥೆ ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಟ್ರಸ್ಟ್‌ ಚಿಂತಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಮಾತನಾಡಿ, ‘ಟ್ರಸ್ಟ್‌ಗೆ 77 ಸಾವಿರ ಅರ್ಜಿಗಳು ಬಂದಿವೆ. 6 ವರ್ಷದಿಂದ ವಿದ್ಯಾರ್ಥಿ ವೇತನ ನೀಡುತ್ತ ಬರಲಾಗುತ್ತಿದೆ. ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬಗಳ ಮಕ್ಕಳಿಗೆ ಆದ್ಯತೆ ಮೇಲೆ ಆರ್ಥಿಕ ನೆರವು ನೀಡಬೇಕು ಎಂದರು.

ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಮಾತನಾಡಿ, ‘ನಮ್ಮಲ್ಲಿರುವ ಒಳ್ಳೆಯತನವನ್ನು ಸಮಾಜಕ್ಕೆ ಹಂಚಬೇಕು. ಈ ಕೆಲಸವನ್ನು ಜನಕಲ್ಯಾಣ ಟ್ರಸ್ಟ್ ಪ್ರಾಮಾಣಿಕವಾಗಿ ಮಾಡುತ್ತಿದೆ. ಉತ್ತಮ ಆಲೋಚನೆಗಳು, ಚಿಂತನೆಗಳು ಮೂಡಿದಾಗ ಆರೋಗ್ಯಯುತ ಸಮಾಜ ನಿರ್ಮಾಣವಾಗುತ್ತದೆ’ ಎಂದರು.

ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೆಳ್ಳಿಯ ಪದಕಗಳನ್ನು ವಿತರಿಸಲಾಯಿತು. ಪತ್ರಕರ್ತರ ಹಾಗೂ ಛಾಯಾಗ್ರಹಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಟ್ರಸ್ಟ್‌ನ ಕಾರ್ಯದರ್ಶಿ ಅಥಣಿ ವೀರಣ್ಣ, ಟ್ರಸ್ಟಿಗಳಾದ ಎಸ್‌.ಎಸ್‌.ಬಕ್ಕೇಶ್, ಎಸ್‌.ಎಸ್‌.ಗಣೇಶ್, ಡಿಡಿಪಿಐ ಕೋದಂಡರಾಮ, ಕಿರುವಾಡಿ ಜಯಮ್ಮ, ಡಾ.ಬಿ.ಎಸ್‌.ಪ್ರಸಾದ್, ಡಾ.ರೆಡ್ಡಿ, ಎಸ್‌.ಬಿ.ಮುರುಗೇಶ್‌ ಅವರೂ ಇದ್ದರು.

ಭ್ರಷ್ಟಾಚಾರದ ಮಗ್ಗುಲುಗಳನ್ನು ತೆರೆದಿಟ್ಟರು...

‘2010ರಲ್ಲಿ ಚಿತ್ರದುರ್ಗದಿಂದ ಲೋಕಾಯುಕ್ತ ಕಚೇರಿಗೆ ವ್ಯಕ್ತಿಯೊಬ್ಬರು ಬಂದಿದ್ದರು. ಪತ್ನಿಗೆ ಹೆಣ್ಣುಮಗುವಾಗಿದೆ. ಭಾಗ್ಯಲಕ್ಷ್ಮೀ ಬಾಂಡ್‌ಗೆ ಅರ್ಜಿ ಸಲ್ಲಿಸಿದರೆ ನಿರಾಕರಿಸಲಾಗುತ್ತಿದೆ ಎಂದು ಗೋಳಾಡಿದರು. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಯನ್ನು ಕಚೇರಿಗೆ ಕರೆಸಿ ವಿಚಾರಿಸಿದೆ.

ಅಧಿಕಾರಿ ಹೇಳಿದ್ರು, ಈ ವ್ಯಕ್ತಿಯ ಪತ್ನಿ ಹೆರಿಗೆ ಮಾಡಿಸಿಕೊಳ್ಳಲು ಜಿಲ್ಲಾ ಆಸ್ಪತ್ರೆಗೆ 8 ಕಿ.ಮೀ ದೂರದ ಗ್ರಾಮದಿಂದ ನಡೆದುಕೊಂಡೇ ಬಂದಿದ್ದರು. ಹೆರಿಗೆ ಮಾಡಿಸಲು ಅಲ್ಲಿನ ಸಿಬ್ಬಂದಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆಸ್ಪತ್ರೆಯೊಳಗೆ ಕೂರಲೂ ಅವಕಾಶ ನೀಡಲಿಲ್ಲ. ಕೊನೆಗೆ ಬಸ್‌ ನಿಲ್ದಾಣದಲ್ಲಿ ಹೆರಿಗೆಯಾಯಿತು. ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದರೆ ಭಾಗ್ಯಲಕ್ಷ್ಮಿ ಬಾಂಡ್‌ ದೊರೆಯುತ್ತಿತ್ತು ಎಂದು ಉತ್ತರಿಸಿದರು.

ಅಧಿಕಾರಿಯ ಮಾತು ಕೇಳಿ ಆಘಾತವಾಯಿತು. ಜವಾನ ಮಾಡಿದ ತಪ್ಪಿಗೆ ಮಾಲೀಕ ಹೊಣೆ ಎಂಬ ತತ್ವದ ಮೇಲೆ ಅಧಿಕಾರಿಗಳು ಮಾಡಿದ ತಪ್ಪಿಗೆ ಸರ್ಕಾರವೇ ಹೊಣೆ ಎಂದು ಪತ್ರ ಬರೆದೆ. ಭಾಗ್ಯಲಕ್ಷ್ಮೀ ಬಾಂಡ್‌ ಮಂಜೂರಾಯಿತು.

ಮತ್ತೊಂದು ಪ್ರಕರಣದಲ್ಲಿ ಅಪಘಾತದಲ್ಲಿ ಸತ್ತು ಮೂರು ದಿನಗಳಾದರೂ ವಾಯಪಡೆಯ ಅಧಿಕಾರಿಯೊಬ್ಬರ ಮಗಳ ಶವ ಪರೀಕ್ಷೆ ಮಾಡಿಕೊಡಲು ವೈದ್ಯರು ಸತಾಯಿಸಿದ್ದರು. ಈ ಬಗ್ಗೆ ವಿಚಾರಿಸಿದಾಗ, ಶವ ಶೈತ್ಯಾಗಾರದಲ್ಲಿದೆ, ಕೊಳೆಯುವುದಿಲ್ಲ ಬಿಡಿ ಎಂಬ ಉಡಾಫೆ ಉತ್ತರ ಕೊಟ್ಟರು. ಇದನ್ನೆಲ್ಲ ನೋಡಿದರೆ ಎಂಥ ಕ್ರೂರ ಮನಸ್ಥಿತಿಗಳು ನಮ್ಮ ಮಧ್ಯೆಯೇ ಇದ್ದಾರೆ ಎಂದು ಬೇಜಾರಾಯಿತು ಎಂದು ಸಂತೋಷ್‌ ಹೆಗ್ಡೆ ವಿವರಿಸಿದರು.

‘₹ 6 ಕೋಟಿ ಕೊಡಲಾಗುತ್ತಿಲ್ಲ’

ಜನಕಲ್ಯಾಣ ಟ್ರಸ್ಟ್‌ಗೆ ಹೆಚ್ಚುವರಿಯಾಗಿ ₹ 6 ಕೋಟಿ ಕೊಡುವುದಾಗಿ ಭರವಸೆ ನೀಡಿದ್ದೆ. ಪ್ರಧಾನಿ ನರೇಂದ್ರ ಮೋದಿ ನೋಟು ಅಮಾನ್ಯಗೊಳಿಸಿದ ಬಳಿಕ ಉದ್ಯಮ ವಲಯಕ್ಕೆ ಹೊಡೆತ ಬಿದ್ದಿದೆ. ವಹಿವಾಟು ನಡೆಯುತ್ತಿಲ್ಲ. ಹಾಗಾಗಿ, 6 ಕೋಟಿ ಕೊಡಲಾಗುತ್ತಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಅವರು ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯವಾಗಿ ವಾಗ್ದಾಳಿ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry