7

‘ಮುಂದಿನ ವರ್ಷ ಹೊಲಗಳಿಗೆ ನೀರು’

Published:
Updated:
‘ಮುಂದಿನ ವರ್ಷ ಹೊಲಗಳಿಗೆ ನೀರು’

ವಿಜಯಪುರ: ‘ಮುಳವಾಡ ಏತ ನೀರಾವರಿ ಯೋಜನೆಯಡಿಯ ಎಲ್ಲ ಶಾಖಾ ಕಾಲುವೆ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು, ಜನವರಿ ಅಂತ್ಯದೊಳಗೆ ಪ್ರಾಯೋಗಿಕವಾಗಿ ನೀರು ಹರಿಸಿ ಕೆರೆ ತುಂಬಲಾಗುವುದು. ಮುಂದಿನ ವರ್ಷದ ಮಳೆಗಾಲದಲ್ಲಿ ಹೊಲಕ್ಕೆ ನೀರು ಹರಿಸಲಾಗುವುದು’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತಿಳಿಸಿದರು.

ಮುಳವಾಡ ಏತ ನೀರಾವರಿ ಹಂತ ಮೂರರಡಿ ನಾಲ್ಕನೇ ಎ ಲಿಫ್ಟ್‌ ಯೋಜನೆಯಡಿ ಬಬಲೇಶ್ವರ ಶಾಖಾ ಕಾಲುವೆಗೆ ಶನಿವಾರ ಕೃಷ್ಣೆಯ ನೀರು ಹರಿಸಲು ಚಾಲನೆ ನೀಡಿದ ಸಚಿವರು, ಅಧಿಸೂಚನೆ ಹೊರಡಿಸುವ ಪೂರ್ವದಲ್ಲಿಯೇ ಎಲ್ಲ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

‘ಕೆರೆ ಜಾಲಗಳಿಗೆ ನೀರು ಹರಿಸುವ ಕಾರ್ಯ ನಡೆದಿದೆ. ಪ್ರಸ್ತುತ ಯೋಜನೆಗೆ 55 ಟಿಎಂಸಿ ನೀರು ನಿಗದಿಯಾಗಿದೆ. 5 ಲಕ್ಷ ಎಕರೆಗೂ ಹೆಚ್ಚಿನ ಪ್ರದೇಶ ನೀರಾವರಿ ಸೌಲಭ್ಯಕ್ಕೊಳಪಡಲಿದ್ದು, 120 ಕೆರೆಗಳನ್ನು ತುಂಬಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಬಬಲೇಶ್ವರ ಶಾಖಾ ಕಾಲುವೆಯಲ್ಲಿ ಶೂನ್ಯದಿಂದ 26 ಕಿ.ಮೀ.ವರೆಗೂ ನೀರು ಹರಿಯಲಿದೆ. ಈ ನೀರನ್ನು ಬಳಸಿಕೊಂಡು ಕಾಖಂಡಕಿ, ಬಬಲೇಶ್ವರ ಕೆರೆ ಭರ್ತಿ ಮಾಡಲಾಗುವುದು. ಜ 15ರೊಳಗೆ ನಿಡೋಣಿ ಕೆರೆ ತುಂಬಿದರೆ, ಅಂತ್ಯದೊಳಗೆ ಜಮಖಂಡಿ ತಾಲ್ಲೂಕಿನ ತೊದಲಬಾಗಿ ಕೆರೆಗೆ ನೀರು ತುಂಬಲಿದ್ದೇವೆ’ ಎಂದರು.

‘ಅಧಿಸೂಚನೆ ಪ್ರಕಟಗೊಂಡ ನಂತರ ಎಫ್‌ಸಿಐ (ಫೀಲ್ಡ್ ಇರಿಗೇಷನ್ ಕೆನಾಲ್, ಹೊಲಗಾಲುವೆ) ನಿರ್ಮಿಸಿ ನೀರು ಹರಿಸಲಾಗುವುದು. ಹೊಲಗಾಲುವೆ ನಿರ್ಮಾಣ ಕಷ್ಟವೇನಲ್ಲ. ಬಹಳ ದಿನಗಳು ಸಹ ಬೇಕಿಲ್ಲ. ಆಂಧ್ರ ಸೇರಿದಂತೆ ಇನ್ನಿತರೆ ರಾಜ್ಯಗಳು ಅಧಿಸೂಚನೆ ಪೂರ್ವದಲ್ಲೇ ನೀರಾವರಿ ಯೋಜನೆಗಳಿಗೆ ಅಗತ್ಯವಾದ ಕಾಮಗಾರಿ ನಿರ್ಮಿಸಿಕೊಂಡಿದ್ದವು.

ಇದೇ ಮಾದರಿಯಲ್ಲಿ ನಾವು ಸಹ ಅಧಿಸೂಚನೆ ಪೂರ್ವದಲ್ಲೇ ಈ ಕಾರ್ಯ ಕೈಗೆತ್ತಿಕೊಂಡಿದ್ದೇವೆ. ನೂತನವಾಗಿ ರಚನೆಯಾಗಿರುವ ತೆಲಗಾಂಣ, ಸೀಮಾಂಧ್ರ (ಆಂದ್ರಪ್ರದೇಶ) ನಡುವೆ ನೀರು ಹಂಚಿಕೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾ ಧೀಕರಣದ ಮುಂದಿದೆ’ ಎಂದರು.

15 ದಿನದಲ್ಲಿ ಚಾಲನೆ

45 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಕರ್ಯ ಕಲ್ಪಿಸುವ ಮನಗೂಳಿ ಶಾಖಾ ಕಾಲುವೆಯ ಕಾಮಗಾರಿಯೂ ಬಹುತೇಕ ಪೂರ್ಣಗೊಂಡಿದೆ. ಮುಂಬರುವ 15 ದಿನದೊಳಗೆ ಶಾಸಕ ಶಿವಾನಂದ ಪಾಟೀಲರ ಜತೆ ಕಾಲುವೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡುತ್ತೇನೆ ಎಂದು ಸಚಿವ ಎಂ.ಬಿ.ಪಾಟೀಲ ಇದೇ ಸಂದರ್ಭ ಪ್ರಕಟಿಸಿದರು.

* * 

ನೀರಾವರಿ ಯೋಜನೆಯೊಂದು ಪೂರ್ಣಗೊಳ್ಳಲು ದಶಕದ ಅವಧಿ ಬೇಕು. 18 ತಿಂಗಳಲ್ಲೇ ಪೂರ್ಣಗೊಳಿಸಿದ ಕೀರ್ತಿ, ಹೆಮ್ಮೆ ಜಲಸಂಪನ್ಮೂಲ ಇಲಾಖೆಯದ್ದು

ಎಂ.ಬಿ.ಪಾಟೀಲ, ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry