7

ಚಳಿಗಾಲದಲ್ಲಿ ಜೊತೆಯಾಗಲಿ ಮನೆಮದ್ದು

Published:
Updated:
ಚಳಿಗಾಲದಲ್ಲಿ ಜೊತೆಯಾಗಲಿ ಮನೆಮದ್ದು

ನಮ್ಮ ಚಿಕಿತ್ಸಾಲಯಕ್ಕೆ ಬರುವ ರೋಗಿಗಳಲ್ಲಿ ಶೇ.50ರಷ್ಟು ರೋಗಿಗಳ ಸಮಸ್ಯೆ ಗಂಟುನೋವು. ಅದಕ್ಕೆ ಕಾರಣ ಜ್ವರ. ನಮ್ಮ ಆಸ್ಪತ್ರೆಗೆ ರೋಗಿಯೊಬ್ಬರು ಬಂದು ‘ಡಾಕ್ಟ್ರೆ, ಒಂದು ವಾರದ ಹಿಂದೆ ಜ್ವರ ಬಂತು, ಜ್ವರ ಇದ್ದಿದ್ದು ಒಂದೇ ದಿನ. ಆದರೆ ಆಮೇಲೆ ಮೈಕೈ ನೋವು, ಗಂಟುನೋವು ಶುರು ಆಯ್ತು. ಅದು ಕಡಿಮೆನೇ ಆಗ್ತಾ ಇಲ್ಲ. ಗಂಟುನೋವು ಎಷ್ಟಿದೆ ಅಂದ್ರೆ ಬೆರಳು ಕೂಡ ಮಡಿಚಲು ಕೂಡ ಸಾಧ್ಯವಾಗುತ್ತಿಲ್ಲ. ಬೆಳಗ್ಗೆ ಎದ್ದಾಗ ನಡೆಯಲು ಸಾಧ್ಯ ಇಲ್ಲ, ಎಲ್ಲ ಸಂಧಿಗಳೂ ಕಾಲು ಊತ ಇರತ್ತೆ ಡಾಕ್ಟ್ರೆ. ಯಾವ ಮಾತ್ರೆಗೂ ಜಗ್ತಾ ಇಲ್ಲ, ಯಾವ ಸ್ಪ್ರೇಗೂ ಬಗ್ತಾ ಇಲ್ಲ, ಏನು ಮಾಡೋದು ಡಾಕ್ಟ್ರೆ? ನಮ್ಮ ಮನೆ ಹತ್ತಿರದ ಡಾಕ್ಟ್ರರ್‌ ಅನ್ನು ಕೇಳಿದ್ರೆ, ‘ಈಗಿನ ಜ್ವರ ಎಲ್ಲಾ ಹೀಗೆನಮ್ಮ, ಒಂದು ನಾಲ್ಕು ತಿಂಗಳು ಬೇಕು ಕಡಿಮೆ ಆಗೋದಕ್ಕೆ. ಇದನ್ನ arthralgia ಎನ್ನುತ್ತಾರೆ’ ಅಂದ್ರು. ಆರು ತಿಂಗಳು ಮನೆ ಕೆಲಸ ಮಾಡದೆ ಹೇಗಿರೋದು ಡಾಕ್ಟ್ರೆ? ಅದಕ್ಕೆ ನಿಮ್ಮ ಹತ್ತಿರ ಏನಾದ್ರೂ ಮಾಡಕ್ಕಾಗತ್ತಾ ಅಂತ ಕೇಳಕ್ಕೆ ಬಂದೆ’ ಎಂದಳು.

ಅದಕ್ಕೆ ನಾನು ‘ಹೌದಮ್ಮಾ, ಜ್ವರಕ್ಕೆ ಕಾರಣ ಆಗಿರೋ ರೋಗಾಣುಗಳು ನರಗಳಿಗೆ ತೊಂದರೆ ಕೊಡೋದ್ರಿಂದ ನರಗಳಲ್ಲಿ ಊತ ಬರುತ್ತೆ. ಅದ್ರಿಂದ ಮೂಳೆ, ಸಂಧಿಗಳಲ್ಲಿ ಯಾವುದೇ ತೊಂದರೆ ಇಲ್ಲದಿದ್ದರೂ ಗಂಟುನೋವು ಕಾಣಿಸಿಕೊಳ್ಳುತ್ತದೆ. ಚಳಿ ಹೆಚ್ಚಾದರೆ, ನೋವು ಮತ್ತೂ ಜಾಸ್ತಿ ಆಗುತ್ತದೆ. ಚಳಿ ಕಡಿಮೆ ಆಗುವಾಗ ನೋವೂ ಕಡಿಮೆ ಆಗುತ್ತದೆ. ಮುಖ್ಯವಾಗಿ ಜ್ವರ ಬಂದಾಗ ಚಳಿ. ಶೀತಗಾಳಿಯಲ್ಲಿ ಓಡಾಡುವುದು, ಸರಿಯಾದ ಆಹಾರ ಸೇವಿಸದೆ, ಕರಿದ ಪದಾರ್ಥ, ಜಿಡ್ಡು ಹೆಚ್ಚಾಗಿರುವ ಆಹಾರ ಸೇವಿಸುವುದು, ತಂಪು ಪೆಟ್ಟಿಗೆ

ಯಲ್ಲಿರಿಸಿರುವ ಆಹಾರ

ಸೇವನೆ, ಪಥ್ಯ, ಬದಲಾದ ಜೀವನಶೈಲಿ, ಋತುವಿಗೆ ಅನುಗುಣವಾದ ಆಹಾರ ಸೇವಿಸದಿರುವುದು, ಇವೆಲ್ಲವೂ ದೇಹದ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡಿ ಗಂಟುನೋವು, ಕೆಮ್ಮು ಇತ್ಯಾದಿಗಳು ತಿಂಗಳಾನುಗಟ್ಟಲೆ ಗುಣವಾಗದಂತೆ ತಡೆಯುತ್ತದೆ’ ಎಂದೆ.

ಅದಕ್ಕೆ ಆಕೆ  ‘ಹಾಗಾದರೆ, ಚಳಿಗಾಲ ಮುಗಿಯುವರೆಗೂ ನೋವು ಅನುಭವಿಸಲೇಬೇಕಾ ಡಾಕ್ಟ್ರೇ! ಇದಕ್ಕೆ ಪರಿಹಾರಾನೇ ಇಲ್ವಾ?’ ಎಂದು ಮುಖ ಚಿಕ್ಕದು ಮಾಡಿಕೊಂಡಳು.

ಅವಳನ್ನು ಸಮಾಧಾನ ಮಾಡುತ್ತಾ ‘ಇದಕ್ಕೆ ಪರಿಹಾರ ಇದೆ, ಒಂದು ಅರ್ಧ ಚಮಚ ದನಿಯಾವನ್ನು ಹುರಿದುಕೊಂಡು ಪುಡಿ ಮಾಡಿಕೋ, ಅದಕ್ಕೆ ಒಂದು ಸಣ್ಣ ತುಂಡು ಶುಂಠಿಯನ್ನು ಜಜ್ಜಿ ಹಾಕು, ಜೊತೆಗೆ ಒಂದು ನಾಲ್ಕು ಎಲೆ ಮತ್ತು ಬಳ್ಳಿ ಅಮೃತಬಳ್ಳಿಯನ್ನು ಜಜ್ಜಿ ಸುಮಾರು ಎರಡು ಲೀಟರ್ ನೀರನ್ನು ಕುದಿಸು. ಅದನ್ನು ಬಿಸಿಬಿಸಿಯಾಗಿ ಅರ್ಧ ಅಥವಾ ಮುಕ್ಕಾಲು ಗಂಟೆಳಿಗೆ ಒಮ್ಮೆ, ಅಮೃತಬಳ್ಳಿ ಸತ್ವವನ್ನು ಸ್ವಲ್ಪ ಸೇರಿ, ಒಂದು ಮೂರ್ನಾಲ್ಕು ದಿನ ತಗೊಂಡ್ರೆ ನೋವು ಬೇಗ ಕಡಿಮೆ ಆಗುತ್ತೆ. ಇಲ್ಲದಿದ್ದರೆ ಅಮೃತಬಳ್ಳಿ, ಅಳಲೆಕಾಯಿ, ಜೀರಿಗೆ ಸೇರಿಸಿ ಕಷಾಯ ಮಾಡಿ ದಿನಕ್ಕೆ ಮೂರು ಬಾರಿ ಸೇವನೆ ಮಾಡಿದರೂ ನೋವು ಕಡಿಮೆ ಆಗೋದಕ್ಕೆ ಪ್ರಾರಂಭ ಆಗತ್ತೆ’ ಎಂದೆ.

ಕೂಡಲೇ ಮತ್ತೊಂದು ಪ್ರಶ್ನೆ ಹಾರಿ ಬಂತು, ‘ಡಾಕ್ಟ್ರೆ ಪಥ್ಯ ಏನಾದ್ರೂ ಮಾಡ್ಬೇಕಾ?’ ‘ಹೌದು, ಮಾಡ್ಬೇಕು. ಅಜೀರ್ಣ ಆಗುವ ರೀತಿಯಲ್ಲಿ, ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಸೇವಿಸಬಾರದು. ಮುಖ್ಯವಾಗಿ ಕರಿದ ಪದಾರ್ಥ, ಜಿಡ್ಡು ಹೆಚ್ಚಾಗಿರುವ ಪದಾರ್ಥ, ಅಕಾಲದಲ್ಲಿ ಆಹಾರ ಸೇವಿಸುವುದು – ಇವೆಲ್ಲವೂ ನೋವನ್ನು ಜಾಸ್ತಿ ಮಾಡುತ್ತದೆ. ಹೆಸರುಬೇಳೆ ಅಥವಾ ತೊಗರಿಬೇಳೆ ಜೊತೆಗೆ ಹೀರೆಕಾಯಿ, ಪಡವಲಕಾಯಿ, ಬೂದುಕುಂಬಳಕಾಯಿ, ಸೋರೆಕಾಯಿ ಇವುಗಳನ್ನು ಬಳಸಿ ತೊವ್ವೆ (ದಾಲ್) ಅಮೃತಬಳ್ಳಿ ಅಥವಾ ಪಡವಲದ ಎಲೆಯ ಪಲ್ಯ ಅತ್ಯಂತ ಪ್ರಶಸ್ತವಾದ ಆಹಾರ. ಮೊಸರಿನ ಬದಲು ಕಡೆದ ಮಜ್ಜಿಗೆ ಸೇವಿಸುವುದು. ತಂಪುಪೆಟ್ಟಿಗೆಯ ಆಹಾರ ವರ್ಜ್ಯ’ ಎಂದೆ.

ಪಕ್ಕದಲ್ಲೇ ಇದ್ದ ಆಕೆಯ ತಾಯಿ ‘ಈ ಚಳಿಗಾಲದಲ್ಲಿ ಸಾಮಾನ್ಯವಾಗಿ ನೋವುಗಳು ಜಾಸ್ತಿ ಆಗುತ್ತೆ, ಯಾಕೆ ಡಾಕ್ಟ್ರೆ?, ಮೈ ನೆವೆ, ತುರಿಕೆ, ನೆಗಡಿ, ಕೆಮ್ಮು ಎಲ್ಲಾ ಬರದೆ ಇರುವ ಹಾಗೆ ಏನಾದ್ರೂ ಉಪಾಯ ಇದ್ಯಾ?’ ಅಂತ ಕೇಳಿದ್ಲು.

‘ನೋಡಮ್ಮಾ ನಮ್ಮ ಬದಲಾದ ಜೀವನಶೈಲಿ, ಆಹಾರಪದ್ದತಿ – ಇವುಗಳೆಲ್ಲಾ ರೋಗ ಜಾಸ್ತಿ ಆಗೋಕ್ಕೆ ಕಾರಣ ಆಗ್ತಿದೆ. ನಮ್ಮ ಹಿಂದಿನವರು ಸಂಪ್ರದಾಯದ ಹೆಸರಿನಲ್ಲಿ ಆರೋಗ್ಯದ ಸೂತ್ರಗಳನ್ನು ತಿಳಿಸ್ತಾ ಇದ್ರು. ಒಂದೊಂದು ವೃತ್ತಿಯವರಿಗೆ ಒಂದೊಂದು ಹಬ್ಬ, ಆಚರಣೆ, ಇಂತಿತಹ ಹಬ್ಬದಲ್ಲಿ ಇಂತಹ ಆಹಾರವನ್ನೇ ಸೇವಿಸಬೇಕು ಎಂದು ಹೇಳುವ ಮುಖಾಂತರ ಆರೋಗ್ಯದ ಸೂತ್ರಗಳನ್ನು ಸುಲಭವಾಗಿ ಜನಗಳಿಗೆ ತಲುಪಿಸಿದ್ರು. ಆದ್ರೆ ಇವತ್ತು ವೃತ್ತಿಗನುಗುಣವಾದ ಆಹಾರ–ಆಚಾರ ಹೇಗೆ ಅನುಸರಿಸಬೇಕು ಎನ್ನುವುದು ತಿಳಿಯದೆ ಎಲ್ಲರೂ, ಎಲ್ಲಾ ಕಾಲದಲ್ಲೂ ಎಲ್ಲಾ ಆಹಾರವನ್ನೂ ಎಲ್ಲಾ ಪ್ರದೇಶದಲ್ಲೂ ಸೇವಿಸಬೇಕು ಎನ್ನುವ ನಿಯಮವೇ ನಮ್ಮ ವ್ಯಾಧಿಕ್ಷಮತೆಯನ್ನು ಕಡಿಮೆ ಮಾಡ್ತಾ ಇದೆ’.

‘ಈಗ ಚಳಿಗಾಲ ಶುರು ಆಯ್ತು. ಹಿಮದಿಂದ ಕೂಡಿರುವುದರಿಂದ ಇದನ್ನು ಹೇಮಂತಋತು ಎಂದು ಕರೆಯುತ್ತಾರೆ. ಈ ಕಾಲದಲ್ಲಿ, ಹಿಮದಲ್ಲಿ ಹೋಗುವುದರಿಂದ ಕೆಮ್ಮು, ನೆಗಡಿ, ಸೀನು, ಜ್ವರ, ಚರ್ಮದಲ್ಲಿ ತುರಿಕೆ ಇತ್ಯಾದಿಗಳು ಬರುವ ಸಾಧ್ಯ ಇರುತ್ತದೆ. ಆದ್ದರಿಂದ ಹೊರಗೆ ಹೋಗುವಾಗ ತಲೆಯನ್ನು ಮತ್ತು ಮೈಯನ್ನು ಬೆಚ್ಚಗೆ ಉಣ್ಣೆ, ದಪ್ಪವಾದ ಹತ್ತಿ ಬಟ್ಟೆಗಳನ್ನು ಅಥವಾ ಶಾಲ್, ಸ್ವೆಟರ್‌ಗಳನ್ನು ಹಾಕಿಕೊಂಡು ಹೋಗಬೇಕು. ಅಲ್ಲದೆ ಕೈ, ಕಾಲು, ಮುಖ, ತೊಳೆಯಲು ಬಿಸಿ/ಬೆಚ್ಚಗಿನ ನೀರನ್ನು ಬಳಸುವುದು ಉತ್ತಮ. ಅಲ್ಲದೆ, ಮೈ ಉಷ್ಣತೆಯನ್ನು ಕಾಪಾಡಲು ಮೈ ಬಿಸಿಯಾಗಿ ಬೆವರುವಷ್ಟು ವ್ಯಾಯಾಮವನ್ನು ನಿತ್ಯವೂ ಮಾಡಬೇಕು. ವ್ಯಾಯಾಮ ಮಾಡುವ ಮೊದಲು ‘ಬಲಾ ತೈಲ’ ಎಣ್ಣೆ ಹೆಚ್ಚಿ, ವ್ಯಾಯಾಮ ಮಾಡಿ ನಂತರ ಚರ್ಮಕ್ಕೆ ರಕ್ತಪರಿಚಲನೆಯನ್ನು ಹಾಗೂ ಉಷ್ಣತೆಯನ್ನು ಹೆಚ್ಚು ಮಾಡುವಂತಹ ವಸ್ತುಗಳಿಂದ ಮೈಯನ್ನು ಉಜ್ಜಬೇಕು. ಉದಾ: ದೇವದಾರು, ಅಗರು ಮುಂತಾದ ಚೂರ್ಣಗಳಿಂದ ಮೈಕೈ ಉಜ್ಜಿಕೊಂಡು ಬಿಸಿನೀರಿನಲ್ಲಿ ಸ್ನಾನ ಮಾಡಬೇಕು.

ಹೇಮಂತದಲ್ಲಿ ಆಹಾರ

ಈ ಕಾಲದಲ್ಲಿ ಸಾಮಾನ್ಯವಾಗಿ ಹಸಿವೆ ಹೆಚ್ಚಾಗುವುದರಿಂದ ಹೆಚ್ಚು ಪೌಷ್ಟಿಕವಾದ ಸಿಹಿಯಾದ, ಆಹಾರ, ಕಬ್ಬಿನಹಾಲು, ದೇಸಿ ಹಸುವಿನ ತುಪ್ಪ, ಹೊಸಅಕ್ಕಿಯಿಂದ ತಯಾರಿಸಿದ ಆಹಾರವನ್ನು ಸೇವಿಸಬೇಕು. ಉದ್ದಿನಬೇಳೆ, ಕಾಳುಗಳಿಂದ ತಯಾರಿಸಿದ, ಯಾವುದೇ ಕಾಳುಗಳು ಹೆಚ್ಚಾಗಿರುವ ಆಹಾರವನ್ನು ಉಪಯೋಗಿಸುವುದು ಒಳ್ಳೆಯದು. ಎಣ್ಣೆ ಕಾಳುಗಳಾದ ಎಳ್ಳು, ಕಡಲೆಕಾಯಿ, ಒಣಕೊಬ್ಬರಿ ಇವುಗಳ ಸೇವನೆ ಈ ಕಾಲದಲ್ಲಿ ಆರೋಗ್ಯಕರವೇ ಆಗುತ್ತದೆ. ಮಾಂಸಾಹಾರಿಗಳು ಮಾಂಸರಸ, ಛರ್ಬಿಯಿಂದ ತಯಾರಿಸುವ ಪದಾರ್ಥಗಳನ್ನು ಸೇವಿಸಬಹುದು. ಈ ಕಾಲದಲ್ಲಿ ಊಟಕ್ಕೆ ಹಸಿ ಎಣ್ಣೆ/ತುಪ್ಪ ಬಳಸಬಹುದು.

ಇಂದಿನ ಕಾಲದಲ್ಲಿ ನಗರ ಪ್ರದೇಶಗಳ ವಿಷಯ ಹೇಳಬೇಕೆಂದರೆ ಈ ಕಾಲದಲ್ಲಿ ನಾನ್, ಪರೋಟ, ಪಿಜ್ಜಾ ಮುಂತಾದವುಗಳು ಚೀಸ್–ಪನ್ನೀರಿನಿಂದ ತಯಾರಿಸಿದ ಪದಾರ್ಥಗಳನ್ನು ಮಿತವಾದ ಸೇವನೆಯ ನಂತರ ಬಿಸಿನೀರು ಅಥವಾ ಬಿಸಿನೀರಿಗೆ ನಿಂಬೆಹಣ್ಣನ್ನು ಹಿಂಡಿಕೊಂಡು ಸೇವಿಸಬೇಕು.

ಐಸ್‌ಕ್ರೀಮ್, ಬಾಳೆಹಣ್ಣುಗಳ ಸೇವನೆ ನಿಷಿದ್ಧ. ಈ ಕಾಲದಲ್ಲಿ ಹೆಚ್ಚಾಗಿ ಸಿಗುವ ಹಣ್ಣಾದ ಬೋರೆಹಣ್ಣು, ದೊಡ್ಡ ಬೋರೆಹಣ್ಣನ್ನು ಸೇವಿಸುವುದರಿಂದ ಬಲವೂ ಹೆಚ್ಚಾಗುತ್ತದೆ. ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ. ಬೇರೆಲ್ಲಾ ಹಣ್ಣುಗಳನ್ನು ತಿಂದಾಗ ಹೆಚ್ಚಾಗುವ ರೋಗಗಳು ಬೋರೆಹಣ್ಣನ್ನು ತಿನ್ನುವುದರಿಂದ ಬರುವುದಿಲ್ಲ’ ಎಂದೆ.

‘ಓಹೋ! ಅದಕ್ಕೆ ಈ ಕಾಲದಲ್ಲಿ ಎಲ್ಲಾ ದೇವಸ್ಥಾನಗಳಲ್ಲೂ ಪೊಂಗಲ್ ಕೊಡುವುದಾ? ಧನುರ್ಮಾಸದಲ್ಲಿ ಪೊಂಗಲ್ ತಿನ್ನಬೇಕು. ಅದಕ್ಕೆ ಮೆಣಸು, ಜೀರಿಗೆ, ತುಪ್ಪ ಹಾಕಿ ತಯಾರಿಸಬೇಕು ಅಂತ ಹೇಳುವುದು. ಸಂಕ್ರಾತಿಗೆ ಎಳ್ಳು–ಬೆಲ್ಲ ತಿನ್ನುವುದು. ಚಳಿ ಪ್ರಾರಂಭವಾಗುವಾಗ ಕಡಲೆಕಾಯಿ ಪರಿಷೆಯಲ್ಲಿ ಕಡಲೆಕಾಯಿ ತಂದು ತಿನ್ನಬೇಕು ಎನ್ನುವುದು’ ಎಂದಳು.

‘ಒಟ್ಟಾರೆ ಹೇಳುವುದಾದರೆ, ಬಿಸಿನೀರಿನ ಸೇವನೆ, ಆಯಾಯ ಪ್ರದೇಶಗಳ ಆಹಾರಪದ್ಧತಿಯ ಅನುಸರಣೆ, ಆ ಕಾಲದಲ್ಲಿ ಬೆಳೆಯುವ ಹಣ್ಣು–ತರಕಾರಿಗಳ ಸೇವನೆ, ನಿಯಮಿತ ವ್ಯಾಯಾಮ, ನಿತ್ಯವೂ ಮೈಗೆ ಎಣ್ಣೆ ಹಚ್ಚಿ ಬಿಸಿನೀರಿನಲ್ಲಿ ಸ್ನಾನ ಮಾಡುವುದು, ಬೆಚ್ಚಗಿನ ಬಟ್ಟೆ ಧರಿಸಿ ಚಳಿಯಿಂದ ರಕ್ಷಣೆ ಪಡೆಯುವುದು – ಇವೆಲ್ಲವೂ ಈ ಕಾಲದಲ್ಲಿ ಪಾಲಿಸಬೇಕಾದ ಆರೋಗ್ಯ ನಿಯಮಗಳು’ ಎಂದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry