ಶನಿವಾರ, ಫೆಬ್ರವರಿ 27, 2021
31 °C
ಹುಮನಾಬಾದ್‌: ಸಾಧನಾ ಸಂಭ್ರಮಾಚರಣೆಯಲ್ಲಿ ಸಿದ್ದರಾಮಯ್ಯ ಘೋಷಣೆ

ಕಾರಂಜಾ: ಪುನರ್ವಸತಿಗೆ ವಿಶೇಷ ಪ್ಯಾಕೇಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರಂಜಾ: ಪುನರ್ವಸತಿಗೆ ವಿಶೇಷ ಪ್ಯಾಕೇಜ್

ಹುಮನಾಬಾದ್: ಕಾರಂಜಾ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವುದಕ್ಕೆ ವಿಶೇಷ ಪ್ಯಾಕೇಜ್‌ ಬಿಡುಗಡೆಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.

ಇಲ್ಲಿನ ರಥ ಮೈದಾನದಲ್ಲಿ ಬುಧವಾರ ನಡೆದ ಹುಮನಾಬಾದ್ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಜಲಾಶಯಕ್ಕೆ 7 ಟಿಎಂಸಿ ನೀರು ಬಂದಾಗ ಕಾರಂಜಾ ಹಿನ್ನೀರು ಸಂತ್ರಸ್ತರ ವಸತಿ ಪ್ರದೇಶಕ್ಕೆ ನುಗ್ಗುತ್ತಿರುವ ಕಾರಣ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪ್ಯಾಕೇಜ್‌ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದ ಅವರು, ಜಿಲ್ಲೆಯ ನೀರಾವರಿ ಯೋಜನೆಗಳಿಗೆ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ₹935ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ನಮ್ಮನ್ನು ಟೀಕಿಸುವ ಯಡಿಯೂರಪ್ಪ ಸರ್ಕಾರದಿಂದ ₹50ಕೋಟಿ ಅನುದಾನವೂ ನೀಡಿಲ್ಲ’ ಎಂದು ದೂರಿದರು.

‘ಜಿಲ್ಲೆಯಲ್ಲಿ ₹1,500ಕೋಟಿ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸುತ್ತಿದ್ದು, ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ₹248.47ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಕಾಮಗಾರಿ ತೀವ್ರಗತಿಯಲ್ಲಿ ನಡೆಯಲಿವೆ’ ಎಂದರು.

ಸಚಿವ ಸ್ಥಾನ ಸಿಗಬೇಕಿತ್ತು: ಹುಮನಾಬಾದ್ ವಿಧಾನಸಭಾ ಕ್ಷೇತ್ರದಿಂದ 3ಬಾರಿ ಶಾಸಕರಾಗಿ ಆಯ್ಕೆಗೊಂಡು ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ರಾಜಶೇಖರ ಬಿ.ಪಾಟೀಲ ಅವರಿಗೆ ಸಚಿವ ಸ್ಥಾನ ಸಿಗಬೇಕಿತ್ತು. ಕಾರಣಾಂತರ ತಪ್ಪಿದರೂ ಕಿಂಚಿತ್ತೂ ಬೇಸರ ಪಡದೇ ಅತ್ಯಂತ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ₹5ಕೋಟಿ ದೇಣಿಗೆ ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ರಾಜಶೇಖರ ಬಿ.ಪಾಟೀಲ ಶಾಸಕರಾಗಿ ಮತ್ತೆ ಆಯ್ಕೆ ಆಗುತ್ತಾರೆ’ ಎಂದು ಭವಿಷ್ಯ ನುಡಿದರು.

‘ಸಿದ್ದರಾಮಯ್ಯ ಅವರು, ಹುಮನಾಬಾದ್ ಕ್ಷೇತ್ರದ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಏನೇ ಕೇಳಿದರೂ ಇಲ್ಲ ಎಂದಿಲ್ಲ. ಬಿಎಸ್‌ಎಸ್‌ಕೆ ₹10ಕೋಟಿ ಸಾಲಕ್ಕೆ ಖಾತ್ರಿ ನೀಡಿರುವುದು ಸ್ವಾಗತಾರ್ಹ ಎಂದ ಶಾಸಕ ರಾಜಶೇಖರ ಬಿ.ಪಾಟೀಲ, ಕಾರ್ಖಾನೆ ಅಭಿವೃದ್ಧಿಗೆ ಇನ್ನೂ ₹10ಕೋಟಿ ಸಾಲಕ್ಕಾಗಿ ಖಾತ್ರಿ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಟೀಕೆಗೆ ಕಿವಿಗೊಡುವುದಿಲ್ಲ: ಚುನಾವಣೆ ಬಂದಾಗಲೊಮ್ಮೆ ಕಾಂಗ್ರೆಸ್‌ ಅನ್ನು ಪ್ರತ್ಯೇಕಗೊಳಿಸಿ, ಉಳಿದ ಎಲ್ಲಾ ಪಕ್ಷಗಳು ಒಂದಾಗಿ ಕಾಂಗ್ರೆಸ್‌ ಪಕ್ಷ ಹಾಗೂ ಪಾಟೀಲ ಪರಿವಾರವನ್ನು ಟೀಕಿಸುತ್ತವೆ.

ಇದು ಆ ಪಕ್ಷಗಳ ಹಳೆ ಚಾಳಿ. ಬಿಜೆಪಿಯ ಪದ್ಮಾಕರ ಪಾಟೀಲ, ಸೋಮನಾಥ ಪಾಟೀಲ ಅವರು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಬಸ್‌ ನಿಲ್ದಾಣ, ಕಾರಂಜಾ ಕುಡಿಯುವ ನೀರು, ಚಿಟಗುಪ್ಪ ತಾಲ್ಲೂಕು, ಹಳ್ಳಿಖೇಡ(ಬಿ)ಗೆ ಪುರಸಭೆಯಾಗಿ ಮೇಲ್ದರ್ಜೇರಿಸಿದವರು ಯಾರು ಎನ್ನುವ ಕುರಿತು ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ತಿರುಗೇಟು ನೀಡಿದರು.

ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ಶಾಸಕ ರಹೀಂ ಖಾನ್, ಜಿಲ್ಲಾಧಿಕಾರಿ ಡಾ.ಎಚ್.ಆರ್‌.ಮಹಾದೇವ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಪುರಸಭೆ ಅಧ್ಯಕ್ಷೆ ರಾಧಾ ಮಾಳಪ್ಪ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಾ.ಪ್ರಕಾಶ ಪಾಟೀಲ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಡಾಕುಳಗಿ ಇದ್ದರು.

**

ಸಂಭ್ರಮಾಚರಣೆಯ ಸ್ವಾರಸ್ಯ

ಮೊದಲ ಭೇಟಿ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ಸರ್ಕಾರದ ಅಧಿಕೃತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಇದೇ ಮೊದಲು. ಇದಕ್ಕೂ ಮೊದಲು ಬಂದಿದ್ದರಾದರೂ ಮುಖ್ಯಮಂತ್ರಿಯಾಗಿರಲಿಲ್ಲ. ರಥ ಮೈದಾನದಲ್ಲಿ ಅನೇಕ ಬಹಿರಂಗ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದರು.

8ಎಲ್‌ಇಡಿ ಪರದೆ ಅಳವಡಿಕೆ: ವೇದಿಕೆ ಮುಂಭಾಗದಲ್ಲಿ ಕಾರ್ಯಕ್ರಮ ವೀಕ್ಷಣೆಗಾಗಿ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು. ಎಡ ಬದಿಗೆ 4, ಬಲ ಬದಿಗೆ 4 ಅಳವಡಿಸಲಾಗಿತ್ತು.

ಕುಡಿಯಲು ಮಿನರಲ್‌ ವಾಟರ್, ಊಟ: ಸಾರ್ವಜನಿಕರಿಗೆ ಮಿನರಲ್‌ ವಾಟರ್‌ ವ್ಯವಸ್ಥೆ ಇತ್ತು. ಬುಂದಿ, ಅನ್ನ, ಸಾರಿನ ವ್ಯವಸ್ಥೆ ಮಾಡಲಾಗಿತ್ತು.

ಆಟೊಗಳಲ್ಲಿ ಸರ್ಕಾರದ ಸಾಧನೆ ಪ್ರಚಾರ: ನಗರ ಸೇರಿದಂತೆ ವಿಧಾನಸಭಾ ಕ್ಷೇತ್ರದಾದ್ಯಂತ ಕಾಂಗ್ರೆಸ್‌ ಸರ್ಕಾರದ ಸಾಧನೆ ಕುರಿತು ಒಂದು ವಾರದಿಂದ ಆಟೊಗಳ ಮೂಲಕ ಸರ್ಕಾರದ ಜನಪರ ಯೋಜನೆಯ ಕಟೌಟ್‌ಗಳನ್ನು ಹೊತ್ತು ಪ್ರಚಾರ ನಡೆಯಿತು.

ಹರಿದು ಬಂದ ಜನಸಾಗರ: ಕಾರ್ಯಕ್ರಮಕ್ಕೆ ಬುಧವಾರ ಬೆಳಿಗ್ಗೆಯಿಂದಲೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಗ್ರಾಮಗಳ ಜನ ಕಾರು, ಮ್ಯಾಕ್ಸಿಕ್ಯಾಬ್‌, ಜೀಪ್‌, ಟಂಟಂಗಳಲ್ಲಿ ಬಂದಿದ್ದರು. ಅನೇಕ ಗ್ರಾಮಗಳಿಂದ ಸಾರಿಗೆ ಸಂಸ್ಥೆ ಬಸ್‌ಗಳಲ್ಲೂ ಜನರು ಬಂದಿದ್ದರು.

**

ಹುಮನಾಬಾದ್‌ ವಿಧಾನಸಭಾ ಕ್ಷೇತ್ರದಲ್ಲಿ ರಾಜಶೇಖರ ಬಿ.ಪಾಟೀಲ ನೇತೃತ್ವದಲ್ಲಿ ಅಭಿವೃದ್ಧಿ ಸಾಗಿದೆ. ಇನ್ನೂ ಹೆಚ್ಚಿನ ಅಭಿವೃದ್ದಿಗೆ ಅನುದಾನ ನೀಡಲು ಬದ್ಧ ಸಿದ್ದರಾಮಯ್ಯ, ಮುಖ್ಯಮಂತ್ರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.