ಶನಿವಾರ, ಫೆಬ್ರವರಿ 27, 2021
31 °C

ಬಿಸ್‌ವೈ ವಿರುದ್ಧದ ಮೇಲ್ಮನವಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಸ್‌ವೈ ವಿರುದ್ಧದ ಮೇಲ್ಮನವಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಅಸ್ತು

ನವದೆಹಲಿ: ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ವಿರುದ್ದದ ತನಿಖೆಗೆ ತಡೆ ನೀಡಿದ್ದ ರಾಜ್ಯ ಹೈಕೋರ್ಟ್‌ನ ಮಧ್ಯಂತರ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಒಪ್ಪಿಗೆ ಸೂಚಿಸಿದೆ.

ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್.ಕೆ. ಅಗರ್‌ವಾಲ್‌ ಹಾಗೂ ಅಭಯ್‌ ಮನೋಹರ್‌ ಸಪ್ರೆ ಅವರಿದ್ದ ಪೀಠ, ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಖಲಿಸಿದ್ದ ಎಫ್‌ಐಆರ್‌ಗೆ ತಡೆ ನೀಡಿ ಕಳೆದ ಸೆಪ್ಟೆಂಬರ್ 22ರಂದು ಹೈಕೋರ್ಟ್ ನೀಡಿದ್ದ ಆದೇಶವನ್ನು ಅಮಾನತಿನಲ್ಲಿಡಲು ನಿರಾಕರಿಸಿತು.

ಹೈಕೋರ್ಟ್‌ ಆದೇಶವನ್ನು ಅಮಾನತಿನಲ್ಲಿಡಬೇಕು ಎಂಬ ಸರ್ಕಾರದ ಮೇಲ್ಮನವಿ ಕುರಿತು ನಾಲ್ಕು ವಾರಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಯಡಿಯೂರಪ್ಪ ಅವರಿಗೆ ನ್ಯಾಯಪೀಠವು ನೋಟಿಸ್‌ ಜಾರಿ ಮಾಡಿತು.

ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಸೆಕ್ಷನ್‌ 19 (3)ರ ಅನ್ವಯ ತನಿಖೆ ನಡೆಸಲು ಕಾನೂನಿನಲ್ಲಿ ಅವಕಾಶವಿದ್ದರೂ, ಹೈಕೋರ್ಟ್‌ ತನಿಖೆಗೆ ತಡೆ ನೀಡಿ 120 ಪುಟಗಳ ಆದೇಶ ಹೊರಡಿಸಿದೆ ಎಂದು ಸರ್ಕಾರದ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು.

2008ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು, ಶಿವರಾಮ ಕಾರಂತ ಬಡಾವಣೆಗಾಗಿ ಸುತ್ತಲಿನ 17 ಗ್ರಾಮಗಳ 3,546 ಎಕರೆ ಭೂಮಿಯ ಸ್ವಾಧೀನ ಪಡೆಸಿಕೊಳ್ಳುವ ಪ್ರಕ್ರಿಯೆಗೆ ಹೊರಡಿಸಲಾಗಿದ್ದ ಅಧಿಸೂಚನೆಯಿಂದ 257 ಎಕರೆ ಭೂಮಿಯನ್ನು ಹೊರಗಿರಿಸಲು ಹಣ ಪಡೆದಿರುವ ಸಾಧ್ಯತೆ ಇದೆ ಎಂಬ ಆರೋಪಗಳೂ ಕೇಳಿಬಂದಿವೆ ಎಂದು ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯಲ್ಲಿ ತಿಳಿಸಲಾಗಿದೆ.

‘ನಿಯೋಜಿತ ಬಡಾವಣೆಗಾಗಿ ಸ್ವಾಧೀನ ಪಡಿಸಿಕೊಳ್ಳಲಿರುವ ಪ್ರದೇಶದ ಮಧ್ಯ ಭಾಗದಲ್ಲೇ ಈ 257 ಎಕರೆ ಭೂಮಿ ಇದೆ’ ಎಂದು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಆಯುಕ್ತರು ತಿಳಿಸಿದರೂ, ಅಂತಿಮ ಅಧಿಸೂಚನೆಯ ವೇಳೆ ಆ ಭೂಮಿಯನ್ನು ಕೈಬಿಡುವಲ್ಲಿ ಯಶಸ್ವಿಯಾಗಿರುವ ಯಡಿಯೂರಪ್ಪ, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಮೇಲ್ಮನವಿಯಲ್ಲಿ ಆರೋಪಿಸಲಾಗಿದೆ.

ಅಯ್ಯಪ್ಪ ದೊರೆ ಎಂಬುವವರು ಸಲ್ಲಿಸಿದ್ದ ದೂರಿನ ಮೇರೆಗೆ ಕಳೆದ ಆಗಸ್ಟ್‌ನಲ್ಲಿ ಎಸಿಬಿಯ ಬೆಂಗಳೂರು ವಿಭಾಗವು ಯಡಿಯೂರಪ್ಪ ಹಾಗೂ ಇತರ ಐವರ ವಿರುದ್ಧ ಎಫ್‌ಐಆರ್‌ ದಾಖಲಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.