7

‘ಬ್ರಿಟನ್ ಸರ್ಕಾರ ಕ್ಷಮೆ ಕೇಳಬೇಕು’

Published:
Updated:
‘ಬ್ರಿಟನ್ ಸರ್ಕಾರ ಕ್ಷಮೆ ಕೇಳಬೇಕು’

ಅಮೃತಸರ : ಅಮೃತಸರದಲ್ಲಿ 1919ರಲ್ಲಿ ನಡೆದ ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಬ್ರಿಟನ್ ಸರ್ಕಾರ ಕ್ಷಮೆ ಕೇಳಬೇಕು ಎಂದು ಲಂಡನ್‌ನ ಮೇಯರ್ ಸಾದಿಕ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ಇಲ್ಲಿಗೆ ಭೇಟಿ ನೀಡಿದ್ದ ಅವರು, ಹತ್ಯಾಕಾಂಡದಲ್ಲಿ ಹತರಾದವರಿಗೆ ಗೌರವ ಸಲ್ಲಿಸಿದರು.

‘ಇಲ್ಲಿಗೆ ಭೇಟಿ ನೀಡಲು ಮನಸ್ಸು ತುಡಿಯುತ್ತಿತ್ತು. ಹತ್ಯಾಕಾಂಡದಲ್ಲಿ ಮೃತರಾದವರ ನೆನಪು ನಮ್ಮ ಮನದಲ್ಲಿದೆ. 1919ರ ವೈಶಾಖಿ ದಿನ ನಡೆದ ಹತ್ಯಾಕಾಂಡವನ್ನು ನಾವು ಎಂದಿಗೂ ಮರೆಯಬಾರದು. ಬ್ರಿಟನ್ ಸರ್ಕಾರವು ಈಗ ಕ್ಷಮೆ ಕೇಳುವ ಸಮಯ ಬಂದಿದೆ’ ಎಂದು ಅವರು ಜಲಿಯನ್‌ ವಾಲಾಬಾಗ್‌ನಲ್ಲಿರುವ ಸಂದರ್ಶಕರ ಪಟ್ಟಿಯಲ್ಲಿ ಬರೆದಿದ್ದಾರೆ.

2013ರಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಬ್ರಿಟನ್‌ನ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರನ್ ಕೂಡ ಹತ್ಯಾಕಾಂಡವನ್ನು ಖಂಡಿಸಿದ್ದರು. ‘ಬ್ರಿಟಿಷ್ ಇತಿಹಾಸದಲ್ಲೇ ಇದು ನಾಚಿಕೆಗೇಡಿನ ಘಟನೆ’ ಎಂದು ಬಣ್ಣಿಸಿದ್ದರು. ಆದರೆ ಅವರು ಅಧಿಕೃತವಾಗಿ ಕ್ಷಮೆ ಕೇಳಿರಲಿಲ್ಲ.

1919ರ ಏಪ್ರಿಲ್ 13ರಂದು ಸುಗ್ಗಿ ಆಚರಣೆಗೆಂದು ಸೇರಿದ್ದ ಜನರ ಮೇಲೆ ಗುಂಡು ಹಾರಿಸುವಂತೆ ಬ್ರಿಗೇಡಿಯರ್ ಜನರಲ್ ರೆಜಿಲಾನ್ಡ್ ಡಯರ್, ಬ್ರಿಟಿಷ್ ಸೈನಿಕರಿಗೆ ಆದೇಶವಿತ್ತಿದ್ದ. ಘಟನೆಯಲ್ಲಿ ಹಲವರು ಮೃತಪಟ್ಟಿದ್ದರು.

ಸ್ವರ್ಣ ಮಂದಿರಕ್ಕೂ ಭೇಟಿ: ಸಾದಿಕ್ ಅವರು ಸ್ವರ್ಣ ಮಂದಿರಕ್ಕೂ ಭೇಟಿ ನೀಡಿ ನಮನ ಸಲ್ಲಿಸಿದರು. ‘ಅಮೃತಸರಕ್ಕೆ ಭೇಟಿ ನೀಡಿದ್ದು ನನ್ನ ಭಾಗ್ಯ. ಇಲ್ಲಿನ ಸ್ನೇಹಪ‍ರತೆ, ಆತಿಥ್ಯ, ಅಧ್ಯಾತ್ಮ ನಮಗೆ ಪಾಠ. ನನ್ನೊಂದಿಗೆ ಸದಾ ಉಳಿಯುವ ನೆನಪುಗಳನ್ನು ನೀಡಿದ್ದಕ್ಕೆ ಧನ್ಯವಾದಗಳು’ ಎಂದು ತಮ್ಮ ಅನಿಸಿಕೆಯನ್ನು ಸಂದರ್ಶಕರ ಪಟ್ಟಿಯಲ್ಲಿ ಹಂಚಿಕೊಂಡಿದ್ದಾರೆ.

ಭಾರತದೊಂದಿಗಿನ ಬ್ರಿಟನ್‌ನ ಆರ್ಥಿಕ ಬಾಂಧವ್ಯವನ್ನು ವೃದ್ಧಿಸುವ ಉದ್ದೇಶದಿಂದ ಸಾದಿಕ್, ದೇಶಕ್ಕೆ ಮೂರು ದಿನಗಳ ಭೇಟಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry