7
ರೈಲಿನಲ್ಲಿ 4 ಕೆ.ಜಿ. ಚಿನ್ನ ದರೋಡೆ:

7 ಆರೋಪಿಗಳ ಬಂಧನ: ಎಸ್‌ಪಿ

Published:
Updated:
7 ಆರೋಪಿಗಳ ಬಂಧನ: ಎಸ್‌ಪಿ

ಉಡುಪಿ: ಚಿನ್ನಾಭರಣ ತಯಾರಿಕಾ ಕಂಪೆನಿ ಉದ್ಯೋಗಿಯನ್ನು ರೈಲಿನಲ್ಲಿ ದರೋಡೆ ಮಾಡಿದ್ದ ಪ್ರಕರಣವನ್ನು ಭೇದಿಸಿರುವ ಕಾರ್ಕಳ ಉಪ ವಿಭಾಗದ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಒಟ್ಟು ₹40.25 ಲಕ್ಷ ಮೌಲ್ಯದ ಚಿನ್ನಾಭರಣ– ವಾಹನ ಹಾಗೂ ಕೃತ್ಯಕ್ಕೆ ಬಳಸಿದ ರಿವಾಲ್ವರ್‌ ವಶಪಡಿಸಿಕೊಂಡಿದ್ದಾರೆ.

ಮಡಿಕೇರಿಯ ಮಿಥುನ್ ಮಾಣಿಯನ್ (31), ಬಿಹಾರದ ಪಿಂಟು ಅರ್ಜುನ್ ಚೌಧರಿ (32), ರಾಜಸ್ತಾನದ ಯೋಗೀಶ್ವರ ಸಿಂಗ್ (24), ಪ್ರಭುಲಾಲ್ ಗುರ್ಜಾರ್ (30), ಕೇರಳದ ಮುಖ್ತಾರ್ ಇಬ್ರಾಹಿಂ (24), ರಿಯಾಜ್ (30), ಪಿ.ಕೆ. ಮುರುಗನ್ (49) ಬಂಧಿತರು.

ಪ್ರಕರಣದ ಬಗ್ಗೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಎಂ ಪಾಟೀಲ್, ಮುಂಬೈನ್ ಜಿಎಂ ಗೋಲ್ಡ್ ಪ್ರೈವೇಟ್ ಲಿಮಿಟೆಡ್‌ ಉದ್ಯೋಗಿ ರಾಜೇಂದ್ರ ಶಕ್ತವಕ್ತ್ ಅವರು ಮುಂಬೈನಿಂದ ತಿರುವನಂತಪುರಕ್ಕೆ ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಸೆಪ್ಟೆಂಬರ್ 17ರಂದು ಪ್ರಯಾಣಿಸುತ್ತಿದ್ದರು. ಅವರ ಬಳಿ 4 ಕೆ.ಜಿ. ತೂಕದ ಚಿನ್ನದ ಬಳೆಗಳಿದ್ದವು. ಆರೋಪಿಗಳು ಅವರಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ, ಹಲ್ಲೆ ನಡೆಸಿ ಸುರತ್ಕಲ್ ಸಮೀಪ ದರೋಡೆ ಮಾಡಿದ್ದರು ಎಂದು ಮಾಹಿತಿ ನೀಡಿದರು.

ಪ್ರಕರಣದಲ್ಲಿ ಯಾವುದೇ ಸುಳಿವು ಇರಲಿಲ್ಲ. ಆದ್ದರಿಂದ ಪ್ರಕರಣ ಭೇದಿಸಲು ಕಾರ್ಕಳ ಎಎಸ್‌ಪಿ ಹೃಷಿಕೇಶ್ ಸೋನವಾನೆ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಇನ್‌ಸ್ಪೆಕ್ಟರ್‌ ಹಾಲಮೂರ್ತಿ ಅವರು ಮುಂಬೈಗೆ ತೆರಳಿ ಮಾಹಿತಿ ಕಲೆ ಹಾಕಿದಾಗ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿತ್ತು. ಜಿ.ಎಂ. ಕಂಪೆನಿ ಮಾಜಿ ಉದ್ಯೋಗಿ ಯೋಗೀಶ್ವರ್ ಸಿಂಗ್ ಇತರ ಬಂಧಿತ ಆರೋಪಿಗಳೊಂದಿಗೆ ಸೇರಿ ದರೋಡೆ ಮಾಡಿದ್ದರು ಎಂದು ಹೇಳಿದರು.

ಕಂಪೆನಿಗೆ ವಂಚನೆ ಮಾಡಿದ್ದ ಯೋಗೀಶ್ವರ್‌ನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಆ ನಂತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆತ ರಾಜಸ್ತಾನದ ಉದಯಪುರ ಜೈಲಿನಲ್ಲಿದ್ದ. ಅಲ್ಲಿ ಆತನಿಗೆ ಪ್ರಕರಣದ ಪ್ರಮುಖ ಆರೋಪಿ ದೇವರಾಜ್ ಠಾಕೂರ್ ಪರಿಚಯವಾಗಿದ್ದ. ದರೋಡೆ ಸಂಚು ಅವರು ರೂಪಿಸಿದ್ದರು. ಅಲ್ಲದೆ ಜಿ.ಎಂ ಗೋಲ್ಡ್ ಕಂಪೆನಿ ಉದ್ಯೋಗಿ ಪ್ರಭುಲಾಲ್ ಗುರ್ಜರ್‌ನಿಂದ ಅವರು ಚಿನ್ನಾಭರಣ ರೈಲಿನಲ್ಲಿ ಕೊಂಡೊಯ್ಯುವ ಮಾಹಿತಿ ಪಡೆದಿದ್ದರು.

ಆ ನಂತರ ಮಿಥುನ್, ಪಿಂಟೂ ಅರ್ಜುನ್ ಸಹ ಅವರೊಂದಿಗೆ ಸೇರಿಕೊಂಡಿದ್ದರು. ದರೋಡೆಗೊಳಗಾದ ರಾಜೇಂದ್ರ ಶಕ್ತವಕ್ತ್ ಅವರು ಪ್ರಯಾಣಿಸುತ್ತಿದ್ದ ರೈಲಿನಲ್ಲಿಯೇ ಆರೋಪಿಗಳು ಬಂದಿದ್ದರು. ದರೋಡೆ ಮಾಡಿದ ನಂತರ ಕಾರಿನಲ್ಲಿ ಸುಳ್ಯಕ್ಕೆ ಹೋಗಿ ಅಲ್ಲಿಂದ ಕೇರಳಕ್ಕೆ ಹೋಗಿದ್ದರು. ಚಿನ್ನದ ಬಳೆಗಳನ್ನು ಕರಗಿಸಿ ಹಂಚಿಕೊಂಡಿದ್ದರು ಎಂದು ಮಾಹಿತಿ ನೀಡಿದರು.

ಪ್ರಕರಣದ ಉಳಿದ ಆರೋಪಿಗಳನ್ನು ಬಂಧಿಸಿ ಬಾಕಿ ಇರುವ ಚಿನ್ನ ವಶಪಡಿಸಿಕೊಳ್ಳುವ ಪ್ರಯತ್ನ ಮುಂದುವರೆಯಲಿದೆ. ರಿವಾಲ್ವರ್ ಮೂಲದ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದರು.

