7
ಆರಂಭವಾಗದ ಅಭಿಯಾನ, ಪಾಲನೆಯಾಗದ ಆದೇಶ, ಇಲಾಖೆಗಳ ಮಧ್ಯೆ ಸಮನ್ವಯ ಕೊರತೆ

ಆಟೊ ಮೀಟರ್ ಕಡ್ಡಾಯ: ಮತ್ತೆ ಮರೀಚಿಕೆ?

Published:
Updated:
ಆಟೊ ಮೀಟರ್ ಕಡ್ಡಾಯ: ಮತ್ತೆ ಮರೀಚಿಕೆ?

ದಾವಣಗೆರೆ: ನಗರದಲ್ಲಿ ಆಟೊ ಮೀಟರ್‌ ಕಡ್ಡಾಯಗೊಳಿಸುವ ಪ್ರಕ್ರಿಯೆಗೆ ಅಡ್ಡಿ–ಆತಂಕಗಳು ಎದುರಾಗಿವೆ. ಮೀಟರ್‌ ಅಳವಡಿಕೆಗೆ ಆರಂಭವಾಗದ ತಯಾರಿ, ಸಾರಿಗೆ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆಗಳ ನಡುವೆ ಏರ್ಪಡದ ಹೊಂದಾಣಿಕೆಯಿಂದಾಗಿ ಆಟೊ ಮೀಟರ್ ಮರೀಚಿಕೆಯಾಗಲಿದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಹುಟ್ಟಿದೆ.

ನವೆಂಬರ್ 29ರಂದು ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌ ಅಧ್ಯಕ್ಷತೆಯಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ಮರುದಿನದಿಂದಲೇ ಆಟೊ ಮೀಟರ್‌ ಕಡ್ಡಾಯಗೊಳಿಸುವ ನಿರ್ಣಯ ಕೈಗೊಂಡಿತ್ತು. ಹಳೆ ಮೀಟರ್‌ಗಳಿಗೆ ಹೊಸ ದರ ರಿಕ್ಯಾಲಿಬರೇಷನ್ (ಮರು ವಿನ್ಯಾಸ) ಆಗುವವರೆಗೆ ದರದ ಪಟ್ಟಿಯನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಸಿದ್ಧಪಡಿಸಿ ಆಟೊ ಚಾಲಕರಿಗೆ ನೀಡಬೇಕು. ಮೀಟರ್ ರಿಕ್ಯಾಲಿಬರೇಷನ್‌ಗಾಗಿ ಡಿ.4ರಿಂದ 20ರವರೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಬೇಕು. 1 ವಾರದವರೆಗೆ ಮೀಟರ್ ಇಲ್ಲದ ಆಟೊಗಳ ಮೇಲೆ ಕ್ರಮ ಕೈಗೊಳ್ಳುವುದಿಲ್ಲ. ವಾರದ ನಂತರ ಆಟೊಗಳನ್ನು ಜಫ್ತಿ ಮಾಡಲು ಸಭೆ ತೀರ್ಮಾನಿಸಿತ್ತು.

ಸಭೆ ನಡೆದು ಬುಧವಾರಕ್ಕೆ ಒಂದು ವಾರವಾಗಿದೆ. ಸಭೆಯ ಒಂದೇ ಒಂದು ಆದೇಶ ಅನುಷ್ಠಾನಗೊಂಡಿಲ್ಲ. ಆಟೊಗಳು ಎಂದಿನಂತೆ ಮೀಟರ್‌ ಇಲ್ಲದೆ ಸಂಚರಿಸುತ್ತಿವೆ. ಚಾಲಕರಿಗೆ ಹೊಸ ದರದ ಪಟ್ಟಿ ಇನ್ನೂ ಸಿಕ್ಕಿಲ್ಲ. ಕಾನೂನು ಮಾಪನಶಾಸ್ತ್ರ ಇಲಾಖೆ ಅಭಿಯಾನ ಆರಂಭಿಸಿಲ್ಲ. ಮೀಟರ್‌ ಇಲ್ಲದ ಆಟೊಗಳ ಮೇಲೆ ಸಾರಿಗೆ, ಪೊಲೀಸ್‌ ಇಲಾಖೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಪ್ರಕ್ರಿಯೆಗಳು ಚಾಲನೆ ಪಡೆಯದಿರುವುದನ್ನು ನೋಡಿದರೆ ಆಟೊ ಮೀಟರ್‌ ಅಳವಡಿಕೆ ನನೆಗುದಿಗೆ ಬಿದ್ದಂತೆ ಎಂದು ಸಾರ್ವಜನಿಕರು ಸಂದೇಹ ವ್ಯಕ್ತಪಡಿಸಿದ್ದಾರೆ.

‘ದಾವಣಗೆರೆಯಲ್ಲಿ ಯಾವುದೇ ನೀತಿ, ನಿಯಮ, ಕಾನೂನು ಕ್ರಮ ಗಳು ಜಾರಿಯಾಗುವುದಿಲ್ಲ ಎಂಬ ಮಾನಸಿಕತೆಯನ್ನು ಆಟೊ ಚಾಲಕರು ಬೆಳೆಸಿಕೊಂಡಿದ್ದಾರೆ. ಇಲ್ಲಿ ಒತ್ತಡ ಹಾಕಿ ಮಾಡಿದರೆ ಮಾತ್ರ ಕೆಲಸ ಆಗುತ್ತದೆ. ಈ ಹಿಂದಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಬೋರಲಿಂಗಯ್ಯ ಆಟೊಗಳ ದಾಖಲೆ ಪರಿಶೀಲಿಸಿ ಯೂನಿಕ್‌ ನಂಬರ್‌ ನೀಡಲು ಮುಂದಾಗಿದ್ದರು. ಇದಕ್ಕೆ ಆಟೊ ಚಾಲಕರಿಂದಲೇ ಸ್ಪಂದನೆ ವ್ಯಕ್ತವಾಗಲಿಲ್ಲ. ಈ ಮಧ್ಯೆ ರಾಜಕೀಯ ಒತ್ತಡಗಳು ಆರಂಭವಾದವು. ಬೇಸತ್ತ ಅವರು ಜಿಲ್ಲೆಯಲ್ಲಿ ಇರುವವರೆಗೂ ಆಟೊಗಳ ಸುದ್ದಿಗೆ ಹೋಗಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ದಲಿತ ಆಟೊ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ರವಿಕುಮಾರ್.

ಈಗ ಹೊಸ ಅಧಿಕಾರಿಗಳು ಬಂದಿದ್ದಾರೆ. ಆಟೊ ಮೀಟರ್‌ ಅಳವಡಿಕೆಗೆ ಆಟೊ ಚಾಲಕರ ವಿರೋಧ ಇಲ್ಲ. ಆದರೆ, ಅಧಿಕಾರಿಗಳಲ್ಲಿ ದೃಢ ನಿಲುವು ಇರಬೇಕು ಎನ್ನುತ್ತಾರೆ ಅವರು.

ಹಳೆ ಮೀಟರ್‌ಗಳಿಗೆ ಹೊಸ ದರ ರಿಕ್ಯಾಲಿಬರೇಷನ್ ಮಾಡಲು ಇಲಾಖೆಯಲ್ಲಿ ತಜ್ಞ ಪರಿಣತರಿಲ್ಲ. ದಾವಣಗೆರೆಯಲ್ಲಿ ಮೂವರು ಫೇರ್ ಮೀಟರ್ ರಿಕ್ಯಾಲಿಬರೇಷನ್ ಮಾಡುವ ತಂತ್ರಜ್ಞರಿದ್ದು, ದಿನವೊಂದಕ್ಕೆ ಗರಿಷ್ಠ 100 ಮೀಟರ್ ರಿಕ್ಯಾಲಿಬರೇಷನ್ ಮಾಡಲಷ್ಟೇ ಸಾಧ್ಯ. ನಗರದಲ್ಲಿ 15ಸಾವಿರಕ್ಕೂ ಹೆಚ್ಚು ಆಟೊಗಳಿದ್ದು, ಹೊರ ಜಿಲ್ಲೆಗಳಿಂದ ತಂತ್ರಜ್ಞರನ್ನು ಕರೆಸಿಕೊಳ್ಳಬೇಕಾಗಿದೆ ಎನ್ನುತ್ತಾರೆ ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಇ.ಜಿ.ಪಾಟೀಲ್.

‘ಆಟೊ ಮೀಟರ್‌ ವಿಷಯ ಬಹಳಷ್ಟು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಜಿಲ್ಲೆಗೆ ಹೊಸದಾಗಿ ಬಂದ ಮೇಲೆ ಮೊದಲ ಆದ್ಯತೆಯಾಗಿ ಈ ಯೋಜನೆ ಜಾರಿಗೆ ಮುಂದಾಗಿದ್ದೇವೆ. ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ಸ್ವಲ್ಪ ತಡವಾಗಿದೆ ಅಷ್ಟೇ; ಆದರೆ, ಮೀಟರ್‌ ಅಳವಡಿಕೆಯಿಂದ ಹಿಂದೆ ಸರಿಯವ ಪ್ರಶ್ನೆಯೇ ಇಲ್ಲ. ಜನ ಹಾಗೂ ಆಟೊದವರ ಸಹಕಾರ ಅಗತ್ಯ’ ಎನ್ನುತ್ತಾರೆ ಸಾರಿಗೆ ಪ್ರಾದೇಶಿಕ ಅಧಿಕಾರಿ ವಿ.ಜಿ.ಶ್ರೀನಿವಾಸಯ್ಯ.

**

ಶೀಘ್ರ ತಾತ್ಕಾಲಿಕ ದರ ಪಟ್ಟಿ

ಹಳೆ ಮೀಟರ್‌ಗಳಿಗೆ ಹೊಸ ದರ ರಿಕ್ಯಾಲಿಬರೇಷನ್ (ಮರು ವಿನ್ಯಾಸ) ಆಗುವವರೆಗೆ ತಾತ್ಕಲಿಕ ದರ ಪಟ್ಟಿ ಸಿದ್ಧಪಡಿಸಲಾಗಿದೆ. ಶೀಘ್ರದಲ್ಲೇ ಆಟೊ ಚಾಲಕರಿಗೆ ಈ ಪಟ್ಟಿ ನೀಡಲಾಗುವುದು ಎಂದು ಸಾರಿಗೆ ಪ್ರಾದೇಶಿಕ ಅಧಿಕಾರಿ ವಿ.ಜಿ.ಶ್ರೀನಿವಾಸಯ್ಯ ಹೇಳಿದರು.

**

ಮೀಟರ್‌ ಅಳವಡಿಕೆ ವಿಷಯಗಳಲ್ಲಿ ರಾಜಕೀಯ ಮುಖಂಡರು ತಲೆಹಾಕದೆ ಅಧಿಕಾರಿಗಳಿಗೆ ಕಾನೂನು ಜಾರಿಗೆ ಅವಕಾಶ ಕೊಡಬೇಕು.

      –ಟಿ.ರವಿಕುಮಾರ್. ಅಧ್ಯಕ್ಷ, ದಲಿತ ಆಟೊ ಚಾಲಕರ, ಮಾಲೀಕರ ಸಂಘ

**

ಅಭಿಯಾನ ಆರಂಭಕ್ಕೆ ಸಾರಿಗೆ ಇಲಾಖೆಯ ಲಿಖಿತ ಸೂಚನೆ ಬಂದಿಲ್ಲ. ಬಂದಕೂಡಲೇ ಮೀಟರ್ ರಿಕ್ಯಾಲಿಬರೇಷನ್ ಆರಂಭಿಸಲಾಗುವುದು.

     -ಪಾಟೀಲ್, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕರು.

**

ಲಿಖಿತ ಆದೇಶಕ್ಕೆ ಜಿಲ್ಲಾಧಿಕಾರಿ ಸಹಿ ಮಾಡಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ರಜೆಯಲ್ಲಿದ್ದಾರೆ. ಅವರ ಸಹಿ ಬಾಕಿ ಇದೆ.

     –ವಿ.ಜಿ.ಶ್ರೀನಿವಾಸಯ್ಯ, ಸಾರಿಗೆ ಇಲಾಖೆ ಪ್ರಾದೇಶಿಕ ಅಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry