ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಧವ್‌ ಭೇಟಿಗೆ ಅನುಮತಿ

ಪಾಕ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನೌಕಾಪಡೆ ನಿವೃತ್ತ ಅಧಿಕಾರಿ
Last Updated 8 ಡಿಸೆಂಬರ್ 2017, 19:41 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ : ಪಾಕಿಸ್ತಾನದ ಸೇನಾ ನ್ಯಾಯಾಲಯದಿಂದ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತದ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರನ್ನು ಡಿಸೆಂಬರ್‌ 25ರಂದು (ಕ್ರಿಸ್‌ಮಸ್‌ ದಿನ) ಭೇಟಿ ಮಾಡಲು ಅವರ ಪತ್ನಿ ಹಾಗೂ ತಾಯಿಗೆ ಅಲ್ಲಿನ ಸರ್ಕಾರ ಅನುಮತಿ ನೀಡಿದೆ.

ಭೇಟಿಗೆ ಅನುಮತಿ ನೀಡಿರುವ ವಿಚಾರವನ್ನು ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ಮೊಹಮದ್‌ ಫೈಸಲ್‌ ಅವರು, ಖಚಿತಪಡಿಸಿದ್ದಾರೆ.

‘ಜಾಧವ್‌ ಭೇಟಿ ಮಾಡಲು ಅವರ ಪತ್ನಿ ಹಾಗೂ ತಾಯಿಗೆ ಅನುಮತಿ ನೀಡಿರುವ ವಿಚಾರವನ್ನು ಈಗಾಗಲೇ ಭಾರತಕ್ಕೆ ತಿಳಿಸಲಾಗಿದೆ. ಈ ವೇಳೆ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ರಾಜತಾಂತ್ರಿಕ ಅಧಿಕಾರಿಯೊಬ್ಬರು ಉಪಸ್ಥಿತರಿರುವರು’ ಎಂದು ಫೈಸಲ್‌ ಅವರು ಸುದ್ದಿಗಾರ ರಿಗೆ ತಿಳಿಸಿದ್ದಾರೆ.

‘ಜಾಧವ್‌ ಪತ್ನಿ, ತಾಯಿ ಅವರಿಗೆ ಪಾಕಿಸ್ತಾನ ಭೇಟಿ ಸಂದರ್ಭದಲ್ಲಿ ಸೂಕ್ತ ಭದ್ರತೆ ಒದಗಿಸಲಾಗುವುದು’ ಎಂದು ಹೇಳಿದ್ದಾರೆ.

ಜಾಧವ್‌ ಭೇಟಿ ಮಾಡಲು ಅವರ ಪತ್ನಿಗೆ ಅವಕಾಶ ನೀಡುವುದಕ್ಕೆ ನವೆಂಬರ್‌ 10ರಂದು ಪಾಕಿಸ್ತಾನ ಸಮ್ಮತಿ ಸೂಚಿಸಿತ್ತು. ತಾಯಿ ಅವಂತಿಕಾ ಅವರಿಗೆ ಮಾನವೀಯ ನೆಲೆಯಲ್ಲಿ ವೀಸಾ ನೀಡುವಂತೆ ಪಾಕಿಸ್ತಾನಕ್ಕೆ ಭಾರತ ಮನವಿ ಮಾಡಿತ್ತು.

ಜಾಧವ್‌, ಭಾರತದ ಗುಪ್ತಚರ ಸಂಸ್ಥೆ ‘ರಾ’ ಪರವಾಗಿ ಬೇಹುಗಾರಿಕಾ ಕೆಲಸಗಳಲ್ಲಿ ತೊಡಗಿದ್ದರು ಹಾಗೂ ಪಾಕಿಸ್ತಾನದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು ಎಂದು ಆರೋಪಿಸಿ ಪಾಕಿಸ್ತಾನ ಸೇನಾ ನ್ಯಾಯಾಲಯ ಕಳೆದ ಏಪ್ರಿಲ್‌ನಲ್ಲಿ ಮರಣದಂಡನೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಭಾರತ ಅಂತರರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿದ್ದು, ಜಾಧವ್‌ ಅವರಿಗೆ ವಿಧಿಸಿರುವ ಶಿಕ್ಷೆ ಜಾರಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಪಾಕ್‌ ನಿರ್ಧಾರ ಸ್ವಾಗತಾರ್ಹ: ಜಾಧವ್‌ ಭೇಟಿಗೆ ಅನುಮತಿ ನೀಡಿರುವ ಪಾಕಿಸ್ತಾನದ ನಿರ್ಧಾರವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ವಾಗತಿಸಿದೆ.

ಪಾಕಿಸ್ತಾನದ ನಿರ್ಧಾರ ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಸಚಿವಾಲಯ ಪ್ರತಿಕ್ರಿಯಿಸಿದೆ.

ಜಾಧವ್‌ ಪತ್ನಿ ಮತ್ತು ತಾಯಿ ಅವರ ಪಾಕಿಸ್ತಾನ ಭೇಟಿಯ ಬಗ್ಗೆ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT