7

ಬೆಟ್ಟ ಹತ್ತಿದ ಪುಟ್ಟು

Published:
Updated:

ಪುಟ್ಟುವು ಒಂದಿನ ಸಂಜೆಯ ವೇಳೆಗೆ

ಬೆಟ್ಟವನ್ಹತ್ತಲು ಬಯಸಿದನು

ಕಡಲೆ ಕಾಳಿನ ಪೊಟ್ಟಣ ಕಟ್ಟಿ

ಪುಟಾಣಿ ಜೇಬಲಿ ಇಳಿಸಿದನು

ಮನೆಯಲಿ ಯಾರಿಗು ಹೇಳದೆ ಕೇಳದೆ

ಗುಟ್ಟಲಿ ಪ್ರಯಾಣ ಬೆಳೆಸಿದನು

ಪುಟ್ಟನೆ ಪುಟ್ಟನೆ ಹೆಜ್ಜೆಯನಿಕ್ಕುತ

ಬೆಟ್ಟದ ತುದಿಯನು ಮುಟ್ಟಿದನು

ಅಂದದ ಚಂದದ ಹೂವುಗಳರಳಿ

ಘಮ ಘಮ ಪರಿಮಳ ಬೀರಿತ್ತು

ಬಗೆ ಬಗೆ ಬಣ್ಣದ ಚಿಟ್ಟೆಯ ಬಳಗವು

ಹೂವಿಂದ್ಹೂವಿಗೆ ಹಾರಿತ್ತು

ಕೆಂಪವು ಬಿಳಿಯವು ನೀಲಿ ರೆಕ್ಕೆಯವು

ಎನ್ನುತ ಲೆಕ್ಕವ ಹಾಕಿದನು

ಕಯ್ಯಿಗೆ ಸಿಕ್ಕರು ಹಿಡಿಯದೆ ಬಿಟ್ಟು

ಖುಷಿಯಲಿ ಚಪ್ಪಾಳೆ ತಟ್ಟಿದನು

ಕಡಲೆಯ ಕಾಳನು ನೆಲದಲಿ ಹರಡಿ

ಹಕ್ಕಿಯ ಹಿಂಡನು ಕೂಗಿದನು

ಹಕ್ಕಿಯು ಕಾಳನು ಹೆಕ್ಕಿ ತಿನ್ನಲು

ಸಾರ್ಥಕತೆಯಲಿ ಬೀಗಿದನು

ಬೆಟ್ಟದ ಮೇಲಿನ ಪರಿಸರದಲ್ಲಿ

ಆಹಾ ಎಂತಹ ಸೊಗಸಿಹುದು

ದಿನವೂ ಇಲ್ಲಿಗೆ ಬಂದೇ ಬರುವೆನು

ಎನ್ನುತ ಹೊರಟನು ಕೆಳಗಿಳಿದು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry