ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಮಾಕ್ರಟಿಕ್‌ ಪಕ್ಷಕ್ಕೆ ಅಲಬಾಮ ಸೆನೆಟ್‌: ಟ್ರಂಪ್‌ಗೆ ಮುಂಖಭಂಗ

Last Updated 13 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ರಿಪಬ್ಲಿಕನ್‌ ಸ್ಟೇಟ್‌ ಆಫ್‌ ಅಲಬಾಮದ ಸೆನೆಟ್‌ ಸದಸ್ಯರಾಗಿ ಡೆಮಾಕ್ರಟಿಕ್‌ ಪಕ್ಷದ ಡೌಗ್‌ ಜೋನ್ಸ್‌ ಆಯ್ಕೆಯಾಗಿದ್ದಾರೆ. 25 ವರ್ಷಗಳಲ್ಲಿ ಪಕ್ಷದಿಂದ ಆಯ್ಕೆಯಾದ ಮೊದಲ ಸದಸ್ಯ ಇವರು.

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಬೆಂಬಲಿತ ಅಭ್ಯರ್ಥಿ ರಾಯ್‌ ಮೂರೆ ಪರಾಭವಗೊಂಡಿದ್ದಾರೆ. ಹದಿಹರೆಯದವರ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಚುನಾವಣಾ ಪ್ರಚಾರದ ವೇಳೆ ಮೂರೆ ವಿರುದ್ಧ ಕೇಳಿ ಬಂದಿತ್ತು.

ಮೂರೆ ಅವರ ಸೋಲು ಟ್ರಂಪ್‌ ಪಾಲಿಗೆ ಭಾರೀ ರಾಜಕೀಯ ಹಿನ್ನಡೆಯಾಗಿದೆ. ಅಲಬಾಮದಲ್ಲಿ ಮೂರೆ ಪರ ಟ್ರಂಪ್‌ ಬೃಹತ್‌  ರ‍್ಯಾಲಿ ನಡೆಸಿದ್ದರು. ಮೂರೆ ವಿರುದ್ಧ ಆರೋಪ ಕೇಳಿ ಬಂದಾಗ ನ್ಯಾಷನಲ್‌ ರಿಪಬ್ಲಿಕನ್‌ ಪಕ್ಷದ ಹಲವು ಸದಸ್ಯರು ಅಂತರ ಕಾಯ್ದುಕೊಂಡಿದ್ದರು. ಆದರೆ, ಟ್ರಂಪ್‌ ಅವರು ಟ್ವೀಟ್‌ ಮತ್ತು ಸಾರ್ವಜನಿಕ ಹೇಳಿಕೆಗಳ ಮೂಲಕ ಮೂರೆ ಅವರಿಗೆ ಧೈರ್ಯ ತುಂಬಿದ್ದರು.

ಜೋನ್ಸ್‌ ಅವರಿಗೆ ಶೇ 49.92 ಮತ್ತು ಮೂರೆ ಅವರಿಗೆ 48.38ರಷ್ಟು ಮತಗಳು ಲಭಿಸಿವೆ ಎಂದು ಅಲಬಾಮ ರಾಜ್ಯ ಕಾರ್ಯದರ್ಶಿ ತಿಳಿಸಿದ್ದಾರೆ. ಆದರೆ ಮೂರೆ ಅವರು ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಮರು ಎಣಿಕೆಗೆ ಒತ್ತಾಯಿಸಿದ್ದಾರೆ.

ನೂತನ ಸೆನೆಟ್‌ ಸದಸ್ಯರು ಮುಂದಿನ ವರ್ಷ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಜೋನ್ಸ್‌ ಅವರ ಆಯ್ಕೆ ತೀರಾ ಅನಿರೀಕ್ಷಿತ. ನೂರು ಸದಸ್ಯರಿರುವ ಸೆನೆಟ್‌ನಲ್ಲಿ ರಿಪಬ್ಲಿಕನ್‌ ಪಕ್ಷದ ಬಲ 51ರಿಂದ 49ಕ್ಕೆ ಇಳಿದಿದೆ.

1970ರ ದಶಕದಲ್ಲಿ ಮೋರೆ ಅವರು ತಮ್ಮ 30ರ ವಯಸ್ಸಿನಲ್ಲಿ ಸರ್ಕಾರಿ ವಕೀಲರಾಗಿದ್ದಾಗ ಹರೆಯದ ಹೆಣ್ಣುಮಕ್ಕಳನ್ನು ಲೈಂಗಿಕ  ಉದ್ದೇಶಕ್ಕೆ ಬಳಸಿಕೊಂಡಿದ್ದರು ಎಂಬ ಆರೋಪ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೇಳಿಬಂದಿತ್ತು.

ಜೋನ್ಸ್‌ ಅವರನ್ನು ಟ್ವೀಟ್‌ ಮೂಲಕ ಟ್ರಂಪ್‌ ಅಭಿನಂದಿಸಿದ್ದಾರೆ. ‘ಜೋನ್ಸ್‌ ಅವರದು ಕಠಿಣ ಹೋರಾಟದ ಜಯ’ ಎಂದು ಟ್ರಂಪ್‌ ಅಭಿನಂದನಾ ಸಂದೇಶದಲ್ಲಿ ತಿಳಿಸಿದ್ದಾರೆ. ಮತದಾನದ ಮೇಲೆ ಯಾವುದೇ ವಿಷಯ ಪ್ರಭಾವ ಬೀರಿದ್ದರೂ, ‘ಜಯ ಜಯವೇ’ ಎಂದು ಹೇಳಿದ್ದಾರೆ.

‘ಅಲಬಾಮದ ಜನರು ಬಹಳ ಒಳ್ಳೆಯವರು. ರಿಪಬ್ಲಿಕನ್‌ ಪಕ್ಷವು ಕಳೆದುಕೊಂಡಿರುವ ಸ್ಥಾನವನ್ನು ಕಡಿಮೆ ಅವಧಿಯಲ್ಲಿ ಮತ್ತೆ ಪಡೆಯಲಿದೆ’ ಎಂದೂ ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT