ಶನಿವಾರ, ಫೆಬ್ರವರಿ 27, 2021
28 °C

ಪಾದಚಾರಿ ಮಾರ್ಗಕ್ಕೆ ಒತ್ತಾಯಿಸಿ ಮಾನವ ಸರಪಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾದಚಾರಿ ಮಾರ್ಗಕ್ಕೆ ಒತ್ತಾಯಿಸಿ ಮಾನವ ಸರಪಣಿ

ಬೆಂಗಳೂರು: ಸಂಜಯನಗರ ವಾರ್ಡ್‌ನ ರಸ್ತೆಗಳಲ್ಲಿ ಸುಸಜ್ಜಿತ ಪಾದಚಾರಿ ಮಾರ್ಗ ನಿರ್ಮಿಸುವಂತೆ ಒತ್ತಾಯಿಸಿ ಸ್ಥಳೀಯ ನಿವಾಸಿಗಳು ಭಾನುವಾರ ಮಾನವ ಸರಪಣಿ ರಚಿಸಿದರು.

ರಾಧಾಕೃಷ್ಣ ದೇವಸ್ಥಾನ ಬಳಿಯಿಂದ ಆರಂಭವಾದ ಈ ಪ್ರತಿಭಟನೆಯಲ್ಲಿ ‘ರಾಜಿ ಬೇಡ– ಪಾದಚಾರಿ ಮಾರ್ಗ ಬೇಕು’ ಎಂಬ ಒಕ್ಕೊರಲ ಘೋಷಣೆ ಮೊಳಗಿತು. ಶಾಲಾ ವಿದ್ಯಾರ್ಥಿಗಳಿಂದ ಹಿಡಿದು 75 ವರ್ಷದ ವೃದ್ಧರೂ ಈ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ಸ್ಥಳಕ್ಕಾಗಮಿಸಿ ಪ್ರತಿಭಟನಾನಿರತರ ಅಹವಾಲು ಆಲಿಸಿದರು. ಪಾದಚಾರಿ ಮಾರ್ಗದ ದುಸ್ಥಿತಿ ಬಗ್ಗೆ ಹಾಗೂ ಇದರಿಂದ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸ್ಥಳೀಯರು ಆಯುಕ್ತರಿಗೆ ವಿವರಿಸಿದರು.

‘ಇಲ್ಲಿ ಕೆಲವು ಕಡೆ ಮಳೆ ನೀರು ಹರಿಯುವ ಚರಂಡಿಯ ಮೇಲೆ ಪಾದಚಾರಿ ನಿರ್ಮಿಸಲಾಗಿದೆ. ಇದಕ್ಕೆ ಮುಚ್ಚಿದ್ದ ಕಾಂಕ್ರೀಟ್‌ ಹಾಸು ಕಿತ್ತುಹೋಗಿದೆ. ಇತ್ತೀಚೆಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ಪಾದಚಾರಿ ಮಾರ್ಗದಲ್ಲಿ ಎಡವಿ ಬಿದ್ದಿದ್ದೆ’ ಎಂದು 76 ವರ್ಷದ ಶಂಕರನ್‌ ಅವರು ಕಹಿ ಅನುಭವ ಹಂಚಿಕೊಂಡರು.

‘ನಡೆದುಕೊಂಡು ಹೋಗುವುದಕ್ಕೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಹಿರಿಯ ನಾಗರಿಕರು ಹಾಗೂ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಅನೇಕರು ಬಿದ್ದು ಗಾಯಗೊಂಡಿದ್ದಾರೆ. ನಮಗೆ ಆದಷ್ಟು ಬೇಗ ಸುಸಜ್ಜಿತ ಪಾದಚಾರಿ ಮಾರ್ಗನಿರ್ಮಿಸಿಕೊಡಿ’ ಎಂದು ಸಿಟಿಜನ್ಸ್‌ ಫಾರ್‌ ಸಸ್ಟೈನೆಬಿಲಿಟಿ ಸಂಘಟನೆಯ ಸದಸ್ಯ ವಿಜ್ಞಾನ ಗೌಡ ಒತ್ತಾಯಿಸಿದರು.

‘ನಗರ ಭೂಸಾರಿಗೆ ನಿರ್ದೇಶನಾಲಯದವರು ಇಲ್ಲಿ ಸುಸಜ್ಜಿತ ಪಾದಚಾರಿ ಮಾರ್ಗವನ್ನು ಒಳಗೊಂಡ ರಸ್ತೆಗೆ ವಿನ್ಯಾಸ ರೂಪಿಸಿದ್ದರು. ಇದರಂತೆ ಭಾರತೀಯ ವಾಯುಪಡೆ ಕಚೇರಿ ಬಳಿ ಸುಮಾರು 100 ಮೀಟರ್‌ ಉದ್ದದ ಸುಸಜ್ಜಿತ ಪಾದಚಾರಿ ಮಾರ್ಗವನ್ನು ನಿರ್ಮಿಸಲಾಗಿದೆ. ಇದೇ ಮಾದರಿಯಲ್ಲಿ ವಾರ್ಡ್‌ನ ಎಲ್ಲಾ ರಸ್ತೆಗಳಲ್ಲೂ ಪಾದಚಾರಿ ಮಾರ್ಗ ನಿರ್ಮಿಸಬೇಕು’ ಎಂದು ಸಂಘಟನೆಯ ಸ್ಥಾಪಕ ಸದಸ್ಯ ಸತ್ಯಶಂಕರ್‌ ಆಗ್ರಹಿಸಿದರು.

‘ರಸ್ತೆ ಪಕ್ಕದ ಕಸದ ರಾಶಿ ನಡುವೆ ನಡೆದುಕೊಂಡು ಹೋಗಬೇಕಾದ ಸ್ಥಿತಿ ಇದೆ. ಇದನ್ನು ಎಷ್ಟು ದಿನ ಸಹಿಸಲು ಸಾಧ್ಯ’ ಎಂದು ಮನೋಜ್‌ ಕುಮಾರ್‌ ಪ್ರಶ್ನಿಸಿದರು.

‘ಇಲ್ಲಿ ಸುಸಜ್ಜಿತ ಪಾದಚಾರಿ ಮಾರ್ಗ ನಿರ್ಮಿಸಲು ಸಾಧ್ಯವಾದ ಪ್ರಯತ್ನ ಮಾಡಿದ್ದೆ. ವಾಹನ ನಿಲುಗಡೆಗೆ ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕೆ ಇಲ್ಲಿನ ವ್ಯಾಪಾರಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಏನೇ ವಿರೋಧ ಬಂದರೂ ಇಲ್ಲಿ ಸುಸಜ್ಜಿತ ಪಾದಚಾರಿ ಮಾರ್ಗ ನಿರ್ಮಿಸಲಾಗುವುದು’ ಎಂದು ಮಂಜುನಾಥ ಪ್ರಸಾದ್‌ ಭರವಸೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.