ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟಿಎಫ್‌ ಹೂಡಿಕೆ ಹೆಚ್ಚಳ ಆಯ್ಕೆ ಅವಕಾಶ

Last Updated 18 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಷೇರುಪೇಟೆಗಳಲ್ಲಿ ವಹಿವಾಟು ನಡೆಸುವ ಹೂಡಿಕೆ ನಿಧಿಗಳಲ್ಲಿ (ಇಟಿಎಫ್‌), ಭವಿಷ್ಯ ನಿಧಿಯ ಹೂಡಿಕೆ ಮೊತ್ತವನ್ನು ಹೆಚ್ಚಿಸುವ ಅಥವಾ ಇಳಿಸುವ ಆಯ್ಕೆ ಅವಕಾಶವು ಶೀಘ್ರದಲ್ಲಿಯೇ ಸದಸ್ಯರಿಗೆ ದೊರೆಯಲಿದೆ.

ಇದುವರೆಗಿನ ಇಟಿಎಫ್‌ ಹೂಡಿಕೆಯ ಲಾಭವನ್ನು ಸದಸ್ಯರ ಭವಿಷ್ಯ ನಿಧಿ ಖಾತೆಗೆ ಮೂರು ತಿಂಗಳಲ್ಲಿ ವರ್ಗಾಯಿಸಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ನಿರ್ಧರಿಸಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ, ತಮ್ಮ ಹೂಡಿಕೆ ಮೊತ್ತ ಹೆಚ್ಚಿಸುವ ಅಥವಾ ಇಳಿಸುವ ಅವಕಾಶವನ್ನು ಸದಸ್ಯರಿಗೆ ಒದಗಿಸಿ ಕೊಡಲು ನಿರ್ಧರಿಸಿದೆ.

‘ಇಟಿಎಫ್‌ಗಳಲ್ಲಿನ ಹೂಡಿಕೆಯನ್ನು ಭವಿಷ್ಯ ನಿಧಿ ಖಾತೆಗಳಿಗೆ ವರ್ಗಾಯಿಸಲು ನೆರವಾಗುವ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಗಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಎರಡರಿಂದ ಮೂರು ತಿಂಗಳ ಸಮಯಾವಕಾಶ ಬೇಕಾಗಲಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ, ಷೇರುಗಳಲ್ಲಿ ತಮ್ಮ ಹೂಡಿಕೆ ಮೊತ್ತ ನಿರ್ಧರಿಸುವ ಅವಕಾಶವನ್ನು ಸದಸ್ಯರಿಗೆ ನೀಡುವುದನ್ನು ಜಾರಿಗೆ ತರಲಾಗುವುದು’ ಎಂದು ‘ಇಪಿಎಫ್‌ಒ’ದ ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತ ವಿ. ಪಿ. ಜಾಯ್‌ ಹೇಳಿದ್ದಾರೆ. ಸದ್ಯಕ್ಕೆ ಷೇರು ಹೂಡಿಕೆಯ ಕಡ್ಡಾಯ ಮಿತಿ ಶೇ 15ಕ್ಕೆ ನಿಗದಿಪಡಿಸಲಾಗಿದೆ. ಹೂಡಿಕೆ ಮಿತಿಯನ್ನು ಇದಕ್ಕಿಂತ ಹೆಚ್ಚಿಸುವ ಅಥವಾ ತಗ್ಗಿಸುವ ಅವಕಾಶವನ್ನು ಸದಸ್ಯರಿಗೆ ನೀಡಲು ಭವಿಷ್ಯ ನಿಧಿ ಸಂಘಟನೆಯ ಟ್ರಸ್ಟಿಗಳ ಕೇಂದ್ರೀಯ ಮಂಡಳಿಯು ಕಳೆದ ವಾರ ನಿರ್ಧರಿಸಿದೆ.

ಭವಿಷ್ಯ ನಿಧಿ ಸಂಘಟನೆಯಲ್ಲಿನ ಹೂಡಿಕೆ ಮಾಡಬಹುದಾದ ಠೇವಣಿಗಳ ಶೇ 15ರಷ್ಟನ್ನು ಇಟಿಎಫ್‌ಗಳಲ್ಲಿ ತೊಡಗಿಸಲಾಗುತ್ತಿದೆ.

‘ಇಟಿಎಫ್‌’ಗಳಲ್ಲಿ ತೊಡಗಿಸಿದ ಮೊತ್ತದಲ್ಲಿನ ಚಂದಾದಾರರ ಪಾಲನ್ನು (ಇಟಿಎಫ್‌ ಯುನಿಟ್) ಅವರ ಭವಿಷ್ಯ ನಿಧಿ ಖಾತೆಗೆ ವರ್ಗಾಯಿಸುವ ಕುರಿತು ಈಗಾಗಲೇ ನಿರ್ಧಾರಕ್ಕೆ ಬರಲಾಗಿದೆ. 

‘ಇಪಿಎಫ್‌ಒ’ದಲ್ಲಿನ ಹೂಡಿಕೆ ಮಾಡಬಹುದಾದ ಠೇವಣಿಯನ್ನು ಇಟಿಎಫ್‌ಗಳಲ್ಲಿ ತೊಡಗಿಸುವುದು 2015ರ ಆಗಸ್ಟ್‌ನಿಂದ ಜಾರಿಗೆ ಬಂದಿದೆ. ಆರಂಭದಲ್ಲಿ ಇದು ಶೇ 5ರಷ್ಟಿತ್ತು. ಸದ್ಯಕ್ಕೆ ಶೇ 15ಕ್ಕೆ ತಲುಪಿದೆ.

‘ಇ‍ಪಿಎಫ್‌ಒ’ ಇದುವರೆಗೆ ಇಟಿಎಫ್‌ಗಳಲ್ಲಿ ₹ 41,967 ಕೋಟಿ ತೊಡಗಿಸಿದೆ. ಈ ಹೂಡಿಕೆಗೆ ಶೇ 17.23ರಷ್ಟು ಲಾಭ ಮರಳಿದೆ. ಇದೇ ಮೊದಲ ಬಾರಿಗೆ ₹ 2,500 ಕೋಟಿ ಮೊತ್ತದ ಇಟಿಎಫ್‌ಗಳನ್ನು ಮಾರಾಟ ಮಾಡಿ ನಗದು ಮಾಡಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT