4

ಸುಗಮ ಸಂಚಾರಕ್ಕೆ ಫಾಸ್ಟ್ಯಾಗ್‌

Published:
Updated:
ಸುಗಮ ಸಂಚಾರಕ್ಕೆ ಫಾಸ್ಟ್ಯಾಗ್‌

ಹೆದ್ದಾರಿಗಳಲ್ಲಿ ಸಾಗುವವರ ದೊಡ್ಡ ತಲೆನೋವೆಂದರೆ ಟೋಲ್‌ ಪ್ಲಾಜಾಗಳಲ್ಲಿ  ವಾಹನ ನಿಲ್ಲಿಸಿ ಕಾಯುವುದು. ಚಿಲ್ಲರೆ ಸಮಸ್ಯೆ, ಕಂಪ್ಯೂಟರ್ ತೊಂದರೆ, ಜಾಗ ಇಲ್ಲದಿರುವುದು ಅಥವಾ ಇತರೆ ಹಲವು ಸಮಸ್ಯೆಗಳಿಂದ ವಾಹನಗಳು ನಿಂತರೆ ಪ್ರಯಾಣಿಕರು ಹೈರಾಣಾಗುತ್ತಾರೆ.

ಆದರೆ, ಇನ್ನುಮುಂದೆ ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ಕೇಂದ್ರಗಳಲ್ಲಿ ಪಾವತಿಗೆ ಕಾಯಬೇಕಾಗಿಯೇ ಇಲ್ಲ. ಇಂಧನ ಮತ್ತು ಸಮಯ ಉಳಿಸುವ ಉದ್ದೇಶದಿಂದ  ಹೆದ್ದಾರಿ ಪ್ರಾಧಿಕಾರವು ‘ಫಾಸ್ಟ್ಯಾಗ್‌’ ಎಂಬ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೊಳಿಸಿದೆ. 2016 ಏಪ್ರಿಲ್‌ನಲ್ಲಿ ಜಾರಿಗೆ ಬಂದಿದ್ದರೂ ಡಿಸೆಂಬರ್ 1ರಿಂದ ನಾಲ್ಕು ಚಕ್ರದ ವಾಹನಗಳಲ್ಲಿ ಇದರ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಟೋಲ್‌ ಪಾವತಿಗೆ ಪ್ರಿಪೇಯ್ಡ್‌ ಮಾದರಿಯೇ ಫಾಸ್ಟ್ಯಾಗ್‌. ಎಲೆಕ್ಟ್ರಾನಿಕ್‌ ಟೋಲ್‌ ಸಂಗ್ರಹ ಕಾರ್ಯಕ್ರಮದ ಭಾಗವಾಗಿ ಇದನ್ನು ಜಾರಿ ಮಾಡಲಾಗುತ್ತಿದೆ.

ಇದೇ ರೀತಿಯ ಹೈವೆ ಟ್ಯಾಗ್ ಬ್ರಾಂಡ್‌ಗಳು ಈಗಾಗಲೇ ಹಲವು ದೇಶಗಳಲ್ಲಿ ಚಾಲ್ತಿಯಲ್ಲಿವೆ. ಆಸ್ಟ್ರೇಲಿಯಾದಲ್ಲಿ ಇವುಗಳನ್ನು ‘ಈಸಿ ಪಾಸ್’ ಮತ್ತು ‘ಸನ್ ಪಾಸ್’ ಮತ್ತು ‘ಇ -ಪಾಸ್’ ಎಂದು ಮತ್ತು ದುಬೈನಲ್ಲಿ ‘ಸಾಲಿಕ್’ ಎಂದು ಕರೆಯುತ್ತಾರೆ.

ಫಾಸ್ಟ್ಯಾಗ್‌ ಬಳಕೆಯಿಂದ ಟೋಲ್‌ಗಳಲ್ಲಿ ಇಂಧನ ವ್ಯರ್ಥವಾಗುವುದನ್ನು ತಡೆಯಬಹುದಾಗಿದೆ. ಇದರಿಂದ ದೇಶದ ಅರ್ಥವ್ಯವಸ್ಥೆಗೆ ನೆರವಾಗುತ್ತದೆ.

ಭಾರತೀಯ ಹೆದ್ದಾರಿ ನಿರ್ವಹಣಾ ಕಂಪೆನಿ ನಿಯಮಿತ (ಐಎಚ್‌ಎಂಸಿಎಲ್‌), ಭಾರತೀಯ ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ (ಎನ್‌ಪಿಸಿಐ)ಗಳು 'ಫಾಸ್ಟ್ಯಾಗ್‌’  ಜಾರಿಗೊಳಿಸುತ್ತಿರುವ ಸಂಸ್ಥೆಗಳು. ಸದ್ಯ 370   ಟೋಲ್ ಕೇಂದ್ರಗಳಲ್ಲಿ ಫಾಸ್ಟ್ಯಾಗ್‌ ಕಾರ್ಯನಿರ್ವಹಿಸುತ್ತಿದೆ. ಭವಿಷ್ಯದಲ್ಲಿ ಇನ್ನಷ್ಟು ಟೋಲ್‌ಗಳಲ್ಲಿ ಇದರ ಬಳಕೆ ಜಾರಿಗೆ ತರಲಾಗುವುದು.

ಫಾಸ್ಟ್ಯಾಗ್‌ ಹೇಗಿರುತ್ತದೆ?: ವಾಹನಗಳ ಮುಂಭಾಗದಲ್ಲಿನ ಗಾಜು (ವಿಂಡ್‌ಸ್ಕ್ರೀನ್)ಗೆ ಫಾಸ್ಟ್ಯಾಗ್‌ ಅಂಟಿಸಲಾಗುತ್ತದೆ. ಪ್ಯಾಕ್‌ ಮಾಡಿದ ವಸ್ತುಗಳ ಮೇಲೆ ಇರುವಂತೆಯೇ ಇದರಲ್ಲಿ ಬಾರ್‌ ಕೋಡ್‌ ಇರುತ್ತದೆ. ಈ ಬಾರ್‌ ಕೋಡ್‌ ಅನ್ನು  ಟೋಲ್‌ಕೇಂದ್ರದಲ್ಲಿನ ಇಟಿಸಿ ಲೇನ್‌ಗಳಲ್ಲಿ ಎಲೆಕ್ಟ್ರಾನಿಕ್ ವಿಧಾನದಿಂದ ರೀಡ್‌ ಆಗುತ್ತಿದ್ದಂತೆಯೇ ಖಾತೆಯಲ್ಲಿ ಹಣ ಇದ್ದರೆ ದಾರಿ ಮುಕ್ತವಾಗುತ್ತದೆ. ಫಾಸ್ಟ್ಯಾಗ್‌ನಲ್ಲಿ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್‌ ಬಳಕೆಯಾಗುತ್ತದೆ. ಇಲ್ಲಿ ವಾಹನಗಳು ಟೋಲ್‌ ಮೂಲಕ ಹಾದು ಹೋಗುತ್ತಿದ್ದಂತಯೇ ಈ ಮಾಹಿತಿಯು ಟೋಲ್‌ ಕೇಂದ್ರದಲ್ಲಿನ ಸರ್ವರ್‌ನಲ್ಲಿ ದಾಖಲಾಗುತ್ತದೆ. ಆ ಬಳಿಕ ವಾಹನದ ಪ್ರೀಪೇಯ್ಡ್‌  ಖಾತೆಯಿಂದ ನಿಗದಿತ ಶುಲ್ಕ ಕಡಿತಗೊಳ್ಳುತ್ತದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಇತ್ತೀಚೆಗೆ ಹೊರಡಿಸಿದ ಅಧಿಸೂಚನೆ ಪ್ರಕಾರ, ವಾಹನಗಳ ಮುಂಭಾಗದಲ್ಲಿನ ಗಾಜು (ವಿಂಡ್‌ಸ್ಕ್ರೀನ್)ಗೆ ಫಾಸ್ಟ್ಯಾಗ್‌ ಅನ್ನು ವಾಹನ ತಯಾರಿಕಾ ಕಂಪೆನಿಗಳು ಇಲ್ಲವೇ ಡೀಲರ್‌ಗಳು ಅಂಟಿಸುವುದು ಕಡ್ಡಾಯ.

ಫಾಸ್ಟ್ಯಾಗ್‌ ಹೊಂದಿರುವ ವಾಹನಗಳು ಸಾಗಲು ದೇಶದ ಹಲವು ಟೋಲ್‌ ಕೇಂದ್ರಗಳಲ್ಲಿ ಪ್ರತ್ಯೇಕ ಪಥವನ್ನೇ ನಿರ್ಮಿಸಲಾಗಿದೆ. ಇದರಿಂದ ಫಾಸ್ಟ್ಯಾಗ್‌ ಇಲ್ಲದ ವಾಹನಗಳೂ ಒಂದೇ ಟೋಲ್‌ ಮಾರ್ಗದಲ್ಲಿ ಬರುವುದನ್ನು ತಡೆಯಬಹುದಾಗಿದೆ. ಆದರೆ ಈ ಬಗ್ಗೆ ಮಾಹಿತಿ ಇಲ್ಲದ ಚಾಲಕರು ಫಾಸ್ಟ್ಯಾಗ್‌ ಪಥದಲ್ಲೇ ಎಲ್ಲ ವಾಹನಗಳನ್ನು ನುಗ್ಗಿಸುವುದರಿಂದ ಹಲವರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಸರಿಯಾದ ಮಾಹಿತಿ ಫಲಕಗಳನ್ನೂ ಅಳವಡಿಸಬೇಕು ಎಂದು ವಾಹನಗಳ ಚಾಲಕರು ಒತ್ತಾಯ ಮಾಡಿದ್ದಾರೆ.

ಹಲವು ವಿಧಗಳ ಮೂಲಕ ಫಾಸ್ಟ್ಯಾಗ್ ಅನ್ನು ರಿಚಾರ್ಜ್ ಮಾಡಿಕೊಳ್ಳಬಹುದು. ಪ್ರತಿಯೊಂದು ವ್ಯವಹಾರ ಹಾಗೂ ಬ್ಯಾಲೆನ್ಸ್ ಕಡಿಮೆಯಾದಾಗ ಗ್ರಾಹಕರ ಮೊಬೈಲ್‌ಗೆ  ಸಂದೇಶ ರವಾನೆಯಾಗಲಿದೆ. ಒಂದು ವೇಳೆ ಹೆಚ್ಚು ಮೊತ್ತದ ಹಣ ಕಡಿತವಾಗಿದ್ದರೆ ಈ ಬಗ್ಗೆ ಸರಿ‍ಪಡಿಸಿಕೊಳ್ಳಬಹುದು. ವಾಹನಗಳ ಮಾಲೀಕರು ತಮ್ಮ ಅಗತ್ಯಕ್ಕೆ ಬೇಕಾದಷ್ಟು ಹಣವನ್ನು ರೀಚಾರ್ಜ್‌ ಮಾಡಿಕೊಳ್ಳಬಹುದು. ಅನ್‌ಲೈನ್‌ನಲ್ಲಿ ರಿಚಾರ್ಜ್‌ ಮಾಡಿಕೊಳ್ಳುವವರಿಗೆ ಸ್ವಲ್ಪ ಸೇವಾ ಶುಲ್ಕ ವಿಧಿಸಲಾಗುತ್ತದೆ.

ಬ್ಯಾಂಕ್‌ಗಳ ನೆರವು: ಫಾಸ್ಟ್ಯಾಗ್‌ ಖರೀದಿ, ರಿಚಾರ್ಜ್‌ ಮತ್ತು ಇತರ ಸೇವೆ ಹಲವು ಬ್ಯಾಂಕ್‌ಗಳಲ್ಲಿ ದೊರೆಯುತ್ತದೆ. ಫಾಸ್ಟ್ಯಾಗ್‌ ಬ್ಲಾಕ್ ಆದರೆ, ಕಳೆದು ಹೋದರೆ ಬ್ಯಾಂಕ್‌ಗಳ ಸಹಾಯವಾಣಿಗೆ ಕರೆ ಮಾಡಿ ಸರಿಪಡಿಸಿಕೊಳ್ಳಬಹುದು. ಹೊಸ ಫಾಸ್ಟ್ಯಾಗ್‌ ಖಾತೆ ಆರಂಭ ಮಾಡಿದರೆ ಹಳೆಯದರ ಹಣವನ್ನು ಹೊಸದಕ್ಕೆ ವರ್ಗಾವಣೆ ಮಾಡಬಹುದು.

ಒಂದಷ್ಟು ಪ್ರಶ್ನೆಗಳು, ಉತ್ತರಗಳು

* ಫಾಸ್ಟ್ಯಾಗ್‌ ಕಡ್ಡಾಯವೇ? ‌‌

ಸದ್ಯಕ್ಕೆ ಕಡ್ಡಾಯವಲ್ಲ,  ಮುಂದಿನ ದಿನಗಳಲ್ಲಿ ಕೆಲವು ಟೋಲ್‌ಗಳಲ್ಲಿ ಕಡ್ಡಾಯವಾಗಬಹುದು.

* ನನ್ನ ಬಳಿ ಎರಡು ವಾಹನಗಳಿವೆ, ಒಂದೇ ಫಾಸ್ಟ್ಯಾಗ್‌ ಬಳಸಬಹುದೇ?

