ಶುಕ್ರವಾರ, ಫೆಬ್ರವರಿ 26, 2021
24 °C
ಮುಖ್ಯಮಂತ್ರಿ ನೇತೃತ್ವದಲ್ಲಿ ಡಿ.30ಕ್ಕೆ ಪರಿಶಿಷ್ಟ ಜಾತಿಯ ಮುಖಂಡರ ಸಭೆ

ಸದಾಶಿವ ಆಯೋಗದ ವರದಿ ಶಿಫಾರಸಿಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸದಾಶಿವ ಆಯೋಗದ ವರದಿ ಶಿಫಾರಸಿಗೆ ಒತ್ತಾಯ

ಬೆಂಗಳೂರು: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯ ಶಿಫಾರಸುಗಳ ಅನುಷ್ಠಾನಕ್ಕೆ ಒತ್ತಾಯಿಸಿ ಮಾದಿಗರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸಾವಿರಾರು ಮಂದಿ ಸ್ವಾತಂತ್ರ್ಯ ಉದ್ಯಾನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಇದಕ್ಕೂ ಮುನ್ನ, ಕೂಡಲಸಂಗಮದಿಂದ ಕಾಲ್ನಡಿಗೆ ಜಾಥಾ ಕೈಗೊಂಡಿದ್ದ 125 ಮಂದಿಯನ್ನು ಬಾಪೂಜಿನಗರದಿಂದ ಮೆರವಣಿಗೆಯಲ್ಲಿ ಸ್ವಾತಂತ್ರ್ಯ ಉದ್ಯಾನಕ್ಕೆ ಕರೆತರಲಾಯಿತು.

‘ಮಾದಿಗ ಸಮುದಾಯವು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಜನಾಂಗವನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾದ ತುರ್ತು ಅವಶ್ಯಕತೆ ಇದೆ. ಇದೆಲ್ಲವೂ ಸದಾಶಿವ ಆಯೋಗದ ವರದಿ ಅನುಷ್ಠಾನದಿಂದ ಮಾತ್ರ ಸಾಧ್ಯ. ಹೀಗಾಗಿ, ರಾಜ್ಯ ಸರ್ಕಾರ ಈ ವರದಿಯನ್ನು ಅಂಗೀಕರಿಸಬೇಕು. ವರದಿಯ ಶಿಫಾರಸುಗಳ ತ್ವರಿತ ಜಾರಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ಜೈ ಭೀಮ್, ಜೈ ಕಾನ್ಶಿರಾಂ ಒಗ್ಗೂಡಬೇಕು’: ‘ದಲಿತರಲ್ಲಿ ಬಲಗೈ ಹಾಗೂ ಎಡಗೈ ಸಂಘರ್ಷಕ್ಕೆ ಬೇರೆ ಬೇರೆ ಇತಿಹಾಸವಿದೆ. ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಮಾದಿಗ ಸಮುದಾಯ ಹಾಗೂ ಹಿಂದುಳಿದ ವರ್ಗಗಳು ಒಟ್ಟಾಗಿ ಹೋರಾಡಬೇಕಿದೆ. ಜೈ ಭೀಮ್ ಎನ್ನುವ ಬಾಯಿಯಲ್ಲಿ ಜೈ ಕಾನ್ಶಿರಾಂ ಎನ್ನಬೇಕು. ಜೈ ಭೀಮ್, ಜೈ ಕಾನ್ಶಿರಾಂ ಒಂದಾದಾಗ ಮಾತ್ರ ಹೋರಾಟ ಯಶಸ್ವಿಯಾಗುತ್ತದೆ’ ಎಂದು ಹಿರಿಯ ವಕೀಲ ಡಾ.ಸಿ.ಎಸ್‌.ದ್ವಾರಕನಾಥ್‌ ಅಭಿಪ್ರಾಯಪಟ್ಟರು.

‘ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಗಳಿವೆ. ಅಸ್ಪೃಶ್ಯರು ಹಾಗೂ ಸ್ಪೃಶ್ಯರನ್ನು ಒಂದೇ ಪಟ್ಟಿಯಲ್ಲಿ ಸೇರಿಸಿರುವುದು ಅವೈಜ್ಞಾನಿಕ. ಹಿಂದುಳಿದ ವರ್ಗಗಳ ಪಟ್ಟಿಯಲ್ಲೂ ಬಲಿಷ್ಠ ಸಮುದಾಯಗಳು ಹಾಗೂ ತಳ ಸಮುದಾಯಗಳನ್ನು ಸೇರಿಸಿದ್ದರಿಂದ ಕೆಲವು ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಪ್ರವರ್ಗ–1ರಲ್ಲಿ 97 ಜಾತಿಗಳಿದ್ದು, ಈ ಪೈಕಿ ಮೀಸಲಾತಿ ಸೌಲಭ್ಯ ಪಡೆದುಕೊಂಡಿರುವುದು 23 ಜಾತಿಗಳು ಮಾತ್ರ. ಪ್ರವರ್ಗ– 2ಎನಲ್ಲಿ 102 ಜಾತಿಗಳಿದ್ದು, ಈ ಪೈಕಿ 27 ಜಾತಿಗಳು ಮಾತ್ರ ಮೀಸಲಾತಿ ಸೌಲಭ್ಯ ಪಡೆದಿವೆ’ ಎಂದರು.

‘ಸದಾಶಿವ ಆಯೋಗದ ವರದಿ ಹಾಗೂ ಜಾತಿವಾರು ಸಮೀಕ್ಷೆ ವರದಿಗಳೆರಡೂ ಬಹಿರಂಗವಾಗಬೇಕಾದ ಕಾಲಘಟ್ಟವಿದು. ಏಕೆಂದರೆ ಅವೆರಡು ಒಂದಕ್ಕೊಂದು ಪೂರಕವಾಗಿವೆ. ವರದಿಗಳನ್ನು ಮಂಡಿಸಿದರೆ ಹಿಂದುಳಿದ ವರ್ಗಗಳ ಹಾಗೂ ಮಾದಿಗರ ಸ್ಥಾನಮಾನ ಏನೆಂಬುದು ಸ್ಪಷ್ಟವಾಗುತ್ತದೆ’ ಎಂದರು.

ಸಚಿವರತ್ತ ನೀರಿನ ಬಾಟಲಿ ಎಸೆದರು

‘ಡಿ.30ಕ್ಕೆ ಪರಿಶಿಷ್ಟ ಜಾತಿ ಮುಖಂಡರ ಸಭೆ ನಡೆಸುತ್ತೇವೆ. ವರದಿಯಲ್ಲಿರುವ ಅಂಶಗಳ ಜಾರಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ‘ಶಿಫಾರಸು ಮಾಡುವ ಬಗ್ಗೆ ಇಂದೇ ತೀರ್ಮಾನವಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಭಟನಾ ಸ್ಥಳಕ್ಕೆ ಬರಬೇಕು’ ಎಂದು ಪಟ್ಟು ಹಿಡಿದರು.

ಕೆಲವರು ನೀರಿನ ಖಾಲಿ ಬಾಟಲಿಗಳನ್ನು ಸಚಿವರತ್ತ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕೆಲವರು ಕುರ್ಚಿಗಳನ್ನು ಮುರಿದು ಹಾಕಿದರು. ‘ಮಾದಿಗರಿಗೆ ಸರ್ಕಾರಿ ನೌಕರಿಯಲ್ಲಿ ಘೋರ ಅನ್ಯಾಯ’ ಎಂಬ ಕಿರುಹೊತ್ತಗೆಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

‘ಇಷ್ಟು ವರ್ಷಗಳ ಕಾಲ ತಾಳ್ಮೆಯಿಂದ ಕಾದಿದ್ದೀರಿ. ಡಿ.30ರವರೆಗೆ ಕಾಯಿರಿ. ಅಂದು ಮುಖ್ಯಮಂತ್ರಿ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳೋಣ’ ಎಂದು ಸಚಿವರು ಮನವಿ ಮಾಡಿದರು. ಇದಕ್ಕೆ ಕಿವಿಗೊಡದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

‘ವರದಿ ಜಾರಿಗೆ ಬಾಲಕರಿಬ್ಬರ ವಿರೋಧ’

‘ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ರಾಜ್ಯದ ಇಬ್ಬರು ಬಾಲಕರ ವಿರೋಧವಿದೆ. ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರೇ ಈ ಬಾಲಕರು. ನಾ‌ಲ್ಕು ದಶಕಗಳ ದಲಿತ ಹೋರಾಟಗಳ ಮುಂದೆ ಅವರಿಬ್ಬರೂ ಚಿಕ್ಕವರು. ಹೀಗಾಗಿ, ಅವರನ್ನು ಬಾಲಕರೆಂದು ಕರೆಯದೆ ಮತ್ತೇನೆಂದು ಕರೆಯಬೇಕು’ ಎಂದು ಸಾಹಿತಿ ಕೆ.ಬಿ.ಸಿದ್ದಯ್ಯ ವ್ಯಂಗ್ಯವಾಡಿದರು.

‘ಈ ಬಾಲಕರಿಗೆ ನಮ್ಮ ಹೋರಾಟದ ಬಗ್ಗೆ ಗೊತ್ತಿಲ್ಲ. ಅವರ ಮಾತಿಗೆ ಕಿವಿಗೊಡಬಾರದು’ ಎಂದು ಅವರು ಸಚಿವರನ್ನು ಕೇಳಿಕೊಂಡರು.

‘ಹಾವನೂರು ವರದಿ ಜಾರಿಗೆ ವಿರೋಧ ವ್ಯಕ್ತವಾಗಿತ್ತು. ರಾಜ್ಯದ ಬೀದಿ ಬೀದಿಗಳಲ್ಲಿ ಆ ವರದಿಯನ್ನು ಸುಟ್ಟು ಹಾಕಿ ಪ್ರತಿಭಟನೆ ನಡೆಸಲಾಗಿತ್ತು. ಆದರೆ, ದೇವರಾಜ್ ಅರಸು ಯಾವುದೇ ವಿರೋಧಕ್ಕೆ ಎದೆಗುಂದದೆ ವರದಿ ಜಾರಿಗೊಳಿಸಿದರು. ಅದೇ ಮಾದರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ಮಾದಿಗರ ಪ್ರಮುಖ ಬೇಡಿಕೆಗಳು

* ಮಾದಿಗರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು.

* ಮಾತಂಗ ಮಹರ್ಷಿಯ ಜನ್ಮದಿನವನ್ನು ಸರ್ಕಾರವೇ ಆಚರಿಸಬೇಕು. ಅಂದು ಸಾರ್ವಜನಿಕ ರಜೆ ಘೋಷಿಸಬೇಕು.

* ಶರಣ ಮಾದಾರ ಚನ್ನಯ್ಯ ಅಧ್ಯಯನ ಪೀಠವನ್ನು ಕೂಡಲ ಸಂಗಮದಲ್ಲಿ ಸ್ಥಾಪಿಸಬೇಕು.

* ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು 25 ಕ್ಷೇತ್ರಗಳಲ್ಲಿ ಮಾದಿಗರಿಗೆ ಟಿಕೆಟ್‌ ನೀಡಬೇಕು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.