ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ ನಿಲ್ದಾಣದಲ್ಲಿ ಕನಸು ನಡಿಗೆ

Last Updated 14 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮೆಟ್ರೊ ನಿಲ್ದಾಣದಲ್ಲಿ ಪ್ರತಿದಿನ ನಾವೆಲ್ಲರೂ ಕೆಲಸಗಳ ಬೆನ್ನು ಹತ್ತಿ ಕಚೇರಿ-ಮನೆಗಳಿಗೆ ಓಡುತ್ತಿರುತ್ತೇವೆ. ಅಕ್ಕಪಕ್ಕದಲ್ಲಿ ಏನಾಗುತ್ತಿದೆ ಎಂಬ ಪರಿವೇ ಇಲ್ಲದೇ ದಿನದ ಗುರಿಯತ್ತ ನಮ್ಮೆಲ್ಲರದ್ದು ವೇಗದ ಓಟ.

ಆದರೆ, ಕಬ್ಬನ್‌ಪಾರ್ಕ್‌ ಮೆಟ್ರೊ ನಿಲ್ದಾಣದಲ್ಲಿ ಒಂದಷ್ಟು ಮಂದಿ ನಮ್ಮ ವೇಗಕ್ಕೆ ವಿರುದ್ಧವಾಗಿ ಮಂದಗತಿಯಲ್ಲಿ ಚಲಿಸುತ್ತಿದ್ದಾರೆ. ಹೌದು, ಎಂದೂ ತೀರದ ಜಂಜಾಟಗಳ ಬಗ್ಗೆ ತಲೆ ಕೆಡಿಸಿಕೊಂಡು ಓಡುವವರನ್ನು ಅರೆಕ್ಷಣ ನಿಲ್ಲಿಸಿ, ಅವರ ಮೊಗದಲ್ಲಿ ನಗುತರಿಸುವ ಪುಟ್ಟ ಪ್ರಯತ್ನ ಮಾಡುತ್ತಿದ್ದಾರೆ, ‘ಡ್ರೀಮ್ ವಾಕರ್ಸ್’ (ಕನಸಿನಲ್ಲಿ ನಡೆಯುವವರು).

ನಿಧಾನಗತಿಯಲ್ಲಿ ಸಣ್ಣಗೊಂದು ಸಂಗೀತ ಕೇಳುತ್ತಿರುತ್ತದೆ. ಒಂದಷ್ಟು ಮಂದಿ ಸಂಗೀತಕ್ಕೆ ತಕ್ಕಂತೆ ಚಲಿಸುತ್ತಿರುತ್ತಾರೆ. ಆದರೆ ಅವರು ಮಾತನಾಡುವುದಿಲ್ಲ. ಅವರ ಚಲನವಲನಗಳು ಮಾತಾಡುತ್ತವೆ. ‘ನಿಮ್ಮ ದಿನ ಸುಂದರವಾಗಿರಲಿ’, ‘ಖುಷಿಯಾಗಿರಿ’ ‘ನಿಮ್ಮಲ್ಲಿ ನಿಮಗೆ ಭರವಸೆ ಇರಲಿ’, ‘ಈ ಕೇಕ್ ನಿಮಗಾಗಿ’, ‘ನಿಮ್ಮ ಬಟ್ಟೆ ಬಹಳ ಚೆನ್ನಾಗಿದೆ’, ‘ನಿಮ್ಮದು ರೇಷ್ಮೆಯಂತಹ ಕೂದಲು’, ‘ಮೆಟ್ರೊದಲ್ಲಿ ನಿಮಗೆ ಆಸನ ಸಿಗಲಿ’, ‘ಕುಳಿತುಕೊಳ್ಳಿ’ ಎಂಬ ಬರಹಗಳಿರುವ ಬಣ್ಣದ ಕಾಗದಗಳನ್ನು ಪ್ರಯಾಣಿಕರಿಗೆ ನೀಡುತ್ತಾರೆ.

ಸೃಷ್ಟಿ ಕಲೆ ಮತ್ತು ವಿನ್ಯಾಸ ಕಾಲೇಜಿನ ‘ಆರ್ಟ್ ಇನ್ ಟ್ರ್ಯಾನ್ಸಿಟ್’ ಕಾರ್ಯಕ್ರಮದ ಭಾಗವಾಗಿ, ವಿದ್ಯಾರ್ಥಿಗಳು ಈ ಹೊಸ ಪರಿಕಲ್ಪನೆಯೊಂದಿಗೆ ಜನರನ್ನು ಆಕರ್ಷಿಸುತ್ತಿದ್ದಾರೆ.

ಈ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದು, ‘ಡ್ರೀಮ್ ಕ್ವೀನ್‌’ನ ಕಲಾವಿದೆ ಅನುಜಾ. ‘ಪ್ರತಿದಿನ ಮೆಟ್ರೊ ನಿಲ್ದಾಣದಲ್ಲಿ ಜನರು ಹೇಗೆ ಓಡುತ್ತಿರುತ್ತಾರೆಂದು ನೀವೂ ನೋಡಿದ್ದೀರಿ. ಹಾಗೆ ಓಡುವವರನ್ನು ಒಂದು ನಿಮಿಷ ನಿಲ್ಲಿಸಿ, ಅವರ ಮೊಗದಲ್ಲಿ ನಗು ತರಿಸುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮನ್ನು ನೋಡಿ ಕೆಲ ಸೆಕಂಡ್‍ ನಿಲ್ಲುತ್ತಾರೆ. ನಾವು ಕೊಡುವ ಶುಭಾಶಯ ಪತ್ರ ಓದಿ, ನಗು ಬೀರುತ್ತಾರೆ. ಕೆಲ ಕ್ಷಣಗಳು ಅವರು ರಿಲೀಫ್ ಆದರೆ, ನಮಗದೇ ಖುಷಿ’ ಎನ್ನುತ್ತಾರೆ ಅವರು.

‘ಡ್ರೀಮ್ ವಾಕರ್ಸ್’ ಜತೆ ಪ್ರಯಾಣಿಕರೂ ಸೇರಿಕೊಳ್ಳಬಹುದು. ಕೆಲವು ಪ್ರಯಾಣಿಕರು, ಕನಸಿನ ನಡಿಗೆಯಲ್ಲಿ ಭಾಗಿಯಾಗಿ ಖುಷಿ ಪಟ್ಟಿದ್ದಾರೆ.

‘ನಾವು ನಿಧಾನವಾಗಿ ಚಲಿಸುವಾಗ, ನಮ್ಮನ್ನು ಗಮನಿಸುತ್ತಾರೆ, ನಮ್ಮ ಮುಖಭಾವ ನೋಡುತ್ತಾರೆ. ಇದು ಪ್ರಯಾಣಿಕರಿಗಷ್ಟೇ ಅಲ್ಲ, ನಮಗೂ ಖುಷಿ ಕೊಡುತ್ತದೆ’ ಎನ್ನುತ್ತಾರೆ ವಿದ್ಯಾರ್ಥಿ ಅಮತ್ ಖಾನ್.

‘ಮೆಟ್ರೊ ಪ್ರಯಾಣಿಕರೊಂದಿಗೆ ನಮ್ಮದೇ ಭಿನ್ನ ರೀತಿಯಲ್ಲಿ ಸಂವಹಿಸುತ್ತಿದ್ದೇವೆ. ಈ ಬಗೆಯ ಸಂವಹನ ಪ್ರಯಾಣಿಕರಿಗೂ ಇಷ್ಟವಾಗಿದೆ’ ಎನ್ನುತ್ತಾರೆ ಮತ್ತೊಬ್ಬ ವಿದ್ಯಾರ್ಥಿ ಅಂಜಲಿ ಕಾಮತ್.

‘ಮೆಟ್ರೊ ಪ್ಲಾಟ್‍ಫಾರ್ಮ್‍ನಲ್ಲಿ ಒಂದಷ್ಟು ಕಾಲೇಜು ಮಕ್ಕಳು ನಿಧಾನವಾಗಿ, ವಿವಿಧ ಭಂಗಿಗಳಲ್ಲಿ ಚಲಿಸುತ್ತಿರುವುದನ್ನು ನೋಡಿದೆ. ಅವರ ಕೈಯಲ್ಲಿ ಪತ್ರಳಿದ್ದವು. ನೀವು ನಮಗೆ ಮುಖ್ಯ ಎಂದು ಬರೆದಿತ್ತು. ಖುಷಿ ಆಯ್ತು’ ಎಂದವರು ಪ್ರಯಾಣಿಕ ಸಂದೀಪ್.

ಪ್ರದರ್ಶನ ಸಮಯ: ಶುಕ್ರವಾರ ಬೆಳಿಗ್ಗೆ 9.30ರಿಂದ 10.30, ಸಂಜೆ 4.30ರಿಂದ 5.30.

ಸ್ಥಳ– ಮೆಟ್ರೊ ನಿಲ್ದಾಣ, ಕಬ್ಬನ್‌ಪಾರ್ಕ್..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT