ಸೋಮವಾರ, ಮಾರ್ಚ್ 1, 2021
30 °C

ಹಲ್ಲು ಕಿತ್ತು, ಹಣ ಕೊಟ್ಟ ವೈದ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಲ್ಲು ಕಿತ್ತು, ಹಣ ಕೊಟ್ಟ ವೈದ್ಯ!

ಹುಬ್ಬಳ್ಳಿ: ರೋಗಿಯೊಬ್ಬರ ಮೂರು ಹಲ್ಲುಗಳನ್ನು ಕಿತ್ತ ದಂತ ವೈದ್ಯರೊಬ್ಬರು, ಸಮರ್ಪಕ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಿದ್ದರಿಂದ ಆ ರೋಗಿ ಈಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಇಲ್ಲಿನ ಗಣೇಶಪೇಟೆಯ ಅಬ್ದುಲ್ ಖಾದರ್ ಬಾಗಲಕೋಟಿ ಅಸ್ವಸ್ಥಗೊಂಡ ವ್ಯಕ್ತಿ. ತೀವ್ರ ರಕ್ತಸ್ರಾವದಿಂದ ಬಳಲಿರುವ ಅವರು ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಮಧ್ಯೆ ರೋಗಿಯ ಗಂಭೀರ ಸ್ಥಿತಿಯನ್ನು ತಿಳಿದ ವೈದ್ಯ ವೀರೇಶ ಮಾಗಳದ ಕಿಮ್ಸ್‌ ಆಸ್ಪತ್ರೆಗೆ ಬಂದು, ಪ್ರಕರಣಕ್ಕೆ ವೈದ್ಯರು ಹೊಣೆಯಲ್ಲ ಎಂಬ ಪತ್ರಕ್ಕೆ ಹೆಬ್ಬೆಟ್ಟು ರುಜು ಪಡೆದಿದ್ದಾರೆ. ಬಳಿಕ, ರೋಗಿಯ ಕುಟುಂಬದವರಿಗೆ ₹10 ಸಾವಿರ ಕೊಟ್ಟು ಹೋಗಿದ್ದಾರೆ.

ರೋಗಿಯನ್ನು ಕಾಣಲು ಬಂದ ಸಂಬಂಧಿಕರು ಆ ಪತ್ರ ನೋಡಿದಾಗ, ವೈದ್ಯರು ತಮ್ಮ ಲೋಪ ಮುಚ್ಚಿಕೊಳ್ಳಲು ನಡೆಸಿರುವ ಯತ್ನ ಗೊತ್ತಾಗಿದೆ. ಇದೀಗ, ವೈದ್ಯರ ವಿರುದ್ಧ ದೂರು ನೀಡಲು ರೋಗಿ ಸಂಬಂಧಿಕರು ನಿರ್ಧರಿಸಿದ್ದಾರೆ.

ಘಟನೆ ವಿವರ: ‘ಹಲ್ಲು ನೋವಿನಿಂದ ಬಳಲುತ್ತಿದ್ದ ಅಣ್ಣ, ಇದೇ 8ರಂದು ಬೆಳಿಗ್ಗೆ ಗಣೇಶಪೇಟೆಯಲ್ಲಿರುವ ರತ್ನ ಡೆಂಟಲ್ ಕ್ಲಿನಿಕ್‌ಗೆ ಹೋಗಿದ್ದರು. ಆಗ ವೈದ್ಯ ವೀರೇಶ ಮಾಗಳದ ಅವರು ಹಲ್ಲನ್ನು ಕೀಳಬೇಕು ಎಂದು ಹೇಳಿ, ಮೂರು ಹಲ್ಲುಗಳನ್ನು ಕಿತ್ತಿದ್ದಾರೆ. ಈ ವೇಳೆ ಉಂಟಾದ ರಕ್ತಸ್ರಾವ ತಡೆಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದರು’ ಎಂದು ಖಾದರ್ ಅವರ ಸಹೋದರ ಇಸ್ಮಾಯಿಲ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಂದು ದಿನವಿಡೀ ರಕ್ತಸ್ರಾವವಾಗಿದೆ. ಬೆಳಿಗ್ಗೆ 6ರ ಸುಮಾರಿಗೆ ಅವರನ್ನು ಎಬ್ಬಿಸಲು ಹೋದಾಗ, ಕೋಣೆ ರಕ್ತಮಯವಾಗಿತ್ತು. ಅಲ್ಲದೆ, ಮಾತನಾಡಲಾಗದಷ್ಟು ನಿತ್ರಾಣರಾಗಿದ್ದರು. ಕೂಡಲೇ ಅವರನ್ನು ಕಿಮ್ಸ್‌ಗೆ ಕರೆದುಕೊಂಡು ಬಂದೆವು. ಆದರೆ, ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಲೇ ಹೋಯ್ತು. ಗುರುವಾರ ಐಸಿಯುಗೆ ಸ್ಥಳಾಂತರಿಸಲಾಗಿದ್ದು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ’ ಎಂದು ಅವರು ಕಣ್ಣೀರಿಟ್ಟರು.

‘ಡಿ. 11ರಂದು ವಕೀಲರೊಬ್ಬರ ಜತೆ ಆಸ್ಪತ್ರೆಗೆ ಬಂದ ಡಾ. ವೀರೇಶ ಅವರು, ಎಲ್ಲವೂ ಸರಿ ಹೋಗುತ್ತದೆ ಎಂದು ಸಮಾಧಾನ ಹೇಳಿದರು. ಬಳಿಕ, ಪತ್ರವೊಂದಕ್ಕೆ ಅಣ್ಣ ಮತ್ತು ಅತ್ತಿಗೆಯಿಂದ ಹೆಬ್ಬೆಟ್ಟಿನ ರುಜು ಹಾಕಿಸಿಕೊಂಡರು. ಬಳಿಕ, ನನ್ನಿಂದಲೂ ಸಹಿ ಪಡೆದು, ₹ 10 ಸಾವಿರ ಕೊಟ್ಟು ಹೋದರು. ಅನಕ್ಷರಸ್ಥರಾದ ನಮಗೆ ಪತ್ರದಲ್ಲಿ ಏನಿತ್ತು ಎಂಬುದು ತಿಳಿಯಲಿಲ್ಲ. ಬಡವರಾದ ನಮಗೆ ಸಹಾಯ ಮಾಡಿದ್ದಾರಲ್ಲ ಎಂದು ಅವರಿಗೆ ಕೃತಜ್ಞತೆ ಸಲ್ಲಿಸಿದ್ದೆವು’ ಎಂದು ಹೇಳಿದರು.

‘ಅಣ್ಣನನ್ನು ನೋಡಲು ಆಸ್ಪತ್ರೆಗೆ ಬಂದ ಸಂಬಂಧಿಕರು ಆ ಪತ್ರ ಓದಿದಾಗ, ಆ ವೈದ್ಯ ಬರೆಸಿಕೊಂಡಿದ್ದು ಒಪ್ಪಿಗೆ ಪತ್ರ ಎಂದು ಗೊತ್ತಾಯಿತು. ತಪ್ಪನ್ನು ಮುಚ್ಚಿಕೊಳ್ಳಲು ಈ ರೀತಿ ಹಣ ಕೊಟ್ಟು ಪತ್ರಕ್ಕೆ ಸಹಿ ಪಡೆದಿದ್ದಾರೆ ಎಂದು ಅವರು ಹೇಳಿದರು. ಸದ್ಯ ಅಣ್ಣನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳುತ್ತಿರುವುದು ನಮ್ಮ ಆತಂಕ ಹೆಚ್ಚಿಸಿದೆ’ ಎಂದು ಇಸ್ಮಾಯಿಲ್ ತಿಳಿಸಿದರು.

‘ನಾವು ಬಡವರು. ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಪತಿ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಚಿಕಿತ್ಸೆಗೂ ನಮ್ಮ ಬಳಿ ಹಣವಿಲ್ಲ. ಸಂಬಂಧಿಕರೇ ಎಲ್ಲವನ್ನೂ ಭರಿಸುತ್ತಿದ್ದಾರೆ. ಕಿಮ್ಸ್‌ಗೆ ಕರೆದುಕೊಂಡು ಬಂದಾಗಿನಿಂದ ಪತಿ ಯಾರನ್ನೂ ಗುರುತು ಹಿಡಿಯುತ್ತಿಲ್ಲ’ ಎಂದು ಖಾದರ್ ಅವರ ಪತ್ನಿ ಸಬ್ರಿನ್ ಅಳಲು ತೋಡಿಕೊಂಡರು.

‘ಆರೋಪ ಮಾಡದಿರಲಿ ಎಂದು ರುಜು ಪಡೆದೆ’

‘ಖಾದರ್ ಅವರ ಮೂರು ಹಲ್ಲುಗಳನ್ನು ಕಿತ್ತಾಗ ಸ್ವಲ್ಪ ರಕ್ತಸ್ರಾವವಾಗಿದ್ದರಿಂದ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದೆ. ಡಿ. 11ರಂದು ಮಹಿಳೆಯೊಬ್ಬರು ಕರೆ ಮಾಡಿ, ನಿಮ್ಮ ನಿರ್ಲಕ್ಷ್ಯದಿಂದಾಗಿ ರೋಗಿಯೊಬ್ಬರು ಗಂಭೀರ ಸ್ಥಿತಿ ತಲುಪಿ ಕಿಮ್ಸ್‌ಗೆ ದಾಖಲಾಗಿದ್ದಾರೆ ಎಂದರು. ಕೂಡಲೇ ಆಸ್ಪತ್ರೆಗೆ ಹೋಗಿ ವಿಚಾರಿಸಿದೆ. ಅವರು ಬಡವರಾಗಿದ್ದರಿಂದ ಮಾನವೀಯತೆಯ ನೆಲೆಯಲ್ಲಿ ಚಿಕಿತ್ಸೆಗಾಗಿ ₹ 10 ಸಾವಿರ ಕೊಟ್ಟು ಬಂದೆ’ ಎಂದು ಖಾದರ್ ಅವರಿಗೆ ಚಿಕಿತ್ಸೆ ನೀಡಿದ ದಂತ ವೈದ್ಯ ವೀರೇಶ ಮಾಗಳದ ‘ಪ್ರಜಾವಾಣಿ’ಗೆ ತಿಳಿಸಿದರು.

‘ನನ್ನ ವಿರುದ್ಧ ಸುಳ್ಳು ಆರೋಪ ಮಾಡಬಾರದೆಂದು ಅವರಿಂದ ಪತ್ರವೊಂದಕ್ಕೆ ಸಹಿ ಪಡೆದುಕೊಂಡೆ. ಇದರಲ್ಲಿ ನನ್ನದೇನೂ ಲೋಪವಿಲ್ಲ. ಖಾದರ್ ಅವರಿಗೆ ರಕ್ತದೊತ್ತಡ ಮತ್ತು ಮಧುಮೇಹದ ಜತೆಗೆ, ರಕ್ತದಲ್ಲಿ ಹಿಮೊಗ್ಲೊಬಿನ್ ಪ್ರಮಾಣ ಕಡಿಮೆ ಇದೆಯೆಂದು ಕಿಮ್ಸ್ ವೈದ್ಯರು ತಿಳಿಸಿದ್ದರು. ಅಲ್ಲದೆ, ಹೆಚ್ಚು ಧೂಮಪಾನ ಮಾಡುತ್ತಿದ್ದರಂತೆ. ಆರೋಗ್ಯದ ಬಗ್ಗೆ ಸರಿಯಾಗಿ ನಿಗಾ ವಹಿಸದಿದ್ದರಿಂದ ಅವರ ಸ್ಥಿತಿ ಗಂಭೀರವಾಗಿದೆ’ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.