7

ಉಳಿಸಬೇಕಿದೆ ‘ಡೀಮ್ಡ್‌’ ಕಾಡು

Published:
Updated:

ಅರಣ್ಯವೆಂದರೆ ಏನು? ಮರಗಿಡಗಳು ತುಂಬಿದ ವಿಶಾಲ ಪ್ರದೇಶವದು ಎಂಬ ಪರಿಸರಶಾಸ್ತ್ರದ ಸರಳ ಅರ್ಥ ಎಲ್ಲರಿಗೂ ತಿಳಿದಿರುವಂಥದ್ದೆ. ಸ್ವಾತಂತ್ರ್ಯಾನಂತರ ಜಾರಿಗೆ ಬಂದ ಕರ್ನಾಟಕ ಅರಣ್ಯ ಕಾಯ್ದೆ (1963) ಹಾಗೂ ಅರಣ್ಯ ಸಂರಕ್ಷಣೆ ಕಾಯ್ದೆಗಳು (1980)  ಇದೇ ಅರ್ಥವನ್ನು ಪುರಸ್ಕರಿಸಿದವು. ದೇಶದ ಕಾಡನ್ನೆಲ್ಲ ‘ಕಾದಿಟ್ಟ ಅರಣ್ಯ’, ‘ಸಂರಕ್ಷಿತ ಅರಣ್ಯ’, ‘ಕಿರು ಅರಣ್ಯ’ ಹಾಗೂ ‘ಗ್ರಾಮ ಅರಣ್ಯ’ ಎಂದು ವರ್ಗೀಕರಿಸಿದವು. ಹೀಗಾಗಿ, ಕಾನೂನಿನ ಪ್ರಕಾರ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿನ ಭೂಪ್ರದೇಶದಲ್ಲಿರುವ ಘೋಷಿತವಾದ ಕಾಡನ್ನು ಮಾತ್ರ ಅಧಿಕೃತ ಅರಣ್ಯವೆಂದು ಗುರುತಿಸುವಂತಾಯಿತು.

ಆದರೆ, ದೇಶದಾದ್ಯಂತ ವಿಸ್ತಾರವಾದ ಮತ್ತು ಸಮೃದ್ಧವಾದ ಅರಣ್ಯಗಳು ಅರಣ್ಯ ಇಲಾಖೆಗೆ ಒಳಪಡದ ಕಂದಾಯ ಭೂಮಿಯಲ್ಲೂ ಮೊದಲಿನಿಂದಲೇ ಇವೆ. ಅವನ್ನು ಗುರುತಿಸಿ, ಸೂಕ್ತವಾಗಿ ಸಂರಕ್ಷಿಸುವ ಅಗತ್ಯ ಎಪ್ಪತ್ತರ ದಶಕದಲ್ಲೇ ಅರಿವಿಗೆ ಬಂದು, ವಿಷಯ ಸುಪ್ರೀಂ ಕೋರ್ಟ್‌ ಮೆಟ್ಟಿಲನ್ನೂ ಏರಿತು. ಈ ಕುರಿತು ಅನೇಕ ಆಯಾಮಗಳಲ್ಲಿ ದೀರ್ಘ ಅಧ್ಯಯನ ಹಾಗೂ ವಿಚಾರ-ವಿಮರ್ಶೆಗಳು ನಡೆದವು. ಈ ಎಲ್ಲ ಅಂಶಗಳನ್ನು ಕೂಲಂಕಷವಾಗಿ ಪರಿಗಣಿಸಿ, 1996ರ ಡಿ. 12ರಂದು ಸುಪ್ರೀಂ ಕೋರ್ಟ್‌ ಒಂದು ಐತಿಹಾಸಿಕ ನಿರ್ದೇಶನ ನೀಡಿತು. ಇದರ ಅನ್ವಯ, ‘ಎರಡು ಹೆಕ್ಟೇರ್‌ ವಿಸ್ತೀರ್ಣದ ಕಂದಾಯ ಭೂಮಿಯಲ್ಲಿ ನೈಸರ್ಗಿಕವಾಗಿ ಬೆಳೆದ ಕನಿಷ್ಠ ನೂರು ಮರಗಳಿದ್ದರೆ ಅದನ್ನು ಅರಣ್ಯವೆಂದೇ ಪರಿಗಣಿಸಬೇಕು. ಅಂದರೆ, ಭೂಮಿಯ ಒಡೆತನ ಅರಣ್ಯ ಇಲಾಖೆಯದು ಅಲ್ಲದೇ ಹೋದರೂ ಪರಿಸರ ಮಹತ್ವದಿಂದಾಗಿ ಅವನ್ನು ಅರಣ್ಯವೆಂದು ಗುರುತಿಸಬೇಕು. ಸರ್ಕಾರಿ ಕಂದಾಯ ಭೂಮಿಯಲ್ಲಿನ ಈ ಕಾಡುಗಳ ನಿರ್ವಹಣೆ ಮತ್ತು ಸಂರಕ್ಷಣೆ ಕೂಡ ಅರಣ್ಯ ಸಂರಕ್ಷಣಾ ಕಾನೂನಿನ ಅನ್ವಯವೇ ನಡೆಯಬೇಕು’ ಎಂದು ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ, ಕಂದಾಯ ಜಮೀನಿನಲ್ಲಿನ ಕಾಡನ್ನು ‘ಪರಿಗಣಿತ ಅರಣ್ಯ’ (ಡೀಮ್ಡ್) ಎಂದು ಹೆಸರಿಸಲಾಯಿತು.

ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ, ರಾಜ್ಯ ಸರ್ಕಾರವು ತನ್ನ ವ್ಯಾಪ್ತಿಯಲ್ಲಿರುವ ಕಂದಾಯ ಜಮೀನು ಅರಣ್ಯವನ್ನು ಪ್ರತಿ ಗ್ರಾಮಮಟ್ಟದಲ್ಲಿ ಗುರುತಿಸಿ, ತಾಲ್ಲೂಕು-ಜಿಲ್ಲಾವಾರು ಅಂಕಿಅಂಶಗಳನ್ನು ಕೋರ್ಟ್‌ಗೆ ಸಲ್ಲಿಸಬೇಕಿತ್ತು.ಆದರೆ, ನಮ್ಮ ಸರ್ಕಾರಕ್ಕೆ ಇದು ಬಹಳ ವರ್ಷ ಆದ್ಯತೆಯಾ

ಗಲೇ ಇಲ್ಲ! ನ್ಯಾಯಾಲಯವು ಅನೇಕ ಸಲ ಜ್ಞಾಪಿಸಿ ಸೂಚನೆ ನೀಡಿದ ನಂತರವಷ್ಟೇ, ಸಮಿತಿಗಳನ್ನು ರಚಿಸಿ ಸಮೀಕ್ಷೆ ನಡೆಸಲು ಮುಂದಾಯಿತು. ಇಂತಹ ಹತ್ತು ಲಕ್ಷ ಹೆಕ್ಟೇರಿಗೂ ಮಿಕ್ಕಿ ಅರಣ್ಯವಿದೆ ಎಂದು ಸರ್ಕಾರ 2012ರಲ್ಲಿ ವರದಿನೀಡಿತು. ಆದರೆ, ರಾಜಕೀಯ ಮತ್ತು ಸ್ಥಾಪಿತ ಹಿತಾಸಕ್ತಿಗಳ

ಒತ್ತಡಕ್ಕೆ ಮಣಿದು, ಅದರ ವ್ಯಾಪ್ತಿಯನ್ನು 5.17 ಲಕ್ಷ ಹೆಕ್ಟೇರ್ ಮಾತ್ರ ಎಂದು ನ್ಯಾಯಾಲಯಕ್ಕೆ 2016ರಲ್ಲಿ ಪುನಃ ಪ್ರಮಾ

ಣಪತ್ರ ಸಲ್ಲಿಸಿದೆ. ಸುಪ್ರೀಂ ಕೋರ್ಟ್‌ ತೀರ್ಪು ಹೊರಬಂದು 20 ವರ್ಷಗಳು ಕಳೆದರೂ ಆಗಿರುವ ಕೆಲಸ ಇಷ್ಟೇ!

ಇಷ್ಟಾದರೂ, ಉಳಿದಿರುವ ಕಾಡಿನ ಗ್ರಾಮವಾರು ಗಡಿ ಗುರುತಿಸಿ, ಕಂದಾಯ ದಾಖಲೆ ರೂಪಿಸಿ, ತಳಮಟ್ಟದ ಸಂರಕ್ಷಣಾ ಕಾರ್ಯಕ್ರಮಗಳನ್ನು ರೂಪಿಸುವ ಕೆಲಸ ಇನ್ನೂ ಆಗಬೇಕಿದೆ! ಇದನ್ನು ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ಅಧಿಕಾರಶಾಹಿಯ ನಿರ್ಲಕ್ಷ್ಯ ಎನ್ನದೆ ಏನನ್ನಬೇಕು?

ಸರ್ಕಾರದ ಈ ನಿರ್ಲಕ್ಷ್ಯದಿಂದಾಗಿ, ಅರಣ್ಯ ಮತ್ತು ಕಂದಾಯ ಇಲಾಖೆಗಳು ಇನ್ನೂ ತಮ್ಮ ದಾಖಲೆಗಳನ್ನು ವ್ಯವಸ್ಥಿತಗೊಳಿಸಿಕೊಂಡಿಲ್ಲ. ಇದರ ಪರಿಣಾಮವಾದರೂ ಏನು?

ಬಹುಪಾಲು ಡೀಮ್ಡ್ ಅರಣ್ಯ ಪ್ರದೇಶವು ಅರಣ್ಯನಾಶ, ಅತಿಕ್ರಮಣ, ಗಣಿಗಾರಿಕೆ, ಕಳ್ಳಸಾಗಣೆ, ಒಂದೇ ಬಗೆಯ ಸಸಿಗಳ ನೆಡುತೋಪುಗಳಿಗೆ ಬಲಿಯಾಗಿವೆ. ಮಲೆನಾಡಿನ ಡೀಮ್ಡ್ ಅರಣ್ಯವಂತೂ ದೊಡ್ಡ ಪ್ರಮಾಣದಲ್ಲಿ ಅತಿಕ್ರಮಣವಾಗುತ್ತಿದೆ. ಆಡಳಿತಶಾಹಿಯ ನ್ಯೂನತೆಗಳನ್ನು ಬಲ್ಲ ರಾಜ

ಕೀಯ ಹಾಗೂ ಆರ್ಥಿಕವಾಗಿ ಬಲಾಢ್ಯರಾದ ಕೆಲವರು ಕಾನೂನಿನ ಕಣ್ಣಿಗೆ ಮಣ್ಣೆರಚಿ, ಅರಣ್ಯಭೂಮಿಯನ್ನು ಕೈವಶ ಮಾಡಿಕೊಳ್ಳುತ್ತಿದ್ದಾರೆ. ವಿಪರ್ಯಾಸ ನೋಡಿ. ಅರಣ್ಯಹಕ್ಕು ಕಾಯ್ದೆ(2006) ಅನ್ವಯ ಜೇನುಕುರುಬ, ಕುಣಬಿ, ಮಲೆಕುಡಿಯ, ಗೊಂಡ, ಹಾಲಕ್ಕಿ, ಗೌಳಿಗಳಂಥ ಅಪ್ಪಟ ಬುಡಕಟ್ಟು ಮತ್ತು ಪಾರಂಪರಿಕ ವನವಾಸಿಗಳ ಅರ್ಹ ಬಡಕುಟುಂಬಗಳಿಗೆ ದೊರಕಬೇಕಿದ್ದ ಉಳುವ ಭೂಮಿಯ ಒಡೆತನ ಮಾತ್ರ ಇನ್ನೂ ಸಿಕ್ಕಿಲ್ಲ!

ಕಂದಾಯ ಜಮೀನಿನಲ್ಲಿನ ಅರಣ್ಯವು ಮೂರು ಮುಖ್ಯ ವಿಧಗಳಲ್ಲಿ ನಾಶವಾಗುತ್ತಿದೆ ಎನ್ನಬಹುದು. ಒಂದನೆಯದು– ಮಲೆನಾಡಿನ ಜಿಲ್ಲೆಗಳಲ್ಲಿ ಬಲಾಢ್ಯರು ವನವಾಸಿಗಳ ಸೋಗಲ್ಲಿ ಅರಣ್ಯ ಕೈವಶಪಡಿಸಿಕೊಳ್ಳುತ್ತಿರುವುದು. ರಾತ್ರೋರಾತ್ರಿ ಅರಣ್ಯವನ್ನು ಅತಿಕ್ರಮಿಸಿ, ಮರ ಕಡಿದು, ಮೂರು ತಲೆಮಾರಿನ ಹಿಂದಿನಿಂದಲೇ ಅಲ್ಲಿ ಕೃಷಿ ಮಾಡುತ್ತಿದ್ದೇವೆಂದು ಸುಳ್ಳು ದಾಖಲೆ ಸೃಷ್ಟಿಸಿ, ಇದನ್ನು ಸಾಧಿಸುತ್ತಿದ್ದಾರೆ. ಸ್ಥಳೀಯ ರಾಜಕೀಯ ಮುಖಂಡರು ಮತ್ತು ತಳಮಟ್ಟದ ಅಧಿಕಾರಶಾಹಿಯೊಂದಿಗಿನ ಅಪವಿತ್ರ ಮೈತ್ರಿಯಿಲ್ಲದೆ ಇದು ಸಾಧ್ಯವೇ? ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅರ್ಹ ಅರ್ಜಿದಾರರನ್ನು ಈ ಗುಂಪಿನಿಂದ ಬೇರ್ಪಡಿಸುವುದೇ ಅರಣ್ಯ ಹಕ್ಕು ಸಮಿತಿಗಳಿಗೆ ದೊಡ್ಡ ಸವಾಲಾಗಿದೆ!

ಎರಡನೆಯದು– ಅರಣ್ಯ ಭೂಮಿಯನ್ನು ಸರ್ಕಾರವೇ ಖಾಸಗಿ ಉದ್ದಿಮೆ, ವಸತಿ ಸಮುಚ್ಚಯ, ಕೈಗಾರಿಕಾ ನೆಡುತೋಪು, ಗಣಿ ಇತ್ಯಾದಿಗಳಿಗೆ ವಿವೇಕವಿಲ್ಲದೆ ನೀಡುತ್ತಿರುವುದು. ಶಿವಮೊಗ್ಗ ಜಿಲ್ಲೆಯಲ್ಲಿ ಕುಮ್ಕಿ, ಗೋಮಾಳ ಮತ್ತು ಕಾನು ಅರಣ್ಯವೆಂದು ಗುರುತಿಸುವ ಸಮೃದ್ಧ ಡೀಮ್ಡ್ ಅರಣ್ಯ ಇದರಿಂದಾಗಿ ಕರಗುತ್ತಿದೆ. ನೀಲಗಿರಿ ಮತ್ತು ಅಕೇಶಿಯಾ ನೆಡುತೋಪುಗಳಿಗೆ, ಅಂಬಾರ ಗುಡ್ಡದಂಥ ಗಣಿಗಾರಿಕೆಗೆ ಹತ್ತಾರು ಸಾವಿರ ಹೆಕ್ಟೇರ್ ಅರಣ್ಯ ಬಲಿಯಾಗಿದೆ. ಚಿಕ್ಕಮಗಳೂರು, ತುಮಕೂರು ಜಿಲ್ಲೆಗಳಲ್ಲಿರುವ ಅಮೃತಮಹಲ್ ಕಾವಲ್ ಅರಣ್ಯವೂ ಈ ತೆರನ ವಾಣಿಜ್ಯ ಉದ್ದೇಶಗಳಿಗೆ ನಾಶವಾಗುತ್ತಿದೆ.

ಮೂರನೆಯದು– ಖಾಸಗಿ ವ್ಯಕ್ತಿಗಳು ಸರ್ಕಾರಿ ದಾಖಲೆಗಳನ್ನು ತಿದ್ದಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಮಿಯ ಪಟ್ಟಾ ಮಾಡಿಸಿಕೊಳ್ಳುತ್ತಿರುವ ಗಂಭೀರ ಸಮಸ್ಯೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ನೂರಾರು ವರ್ಷಗಳಿಂದ ಸ್ಥಳೀಯರಿಗೆ ಕೆಲವು ಸವಲತ್ತುಗಳನ್ನು ನೀಡಿದ ಸರ್ಕಾರಿ

ಕಂದಾಯಜಮೀನು ಕಾಡುಗಳಿವೆ. ಅಂದಿನ ಅಡಳಿತವು ಕಾಫಿ, ದಾಲ್ಚಿನ್ನಿಯಂಥ ಬೆಳೆ ಬೆಳೆಯಲು, ಕಾಳುಮೆಣಸು ಸಂಗ್ರಹಣೆ ಇತ್ಯಾದಿಗಳಿಗೆ ಕೆಲವರಿಗೆ ಸೀಮಿತ ಸವಲತ್ತು ನೀಡಿತ್ತು.

ಕಾನು, ಕುಮ್ಕಿ, ಹಾಡಿ, ಫೈಸಾರಿ ಇತ್ಯಾದಿ ಕಂದಾಯಜಮೀನು ಅರಣ್ಯಗಳು ಇದರಲ್ಲಿ ಸೇರಿವೆ. ಆದರೆ, ಹಲವರು ಹಿಂದೆ ನೀಡಿದ ಆ ಸೌಲಭ್ಯಗಳನ್ನೇ ಹಕ್ಕು ಎಂದು ದಾಖಲೆ ತಿದ್ದಿ, ನ್ಯಾಯಾಲಯಗಳಿಗೂ ತಪ್ಪು ಮಾಹಿತಿ ನೀಡಿ, ಇತ್ತೀಚೆಗೆ ತಮ್ಮ ಹೆಸರಲ್ಲಿ ಪಹಣಿಯನ್ನೂ ಮಾಡಿಸಿಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಹಿಡುವಳಿ ಕಾನೆಂದು ಕರೆಯುವ ಡೀಮ್ಡ್ ಅರಣ್ಯದಲ್ಲಿ ಈ ಪ್ರಯತ್ನ ಈಗಲೂ ನಡೆಯುತ್ತಿದೆ. ಹೀಗೆ ಹತ್ತಾರು ಹೆಕ್ಟೇರ್ ಅರಣ್ಯ ಪಡೆದು, ನೈಸರ್ಗಿಕವಾಗಿ ಬೆಳೆದ ಮರ ಕಡಿದು ಕೋಟ್ಯಧೀಶರಾದವರೂ ಇದ್ದಾರೆ!

ಪಶ್ಚಿಮಘಟ್ಟದ ಅರಣ್ಯ ಸಂರಕ್ಷಿಸುವುದು ಎಂದರೆ, ಕಂದಾಯ ಜಮೀನಿನಲ್ಲಿನ ಈ ಕಾಡನ್ನು (ಡೀಮ್ಡ್) ಉಳಿಸುವುದೂ ಸೇರಿದೆ. ಅರಣ್ಯ ಮತ್ತು ಕಂದಾಯ ಇಲಾಖೆಗಳು ಗ್ರಾಮಮಟ್ಟದಲ್ಲಿ ತ್ವರಿತವಾಗಿ ಜಂಟಿ ಸಮೀಕ್ಷೆ ನಡೆಸಿ, ದಾಖಲೆಗಳನ್ನು ಶೀಘ್ರ ಸರಿಪಡಿಸಿಕೊಂಡು, ಈ ಪ್ರದೇಶಗಳನ್ನು ರಕ್ಷಿಸಬೇಕಿದೆ. ಅವಶ್ಯವಿದ್ದೆಡೆ ನ್ಯಾಯಾಲಯಕ್ಕೂ ಮೊರೆ ಹೋಗಬೇಕೇನೋ!

ಮಲೆನಾಡಿನಲ್ಲಿ ಸಾಮಾಜಿಕ ನ್ಯಾಯವನ್ನು ಉಳಿಸಿಕೊಳ್ಳುವ ಹಾಗೂ ಪರಿಸರಸೂಕ್ಷ್ಮ ಪ್ರದೇಶಗಳನ್ನು ಸಂರಕ್ಷಿಸುವ ದೃಷ್ಟಿಯಿಂದ, ಈ ಪ್ರಯತ್ನಗಳಿಂದು ತೀರಾ ಅಗತ್ಯವಾಗಿವೆ.

ಲೇಖಕ: ಶಿರಸಿಯ ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರದ ನಿರ್ದೇಶಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry