ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವೂ ಮುಖ್ಯವಾಹಿನಿಗೆ ಬರಬೇಕು...

Last Updated 17 ಡಿಸೆಂಬರ್ 2017, 9:20 IST
ಅಕ್ಷರ ಗಾತ್ರ

ಶನಿವಾರಸಂತೆ: ‘ನಾವೂ ಸಮಾಜದ ಮುಖ್ಯವಾಹಿನಿಗೆ ಬಂದು ಎಲ್ಲರಂತೆ ಬದುಕಬೇಕು. ಶಿಕ್ಷಣದ ಮೂಲಕ ಹಾಡಿ ಅಭಿವೃದ್ಧಿ ಹೊಂದಬೇಕು. ಹಾಡಿ ಜನರ ಅಭಿವೃದ್ಧಿಗೆ ಸರ್ವ ಪ್ರಯತ್ನ, ಹೋರಾಟ ನಡೆದಿದೆ’.

ಇದು ಶನಿವಾರಸಂತೆಯಿಂದ 10 ಕಿ.ಮೀ. ದೂರದ ಮಾಲಂಬಿ ಗ್ರಾಮದ ಜೇನುಕುರುಬ ಗಿರಿಜನರ ಹಾಡಿಯಲ್ಲಿ ನೆಲೆಸಿರುವ, ಆಲೂರು ಸಿದ್ಧಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾರಮೇಶ್ ಅವರ ಕನಸು.

ಗ್ರಾಮದ ಗಿರಿಜನರ ಹಾಡಿಯಲ್ಲಿ ಜೇನುಕುರುಬರು 85 ವರ್ಷಗಳಿಂದ ನೆಲೆಸಿದ್ದಾರೆ. 70 ಮನೆಗಳಲ್ಲಿ 73 ಕುಟುಂಬಗಳಿದ್ದು, 350 ಜನಸಂಖ್ಯೆ ಇದೆ. 2012–13ನೇ ಸಾಲಿನಲ್ಲಿ ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆ ವತಿಯಿಂದ 60 ಮನೆಗಳು ಅಭಿವೃದ್ಧಿ ಕಂಡಿವೆ. ಉಳಿದ 10 ಮನೆಗಳ ಸ್ಥಿತಿ ಶೋಚನೀಯವಾಗಿದೆ. ಹೊಸ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ. ಹಳೆ ಮನೆಗಳ ಪೈಕಿ ಕೆಲವು ಮನೆಗಳಲ್ಲಿ ಮಾತ್ರ ವಿದ್ಯುತ್ ದೀಪಗಳು ಬೆಳಗುತ್ತಿವೆ. ಕೊಳವೆ ಬಾವಿ, ಪಂಚಾಯಿತಿಯಿಂದ ನೀರು ಸರಬರಾಜು ವ್ಯವಸ್ಥೆಯಿದ್ದರೂ ಕುಡಿಯುವ ನೀರಿನ ಸಮಸ್ಯೆಯಿದೆ.

ಹಾಡಿಯಲ್ಲಿ ಮನೆಗಳೇನೋ ಅಭಿವೃದ್ಧಿ ಕಾಣುತ್ತಿವೆ. ಆದರೆ, ಅಲ್ಲಿನ ನಿವಾಸಿಗಳಲ್ಲಿ ವಿದ್ಯೆಯ ಕೊರತೆ ಇದೆ. ಹಾಡಿಯ ಪಕ್ಕದಲ್ಲೇ ಗಿರಿಜನರ ಆಶ್ರಮ ಶಾಲೆ ಇದ್ದರೂ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಮಕ್ಕಳು ಇಷ್ಟಪಟ್ಟರೂ ಹಿರಿಯರು ಮಾತ್ರ ಆ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಜೇನು ಸಾಕಾಣಿಕೆ ಕುಲಕಸುಬಾದರೂ ಬೆರಳೆಣಿಕೆ ಮಂದಿ ಮಾತ್ರ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಹಾಡಿಯ ಹೆಣ್ಣುಮಗಳು, 7ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿರುವ ವೀಣಾರಮೇಶ್ ಪಂಚಾಯಿತಿ ಅಧ್ಯಕ್ಷೆಯಾದ ಬಳಿಕ 45 ಮನೆಗಳಿಗೆ ಶೌಚಾಲಯ ಒದಗಿಸಿದ್ದಾರೆ. ಶೇ 25 ಕುಟುಂಬಗಳಿಗೆ ರೇಷನ್ ಕಾರ್ಡ್ ದೊರೆತ್ತಿದ್ದು, ಉಳಿದವರು ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದಾರೆ.

35 ಮಕ್ಕಳು ಆಶ್ರಮ ಶಾಲೆಯಲ್ಲಿ ಕಲಿಯುತ್ತಿದ್ದು, ಪಂಚಾಯಿತಿ ಅಧ್ಯಕ್ಷೆ ವೀಣಾ ಅವರ ಪತಿ ಜೆ.ಎಲ್.ರಮೇಶ್ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದಾರೆ. ಯುವಕರು 12 ಜನರ ಸಮಿತಿಯೊಂದನ್ನು ರಚಿಸಿಕೊಂಡಿದ್ದು, 3 ತಿಂಗಳಿಗೊಮ್ಮೆ ಸಭೆ ನಡೆಸಿ ಚರ್ಚೆ ನಡೆಸುತ್ತಾರೆ.‌

ಗಿರಿಜನರ ಹಾಡಿಯಲ್ಲಿ 20 ಮಂದಿ ಮಾತ್ರ ಗುರುತಿನ ಚೀಟಿ ಹೊಂದಿದ್ದಾರೆ. ಇನ್ನೂ 200 ಮಂದಿಗೆ ಗುರುತಿನ ಚೀಟಿಯ ಅವಶ್ಯಕತೆಯಿದ್ದು, ಮಾಡಿಸಿಕೊಡುವ ಭರವಸೆ ವೀಣಾರಮೇಶ್ ಅವರದ್ದು.

‘ಹಾಡಿ ಬದಲಾಗಬೇಕು, ಅಭಿವೃದ್ಧಿ ಹೊಂದಬೇಕೆಂದರೆ ಮೊದಲಿಗೆ ದುಶ್ಚಟ ಮುಕ್ತರಾಗಬೇಕು. ಸರ್ಕಾರದ ಸೌಲಭ್ಯಗಳ ಸದುಪಯೋಗವಾಗಬೇಕು’ ಎನ್ನುತ್ತಾರೆ ಮೂಲ ಆದಿವಾಸಿಗಳ ರಕ್ಷಣಾ ವೇದಿಕೆ ಜಿಲ್ಲಾ ಸಂಚಾಲಕ ರಂಗಸಮುದ್ರದ ಬಿ.ಕೆ.ಧರ್ಮಪ್ಪ.

* * 

ಗಿರಿಜನರ ಹಾಡಿಗೆ ಅಂಗನವಾಡಿ ಕೇಂದ್ರ ಅಗತ್ಯವಾಗಿ ಬೇಕು. ಜತೆಗೆ, ಇಲ್ಲಿನ ಆಶ್ರಮ ಶಾಲೆಯಲ್ಲಿ 10ನೇ ತರಗತಿವರೆಗೆ ಶಿಕ್ಷಣ ನೀಡಬೇಕು‌
ವೀಣಾರಮೇಶ್, ಆಲೂರು ಸಿದ್ಧಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT