ಗುರುವಾರ , ಫೆಬ್ರವರಿ 25, 2021
29 °C

ಡಾಂಬರಿಲ್ಲದೆ ಹದಗೆಟ್ಟ ರಸ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಾಂಬರಿಲ್ಲದೆ ಹದಗೆಟ್ಟ ರಸ್ತೆ

ನಂಗಲಿ: ಈ ರಸ್ತೆಯ ಡಾಂಬರು ಸಂಪೂರ್ಣವಾಗಿ ಕಿತ್ತುಹೋಗಿದೆ. ರಸ್ತೆ ಮಧ್ಯೆ ಗುಂಡಿಗಳು ಬಿದ್ದಿದ್ದು, ಜಲ್ಲಿಕಲ್ಲುಗಳು ಎದ್ದು ಕಾಣುತ್ತವೆ. ಇದು ನೆರೆಯ ಆಂಧ್ರಪ್ರದೇಶದ ಪುಂಗನೂರಿಗೆ ಹೋಗುವ ಮುಖ್ಯ ರಸ್ತೆಯಿಂದ ಅನಂತಪುರಂ, ಕಿರುಮಣಿ, ನಾಗನಪಲ್ಲಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ದುಸ್ಥಿತಿ.

ನಾಲ್ಕೈದು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಗೆ ಸುಮಾರು 10 ವರ್ಷಗಳ ಹಿಂದೆ ಡಾಂಬರು ಭಾಗ್ಯ ದೊರೆತಿತ್ತು. ಡಾಂಬರು ಹಾಕಿ ಇದೀಗ ದಶಕಗಳು ಕಳೆದಿರುವುದರಿಂದ ರಸ್ತೆಯಲ್ಲಿ ಡಾಂಬರು ಇಲ್ಲದೆ ಜಲ್ಲಿಕಲ್ಲುಗಳು ಕಿತ್ತು ಬಂದಿವೆ. ರಸ್ತೆಯ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ಇದರಿಂದಾಗಿ  ಓಡಾಟ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಸ್ಥಳೀಯರು ದೂರುತ್ತಾರೆ.

ಒಂದೆಡೆ ಡಾಂಬರು ಇಲ್ಲದೆ ಹದಗೆಟ್ಟ ರಸ್ತೆಯ ದೂಳಿನಿಂದ ಆರೋಗ್ಯ ಸಮಸ್ಯೆ ಉಂಟಾಗಿದೆ. ಹಿರಿಯರು ಮತ್ತು ಮಕ್ಕಳು ದೂಳಿನ ಸಮಸ್ಯೆಯಿಂದ ನರಳಬೇಕಾಗಿದೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ.

ವಾಹನ ಸವಾರರು ಈ ರಸ್ತೆಯಲ್ಲಿ ಸಾಗಲು ಕಿರಿ ಕಿರಿ ಅನುಭವಿಸುತ್ತಿದ್ದಾರೆ. ಕಿತ್ತುಹೋದ ರಸ್ತೆ, ಗುಂಡಿಗಳಲ್ಲಿ ಸವಾರರು ಭಯದಿಂದ ವಾಹನ ಚಾಲನೆ ಮಾಡುತ್ತಿದ್ದಾರೆ. ಬೈಕ್‌ ಸವಾರರಂತೂ ಜೋರಾಗಿ ಸಾಗುವಂತೆಯೇ ಇಲ್ಲ. ಹೀಗೆ ಸಾಗಿದರೆ ರಸ್ತೆಯ ಯಾವುದಾದರೂ ಗುಂಡಿಯಲ್ಲಿ ಮುಗ್ಗರಿಸಿ ಬೀಳುವುದು ಖಂಡಿತ.

ಈ ಭಾಗದ ನೂರಾರು ವಿದ್ಯಾರ್ಥಿಗಳು ಪ್ರತಿನಿತ್ಯ ಇದೇ ರಸ್ತೆಯಲ್ಲಿ ಶಾಲಾ ಕಾಲೇಜುಗಳಿಗೆ ಹೋಗಿ ಬರಬೇಕಾಗಿದ್ದು, ವಿದ್ಯಾರ್ಥಿಗಳು ಓಡಾಟಕ್ಕೆ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.

‘ಈ ರಸ್ತೆಯಲ್ಲಿ ವಯೋವೃದ್ಧರು ಓಡಾಡಲು ತೊಂದರೆಯಾಗಿದೆ. ಎಷ್ಟೋ ಬಾರಿ ದ್ವಿಚಕ್ರವಾಹನ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ.‌ ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ಗುಂಡಿಗಳು ತಿಳಿಯದೆ ರಸ್ತೆ ಪೂರ್ತಿ ಕೆಸರು ಮಯವಾಗಿರುತ್ತದೆ. ಲೋಕೋಪಯೋಗಿ ಇಲಾಖೆಯವರು ಡಾಂಬರು ಹಾಕುವುದರ ಮೂಲಕ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಬೇಕಾಗಿದೆ’ ಎನ್ನುತ್ತಾರೆ ಸಿಎ ವಿದ್ಯಾರ್ಥಿ ಶ್ರಿನಿವಾಸ್.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಡಾಂಬರು ಹಾಕಲು ಕ್ರಮ ಕೈಗೊಂಡು ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.