ಭಾನುವಾರ, ಮಾರ್ಚ್ 7, 2021
27 °C

ರಘು ಭಟ್ ಎಂಬ ವಿಲನ್!

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

ರಘು ಭಟ್ ಎಂಬ ವಿಲನ್!

ಗಡಿನಾಡ ಕನ್ನಡಿಗ ರಘು ಭಟ್ ಅಭಿನಯಿಸಿರುವ ‘ಅನ್ವೇಷಿ’ ಸಿನಿಮಾ ಶುಕ್ರವಾರ ತೆರೆಗೆ ಬರುತ್ತಿದೆ. ‘ಹೀರೊ ಆಗಿ ಅಭಿನಯಿಸುವುದಕ್ಕಿಂತ ವಿಲನ್ ಆಗಿ ಅಭಿನಯಿಸುವುದು ನನಗೆ ಹೆಚ್ಚು ಖುಷಿಕೊಡುತ್ತದೆ’ ಎನ್ನುವ ವ್ಯಕ್ತಿ ರಘು! ಸಿನಿಮಾ ತೆರೆಗೆ ಬರುವುದನ್ನೇ ಕಾತರದಿಂದ ಕಾಯುತ್ತಿರುವ ಅವರು ‘ಚಂದನವನ’ಕ್ಕೆ ಮಾತಿಗೆ ಸಿಕ್ಕಿದ್ದರು. ಅವರ ಜೊತೆಗಿನ ಮಾತುಕತೆಯ ವಿವರ ಇಲ್ಲಿದೆ:

‘ನಾನು ಇಷ್ಟರವರೆಗೆ ಮಾಡಿರುವ ಸಿನಿಮಾಗಳಿಗಿಂತ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿರುವ ಸಿನಿಮಾ ಇದು (ಅನ್ವೇಷಿ)’ ಎಂದು ಮಾತಿನ ಆರಂಭದಲ್ಲಿಯೇ ರಘು ಹೇಳಿದರು. ‘ನಾನು ಪೂರ್ಣ ಪ್ರಮಾಣದಲ್ಲಿ ಈ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದೇನೆ. ವೇಮಗಲ್ ಜಗನ್ನಾಥ್ ನಿರ್ದೇಶನದ ಸಿನಿಮಾ ಇದು ಎಂಬುದೂ ಈ ನಿರೀಕ್ಷೆಗೆ ಒಂದು ಕಾರಣ.

ಈ ಸಿನಿಮಾ ಒಪ್ಪಿಕೊಂಡ ನಂತರ ನನಗೆ ಇನ್ನಷ್ಟು ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ದೊರೆತವು’ ಎಂದು ತಮ್ಮ ನಿರೀಕ್ಷೆಗಳಿಗೆ ಕಾರಣಗಳ ಪಟ್ಟಿ ನೀಡಿದರು. ಅಂದಹಾಗೆ, ‘ಅನ್ವೇಷಿ’ ಸಿನಿಮಾ ಒಪ್ಪಿಕೊಂಡ ನಂತರ ರಘು ಅವರು ನಟಿಸಿದ ಕೆಲವು ಸಿನಿಮಾಗಳೂ ಬಿಡುಗಡೆಗೆ ಸಿದ್ಧವಾಗಿವೆಯಂತೆ.

‘ಅನ್ವೇಷಿ’ ಸಿನಿಮಾ ಆರನೆಯ ಇಂದ್ರಿಯದ ಕುರಿತ ಕಥೆಯನ್ನು ಹೊಂದಿದೆ. ವಿದ್ಯಾರ್ಥಿ ಜೀವನದಲ್ಲಿ ನಡೆಯುವ ಘಟನೆಗಳೂ ಇದರಲ್ಲಿ ಸೇರಿವೆ. ಈ ಎರಡೂ ವಿಷಯಗಳ ಕಥೆಯನ್ನು ನಿರ್ದೇಶಕರು ಸಮಾನ ನೆಲೆಯಲ್ಲಿ ಹೆಣೆದಿದ್ದಾರೆ. ಹಾಡುಗಳು ಚೆನ್ನಾಗಿ ಮೂಡಿಬಂದಿವೆ ಎಂದು ರಘು ಹೇಳಿದರು.

‘ಇದರಲ್ಲಿ ನನ್ನದು ಒಬ್ಬ ನಟನ ಪಾತ್ರ. ಈ ಸಿನಿಮಾದಲ್ಲಿ ನಾಲ್ಕು ಮುಖ್ಯ ಪಾತ್ರಗಳಿವೆ. ನಾನು ಈ ಸಿನಿಮಾ ಮೂಲಕ ಜನರಿಗೆ ಹೆಚ್ಚು ಹತ್ತಿರವಾಗುತ್ತೇನೆ ಎಂಬ ನಿರೀಕ್ಷೆ ಹೊಂದಿದ್ದೇನೆ’ ಎಂಬ ಮಾತು ಹೇಳಲು ಅವರು ಮರೆಯಲಿಲ್ಲ.

ರಘು ಅವರದ್ದು ಅಭಿನಯದ ಹಿನ್ನೆಲೆ ಇರುವ ಕುಟುಂಬ ಅಲ್ಲ. ಇವರು ಸಿನಿಮಾ ರಂಗ ಪ್ರವೇಶಿಸಿದ್ದು 2004ರಲ್ಲಿ. ‘ನಾನು ಕೇರಳ ರಾಜ್ಯದ ಮಂಜೇಶ್ವರದವನು. ಅಂದರೆ, ನಾನೊಬ್ಬ ಗಡಿನಾಡ ಕನ್ನಡಿಗ. ನಾನು ಹತ್ತನೇ ತರಗತಿಯನ್ನು ಮಂಜೇಶ್ವರದಲ್ಲಿ ಪೂರ್ಣಗೊಳಿಸಿ, ನಂತರದ ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೆ ಬಂದೆ. ಮೊದಲಿನಿಂದಲೂ ನಾನು ಶಾಲೆಗಳಲ್ಲಿ ನಾಟಕ ಮಾಡುತ್ತಿದ್ದೆ. ಹಾಗೆಯೇ ಸಿನಿಮಾ ಬಗ್ಗೆಯೂ ಆಸಕ್ತಿ ಇತ್ತು. ನನ್ನ ಕುಟುಂಬದಲ್ಲಿ ಮೊದಲು ಗಾಂಧಿನಗರ ಪ್ರವೇಶಿಸಿದ್ದು ನಾನೇ’ ಎಂದು ರಘು ಹೇಳಿಕೊಳ್ಳುತ್ತಾರೆ.

ರಘು ಅವರು ಇಷ್ಟಪಡುವುದು ಹೀರೊ ಪಾತ್ರಗಳನ್ನು ಅಲ್ಲ. ಬದಲಿಗೆ ಹೀರೊಗೆ ಎದುರಾಗಿ ನಿಲ್ಲುವ ವಿಲನ್ ಪಾತ್ರಗಳು ಅವರಿಗೆ ಹೆಚ್ಚು ಇಷ್ಟ. ‘ಕೆಲವರು ನನಗೆ ಚಾಕೊಲೇಟ್ ಹೀರೊ ತರಹ ಕಾಣಿಸ್ತೀಯಾ ಎನ್ನುತ್ತಾರೆ. ಆದರೆ ನನಗೆ ಚಾಕೊಲೇಟ್ ಹೀರೊ ಆಗಿ ಕಾಣಿಸಿಕೊಳ್ಳುವುದಕ್ಕಿಂತ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳುವುದು ಇಷ್ಟ. ಒಂದರ್ಥದಲ್ಲಿ ಹೇಳುವುದಾದರೆ, ಬೇರೆಯವರು ನನ್ನನ್ನು ನೀನು ಚಾಕೊಲೇಟ್ ಹೀರೊ ಎಂದು ಹೇಳಿದ್ದೇ, ನೆಗೆಟಿವ್ ಶೇಡ್‌ ಪಾತ್ರಗಳು ಇಷ್ಟವಾಗಲು ಕಾರಣವಾಯಿತು’ ಎಂದರು.

‘ಎಲ್ಲರೂ ಹೀರೊ ಆಗಲು ಬರುತ್ತಾರೆ. ಎಲ್ಲರೂ ಹೀರೊ ಆದರೆ ಆ ಹೀರೊ ಎದುರು ನಿಲ್ಲುವ ವಿಲನ್ ಪಾತ್ರವೂ ಬೇಕ‌ಲ್ಲ?! ನನ್ನ ಆಸೆಯ ಪಾತ್ರಕ್ಕಾಗಿ ನಾನು ಕಾಯುತ್ತಿದ್ದೇನೆ’ ಎಂದು ಅವರು ಹೇಳುತ್ತಾರೆ.

ಮುಸ್ಸಂಜೆ ಮಹೇಶ್, ವೇಮಗಲ್ ಅವರಂತಹ ನಿರ್ದೇಶಕರು ರಘು ಅವರಿಗೆ ಬಹಳ ಇಷ್ಟವಂತೆ. ‘ಏಕೆಂದರೆ ಇಂತಹ ನಿರ್ದೇಶಕರು ನನ್ನ ತಪ್ಪುಗಳನ್ನು ಹೇಳುತ್ತಾರೆ. ನನಗೆ ಸಿನಿಮಾ ಚಿತ್ರೀಕರಣದ ಸ್ಥಳದಲ್ಲೇ ನನ್ನ ತಪ್ಪುಗಳನ್ನು ಹೇಳಿದರೂ ಬೇಸರವಿಲ್ಲ. ಹಾಗೆ ಹೇಳುವ ನಿರ್ದೇಶಕರು ಬೇಕು. ಅಂತಹ ನಿರ್ದೇಶಕರ ಜೊತೆ ಕೆಲಸ ಮಾಡುವುದು ನನಗೆ ಖುಷಿಯ ವಿಚಾರ’ ಎನ್ನುತ್ತಾರೆ.

‘ಡರ್ ಸಿನಿಮಾದಲ್ಲಿ ಶಾರುಖ್‌ ಖಾನ್‌ ಮಾಡಿದ್ದಂತಹ ಪಾತ್ರ ನನಗೆ ಬಹಳ ಹತ್ತಿರವಾಗುತ್ತದೆ. ನಟನ ಕನಸಿನ ಪಾತ್ರಗಳನ್ನು ಅವನಿಗೆ ಕೊಡುವಂತಹ ಕಥೆಗಳು ಈಗ ಕನ್ನಡದಲ್ಲಿ ಸಿನಿಮಾ ಆಗುತ್ತಿವೆ.ಅಂಥ ಕೆಲವು ಸಿನಿಮಾಗಳಿಗೆ ಒಪ್ಪಿಕೊಂಡಿದ್ದೇನೆ’ ಎಂದರು ರಘು.

‘ಹಾಗಾದರೆ ಕನ್ನಡಕ್ಕೆ ಒಬ್ಬ ಪಕ್ಕಾ ವಿಲನ್ ಪಾತ್ರಧಾರಿಯನ್ನು ನಾವು ನಿರೀಕ್ಷಿಸಬಹುದೇ’ ಎಂದು ಪ್ರಶ್ನಿಸಿದರೆ ‘ಖಂಡಿತ’ ಎಂದು ಆತ್ಮವಿಶ್ವಾಸದಿಂದ ಉತ್ತರಿಸುತ್ತಾರೆ.

*

ನಾನು ಇಷ್ಟಪಡುವಂತಹ ವಿಲನ್ ಪಾತ್ರ ಮಾಡುವವರು ನಟ ಪ್ರಕಾಶ್ ರೈ. ಅವರು ವಿಲನ್ ಆಗಿ ಅಭಿನಯಿಸಿದ್ದನ್ನು ನೋಡುವುದು ಖುಷಿಯ ವಿಚಾರ. ಹಾಗೆಯೇ ನನಗೆ ಸೋನು ಸೂದ್ ಅವರೂ ಇಷ್ಟ.

–ರಘು ಭಟ್

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.