ಐಜಿಪಿ ಹೇಮಂತ್ ನಿಂಬಾಳ್ಕರ್, ಸಂಜೀವ್ ಎಂ ಪಾಟೀಲ್, ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ಋಷಿಕೇಶ್ ಸೋನವಾನೆ, ವಿ.ಎಸ್‌. ಹಾಲಮೂರ್ತಿ ರಾವ್, ಕಾಪು ಠಾಣೆ ಇನ್‌ಸ್ಪೆಕ್ಟರ್ ಸತೀಶ್, ಪಡುಬಿದ್ರಿ ಠಾಣೆ ಸಿಬ್ಬಂದಿ ಸುಧಾಕರ್, ರಾಜೇಶ್‌, ಪ್ರವೀಣ್ ಕುಮಾರ್, ನಾರಾಯಣ, ಉಮೇಶ್‌, ಡಿಸಿಐಬಿ ಸಿಬ್ಬಂದಿ, ಎಎಸ್‌ಐ ರವಿಚಂದ್ರ, ಮುಖ್ಯ ಕಾನ್‌ಸ್ಟೆಬಲ್ ಎಚ್‌.ಸಿ. ರಾಘವೇಂದ್ರ, ಕಾನ್‌ಸ್ಪೆಬಲ್ ಶಿವಾನಂದ, ಕಾಪು ವೃತ್ತ ಕಚೇರಿ ರವಿಕುಮಾರ್, ಶರಣಪ್ಪ, ಸಂದೀಪ್ ಶೆಟ್ಟಿ, ಪಡುಬಿದ್ರಿ ಠಾಣೆಯ ಹರೀಶ್ ಬಾಬು, ಚಾಲಕರಾದ ರಾಘವೇಂದ್ರ, ಜಗದೀಶ್, ಖಾಲಿದ್ ಅವರ ತಂಡವು ಆರೋಪಿಗಳನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದೆ.

***

₹1 ಲಕ್ಷ ನಗದು ಬಹುಮಾನ

ಸವಾಲಿನ ಪ್ರಕರಣವನ್ನು ಸಹಾಯಕ ಎಸ್ಪಿ ಹೃಷಿಕೇಶ್‌ ಸೋನವಾನೆ ಮತ್ತು ಇನ್‌ಸ್ಪೆಕ್ಟರ್‌ ಹಾಲಮೂರ್ತಿ ರಾವ್ ಅವರ ತಂಡ ಸತತ ಪರಿಶ್ರಮದಿಂದ ಕೆಲಸ ಮಾಡಿ ಭೇದಿಸಿದೆ. ಪಡುಬಿದ್ರಿ ಠಾಣೆ, ಡಿಸಿಐಬಿ ಸಿಬ್ಬಂದಿಯೂ ಸಹಕಾರ ನೀಡಿದ್ದಾರೆ. ಒಟ್ಟು ತಂಡಕ್ಕೆ ಪಶ್ಚಿಮ ವಲಯ ಐಜಿಪಿ ಅವರು ₹1 ಲಕ್ಷ ಬಹುಮಾನ ಘೋಷಿಸಿದ್ದಾರೆ ಎಂದು ಎಸ್ಪಿ ಡಾ. ಸಂಜೀವ್ ಎಂ ಪಾಟೀಲ್ ಹೇಳಿದರು.

ನಾಲ್ಕು ರಾಜ್ಯಗಳಲ್ಲಿ ಕಾರ್ಯಾಚರಣೆ

ಆರೋಪಿಗಳು ಕರ್ನಾಟಕ, ಕೇರಳ, ಮಹಾರಾಷ್ಟ್ರ, ರಾಜಸ್ತಾನದವರಾದ ಕಾರಣ ಪೊಲೀಸರು ಈ ಎಲ್ಲ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ತನಿಖೆಗಾಗಿ ಗುಜರಾತ್‌ಗೂ ಭೇಟಿ ನೀಡಿದ್ದರು. ಆರೋಪಿಗಳು ದರೋಡೆಗೆ ಒಮ್ಮೆ ವಿಫಲ ಯತ್ನವನ್ನೂ ಅವರು ನಡೆಸಿದ್ದರು. ಗೋಲ್ಡ್ ಕಂಪೆನಿ ಉದ್ಯೋಗಿ ಪ್ರಯಾಣಿಸುವ ರೈಲಿನ ಮಾಹಿತಿ ಸರಿಯಾಗಿ ಲಭ್ಯವಾಗದ ಕಾರಣ ಅದು ಯಶಸ್ವಿಯಾಗಿರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry