ಶುಕ್ರವಾರ, ಫೆಬ್ರವರಿ 26, 2021
25 °C

ಬಂದ ನೋಡಿ ‘ಪ್ಯಾಡ್‌ಮನ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂದ ನೋಡಿ ‘ಪ್ಯಾಡ್‌ಮನ್’

‘ಅಮೆರಿಕದ ಬಳಿ ಸೂಪರ್‌ಮನ್, ಬ್ಯಾಟ್‌ಮನ್, ಸ್ಪೈಡರ್‌ಮನ್‌ಗಳು ಇದ್ದಾರೆ. ಆದರೆ, ಭಾರತದ ಬಳಿ ಪ್ಯಾಡ್‌ಮನ್ ಇದ್ದಾನೆ...’

ಹೀಗೆ ಅಮಿತಾಭ್ ಬಚ್ಚನ್ ಅವರ ಕಂಚಿನ ಕಂಠದಲ್ಲಿ ಪ್ಯಾಡ್‌ಮನ್ ಅರ್ಥಾತ್ ಅಕ್ಷಯ್ ಕುಮಾರ್ ಅವರ ಪರಿಚಯವಾಗುತ್ತದೆ.

‘ಚೀನಿ ಕಮ್‌’, ‘ಪಾ’ದಂಥ ವಿಭಿನ್ನ ಸಿನಿಮಾ ಕೊಟ್ಟ ನಿರ್ದೇಶಕ ಆರ್.ಬಾಲ್ಕಿ (ಆರ್. ಬಾಲಕೃಷ್ಣ) ‘ಪ್ಯಾಡ್‌ಮನ್‌’ಗೂ ಚುಕ್ಕಾಣಿ ಹಿಡಿದಿದ್ದಾರೆ. ಚಿತ್ರದ ಟ್ರೇಲರ್ ಶುಕ್ರವಾರ ಬಿಡುಗಡೆಯಾಗಿದೆ.

‘ಆ ದಿನಗಳ’ ಹೆಂಗಳೆಯರ ಸಂಕಷ್ಟಕ್ಕೆ ಮಿಡಿದು, ಪ್ಯಾಡ್‌ ಬಳಸುವ ಬಗ್ಗೆ ಜಾಗೃತಿ ಮೂಡಿಸಿದ ತಮಿಳುನಾಡಿನ ಅರುಣಾಚಲಂ ಮುರುಗನಾಥನ್ ಅವರ ನೈಜ ಜೀವನಗಾಥೆ ಆಧರಿಸಿರುವ ಈ ಚಿತ್ರದಲ್ಲಿ ನಟ ಅಕ್ಷಯ್‌ಕುಮಾರ್ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

ಹೆಂಗಳೆಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅಣ್ಣನಾಗಿ, ಗಂಡನಾಗಿ ಅಕ್ಷಯ್ ಕಾಣಿಸಿಕೊಂಡಿದ್ದಾರೆ. ನೂರಾರು ಜನರೆದುರು ಸಭಾಂಗಣವೊಂದರಲ್ಲಿ ನಿಂತು ಮಾತನಾಡುವ ಪ್ಯಾಡ್‌ಮನ್, ’ನೀವು ನನ್ನನ್ನು ಹುಚ್ಚ ಅಂತ ಕರೀಬಹುದು. ಆದರೆ, ಹುಚ್ಚರು ಮಾತ್ರ ಪ್ರಸಿದ್ಧಿ ಪಡೆಯಬಲ್ಲರು. ದೊಡ್ಡ ಮನುಷ್ಯ, ಶಕ್ತಿಶಾಲಿ ಮನುಷ್ಯ ದೇಶವನ್ನು ಸಶಕ್ತಗೊಳಿಸುವುದಿಲ್ಲ. ನಮ್ಮ ಮಹಿಳೆಯರು... ತಾಯಿ, ತಂಗಿ, ಪತ್ನಿ ಸಬಲರಾದರೆ ಮಾತ್ರ ದೇಶ ಸಬಲವಾಗಬಲ್ಲದು’ ಎಂಬ ಸರಳಸತ್ಯವನ್ನು ಸುಲಭವಾಗಿ ದಾಟಿಸಿಬಿಡುತ್ತಾನೆ.

‘ಯಾರಾದರೂ ಸಹೋದರಿಯರಿಗೆ ಇಂಥ ವಸ್ತುಗಳನ್ನು ಉಡುಗೊರೆಯಾಗಿ ಕೊಡ್ತಾರಾ’ ಎನ್ನುವ ಪತ್ನಿಯ ಪ್ರಶ್ನೆಗೆ, ‘ನನ್ನ ತಂಗಿಯರು ನನಗೆ ರಾಖಿ ಕಟ್ಟಿದ ದಿನದಂದು ಅವರನ್ನು ರಕ್ಷಿಸುವ ಭರವಸೆ ನೀಡಿದ್ದೆನಲ್ಲ...’ ಎಂದು ಮಾರ್ಮಿಕವಾಗಿ ಉತ್ತರಿಸುತ್ತಾನೆ.

‘ಐ ನಾಟ್ ಸ್ಟಡಿ ಐಐಟಿ. ಬಟ್ ಐಐಟಿ ಸ್ಟಡಿ ಮಿ. ಗಿವಿಂಗ್ ಅವಾರ್ಡ್ ಟು ಮಿ’ (ನಾನು ಐಐಟಿಯಲ್ಲಿ ಓದಿಲ್ಲ. ಆದರೆ, ಐಐಟಿ ನನ್ನನ್ನು ಓದುತ್ತಿದೆ. ನನಗೆ ಪ್ರಶಸ್ತಿ ಕೊಡುತ್ತಿದೆ) ಹಾಫ್ ಅವರ್ ಮ್ಯಾನ್ ಬ್ಲೀಡಿಂಗ್ ಲೈಕ್ ವುಮನ್. ದೆ ಡೈ...’ ಎನ್ನುವ ಸಂಭಾಷಣೆ ಪ್ರೇಕ್ಷಕರ ಮನದಾಳಕ್ಕೆ ಇಳಿಯುತ್ತವೆ.

ಯೂಟ್ಯೂಬ್‌ನಲ್ಲಿ ಪ್ಯಾಡ್‌ಮ್ಯಾನ್‌ನನ್ನು 30 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಜತೆಗೆ ನಟಿಯರಾದ ರಾಧಿಕಾ ಆಪ್ಟೆ, ಸೋನಂ ಕಪೂರ್ ತೆರೆ ಹಂಚಿಕೊಂಡಿದ್ದಾರೆ. ಪ್ಯಾಡ್‌ಮನ್ ಜ.26ರಂದು ತೆರೆಕಾಣಲಿದೆ. ಕೊಂಡಿ: https://youtu.be/-K9ujx8vO_A

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.