ಬುಧವಾರ, ಮಾರ್ಚ್ 3, 2021
19 °C

ಬಿಕ್ಕಟ್ಟಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ: ನುಗಡೋಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಕ್ಕಟ್ಟಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ: ನುಗಡೋಣಿ

ಕಲಬುರ್ಗಿ: ‘ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ರಚಿಸಿದ ವಚನಗಳನ್ನು ವೇದಿಕೆಯ ಮೇಲೆ ನಿಂತು ಮಾತನಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಶರಣರು, ಸೂಫಿಗಳು, ತತ್ವಪದಕಾರರು ಹಾಗೂ ಕೀರ್ತನೆಕಾರರ ವಿಚಾರಗಳನ್ನು ಮಾತನಾಡಲು ಭಯಪಡುವವಷ್ಟು ಅಭಿವ್ಯಕ್ತಿ ಸ್ವಾತಂತ್ರ್ಯದ ಬಿಕ್ಕಟ್ಟು ಸೃಷ್ಟಿಯಾಗಿದೆ’ ಎಂದು ಕಥೆಗಾರ ಡಾ.ಅಮರೇಶ ನುಗಡೋಣಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಪ್ರಸಾರಾಂಗ, ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠ, ಶರಣ ಹಡಪದ ಅಪ್ಪಣ್ಣ ಅಧ್ಯಯನ ಪೀಠದ ಸಹಯೋಗದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ‘ಸಾಮಾಜಿಕ ಸೌಹಾರ್ದತೆಯಡೆಗೆ ಸಾಹಿತ್ಯ’ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಶನಿವಾರ ಸಮಾರೋಪ ಭಾಷಣ ಮಾತನಾಡಿದರು.

‘ಸಂವಿಧಾನ ಒಪ್ಪುವುದಿಲ್ಲ ಎನ್ನುವ ಸಂಸ್ಕೃತಿ ನಮ್ಮ ನಾಡಿನಲ್ಲಿ ಬೆಳೆಯುತ್ತದೆ. ಹೀಗಿದ್ದಾಗ ನಮಗೆ ಸಿಟ್ಟು ಎಲ್ಲಿಂದ ಬರಬೇಕು. ಅಂಬೇಡ್ಕರ್‌ ಅವರನ್ನು ಒಪ್ಪುವುದಿಲ್ಲ, ಸಂವಿಧಾನವೇ ಬೇಡ ಎನ್ನುವವರರು ಇದ್ದಾರೆ. ಆಹಾರದ ಪದ್ಧತಿಯ ಮೇಲೆ ದಾಳಿ ನಡೆಸಲಾಗುತ್ತಿದೆ. ಅಂತರ್ಜಾತಿ ವಿವಾಹ ಸಹಿಸದ ಮನಃಸ್ಥಿತಿಗಳು ಹೆಚ್ಚುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಏಕರೂಪಿ ಸಂಸ್ಕೃತಿಯನ್ನು ಪೋಷಿಸಲಾಗುತ್ತಿದೆ. ಬಹುರೂಪಿ ಸಂಸ್ಕೃತಿಯನ್ನು ಮರೆಮಾಚಲಾಗುತ್ತಿದೆ. ಇದನ್ನು ಸಹಿಸಿಕೊಳ್ಳುವುದು ಹೇಗೆ? ನಮ್ಮ ಹಿರಿಯರು ಪ್ರತಿಪಾದಿಸಿರುವ ವಿಚಾರಗಳನ್ನು ಯುವ ಲೇಖಕರಿಗೆ ಹೇಳಲೇಬೇಕು. ಈ ಶಕ್ತಿಯನ್ನು ಶರಣ ಸಾಹಿತ್ಯ, ತತ್ವಪದ, ಸೂಫಿ ವಿಚಾರ ಹಾಗೂ ಕೀರ್ತನೆಗಳು ನೀಡುತ್ತವೆ. ಇವೆಲ್ಲವನ್ನು ಒಟ್ಟುಗೂಡಿಸಿಕೊಂಡು ಸಾಗಬೇಕಾಗಿದೆ’ ಎಂದು ತಿಳಿಸಿದರು.

‘ಬ್ರಿಟಿಷರ ಮಾದರಿಯ ಅಧ್ಯಯನ ಕ್ರಮಗಳಿಂದ ನಾವು ಹೊರಬರಬೇಕು. ಜಾಗತೀಕರಣ ಭಾರತೀಯ ಸಾಹಿತ್ಯದ ಮೇಲೂ ಅಗಾಧ ಪರಿಣಾಮವನ್ನು ಬೀರಿದೆ. 50 ವರ್ಷಗಳಲ್ಲಿ ನಮ್ಮ ಆಲೋಚನಾ ಕ್ರಮವನ್ನು ಇದು ಪ್ರಭಾವಿಸಿದೆ. ಈಗ ಮತ್ತೆ ಸೌಹಾರ್ದ ಸಾಹಿತ್ಯದ ಕಡೆಗೆ ನಾವು ಸಾಗಬೇಕಾಗಿದೆ’ ಎಂದು ನುಡಿದರು.

‘ಇನ್ನೊಬ್ಬರ ಕಷ್ಟಗಳನ್ನು ಆಲಿಸುವ, ವೀಕ್ಷಿಸುವ ವ್ಯವಧಾನವನ್ನು ಜಾಗತೀಕರಣ ಕಸಿದುಕೊಂಡಿದೆ. ನಮ್ಮ ಆಲೋಚನಾ ಕ್ರಮವನ್ನು ಜಾಗತೀಕರಣ ಬೆನ್ನಟ್ಟುತ್ತಿದೆ. ಶರಣರ, ಸೂಫಿಗಳ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ಹೇಗೆ ಸಾಗಿಸಬೇಕು ಎನ್ನುವುದು ಸವಾಲಾಗಿದೆ’ ಎಂದು ಹೇಳಿದರು.

‘ತತ್ವಪದಗಳನ್ನು ಅಕ್ಷರ ಮಾಧ್ಯಮಕ್ಕೆ ತಂದು ಅವುಗಳ ಚೈನನ್ಯವನ್ನು ನಾಶ ಮಾಡಿದ್ದೇವೆ. ಅವು ಜನ ಸಮುದಾಯದಲ್ಲಿ ಬದುಕಿದ್ದರೇ ಉತ್ತಮ. ಅವುಗಳನ್ನು ಅಕ್ಷರ ರೂಪಕ್ಕೆ ತರುವುದು ಎಂದರೆ ನೀರಲ್ಲಿದ್ದ ಮೀನುಗಳನ್ನು ಹೊರ ತೆಗೆದಂತೆ. ಜನಪದ, ತತ್ವಪದಗಳು ಜನರ ಮನಸ್ಸಿನಲ್ಲೇ ಇರಬೇಕು’ ಎಂದು ಹೇಳಿದರು.

ಸಾಹಿತಿ ವಿ.ಜಿ.ಪೂಜಾರ ಮಾತನಾಡಿ, ’ಕನ್ನಡ ಸಾಹಿತ್ಯ ಪರಂಪರೆಯು ಪ್ರಗತಿಪರ ವಿಚಾರಗಳನ್ನು ಪೋಷಿಸಿಕೊಂಡು ಬಂದಿದೆ. ಪರಧರ್ಮ, ಪರರ ವಿಚಾರಗಳನ್ನು ಸಹಿಸಿಕೊಳ್ಳುವುದು ಚಿನ್ನಕ್ಕಿಂತಲೂ ಶ್ರೇಷ್ಠ’ ಎಂದು ಹೇಳಿದರು.

ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ನಿರ್ದೇಶಕ ಪ್ರೊ.ಎಸ್‌.ಎಂ.ಹಿರೇಮಠ ಮಾತನಾಡಿ, ‘ಈ ವಿಚಾರ ಸಂಕಿರಣ ಧಾರವಾಡದಲ್ಲಿ ನಡೆಯುವ ಸಾಹಿತ್ಯ ಸಂಭ್ರಮದಂತೆ ನಡೆದಿದೆ. ನಮ್ಮ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲ ಆಗಲಿದೆ’ ಎಂದು ಹೇಳಿದರು.

ಸಿಂಡಿಕೇಟ್‌ ಸದಸ್ಯ ಈಶ್ವರ್‌ ಇಂಗನ್, ವಿತ್ತಾಧಿಕಾರಿ ಪ್ರೊ.ಲಕ್ಷ್ಮಣ ರಾಜನಾಳಕರ್ ಇದ್ದರು. ಡಾ.ಜೈಸೇನ ಪ್ರಸಾದ ನಿರೂಪಿಸಿ, ಡಾ.ಸುನೀಲಕುಮಾರ್ ಕಾಂಬಳೆ ವಂದಿಸಿದರು.

‘ಸಮ್ಮೇಳನ ಅಭೂತಪೂರ್ವ ಯಶಸ್ವಿ’

‘ಮೂರು ದಿನ ನಡೆದ ಸಾಮಾಜಿಕ ಸೌಹಾರ್ದತೆಯೆಡೆಗೆ ಸಾಹಿತ್ಯ ರಾಷ್ಟ್ರೀಯ ಸಮ್ಮೇಳನ ಯಶಸ್ಸು ಕಂಡಿದ್ದು ವಿವಿಧ ಸಾಹಿತ್ಯ ಪ್ರಾಕಾರಗಳ ಅರ್ಥಪೂರ್ಣ ಚರ್ಚೆ ನಡೆದಿದೆ’ ಎಂದು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್‌.ಟಿ.ಪೋತೆ ಹೇಳಿದರು.

‘ನಾಲ್ಕು ರಾಜ್ಯಗಳ ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡಿಸಿದ್ದಾರೆ. ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಮೊದಲ ದಿನ 2,500ಕ್ಕೂ ಹೆಚ್ಚು ಮಂದಿ ಉಪಸ್ಥಿತರಿದ್ದರು. ಎಲ್ಲ ಗೋಷ್ಠಿಗಳಲ್ಲೂ ವಿದ್ಯಾರ್ಥಿಗಳು ಸಕ್ರಿಯರಾಗಿದ್ದರು’ ಎಂದು ಅವರು ಸಮಾರೋಪ ಸಮಾರಂಭದಲ್ಲಿ ವಿವರ ನೀಡಿದರು.

‘ಪೆರಿಯಾರ್, ಲೋಹಿಯಾ, ಗಾಂಧಿ, ಶರಣರು, ತತ್ವಪದಕಾರರು, ಸೂಫಿಗಳು, ಕೀರ್ತನೆಕಾರರ ವಿಚಾರಗಳು ಒಂದೇ ವೇದಿಕೆಯಲ್ಲಿ ಮಂಡನೆಯಾಗಿದ್ದು, ವಿಶ್ವವಿದ್ಯಾಲಯದ ಘನತೆ ಹೆಚ್ಚಿಸಿವೆ’ ಎಂದು ಅವರು ಅಭಿಪ್ರಾಯಪಟ್ಟರು.

* * 

ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಹೊಸ ಅಧ್ಯಯನ ಕ್ರಮದಲ್ಲಿ ಮಂಡಿಸಬೇಕು. ಸಿದ್ಧ ಮಾದರಿಯಲ್ಲೇ ಮಂಡಿಸುವುದರಿಂದ ಯಾವುದೇ ಪ್ರಯೋಜನ ಇಲ್ಲ ಅಮರೇಶ ನುಗಡೋಣಿ, ಸಾಹಿತಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.