7

ಕವಿಸಮಯ ಎಂಬ ಸತ್ಯಾನಂದ!

Published:
Updated:
ಕವಿಸಮಯ ಎಂಬ ಸತ್ಯಾನಂದ!

ಬ್ರಹ್ಮ ಅಥವಾ ಸರಸ್ವತಿ ಅಥವಾ ಶಬ್ದ ಅಥವಾ ರಸ – ಇಂಥ ಪದವೊಂದು ಬಂದಿತು ಎಂದು ಅದಕ್ಕೆ ಇಷ್ಟೊಂದು ವ್ಯಾಪಕವಾದ ಅರ್ಥವನ್ನು ಕೊಟ್ಟು ವಿವರಿಸಬೇಕೆ? ಈ ಪ್ರಮಾಣದ ವಿವರಣೆಯನ್ನು ಈ ಪದಗಳು ತಾಳಿಕೊಳ್ಳಬಲ್ಲವೆ? ಕಥೆಯ ಓಟವಷ್ಟೆ ಇಲ್ಲಿ ಮುಖ್ಯವಲ್ಲವೆ? – ಇಂಥ ಸಂದೇಹಗಳು ಮೂಡುವುದು ಸಹಜವೆನ್ನಿ! ಆರಂಭದಲ್ಲಿಯೇ ನಾವು ನೋಡಿದಂತೆ, ವೇದ ಮತ್ತು ರಾಮಾಯಣ–ಮಹಾಭಾರತಗಳು ‘ಮಿಥ್‌’ನ ಪರಿಕಲ್ಪನೆಯಲ್ಲಿ ಶರೀರ ಪಡೆದಿರುವ ಅರಿವಿನ ಮೂಲಸ್ಥಾನಗಳು. ಹೀಗಾಗಿ ಅವನ್ನು ಬೇರೆ ಬೇರೆ ಆಯಾಮಗಳಲ್ಲಿ ನೋಡಬೇಕಿದೆ; ಆಳಕ್ಕೆ ಹೋದಷ್ಟೂ ಅರಿವಿನ ಅಮೃತದ ಸೆಲೆ ವಿಸ್ತಾರವಾಗುತ್ತಿರುತ್ತದೆ. ಜೋಸೆಫ್‌ ಕ್ಯಾಂಬೆಲ್‌ ಅವರ ಮಾತುಗಳು ಇಲ್ಲಿ ಉಲ್ಲೇಖಾರ್ಹ:

‘Myths do not come from a concept system; they come from a life system; they come out of a deeper center. We must not confuse mythology with ideology. Myths come from where the heart is, and where the experience is, even as the mind may wonder why people believe these things’.

‘ಮಿಥ್‌ಗಳು ಕಲ್ಪನೆಯ ಮೂಲದಿಂದ ಹುಟ್ಟಿಕೊಳ್ಳುವಂಥವಲ್ಲ; ಅವುಗಳ ಮೂಲ ಇರುವುದು ಜೀವನವ್ಯವಸ್ಥೆಯಲ್ಲಿ. ಆಳವಾದ ಜೀವನಕೇಂದ್ರವೊಂದರಿಂದ ಅವು ಹೊರಹೊಮ್ಮಿರುವಂಥವು. ಮಿಥ್‌ಗಳನ್ನು ನಾವು ಐಡಿಯಾಲಜಿಯೊಂದಿಗೆ ಸಮೀಕರಿಸುವ ಗೊಂದಲಕ್ಕೆ ಪಕ್ಕಾಗಬಾರದು. ಹೃದಯ ಎಲ್ಲಿದೆಯೋ, ಅನುಭವ ಎಲ್ಲಿದೆಯೋ ಅಲ್ಲಿಂದ ಮಿಥ್‌ಗಳು ಚಿಗುರುತ್ತವೆ; ‘ಇಂಥವನ್ನು ಜನರು ಹೇಗೆ ನಂಬುತ್ತಾರೆ’ ಎಂದು ಬುದ್ಧಿಗೆ ಇವು ಅಚ್ಚರಿಯನ್ನೂ ಉಂಟುಮಾಡಬಹುದು’ ಎನ್ನುವ ಅವರು, ‘ಮಿಥ್‌ಗಳು ತಥ್ಯದ (fact) ಕಡೆಗೆ ಬೆರಳು ತೋರವು; ತಥ್ಯದ ಅರಿವನ್ನು ಒದಗಿಸುವ, ಆದರೆ ತಥ್ಯಗಳನ್ನು ಮೀರಿದಂಥ ವಿವರಗಳ ಕಡೆಗೆ ಅವು ನಮ್ಮ ಗಮನವನ್ನು ಸೆಳೆಯುತ್ತವೆ’ ಎನ್ನುತ್ತಾರೆ.

ರಾಮಾಯಣವನ್ನು ಕಥೆಯಾಗಿ ಮಾತ್ರವೇ ನೋಡುತ್ತೇವೆ ಎಂದು ಹೊರಡಬಹುದು; ಆದರೆ ನಮಗೆ ಆಗ ಸಾಕಷ್ಟು ರಸಸ್ಥಾನಗಳು ತಪ್ಪಿಹೋಗುತ್ತವೆ. ಮಿಥ್‌ನ ವಿಶ್ವಾತ್ಮಕ ನೆಲೆಯಿಂದ ನೋಡಿದಾಗ ದೊರೆಯುವ ಲಾಭ ಹೆಚ್ಚು; ಅರಿವಿನ ವಿಸ್ತಾರವೂ ದೊರೆಯುತ್ತದೆ; ಆನಂದದ ಅನುಭವವೂ ಒದಗುತ್ತದೆ. ರಸಮಾರ್ಗದ ಸುಖಪ್ರಯಾಣವೂ ವಿವೇಕಮಾರ್ಗದ ಸುಖಪ್ರಾರಬ್ಧವೂ ಏಕಕಾಲದಲ್ಲಿ ದಕ್ಕುವ ಸಾರಸ್ವತಯಜ್ಞವೇ ಈ ಮಾದರಿಯ ಅನುಸಂಧಾನ. ಬರಿಯ ಕಥಾಕುತೂಹಲದಿಂದ ಇಂಥ ರಸಯಾನ ಸಿದ್ಧಿಸದು. ರಾಮಾಯಣದ ಕಥೆ ನಮಗೆಲ್ಲರಿಗೂ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಗೊತ್ತಿರುವಂಥದ್ದೇ ಅಲ್ಲವೆ? ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳಲ್ಲಿರುವ ರಾಮಾಯಣದ ಕಥೆಯನ್ನು ಒಂದೇ ಶ್ಲೋಕದಲ್ಲಿ ಅಡಗಿಸಬಹುದಾಗಿದೆ; ಅಂಥದೊಂದು ಶ್ಲೋಕವೂ ಪರಂಪರೆಯಲ್ಲಿದೆಯೆನ್ನಿ:

ಪೂರ್ವಂ ರಾಮ ತಪೋವನಾಭಿಗಮನಂ;

ಹತ್ವಾ ಮೃಗಂ ಕಾಂಚನಂ,

ವೈದೇಹೀಹರಣಂ, ಜಟಾಯುಮರಣಂ,

ಸುಗ್ರೀವಸಂಭಾಷಣಂ |

ವಾಲೀನಿಗ್ರಹಣಂ, ಸಮುದ್ರತರಣಂ,

ಲಂಕಾಪುರೀದಾಹನಂ;

ಪಶ್ಚಾದ್ರಾವಣಕುಂಭಕರ್ಣಮಥನಂ;

ಏತದ್ಧಿ ರಾಮಾಯಣಂ ||

‘ಮೊದಲನೆಯದಾಗಿ – ರಾಮನು ಸೀತಾಲಕ್ಷ್ಮಣರೊಂದಿಗೆ ತಪೋವನಕ್ಕೆ ಅಭಿಮುಖನಾಗಿ ಹೋದದ್ದು; ಅಲ್ಲಿ ಚಿನ್ನದ ಜಿಂಕೆಯನ್ನು ಕೊಂದ ಮೇಲೆ – ರಾವಣನು ಸೀತೆಯನ್ನು ಅಪಹರಿಸಿದ್ದು; ಸೀತೆಯ ಸಂರಕ್ಷಣೆಗೆ ಬಂದ ಜಟಾಯು ರಾವಣನನ್ನು ಎದುರಿಸಿ ಸತ್ತದ್ದು; ರಾಮನು ಸುಗ್ರೀವನೊಡನೆ ಮಾತನಾಡಿದ್ದು ಮತ್ತು ವಾಲಿಯನ್ನು ಕೊಂದದ್ದು; ಹನುಮಂತನು ಸಮುದ್ರವನ್ನು ದಾಟಿದ್ದು; ತನ್ನ ಬಾಲದ ಬೆಂಕಿಯಿಂದ ಲಂಕಾನಗರವನ್ನು ಸುಟ್ಟಿದ್ದು; ಅನಂತರ ರಾವಣ–ಕುಂಭಕರ್ಣರ ಸಂಹಾರ – ಇದೇ ರಾಮಾಯಣವೆಂಬುದು.’

(ಅನುವಾದ: ಜಿ. ಪಿ. ರಾಜರತ್ನಂ)

ಮಹಾಭಾರತ ಮತ್ತು ಭಾಗವತಗಳ ಕಥೆಯನ್ನು ಹೇಳುವ ಇಂಥ ಏಕಶ್ಲೋಕಿಗಳು ಉಂಟು.

ರಾಮನ ಕಥೆ ಹೇಳುವುದಷ್ಟೆ ರಾಮಾಯಣದ ಉದ್ದೇಶವಲ್ಲ. ಆ ಕಥೆ ನಮ್ಮ ಜೀವನದ ಅಂಗವಾಗಬೇಕು; ಅರಿವಿನ ಭಾಗವಾಗಿ ಬದುಕು ಸಾರ್ಥಕವಾಗಬೇಕು – ಎಂಬುದೇ ಎಲ್ಲ ಮಿಥ್‌ಗಳ ಹಿಂದಿರುವ ಉದ್ದೇಶವಲ್ಲದ ಉದ್ದೇಶ. ಹೀಗಾಗಿಯೇ ಕವಿಯನ್ನು ಋಷಿಯೆಂದೂ, ಋಷಿಯನ್ನು ಕವಿಯೆಂದೂ ಪರಂಪರೆ ಒಕ್ಕಣಿಸಿರುವುದು; ಕವಿಯನ್ನು ಬ್ರಹ್ಮ ಎಂದೇ ಕಾಣಿಸಿರುವುದು.

ಕವಿ ವಾಲ್ಮೀಕಿಗೆ ಸಾಕ್ಷಾತ್‌ ಬ್ರಹ್ಮನೇ ಕೊಟ್ಟ ವಿಶೇಷ ವರ ಎಂದರೆ ‘ವಾಲ್ಮೀಕಿಯ ಕಾವ್ಯದಲ್ಲಿರುವುದೆಲ್ಲವೂ ಸತ್ಯವಾಗಲಿ’. ಕಾವ್ಯದಲ್ಲಿರುವುದು ಸತ್ಯವಾಗುವುದು ಎಂದರೇನು? ರಾಮಾಯಣ ಕಾವ್ಯವನ್ನೇ ನೋಡುವುದಾದರೆ, ‘ಅದರಲ್ಲಿ ಕಪಿಗಳು ಶುದ್ಧಭಾಷೆಯಲ್ಲಿ ಮಾತನಾಡುತ್ತವೆ, ಜೊತೆಯಲ್ಲಿ ಹಾರಬಲ್ಲವು ಕೂಡ; ಪಕ್ಷಿಗಳೂ ಮಾತನಾಡುತ್ತವೆ; ಸಮುದ್ರದಲ್ಲಿ ಬಂಡೆಗಳು ತೇಲುತ್ತವೆ; ಹತ್ತು ತಲೆಗಳ ರಾಕ್ಷಸನಿದ್ದಾನೆ’. ನಮ್ಮ ಲೋಕದಲ್ಲಿ ಕಂಡುಬರದ ಇಂಥ ಎಷ್ಟೋ ಸಂಗತಿಗಳು ಅಲ್ಲಿ ವರ್ಣಿತವಾಗಿವೆ. ಹಾಗಾದರೆ ಇವನ್ನು ಹಿಂದೆ ನಡೆದಂಥ ಸತ್ಯಗಳು ಎಂದೋ ಅಥವಾ ಮುಂದೆ ನಡೆಯುವ ಸತ್ಯಗಳು ಎಂದೋ ನಾವು ಸ್ವೀಕರಿಸಬೇಕೆ? ಕಾವ್ಯಮೀಮಾಂಸೆಯ ದೀವಟಿಗೆಯನ್ನು ಹಿಡಿಯದಿದ್ದರೆ ಆಗ ನಾವು ಕಾವ್ಯಲೋಕದಲ್ಲಿ ದಿಕ್ಕು ತಪ್ಪುವುದು ಶತಃಸಿದ್ಧವೆನ್ನಿ! ಕೆಲವೊಂದು ಕಾವ್ಯಧರ್ಮಗಳನ್ನು ನೋಡೋಣ.

‘ಕವಿಸಮಯ’ ಎಂಬ ಪರಿಕಲ್ಪನೆಯೊಂದು ಕಾವ್ಯ ಮೀಮಾಂಸೆಯಲ್ಲಿದೆ. ಅಂಥ ಕೆಲವೊಂದು ಕವಿಸಮಯಗಳು ಇವು: ಸೂರ್ಯ ಉದಯಿಸಿದಾಗ ಕಮಲಗಳು ಅರಳುತ್ತವೆ; ಚಂದ್ರ ಬಂದಾಗ ನೈದಿಲೆಗಳು ಅರಳುತ್ತವೆ; ಚಾತಕಪಕ್ಷಿಗಳು ಮಳೆನೀರನ್ನು ಕುಡಿದು ಬದುಕುತ್ತವೆ; ಕೀರ್ತಿ ಎನ್ನುವುದು ಬೆಳ್ಳಗಿದೆ – ಇಂಥವಲ್ಲದೆ, ಒಂದು ಜಾತಿಯ ಮರವು ಚಿಗುರಬೇಕಾದರೆ ಸುಂದರಸ್ತ್ರೀ ಅದನ್ನು ಒದೆಯಬೇಕು; ಇನ್ನೊಂದು ಜಾತಿಯ ಮರವನ್ನು ಸುಂದರಿಯೊಬ್ಬಳು ಅಪ್ಪಿಕೊಂಡರೆ ಮಾತ್ರವೇ ಹೂ ಬಿಡುವುದಂತೆ – ಇಂಥವೂ ಇವೆ. ಆದರೆ ಇಂಥ ವಿದ್ಯಮಾನಗಳು ನಾವಿರುವಂಥ, ನಮಗೆ ಗೊತ್ತಿರುವಂಥ ಪ್ರಪಂಚದಲ್ಲಿ ನಡೆಯುವಂಥವಲ್ಲ ಎನ್ನುವುದು ನಮಗೆ ತಿಳಿದಿದೆ. ಹೀಗೆಂದು ಇವು ಕಾವ್ಯದಲ್ಲಿ ಬಂದಾಗ ‘ಇದು ಸುಳ್ಳು! ಇದು ಸುಳ್ಳು!!’ ಎಂದು ಮನಸ್ಸು ಹಟತೊಟ್ಟರೆ ಪ್ರಯೋಜನವಿಲ್ಲ. ಇವೆಲ್ಲವೂ ಕಾವ್ಯಪ್ರಪಂಚದಲ್ಲಿ ಸತ್ಯಸಂಗತಿಗಳೇ ಹೌದು. ಇಂಥ ಕವಿಸಮಯಗಳಲ್ಲದೆ ಕವಿಗಳು ಉಪಮೆ, ರೂಪಕ, ಉತ್ಪ್ರೇಕ್ಷೆ, ಶ್ಲೇಷೆ – ಹೀಗೆ ನೂರಾರು ಅಲಂಕಾರಗಳನ್ನೂ ಬಳಸುತ್ತಾರೆ. ಇವೆಲ್ಲವೂ ಕಾವ್ಯಪ್ರಪಂಚದ ಸತ್ಯಗಳೇ ಹೌದು. ಇವು ಸತ್ಯ ಹೌದೇ ಅಲ್ಲವೇ ಎನ್ನುವುದನ್ನು ನಿರ್ಧರಿಸುವುದು ಸಹೃದಯನ ಭಾವಸ್ಪಂದನ ಮತ್ತು ಕವಿಯ ಔಚಿತ್ಯಸ್ಪಂದನ ಮಾತ್ರವೇ ಹೊರತು ಲೋಕಸತ್ಯಗಳಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry