7

‘ಖಾಸಗಿ ಶಿಕ್ಷಣ ಸಂಸ್ಥೆಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಲಿ’

Published:
Updated:
‘ಖಾಸಗಿ ಶಿಕ್ಷಣ ಸಂಸ್ಥೆಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಲಿ’

ಬೀದರ್: ‘ರಾಜ್ಯ ಸರ್ಕಾರ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದು ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಘದ ಅಧ್ಯಕ್ಷ ಬಸವರಾಜ ಭರಶೆಟ್ಟಿ ಆಗ್ರಹಿಸಿದರು.

‘ಸರ್ಕಾರ ಮಾಡಬೇಕಾದ ಕೆಲಸವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ. ಆದರೂ, ಅವುಗಳ ಸಮಸ್ಯೆಗೆ ಸ್ಪಂದಿಸದ ಕಾರಣ ಕನ್ನಡ ಮಾಧ್ಯಮದ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಮುಚ್ಚುವ ಹಂತವನ್ನು ತಲುಪಿವೆ’ ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಬೇಡಿಕೆ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ತರಲು ಡಿಸೆಂಬರ್ 12 ರಂದು ಹೈದರಾಬಾದ್ ಕರ್ನಾಟಕ ಭಾಗದ ಆರೂ ಜಿಲ್ಲೆಗಳ 42 ತಾಲ್ಲೂಕುಗಳಲ್ಲಿ ಶಾಸಕರು, ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

‘ಅನುದಾನಿತ ಶಾಲೆಗಳ ಮಕ್ಕಳಿಗೆ ನೀಡಲಾಗುವ ಉಚಿತ ಪಠ್ಯಪುಸ್ತಕ, ನೋಟ್‌ಪುಸ್ತಕ, ಸಮವಸ್ತ್ರ, ಬಿಸಿಯೂಟ, ಕ್ಷೀರಭಾಗ್ಯ, ಸೈಕಲ್ ಸೌಲಭ್ಯಗಳನ್ನು ಅನುದಾನ ರಹಿತ ಶಾಲಾ ಮಕ್ಕಳಿಗೂ ವಿಸ್ತರಿಸಬೇಕು’ ಎಂದು ಆಗ್ರಹಿಸಿದರು.

‘ಆರ್‌ಟಿಇ ಅಡಿ ಅರ್ಜಿ ಸಲ್ಲಿಸಿದ ಮಕ್ಕಳ ಪಾಲಕರ ಅಪೇಕ್ಷೆಗೆ ಅನುಗುಣವಾಗಿ ಶಾಲೆಗಳ ಆಯ್ಕೆಗೆ ಅವಕಾಶ ಕೊಡಬೇಕು. ಆಯ್ಕೆ ಮಾಡಿಕೊಂಡ ಶಾಲೆಯಲ್ಲಿ ಸ್ಥಾನಗಳು ಲಭ್ಯ ಇದ್ದರೂ ಬೇರೆ ಶಾಲೆಗಳಿಗೆ ಹಂಚಿಕೆ ಮಾಡುತ್ತಿರುವುದರಿಂದ ಪಾಲಕರಿಗೆ ಅನಾನುಕೂಲ ಆಗುತ್ತಿದೆ’ ಎಂದು ಆರೋಪಿಸಿದರು.

‘ಸರ್ಕಾರದಿಂದ ಅನುಮತಿ ಪಡೆದು 1 ರಿಂದ 5ನೇ ತರಗತಿವರೆಗೆ ಶಾಲೆ ನಡೆಸುತ್ತಿರುವ ಆಡಳಿತ ಮಂಡಳಿಗಳಿಗೆ 6 ರಿಂದ 8ನೇ ವರೆಗೆ ಅನುಮತಿ ನೀಡಬೇಕು. ಅನುದಾನ ರಹಿತ ಶಾಲೆ ಆಡಳಿತ ಮಂಡಳಿಯ ಅಧೀನದಲ್ಲಿರುವ ಕೃಷಿ ಭೂಮಿಯನ್ನು ಕಂದಾಯ ನಿಯಮ 109 ಅಡಿಯಲ್ಲಿ ಶಾಲೆ ಹೆಸರಲ್ಲಿ ಖರೀದಿಗೆ ಪರವಾನಗಿ ಕೊಡಬೇಕು. ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರಿಗೆ ಕೊಡಲಾಗುವ ಮಾಸಿಕ ₹ 5,500 ಗೌರವ ಧನವನ್ನು ಅನುದಾನ ರಹಿತ ಶಾಲಾ ಶಿಕ್ಷಕರಿಗೂ ನೀಡಬೇಕು. ಸಂವಿಧಾನದ 371(ಜೆ) ಕಲಂ ತಿದ್ದುಪಡಿ ಕಾಯ್ದೆ ಅಡಿ ಹೈದರಾಬಾದ್ ಕನಾಟಕ ಭಾಗದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಉತ್ತೇಜಿಸಲು ನೀತಿ ರೂಪಿಸಬೇಕು. ಸಂವಿಧಾನದ 371(ಜೆ) ಕಲಂ ತಿದ್ದುಪಡಿ ಕಾಯ್ದೆಯ 22 ಇ ಮತ್ತು 22 ಜಿ ಅನ್ವಯ ಸಹಾಯ ಅನುದಾನ ಕೊಡುವ ಬಗೆಗೆ ನೀತಿ ರೂಪಿಸಬೇಕು. ಸಂಸ್ಥೆಗಳಿಗೆ ಎಲ್.ಟಿ. (2) ಅಡಿ ವಿದ್ಯುತ್ ಸರಬರಾಜು ಮಾಡಬೇಕು’ ಎಂದು ಒತ್ತಾಯಿಸಿದರು.

ಸಂಘದ ಗೌರವಾಧ್ಯಕ್ಷ ರೇವಣಸಿದ್ದಪ್ಪ ಜಲಾದೆ, ಉಪಾಧ್ಯಕ್ಷ ಬಾಬುರಾವ್ ಗೊಂಡ, ಖಜಾಂಚಿ ರಾಜೇಂದ್ರ ಮಣಿಗೇರಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry