ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್‌–ಅನುಷ್ಕಾ ಸಪ್ತಪದಿ; ಶುಭಾಶಯಗಳ ಮಹಾಪೂರ

Last Updated 11 ಡಿಸೆಂಬರ್ 2017, 20:14 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಬಾಲಿವುಡ್‌ ನಟಿ ಹಾಗೂ ನಿರ್ಮಾಪಕಿ ಅನುಷ್ಕಾ ಶರ್ಮಾ ಸೋಮವಾರ ಸಪ್ತಪದಿ ತುಳಿದಿದ್ದಾರೆ.

ಇಟಲಿಯ ಟಸ್ಕಾನ್‌ ನಗರದ ಸಮೀಪವಿರುವ ಬೊರ್ಗೊ ಫಿನೊಚಿಯೆಟಾ ರೆಸಾರ್ಟ್‌ನಲ್ಲಿ ‘ವಿರುಷ್ಕಾ’, ಕುಟುಂಬದ ಆಪ್ತ ಗುರು, ಮಹಾರಾಜ್‌ ಅನಂತ ಬಾಬಾ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.

ಹಿರಿಯ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌, ಯುವರಾಜ್‌ ಸಿಂಗ್‌, ಬಾಲಿವುಡ್‌ ನಟರಾದ ಶಾರೂಖ್‌ ಖಾನ್‌, ಅಮೀರ್‌ ಖಾನ್‌ ಮತ್ತು ಕೊಹ್ಲಿ ಅವರ ಬಾಲ್ಯದ ಕೋಚ್‌ ರಾಜ್‌ಕುಮಾರ್‌ ಶರ್ಮಾ ಮತ್ತು ಕುಟುಂಬದ ಆಪ್ತರು ಸಮಾರಂಭದಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

ಕೊಹ್ಲಿ ಮತ್ತು ಅನುಷ್ಕಾ ಹಿಂದಿನ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹಲವು ಬಾರಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಕ್ರಿಕೆಟಿಗ ಯುವರಾಜ್‌ ಸಿಂಗ್‌, ಜಹೀರ್‌ ಖಾನ್‌ ಅವರ ಆರತಕ್ಷತೆ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ನೃತ್ಯ ಮಾಡಿ ಸುದ್ದಿಯಾಗಿದ್ದರು.

ಇವರು ಜನವರಿ 4 ರಂದು ಬಾಂದ್ರಾದಲ್ಲಿ ವಿವಾಹ ನೋಂದಣಿ ಮಾಡಿಕೊಳ್ಳಲು ನಿರ್ಧರಿಸಿದ್ದು, ಅನುಷ್ಕಾ ಈಗಾಗಲೇ ನೋಂದಣಿ ಪತ್ರ ಪಡೆದು ಕೊಂಡಿದ್ದಾರೆ ಎಂದೂ ಹೇಳಲಾಗಿತ್ತು.

ಕೊಹ್ಲಿ, ಜನವರಿಯಲ್ಲಿ ಟೆಸ್ಟ್‌ ಸರಣಿ ಆಡಲು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಹೀಗಾಗಿ ಡಿಸೆಂಬರ್‌ 27ರ ಒಳಗೆ ನೋಂದಣಿ ಮಾಡಿಕೊಳ್ಳಲು ಇಬ್ಬರೂ ನಿರ್ಧರಿಸಿರುವುದಾಗಿ ಅವರ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.


-ಮೆಹಂದಿ ಕಾರ್ಯಕ್ರಮದ ಬಳಿಕ ಒಟ್ಟಾಗಿ ಕಾಣಿಸಿಕೊಂಡ ನವ ಜೋಡಿ

ಮುಂಬೈ ಮತ್ತು ದೆಹಲಿಯಲ್ಲಿ ಆರತಕ್ಷತೆ: ಡಿಸೆಂಬರ್‌ 21ರಂದು ನವದೆಹಲಿಯ ತಾಜ್‌ ಡಿಪ್ಲೋಮ್ಯಾಟಿಕ್‌ ಎನ್‌ಕ್ಲೇವ್‌ನ ದರ್ಬಾರ್‌ ಹಾಲ್‌ನಲ್ಲಿ ಹಾಗೂ ಡಿಸೆಂಬರ್‌ 26 ಮುಂಬೈಯಲ್ಲಿ ಈ ಜೋಡಿಯ ವಿವಾಹ ಆರತಕ್ಷತೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ.

ಇದರಲ್ಲಿ ಬಾಲಿವುಡ್‌ ತಾರೆಯರು, ಭಾರತ ಕ್ರಿಕೆಟ್‌ ತಂಡದ ಆಟಗಾರರು ಹಾಗೂ ಇತರ ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ.

ಶುಭಾಶಯಗಳ ಮಹಾಪೂರ: ನವದಂಪತಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಕ್ರಿಕೆಟಿಗ ಶಿಖರ್‌ ಧವನ್‌, ಉಮೇಶ್‌ ಯಾದವ್‌, ಹರಭಜನ್‌ ಸಿಂಗ್‌, ಪಾಕಿಸ್ತಾನದ ಹಿರಿಯ ಆಟಗಾರರಾದ ಶಾಹಿದ್‌ ಅಫ್ರಿದಿ, ಶೋಯಬ್‌ ಅಖ್ತರ್‌, ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಸೇರಿದಂತೆ ಅನೇಕ ಕ್ರೀಡಾ ತಾರೆಯರು ಕೊಹ್ಲಿ ಮತ್ತು ಅನುಷ್ಕಾ ಅವರಿಗೆ ಶುಭ ಕೋರಿದ್ದಾರೆ.

ಅನುಷ್ಕಾಗೆ ಬೆಂಗಳೂರಿನ ನಂಟು: ಅನುಷ್ಕಾ 1988ರ ಮೇ 1 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನಿಸಿದರು. ಅವರ ತಂದೆ ಅಜಯ್‌ ಕುಮಾರ್‌ ಶರ್ಮಾ ಸೇನೆಯಲ್ಲಿ ಕರ್ನಲ್‌ ಆಗಿದ್ದರು. ಅವರಿಗೆ ಬೆಂಗಳೂರಿಗೆ ವರ್ಗಾವಣೆಯಾಗಿದ್ದರಿಂದ ಹಲವು ವರ್ಷಗಳ ಕಾಲ ಇಲ್ಲಿಯೇ ನೆಲೆಸಿದ್ದರು. ಹೀಗಾಗಿ ಅನುಷ್ಕಾ ತಮ್ಮ ಬಾಲ್ಯದ ದಿನಗಳನ್ನು ಉದ್ಯಾನನಗರಿಯಲ್ಲೇ ಕಳೆದಿದ್ದರು. ಇಲ್ಲಿನ ಆರ್ಮಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ಅವರು ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT