ಮೂಡಲ ಮನೆಯ ಮುತ್ತಿನ ನೀರು...

ಅರಸೀಕೆರೆ: ‘ಮೂಡಲ ಮನೆಯ ಮುತ್ತಿನ ನೀರಿನ ಯರಕವಾ ಹೊಯ್ದಾ, ನಿನ್ನನೆ ಯರಕವಾ ಹೊಯ್ದಾ...’ ಎಂಬ ಕವಿ ದ.ರಾ.ಬೇಂದ್ರೆ ಅವರ ಹಾಡು ನೆನಪಿರಬಹುದು ನಿಮಗೆ. ಬುಧವಾರ ನಸುಕಿನಲ್ಲಿ ಕಣ್ಣು ಬಿಟ್ಟ ನಗರದ ಜನತೆಗೆ ಈ ಸಾಲುಗಳ ಸಾಕ್ಷಾತ್ಕಾರವಾಯಿತು.
ನಿಜ. ಬೆಳಿಗ್ಗೆ ದಟ್ಟ ಮಂಜು ನಗರದ ಸುತ್ತಮುತ್ತಲಿನ ನಿಸರ್ಗವನ್ನೇ ಮುಸುಕಿತ್ತು. ಬಯಲು ಸೀಮೆಯ ಆ ಬೆಳಗು ಪ್ರಕೃತಿಯ ಜೀವ ರಾಶಿಗೆ ಅಚ್ಚರಿಯೊಂದನ್ನು ಅನಾವರಣಗೊಳಿಸಿತ್ತು. ದಟ್ಟವಾಗಿ ಮಂಜು ಆವರಿಸಿದ್ದ ರಿಂದ ಆಹ್ಲಾದತೆಯೇ ಮನೆ ಮಾಡಿದಂತೆ ಭಾಸವಾಗುತ್ತಿತ್ತು.
ನಗರದ ಹೊರ ಭಾಗದ ಕಂತೇನಹಳ್ಳಿ ಕೆರೆಯ ಆವರಣದಲ್ಲಿರುವ ಪಾರ್ಕಿನಲ್ಲಿ ವಾಯು ವಿಹಾರ ನಡೆಸುತ್ತಿರುವರು ಒಬ್ಬರಿಗೊಬ್ಬರು ಕಾಣಿಸದಷ್ಟು ಮಂಜು ಕವಿದತ್ತು. ಬಹಳ ಜನ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಕಂಡು ಬಂದಿತು.
‘ಹುಲ್ಲು ಹಾಸಿನ ಮೇಲೆ ಕಟ್ಟಿದ್ದ ಜೇಡರಬಲೆಯ ಮೇಲೆ ಬಿದ್ದ ಮಂಜಿನ ಹನಿಗಳು ಮುತ್ತಿನ ಮಣಿಗಳಂತೆ ಕಂಡವು. ಪಾರ್ಕಿನಲ್ಲಿ ಸಾಮಾನ್ಯ ಎನಿಸುವ ಮಂಜಿನ ಮೋಜಿನಾಟ ಈ ಬಾರಿ ತಾಲ್ಲೂಕಿನ ಜೀವ ಸಂಕುಲಕ್ಕೆ ದರ್ಶನಕೊಟ್ಟು, ಮೈಮನ ಪುಳುಕದ ಅನುಭವ ನೀಡಿತು’ ಎನ್ನುತ್ತಾರೆ ನಗರಸಭಾ ಸದಸ್ಯ ಬಿ.ಎನ್.ವಿದ್ಯಾಧರ್.
ನಸುಕಿನಲ್ಲಿ ಇಳೆಗೆ ಬಿಳಿ ಸೀರೆಯ ಸೆರಗು ಹೊದಿಸಿದಂತ ಮಂಜಿನ ಹನಿಗಳು ಭಾಸವದವು. 9 ಗಂಟೆಯಾದರೂ ಮಂಜಿನ ಮೋಡಿಯಲ್ಲಿ ಸೂರ್ಯನ ಕಿರಣಗಳು ಭೂಮಿಯನ್ನು ಸೋಕಲೋ, ಬೇಡವೋ ಎಂಬಂತೆ ಇಣುಕಿ ನೋಡಿದವು.
ರಾಷ್ಟ್ರೀಯ ಹೆದ್ದಾರಿ 206 ಟಿ.ಎಚ್. ರಸ್ತೆಯಲ್ಲಿ ಸಂಚರಿಸುವ ವಾಹನಗಳು ದೀಪ ಉರಿಸುಕೊಂಡು ಸಾಗಿದವು.
‘ಎರಡ್ಮೂರು ವರ್ಷಗಳಿಂದ ಕಾಣೆಯಾಗಿದ್ದ ಈ ವಿಶೇಷ ಅತಿಥಿ ಮೈಮನಗಳಿಗೆ ಉಲ್ಲಾಸದ ರಸಾನುಭವ ನೀಡುತ್ತಿದೆ’ ಎಂದು ವಾಯುವಿಹಾರಕ್ಕೆ ತೆರಳಿದ್ದ ರಾಮಣ್ಣ, ಡಾ.ಶಿವಕುಮಾರ್ ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.