ಇಲ್ಲ. ಎರಡೂ ಪ್ರತ್ಯೇಕವಾಗಿರಬೇಕು. ಕೆವೈಸಿ ದಾಖಲೆ ಸಲ್ಲಿಸಿ ಇದನ್ನು ಖರೀದಿಸಿರುವುದರಿಂದ ಎಲ್ಲಾ ವಾಹನಕ್ಕೂ ಬೇರೆ ಬೇರೆಯಾಗಿರಬೇಕು. ಹಾಗೇನಾದರೂ  ಒಂದನ್ನೇ ಬಳಸಿದರೆ ಟ್ಯಾಗ್‌ ಬ್ಲಾಕ್‌ ಆಗಬಹುದು. ಇದೇ ರೀತಿ ಒಂದೇ ವಾಹನ ಒಂದಕ್ಕಿಂತ ಹೆಚ್ಚು ಫಾಸ್ಟ್ಯಾಗ್‌ ಬಳಸುವಂತಿಲ್ಲ. ಕಾರ್‌ಗಾಗಿ ಖರೀದಿ ಮಾಡಿದ್ದನ್ನು ಟ್ರಕ್‌ಗೆ ಬಳಸುವಂತಿಲ್ಲ.

* ಫಾಸ್ಟ್ಯಾಗ್‌ ಕಳೆದು ಹೋದರೆ ಏನು ಮಾಡಬೇಕು?

ಯಾವ ಏಜೆನ್ಸಿಯಿಂದ ಪಡೆದಿದ್ದೀರಿ ಅಲ್ಲಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಅವರು ಬ್ಲಾಕ್‌ ಮಾಡುತ್ತಾರೆ. ಹೊಸದನ್ನು ಖರೀದಿಸಿದ ನಂತರ ಹಳೆಯದರಲ್ಲಿದ್ದ ಹಣವನ್ನು ವರ್ಗಾಯಿಸಬಹುದು.

* ಈ ಹಿಂದೆ ಖರೀದಿ ಮಾಡಿದ ಫಾಸ್ಟ್ಯಾಗ್‌ ಬಳಸಬಹುದೇ?

ಕೇವಲ ಆರ್‌ಎಫ್‌ಐಡಿ ಟ್ಯಾಗ್ ಇರುವುದನ್ನೇ ಬಳಸಬೇಕು. ಸಮಸ್ಯೆಯಾದರೆ ಪಿಒಎಸ್ ಕೇಂದ್ರವನ್ನು ಸಂಪರ್ಕಿಸಬಬಹುದು.  ಎಲ್ಲಾ ರೀತಿಯ ಟ್ಯಾಗ್‌ಗಳು ಫಾಸ್ಟ್ಯಾಗ್‌ ಲೇನ್‌ಗಳಲ್ಲಿ ಸರಿ ಹೊಂದುವುದಿಲ್ಲ.

* ನನ್ನ ವಾಹನ ಮಾರಬೇಕೆಂದಿದ್ದೇನೆ ಆಗ ಫಾಸ್ಟ್ಯಾಗ್‌ ಏನು ಮಾಡಬೇಕು?

ಒಂದು ವೇಳೆ ಮಾರಬೇಕಿದ್ದರೆ ಇಲ್ಲವೇ ವರ್ಗಾಯಿಸಬೇಕಿದ್ದರೆ  ಖರೀದಿ ಎಲ್ಲಿ ಮಾಡಲಾಗಿದೆಯೋ ಆಯಾ ಏಜೆನ್ಸಿಗಳೇ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಇದೇ ರೀತಿ ಹಾನಿಗೊಳಗಾದರೂ ಸಹ.

* ಒಂದು ನಗರದಿಂದ ಇನ್ನೊಂದು ಕಡೆಗೆ ವರ್ಗವಾದರೆ ಫಾಸ್ಟ್ಯಾಗ್‌ ಏನು ಮಾಡಬೇಕು?

ಫಾಸ್ಟ್ಯಾಗ್‌ ಅನ್ನು ದೇಶದ ಯಾವುದೇ ಹೆದ್ದಾರಿಗಳಲ್ಲಿ ಟೋಲ್‌ಗಳಲ್ಲಿ ಬಳಸಬಹುದು. ನಗರ ಮತ್ತು ವಿಳಾಸ ಬದಲಾದರೆ ಖರೀದಿ ಮಾಡಿದ ಏಜೆನ್ಸಿಗೆ ತಿಳಿಸಬೇಕು.

* ರಾಜ್ಯ ಹೆದ್ದಾರಿಗಳ ಟೋಲ್‌ಗಳಲ್ಲಿ ಇದನ್ನು ಬಳಸಬಹುದೇ?

ಮುಂದಿನ ದಿನಗಳಲ್ಲಿ ರಾಜ್ಯ ಹೆದ್ದಾರಿಗಳ ಟೋಲ್‌ಗಳಲ್ಲೂ ಫಾಸ್ಟ್ಯಾಗ್‌ ಬಳಕೆ ಜಾರಿ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಚಿಂತನೆ ನಡೆಸಿದೆ.

ಫಾಸ್ಟ್ಯಾಗ್‌ ಸಹಾಯವಾಣಿ

ಐಸಿಐಸಿಐ ಬ್ಯಾಂಕ್‌ 18002100104

ಆ್ಯಕ್ಸಿಸ್‌ ಬ್ಯಾಂಕ್‌ 18001035577

ಐಡಿಎಫ್‌ಸಿ ಬ್ಯಾಂಕ್‌ 18002669970

ಪೇಟಿಎಂ 18001026480

***

ಅನುಕೂಲಗಳು?

* ಚಿಲ್ಲರೆಗಾಗಿ ಕಾಯಬೇಕಿಲ್ಲ

* ಸಮಯ ಮತ್ತು ಇಂಧನ ಉಳಿತಾಯ

* ಶುಲ್ಕ ಪಾವತಿ ಬಗ್ಗೆ ಎಸ್‌ಎಂಎಸ್‌ ಸಂದೇಶ

* ಮಾಲಿನ್ಯ ನಿಯಂತ್ರಣ

* ಆನ್‌ಲೈನ್‌ ರೀಚಾರ್ಜ್‌ ಸೌಲಭ್ಯ

* ಟೋಲ್‌ ಶುಲ್ಕ ಪಾವತಿಗೆ ನಗದು ಕೊಂಡೊಯ್ಯುವ ಅಗತ್ಯ ಇಲ್ಲ

* ಫಾಸ್ಟ್ಯಾಗ್‌ ಗ್ರಾಹಕರ ಜಾಲತಾಣದಲ್ಲಿ ಟೋಲ್‌ ಶುಲ್ಕ ಪಾವತಿಗೆ ಸಂಬಂಧಿಸಿದ ಮಾಹಿತಿ ಲಭ್ಯ

* ಕಡಿಮೆ ಸಿಬ್ಬಂದಿ ಸಾಕು

***

ಎಲ್ಲೆಲ್ಲಿ ಫಾಸ್ಟ್ಯಾಗ್‌ ಲಭ್ಯ

* ಐಸಿಐಸಿಐ ಬ್ಯಾಂಕ್‌, ಆಕ್ಸಿಸ್‌ ಬ್ಯಾಂಕ್‌, ಐಡಿಎಫ್‌ಸಿ ಬ್ಯಾಂಕ್‌

* ಪೇಟಿಎಂ

* ಕೆಲವು ಟೋಲ್ ಪ್ಲಾಜಾಗಳಲ್ಲಿ

***

ಯಾವ ವಾಹನಕ್ಕೆ ಎಷ್ಟು ಠೇವಣಿ

ವಾಹನ ಟ್ಯಾಗ್‌ ಬಣ್ಣ ಟ್ಯಾಗ್‌ ಠೇವಣಿ ಖಾತೆಯಲ್ಲಿರಬೇಕಾದ ಕನಿಷ್ಠ ಹಣ

* ಕಾರ್/ಜೀಪ್‌/ ವ್ಯಾನ್‌ ನೇರಳೆ ₹200 ₹100

* ಟಾಟಾ ಏಸ್‌, ಮಿನಿ ಲಘು ವಾಣಿಜ್ಯ ವಾಹನ ನೇರಳೆ ₹200 ₹100

* ಲಘು ವಾಣಿಜ್ಯ ವಾಹನ ಕಿತ್ತಳೆ ₹300 ₹140

* ಟ್ರಕ್‌ 3 ಆ್ಯಕ್ಸಲ್‌ ಹಳದಿ ₹500 ₹300

* ಬಸ್‌ 2 ಆ್ಯಕ್ಸಲ್‌ ಹಸಿರು ₹400 ₹300

* ಟ್ರ್ಯಾಕ್ಟರ್‌/ಟ್ರೇಲರ್‌ ಜತೆಗೆ ಗುಲಾಬಿ ₹500 ₹300

*ಅರ್ಥ್‌ ಮೂವಿಂಗ್/ ಭಾರಿ ವಾಹನ ಕಪ್ಪು ₹500 ₹300

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry