7
ಕಾಂಗ್ರೆಸ್‌ ವಿರುದ್ಧ ಮೋದಿ ವಾಗ್ದಾಳಿ

ಕಪಿಲ್‌ ಹೇಳಿಕೆಗೆ ವಕ್ಫ್‌ ಮಂಡಳಿ ತರಾಟೆ

Published:
Updated:
ಕಪಿಲ್‌ ಹೇಳಿಕೆಗೆ ವಕ್ಫ್‌ ಮಂಡಳಿ ತರಾಟೆ

ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ಅರ್ಜಿಯನ್ನು 2019ರ ಲೋಕಸಭಾ ಚುನಾವಣೆಯ ನಂತರ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಸುಪ್ರೀಂ ಕೋರ್ಟ್‌ಗೆ ನೀಡಿರುವ ಹೇಳಿಕೆಯನ್ನು ಸುನ್ನಿ ವಕ್ಫ್‌ ಮಂಡಳಿ ತಿರಸ್ಕರಿಸಿದೆ.

ಈ ಪ್ರಕರಣದಲ್ಲಿ ಸಿಬಲ್‌ ಅವರು ಸುನ್ನಿ ವಕ್ಫ್‌ ಮಂಡಳಿಯ ವಕೀಲರಾಗಿ ವಾದ ಮಂಡಿಸುತ್ತಿದ್ದಾರೆ.

ಸಿಬಲ್‌ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿರುವ ವಕ್ಫ್‌ ಮಂಡಳಿ ಸದಸ್ಯ ಹಾಜಿ ಮೆಹಬೂಬ್‌, ಸಿಬಲ್‌ ಅವರು ಕಾಂಗ್ರೆಸ್‌ ಮುಖಂಡರಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡಿದ್ದಾರೆಯೇ ಹೊರತು, ಮಂಡಳಿಯ ವಕೀಲರಾಗಿ ಅಲ್ಲ ಎಂದು ಹೇಳಿದ್ದಾರೆ.

ದೀರ್ಘ ಸಮಯದಿಂದ ಇತ್ಯರ್ಥವಾಗದೇ ಉಳಿದಿರುವ ಈ ವಿವಾದ ಶೀಘ್ರದಲ್ಲಿ ಬಗೆಹರಿಯಬೇಕು ಎಂದು ಅವರು ಹೇಳಿದ್ದಾರೆ.

ಮೋದಿ ಶ್ಲಾಘನೆ: ಸುನ್ನಿ ವಕ್ಫ್‌ ಮಂಡಳಿಯ ನಿಲುವನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಸಿಬಲ್‌ ಮತ್ತು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಕಾಂಗ್ರೆಸ್‌ ಮತ್ತು ಅದರ ಮುಖಂಡರನ್ನು ಬಿಟ್ಟು ಉಳಿದವರೆಲ್ಲರೂ ಈ ವಿವಾದ ಶೀಘ್ರವಾಗಿ ಇತ್ಯರ್ಥವಾಗುವುದನ್ನು ಬಯಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಗುಜರಾತ್‌ನ ಧಂಧುಕಾದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, ‘ನಿನ್ನೆ ಸುಪ್ರೀಂ ಕೋರ್ಟ್‌ನಲ್ಲಿ ಕಪಿಲ್‌ ಸಿಬಲ್‌ ಅವರು ಬಾಬರಿ ಮಸೀದಿ ಪರವಾಗಿ ವಾದಿಸಿದ್ದಾರೆ. ಆ ಹಕ್ಕು ಅವರಿಗೆ ಇದೆ. ಆದರೆ, ವಿಚಾರಣೆಯನ್ನು 2019ರ ಚುನಾವಣೆಯ ನಂತರಕ್ಕೆ ಮುಂದೂಡಿ ಎಂದು ಅವರು ಹೇಳಿದ್ದು ಸರಿಯೇ’ ಎಂದು ಪ್ರಶ್ನಿಸಿದ್ದಾರೆ.

‘ಕಾಂಗ್ರೆಸ್‌ ಈಗ ರಾಮ ಮಂದಿರಕ್ಕೂ ಚುನಾವಣೆಗೂ ಸಂಬಂಧ ಕಲ್ಪಿಸಿದೆ. ಅವರಿಗೆ ದೇಶದ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ’ ಎಂದು ಹರಿಹಾಯ್ದಿದ್ದಾರೆ.

‘ಕಾಂಗ್ರೆಸ್‌ ಮುಖಂಡರಾಗಿ, ಹೈಕಮಾಂಡ್‌ನ ಆಣತಿಯಂತೆ ಸಿಬಲ್‌ ಈ ಹೇಳಿಕೆ ನೀಡಿದ್ದಾರೆ. ರಾಮ ಮಂದಿರ ವಿಚಾರದಲ್ಲಿ ಕಾಂಗ್ರೆಸ್‌ನ ವರ್ತನೆ ನಾಚಿಕೆಗೇಡು’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಟ್ವಿಟರ್‌ನಲ್ಲಿ ಟೀಕಿಸಿದ್ದಾರೆ.

* ಸಿಬಲ್‌ ನಮ್ಮ ವಕೀಲರು ಹೌದು. ಆದರೆ, ಅವರು ಕಾಂಗ್ರೆಸ್‌ನವರು. ಕೋರ್ಟ್‌ನಲ್ಲಿ ಅವರು ನೀಡಿರುವ ಹೇಳಿಕೆ ತಪ್ಪು. ಈ ವಿವಾದ ಶೀಘ್ರ ಅಂತ್ಯಗೊಳ್ಳಬೇಕು ಎಂದು ನಾವು ಬಯಸುತ್ತೇವೆ.

–ಹಾಜಿ ಮೆಹಬೂಬ, ಸುನ್ನಿ ವಕ್ಫ್‌ ಮಂಡಳಿ ಸದಸ್ಯ

* ನಾನು ಸುನ್ನಿ ವಕ್ಫ್‌ ಮಂಡಳಿಯನ್ನು ಪ್ರತಿನಿಧಿಸಿಲ್ಲ. ಮೋದಿ ಅವರು ಸತ್ಯಾಂಶವನ್ನು ಅರಿತು ಮಾತನಾಡಲಿ. ಭಗವಂತ ಶ್ರೀರಾಮ ಯಾವಾಗ ಬಯಸುತ್ತಾನೋ ಆಗ ಮಂದಿರ ನಿರ್ಮಾಣವಾಗಲಿದೆ

–ಕಪಿಲ್‌ ಸಿಬಲ್‌, ಕಾಂಗ್ರೆಸ್‌ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry