ಶುಕ್ರವಾರ, ಫೆಬ್ರವರಿ 26, 2021
27 °C

ಅರ್ಚಕರ ಜಟಾಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರ್ಚಕರ ಜಟಾಪಟಿ

ಮಂಡ್ಯ: ಮೇಲುಕೋಟೆಯ ಯೋಗಾನರಸಿಂಹ ಸ್ವಾಮಿ ದೇವಾಲಯದಲ್ಲಿ ಡಿ.11 ರಂದು ಅರ್ಚಕರಾದ ನಾರಾಯಣ ಭಟ್‌ ಹಾಗೂ ಭಾಷ್ಯಂ ಸ್ವಾಮೀಜಿ ಅವಾಚ್ಯ ಶಬ್ದಗಳಿಂದ ಪರಸ್ಪರ ನಿಂದಿಸಿಕೊಂಡು ಕಿತ್ತಾಡಿದರು. ಇದರಿಂದಾಗಿ ಬೆಳಿಗ್ಗೆ 7ರಿಂದ ಎರಡು ತಾಸು ಕಾಲ ಪೂಜಾ ಕೈಂಕರ್ಯ ಸ್ಥಗಿತಗೊಂಡಿದ್ದವು.

ಮುಖ್ಯ ಅರ್ಚಕ ನಾರಾಯಣ ಭಟ್‌ ಅವರು ಇಲ್ಲದಿದ್ದಾಗ ಪೂಜಾ ಕೈಂಕರ್ಯ ಜವಾಬ್ದಾರಿಯನ್ನು ಭಾಷ್ಯಂ ಸ್ವಾಮೀಜಿ ಅವರಿಗೆ ವಹಿಸಿಕೊಡಬೇಕು ಎಂಬುದು ಸರ್ಕಾರಿ ಆದೇಶ. ಆದೇಶವನ್ನು ಜಾರಿ ಮಾಡಲು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಹಾಗೂ ಜಿಲ್ಲಾಧಿಕಾರಿ ದೇವಾಲಯದ ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೂ ಆದ ಪಾಂಡವಪುರ ತಹಶೀಲ್ದಾರ್‌ ಡಿ.ಹನುಮಂತರಾಯಪ್ಪ ಅವರಿಗೆ ಸೂಚನೆ ನೀಡಿದ್ದರು.

ಈ ಕುರಿತು ಸೋಮವಾರ ದೇವರಿಗೆ ಪೂಜೆ ಸಲ್ಲಿಸಿ ಅಧಿಕಾರ ವಹಿಸಿಕೊಳ್ಳುವಂತೆ ತಹಶೀಲ್ದಾರ್‌ ಪತ್ರವೊಂದನ್ನು ಭಾಷ್ಯಂ ಸ್ವಾಮೀಜಿ ಹಾಗೂ ದೇವಾಲಯದ ಪಾರುಪತ್ತೆದಾರರಿಗೆ ನೀಡಿದ್ದರು. ಪತ್ರದ ಜೊತೆ ದೇವಾಲಯದ ಮುಖ್ಯ ಗುಮಾಸ್ತ ಶ್ರೀರಂಗರಾಜನ್‌ ಅವರ ಜೊತೆ ಭಾಷ್ಯಂ ಸ್ವಾಮೀಜಿ ಸೋಮವಾರ ಬೆಳಿಗ್ಗೆ ದೇವಾಲಯಕ್ಕೆ ತೆರಳಿದರು. ಈ ಸಂದರ್ಭದಲ್ಲಿ ಭಾಷ್ಯಂ ಸ್ವಾಮೀಜಿ ಅವರಿಗೆ ಅಧಿಕಾರ ವಹಿಸಿಕೊಳ್ಳಲು ಅವಕಾಶ ನೀಡಲು  ನಾರಾಯಣ ಭಟ್ ನಿರಾಕರಿಸಿದರು.

‘ನಾರಾಯಣ್‌ ಭಟ್‌ ಅನುಪಸ್ಥಿತಿಯಲ್ಲಿ ಭಾಷ್ಯಂ ಸ್ವಾಮೀಜಿ ಪೂಜೆ ನಿರ್ವಹಿಸುವುದು’ ಎಂದು ತಹಶೀಲ್ದಾರ್‌ ನಾರಾಯಣ್‌ ಭಟ್‌ ಅವರಿಗೆ ಪತ್ರ ನೀಡಿದ್ದರು. ಪತ್ರ ಗೊಂದಲಮಯವಾಗಿದ್ದರಿಂದ ಅವಕಾಶ ನೀಡಲಿಲ್ಲ ಎಂದು ದೇವಾಲಯದ ಮೂಲಗಳು ತಿಳಿಸಿದವು. ಸರ್ಕಾರದ ಆದೇಶದ ವಿರುದ್ಧ ನಾರಾಯಣ್‌ ಭಟ್‌ ಹೈಕೋರ್ಟ್‌ನಲ್ಲಿ ದೂರು ಸಲ್ಲಿಸಿದ್ದಾರೆ.

ಘಟನೆಯ ನಂತರ ಪಾರುಪತ್ತೆದಾರರು ಅಧಿಕಾರ ವಹಿಸಿಕೊಡಲು ನಾರಾಯಣ್‌ ಭಟ್‌ ನಿರಾಕರಿಸಿದರು ಎಂದು ಷರಾ ಬರೆದುಕೊಂಡರು. ಸ್ಥಳದಿಂದ ಭಾಷ್ಯಂ ಸ್ವಾಮೀಜಿ ಹೊರ ನಡೆದರು. ಈ ಕುರಿತು ನಾರಾಯಣ್‌ ಭಟ್‌ ಹಾಗೂ ಭಾಷ್ಯಂ ಸ್ವಾಮೀಜಿ ಅವರನ್ನು ಸಂಪರ್ಕಿಸಲು ಯತ್ನಿಸಲಾಯಿತು. ಇಬ್ಬರ ಮೊಬೈಲ್‌ ಫೋನ್‌ಗಳೂ ಸ್ಥಗಿತಗೊಂಡಿದ್ದವು.

ಅಶ್ಲೀಲ ಚಿತ್ರ ವೀಕ್ಷಣೆ, ಎಫ್‌ಐಆರ್‌ ದಾಖಲು...

‘ನಾರಾಯಣ ಭಟ್‌ ಅವರು ದೇವಾಲಯದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡುತ್ತಾರೆ. ಅವರ ಮೊಬೈಲ್‌ಗಳಲ್ಲಿ ನೀಲಿಚಿತ್ರ ಜಾಲತಾಣಗಳು ದಾಖಲಾಗಿವೆ. ಸೋಮವಾರ ದೇವಾಲಯದಲ್ಲಿ ಜಗಳ ನಡೆಯುವಾಗ ಅವರ ಮೊಬೈಲ್‌ ಭಕ್ತರೊಬ್ಬರಿಗೆ ಸಿಕ್ಕಿತ್ತು. ಅದನ್ನು ನನಗೆ ನೀಡಿದರು. ಇದನ್ನು ಜಿಲ್ಲಾಧಿಕಾರಿಗೆ ನೀಡಲಾಗುವುದು’ ಎಂದು ಡಿ.12ರಂದು ಭಾಷ್ಯಂ ಸ್ವಾಮೀಜಿ ಸಹೋದರ ಶೇಷಾದ್ರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಆರೋಪವನ್ನು ನಾರಾಯಣ್‌ ಭಟ್‌ ನಿರಾಕರಿಸಿದ್ದಾರೆ.

ಇದಕ್ಕೂ ಮೊದಲು ಮೊಬೈಲ್‌ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿ ನಾರಾಯಣ್‌ ಭಟ್‌  ಅವರು ಭಾಷ್ಯಂ ಸ್ವಾಮೀಜಿ, ಸಹೋದರ ಶೇಷಾದ್ರಿ, ಮತ್ತೊಬ್ಬರ ವಿರುದ್ಧ ಮೇಲುಕೋಟೆ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ಮೂವರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

* * 

ತಹಶೀಲ್ದಾರ್‌ ಆದೇಶ ಪತ್ರ ನೀಡುವಾಗ ನಮಗೆ ತೋರಿಸಬೇಕಾಗಿತ್ತು. ಪತ್ರದಲ್ಲಿ ಗೊಂದಲ ಇದ್ದ ಕಾರಣ ಇಬ್ಬರು ಅರ್ಚಕರ ಜಟಾಪಟಿಗೆ ಕಾರಣವಾಗಿದೆ. ಈಗ ಎರಡೂ ಕಡೆ ವಾದ ಆಲಿಸಿ ತೀರ್ಮಾನ ಕೈಗೊಳ್ಳಲಾಗುವುದು

ಎನ್‌.ಮಂಜುಶ್ರೀ, ಜಿಲ್ಲಾಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.