ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಸ್ಥೆಯಿಂದ ಕೆಲವು ನಿರ್ದೇಶಕರ ಕೈಬಿಡಿ’

ಇನ್ಫೊಸಿಸ್‌ಗೆ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಬಾಲಕೃಷ್ಣನ್‌ ಒತ್ತಾಯ
Last Updated 9 ಡಿಸೆಂಬರ್ 2017, 19:50 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾರ್ಪೊರೇಟ್‌ ತತ್ವಗಳ ಪಾಲನೆಯಲ್ಲಿ ಲೋಪ ಎಸಗಿರುವುದಕ್ಕೆ ಸಂಬಂಧಿಸಿದಂತೆ ಕೆಲವು ನಿರ್ದೇಶಕರನ್ನು ಸಂಸ್ಥೆಯಿಂದ ಕೈಬಿಡಬೇಕು’ ಎಂದು ಇನ್ಫೊಸಿಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ವಿ. ಬಾಲಕೃಷ್ಣನ್‌ ಒತ್ತಾಯಿಸಿದ್ದಾರೆ.

ಸಂಸ್ಥೆಯ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ರಾಜೀವ್‌ ಬನ್ಸಲ್‌ ಅವರಿಗೆ ಗುತ್ತಿಗೆ ಒಪ್ಪಂದ ರದ್ದತಿ ಅನ್ವಯ ನೀಡಿದ ಗರಿಷ್ಠ ಪರಿಹಾರ ನೀಡಿಕೆಯಲ್ಲಿ ನಿಯಮಾವಳಿ ಉಲ್ಲಂಘಿಸಿದ ಪ್ರಕರಣ ಇತ್ಯಥ್ಯಕ್ಕೆ ಸಂಸ್ಥೆಯು ಷೇರು ನಿಯಂತ್ರಣ ಮಂಡಳಿಯ (ಸೆಬಿ) ಮೊರೆ ಹೋಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಲಕೃಷ್ಣನ್‌, ‘ಬನ್ಸಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಫೊಸಿಸ್‌ನ ಮಾಜಿ ಸಹ ಅಧ್ಯಕ್ಷ ರವಿ ವೆಂಕಟೇಶನ್‌ ಮತ್ತು ಲೆಕ್ಕಪತ್ರ ಸಮಿತಿ ಅಧ್ಯಕ್ಷೆ ರೂಪಾ ಕುಡ್ವಾ ಅವರು ಅಧಿಕಾರದಲ್ಲಿ ಮುಂದುವರಿಸುವುದು ಸೂಕ್ತವಲ್ಲ’ ಎಂದು ಹೇಳಿದ್ದಾರೆ.

‘ಸದ್ಯ ಸಂಸ್ಥೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನದಲ್ಲಿ ಇಟ್ಟುಕೊಂಡು ಆಡಳಿತ ಮಂಡಳಿ ಪುನರ್‌ರಚನೆ ಮಾಡುವ ಅಗತ್ಯವಿದೆ. ಸಮಗ್ರ ಮತ್ತು ವಿಶಾಲ ದೃಷ್ಟಿಕೋನ ಇರುವವರನ್ನು ನೇಮಿಸಬೇಕಾಗಿದೆ’ ಎಂದು ಸಲಹೆಯನ್ನೂ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ ಸ್ಥಾಪಕ ಎನ್‌.ಆರ್‌. ನಾರಾಯಣ ಮೂರ್ತಿ ಅವರನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಮೂರ್ತಿ ಅವರು ಅನಗತ್ಯವಾಗಿ ಆಡಳಿತ ಮಂಡಳಿಯ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಹಿಂದಿನ ಆಡಳಿತ ಮಂಡಳಿಯು ‘ಸೆಬಿ’ಗೆ ದೂರು ನೀಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಆಡಳಿತ ಮಂಡಳಿಯು ಮೂರ್ತಿ ಅವರ ವಿರುದ್ಧ ಮಾಡಿರುವ ಆರೋಪಕ್ಕೆ ಕ್ಷಮೆಯಾಚಿಸಬೇಕು. ಅವರ ವರ್ಚಸ್ಸಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು’ ಎಂದೂ ಬಾಲಕೃಷ್ಣನ್‌ ಒತ್ತಾಯಿಸಿದ್ದಾರೆ.

**

ಮೂರ್ತಿ ಅವರು, ಕಾರ್ಪೊರೇಟ್‌ ಆಡಳಿತ ತತ್ವಗಳ ಪಾಲನೆ ವಿಷಯದ‌ಲ್ಲಿ ಇನ್ಫೊಸಿಸ್‌ನಂಥ ಉತ್ತಮ ಸಂಸ್ಥೆಯ ಹಿತಾಸಕ್ತಿ ರಕ್ಷಣೆ ಮಾಡಿದ್ದಾರೆ.

–ವಿ. ಬಾಲಕೃಷ್ಣನ್‌, ಇನ್ಫೊಸಿಸ್‌ನ ಮಾಜಿ ಸಿಎಫ್ಓ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT