ಶುಕ್ರವಾರ, ಫೆಬ್ರವರಿ 26, 2021
30 °C

ನನ್ನ ಬಸಿರಿನಾ ಉಸಿರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನನ್ನ ಬಸಿರಿನಾ ಉಸಿರು

ಹಸಿರು ಬಳೆ, ಹಸಿರು ಸೀರೆ. ಮುಡಿ ತುಂಬಾ ಮಲ್ಲಿಗೆ. ಉಡಿ ತುಂಬಿದ ಸಂಭ್ರಮದ ದಿನಗಳು ಅವು. ನವಮಾಸಗಳು ತುಂಬಿದ್ದವು. ಮನೆಗೆ ಮಗು ಬರುವ ಕಾತುರ. ಮೊದಲ ಮಳೆ ಧರೆಯ ಸೇರುವ ಸಂಭ್ರಮ.

ಅದಕ್ಕೆಂದೇ ಬಣ್ಣ ಬಣ್ಣದ ಆಟಿಕೆ, ತೊಟ್ಟಿಲು, ಉಲ್ಲನ್ ಸಾಕ್ಸ್‌ಗಳು. ಗುಲಾಬಿ ಬಣ್ಣದ ಬಟ್ಟೆಗಳು. ಮನೆಯನ್ನು ಎಷ್ಟು ಶುಚಿಯಾಗಿಟ್ಟರೂ ಸಾಲದು. ಕೆಲಸದವಳ ಮೇಲೆ ಒಂದೇ ಸಮನೆ ಬೈಗುಳದ ಸುರಿಮಳೆ.

ಬರುವ ಮನೆ ಬೆಳಕನ್ನು ಸ್ವಾಗತಿಸಲು ದೇವರ ಮುಂದೆ ದೀಪಗಳ ಸಾಲು. ಹೂ-ಹಣ್ಣಿನ ಹರಕೆ. ಹೊಸ ಮಳೆಯ ಸ್ಪರ್ಶವಾದಾಗ ಮಣ್ಣು ಸಡಿಲಗೊಂಡು ಭೂಮಿ ತಾಯಿ ಹಸಿರನ್ನುಟ್ಟಂತೆ ನನ್ನ ಕನಸು ಮಡಿಲು ತುಂಬುವ ತವಕ. ನವಮಾಸಗಳಲ್ಲಿ ಕರಿದ ತಿಂಡಿಗಳಿಂದ ದೂರವಿದ್ದು ಹಣ್ಣು-ಹಂಪಲು ತಿಂದು ಆರೋಗ್ಯವಾಗಿದ್ದೆ.

ಅದೇನೋ ಒಂದು ರಾತ್ರಿ. ಹೊರಗಡೆ ತುಂಬಾ ಮಳೆ ಸುಂಯ್ಯೆನ್ನುವ ತಂಗಾಳಿ, ನಾಯಿ ಬೊಗಳುವ ಸದ್ದು. ಇದ್ದಕ್ಕಿದ್ದಂತೆ ‘ಅಮ್ಮಾ’ ಎಂದು ಕರೆದ ಸದ್ದು. ‘ಯಾರು ಯಾರು’ ಎಂದು ಕೇಳಿದೆ. ‘ಅಮ್ಮಾ, ಈ ಭೂಮಿಗೆ ನಾನು ಬರಲೇ ಬೇಕೇನಮ್ಮಾ?’ ನನ್ನ ಬಸಿರಿನ ಧ್ವನಿ!

ನಾನು ‘ಏಕೆ ಕಂದ ಹೀಗೆ ಹೇಳುತ್ತಿರುವೆ’ ಎಂದೆ. ‘ಪ್ರಪಂಚವನ್ನು ನೋಡುವ ಆಸೆಯೇನೋ ಇದೆ ನನಗೆ. ಆದರೇ...’ ಎಂದು ತಡೆದಿತು ಧ್ವನಿ. ‘ಆದರೇನು ಕಂದ’ ಎಂದೆ. ‘ನಿನ್ನ ಮಡಿಲಲ್ಲಿ ಎಷ್ಟು ದಿನ ಆಟವಾಡಿಕೊಂಡಿರಲಿ, ಒಂದುದಿನ ದೊಡ್ಡವಳಾಗಲೇಬೇಕಲ್ಲ? ಈ ಕೆಟ್ಟ ಸಮಾಜದಲ್ಲಿ ನಾನು ಬೆಳೆಯುವುದಾದರು ಹೇಗೆ? ಕಾಲು ತುಂಬಾ ಗೆಜ್ಜೆ ಧರಿಸಿ ಅಂಗಳದಲ್ಲಿ ಓಡಾಡುವಂತೆಯೂ ಇಲ್ಲ. ಅಂಕಲ್ ಚಾಕ್ಲೇಟ್ ಕೊಟ್ಟರೆಂದು ತಿನ್ನುವಂತೆಯೂ ಇಲ್ಲ. ಪಕ್ಕದ ಮನೆಯವರ ಬೆನ್ನೇರಿ ಕೂಸುಮರಿ ಮಾಡಿಸಿಕೊಳ್ಳವಂತೆಯೂ ಇಲ್ಲ.

‘ದೊಡ್ಡವಳಾದರಂತೂ ಮುಗಿದೇ ಹೋಯಿತು. ಯಾರ ಹತ್ತಿರವೂ ಮಾತನಾಡುವಂತಿಲ್ಲ, ಬೆರೆಯುವಂತೆಯೂ ಇಲ್ಲ. ವರದಕ್ಷಿಣೆ, ದೌರ್ಜನ್ಯ, ಅತ್ಯಾಚಾರ ದಿನೇ ದಿನೇ ಹೆಚ್ಚುತ್ತಿದೆ. ದುಡ್ಡಿನಾಸೆಗೆ ಭವಿಷ್ಯ ತಿದ್ದುವ ಜ್ಯೋತಿಷಿಗಳ ಸಾಲು. ವಿಷಪೂರಿತ ಆಹಾರ. ಕೆಟ್ಟ ಪರಿಸರ. ರೋಗ-ರುಜಿನ. ಭೂಮಿಗೆ ಬಂದಾಗ ನೀನೇ ಸ್ವಾಗತಿಸುತ್ತೀಯೆಂಬ ಭರವಸೆಯೂ ನನಗಿಲ್ಲ. ಸೂಲಗಿತ್ತಿಯೂ ನನ್ನ ಮುಗಿಸಬಹುದು. ಕಳ್ಳ-ಕಾಕರೂ ದೋಚಬಹುದು. ನನಗಾಗಿ ಯಾವ ರಕ್ಷಣೆಯೂ ಇಲ್ಲ.

‘ಮಡಿಲಲ್ಲಿ ಮಗುವಾಗಿ ಮಲಗುವ ಅವಕಾಶ, ಅದೃಷ್ಟ ಎಲ್ಲರಿಗೂ ಎಲ್ಲಿ ಉಂಟಮ್ಮಾ? ಒಂದು ಗಿಡವಾಗಿ ಹುಟ್ಟಿದರೂ ಸರಿಯೇ. ನೂರಾರು ಜನರಿಗೆ ನೆರಳು ಕೊಡಬಲ್ಲೆ. ಹೆಣ್ಣಾಗಿ ಹುಟ್ಟಿ ನಿನ್ನ ಕಣ್ಣೀರ ನೋಡಲಾರೆ. ಹೆಣ್ಣಾಗಿ ಹುಟ್ಟುವುದಕ್ಕಿಂತ ಮಣ್ಣಾಗುವುದೇ ಮೇಲು. ಈ ಕೆಟ್ಟ ಪ್ರಪಂಚಕ್ಕೆ ನಾನು ಬರಲೇ ಬೇಕೇನಮ್ಮಾ? ನಿನ್ನ ಮಡಿಲಲ್ಲಿ ಚಿರನಿದ್ರೆಗೆ ಜಾರಬಾರದೇಕೆ? ಇಲ್ಲಿ ಯಾವ ಭಯವಿಲ್ಲ. ನೆಮ್ಮದಿಯ ನೆಲೆ ಈ ನಿನ್ನ ಬಸಿರು’ ಎಂದು ಧ್ವನಿ ಸಣ್ಣದಾಯಿತು. ಮೈ ಬೆವರತೊಡಗಿತು, ಅಲ್ಲೇ ಕುಸಿದೆ. ಆಂಬುಲೆನ್ಸ್ ಹೊಡೆದುಕೊಳ್ಳುವ ಶಬ್ದ ಕೇಳಿ ಬರುತ್ತಿತ್ತು.

ದೇಹ ತಣ್ಣಗಾದ ಅನುಭವ! ಭಾವನೆಯಿಲ್ಲದ, ಭಾವನೆ ಹುಟ್ಟಿಸುವ ಭಾವ ಜಗತ್ತಿನ ಬಂಧುಗಳವು. ಬಾರದ ಲೋಕಕ್ಕೇ ಹೋಗಿಬಿಡುವ ಭವದ ಮೊಗ್ಗುಗಳು. ನಮ್ಮ ಅಸಹಾಯಕತೆಗೆ ಕಮರಿ ಹೋಗುತ್ತಿವೆ. ಮನೆ- ಮನೆಗಳಲ್ಲಿ ಮಗುವಿನ ಗೆಜ್ಜೆ ಸದ್ದು ಕೇಳಿಬರಲಿ.

ಹೆಣ್ಣು ಕಂದಮ್ಮಗಳ ಉಸಿರು ಅಡಗದಿರಲಿ...

–ಸೌಮ್ಯಾ ಜಂಬೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.