7

ಅಧಿಕಾರಕ್ಕೆ ಬಂದರೆ ಕೃಷ್ಣಾ ಬಿ ಸ್ಕೀಂ ಪೂರ್ಣ

Published:
Updated:
ಅಧಿಕಾರಕ್ಕೆ ಬಂದರೆ ಕೃಷ್ಣಾ ಬಿ ಸ್ಕೀಂ ಪೂರ್ಣ

ಕೊಪ್ಪಳ: ತಾವು ಅಧಿಕಾರಕ್ಕೆ ಬಂದಲ್ಲಿ ಕೃಷ್ಣಾ ಬಿ ಸ್ಕೀಂನ ಎಲ್ಲ ಕಾಮಗಾರಿಗಳನ್ನು ಮುಗಿಸಲು ₹ 1 ಲಕ್ಷ ಕೋಟಿ ಅನುದಾನ ವನ್ನು ಪ್ರಧಾನಿಯ ಕಾಲು ಹಿಡಿದಾದರೂ ತರುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದ ಎಲ್ಲ ನೀರಾವರಿ ಯೋಜನೆಗಳನ್ನು ಜವಾಬ್ದಾರಿಯಿಂದ ಮುಗಿಸುತ್ತೇನೆ. ಇಲ್ಲವಾದಲ್ಲಿ ಜನರಿಗೆ ಮುಖ ತೋರಿಸುವುದಿಲ್ಲ ಎಂದರು.

ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಕೊನೆಯ ಹಂತದಲ್ಲಿ ಸಾವಿರ ಕೋಟಿಯ ಕಾಮಗಾರಿಗೆ ಶಂಕುಸ್ಥಾಪನೆ ಮಾಡುವ ಮೂಲಕ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಶಾಸಕರ ಆಪ್ತ ಸಹಾಯಕರಿಗೆ ಸಂಬಳ ಕೊಡಲೂ ಸರ್ಕಾರದಲ್ಲಿ ಹಣ ಇಲ್ಲ. ಹೀಗೆ ಮಾಡಿದರೆ ಜನ ಮುಂದೊಂದು ದಿನ ಬಡಿಗೆ ತೆಗೆದುಕೊಂಡು ಬರುತ್ತಾರೆ ಎಂದು ಕಿಡಿ ಕಾರಿದರು.

‘ಮಹದಾಯಿ ಯೋಜನೆ ಕಾಂಗ್ರೆಸ್‌ ಸರ್ಕಾರದ ಪಾಪದ ಕೂಸು ಎಂದು ಜರಿದ ಅವರು, ಈ ವಿಚಾರದಲ್ಲಿ ನನಗೆ ಜ್ಞಾನ ಇಲ್ಲ' ಎಂದು ನೀರಾವರಿ ಸಚಿವ ಎಂ.ಬಿ.ಪಾಟೀಲ್‌ ಹೇಳುತ್ತಿದ್ದಾರೆ. 'ಹಾಗಿದ್ದರೆ ಇಷ್ಟು ದಿನ ನೀವೇನು ಕತ್ತೆ ಕಾಯುತ್ತಿದ್ದೀರಾ' ಎಂದು ಗುಡುಗಿದರು. ‘ಮಹದಾಯಿ ಯೋಜನೆ ಸಂಬಂಧ ಗೋವಾ ಸರ್ಕಾರದ ಮುಖ್ಯಮಂತ್ರಿ ಜತೆ ಮಾತನಾಡಿ 15 ದಿನಗಳ ಒಳಗೆ ಸಮಸ್ಯೆ ಬಗೆಹರಿಸುವುದಾಗಿ' ಅವರು ಹೇಳಿದರು.

ಹಗುರ ಮಾತಿಗೆ ಸಿಡಿಮಿಡಿ: ಮಾತಿನು ದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಜರಿದ ಬಿಎಸ್‌ವೈ, ‘ನನ್ನ ಬಗ್ಗೆ ಹಗುರವಾಗಿ ಮಾತನಾಡಿದರೆ ಗುಜರಾತ್‌ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಮನೆಗೆ ಕಳುಹಿಸುವಂತೆ ಇಲ್ಲಿಯೂ ಕಳುಹಿಸಲಾಗುವುದು' ಎಂದು ಎಚ್ಚರಿಸಿದರು.

ಕಾಂಗ್ರೆಸ್‌ ಸೋತಾಗ ಅಚ್ಚೇದಿನ್‌ 'ಅಚ್ಚೇದಿನ್‌ ಯಾವಾಗ ಬರುತ್ತದೆ ಎಂದು ಸಿದ್ದರಾಮಯ್ಯ ಪ್ರಶ್ನಿಸುತ್ತಿದ್ದಾರೆ, ಡಿ. 18ರಂದು ಗುಜರಾತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತು ನೆಲಕಚ್ಚಿದಾಗ ಅಚ್ಚೇದಿನ್‌ ಬರುತ್ತದೆ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದ, ಅವರ ಅಂತ್ಯಸಂಸ್ಕಾರಕ್ಕೂ ರಾಜ್‌ಘಾಟ್‌ನಲ್ಲಿ ಜಾಗ ಕೊಡದ ಕಾಂಗ್ರೆಸ್‌ ಈಗ ದಲಿತರ ಬಗ್ಗೆ ಮಾತನಾಡುತ್ತಿದೆ. ದಲಿತರ ಜತೆ ಚೆಲ್ಲಾಟ ಆಡುವ ಕಾಂಗ್ರೆಸ್‌ನ ಪ್ರವೃತ್ತಿಗೆ ದಿಕ್ಕಾರವಿರಲಿ' ಎಂದರು.

ಮಾಜಿ ಸಚಿವ ಲಕ್ಷ್ಮಣ ಸವದಿ ಮಾತನಾಡಿ, 'ದೇಶದ ಪ್ರಧಾನಿಗೇ ನೀಚ ಜಾತಿಯವರು ಎಂದು ಕರೆದ ಮಾತು ಕಾಂಗ್ರೆಸ್‌ನ ಸಂಸ್ಕೃತಿಯನ್ನು ತೋರಿಸುತ್ತದೆ. ಹಣದ ಅಹಂಕಾರದಿಂದ ಬೀಗುವವರು ಹೆಮ್ಮೆಯಿಂದ ತಿರುಗುವುದು ಬೇಡ. ಒಮ್ಮೆಲೆ ಎತ್ತಿಕೊಂಡು ಹೋಗುವಾಗ ಬಿಕ್ಕಿ ಅಳುವ ಪರಿಸ್ಥಿತಿ ಬರುತ್ತದೆ. ಅದರಂತೆಯೇ ಈಗ ಸಚಿವರುಗಳ ಮನೆ ಮೇಲೆ ದಾಳಿ ನಡೆಯುತ್ತಿದೆ. ಅವರು ಅಳುವ ಸ್ಥಿತಿ ಬಂದಿದೆ' ಎಂದರು.

'ಜಿಲ್ಲಾ ಉಸ್ತುವಾರಿ ಸಚಿವ ಸೊಗಲಾಡಿ ಬಸವರಾಜ ರಾಯರಡ್ಡಿ ಅವರು ಸಂಬಳ ತೆಗೆದುಕೊಳ್ಳುವುದಿಲ್ಲ ಎಂದಿ ದ್ದಾರೆ. ಆದರೆ ಗಿಂಬಳ ಹಲವು ಕಡೆಗಳಿಂದ ಚೆನ್ನಾಗಿ ಪಡೆಯುತ್ತಾರೆ. ಇದೆಲ್ಲವನ್ನೂ ಡಿ.19ರಂದು ಕುಕನೂರಿನಲ್ಲಿ ತೆರೆದಿಡುತ್ತೇನೆ. ಸಾಧ್ಯ ವಿದ್ದರೆ ಅವರೂ ಅದೇ ವೇದಿಕೆಗೆ ಬರಲಿ' ಎಂದು ಆಹ್ವಾನಿಸಿದರು. 'ಕೊಪ್ಪಳ, ವಿಜಯಪುರ, ಧಾರ ವಾಡ ಜಿಲ್ಲಾ ಉಸ್ತುವಾರಿ ಸಚಿವರು ವೀರಶೈವ-ಲಿಂಗಾಯತ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಬಸವಣ್ಣನ ಹೆಸರಿ ಟ್ಟುಕೊಂಡು ಅವರ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ‌' ಎಂದು ಟೀಕಿಸಿದರು.

ಬಸವರಾಜ ಬೊಮ್ಮಾಯಿ ಮಾತನಾಡಿ, ‘ನೀರಾವರಿ ಯೋಜನೆ ವಿಚಾರದಲ್ಲಿ ಕಾಂಗ್ರೆಸ್ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದೆ. ಮುಖ್ಯಮಂತ್ರಿ ರಾಜಶಕ್ತಿಯನ್ನು ಹಿಡಿದು ಹೊರಟಿದ್ದಾರೆ. ಪರಿವರ್ತನಾ ಯಾತ್ರೆ ಜನಶಕ್ತಿಯನ್ನು ನಂಬಿ ಹೊರಟಿದೆ. ರಾಜಶಕ್ತಿ- ಜನಶಕ್ತಿಯ ನಡುವಿನ ಸಂಘರ್ಷದಲ್ಲಿ ಜನಶಕ್ತಿಯೇ ಗೆದ್ದಿದೆ' ಎಂದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, 'ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಸುಮಾರು 3 ಸಾವಿರ ರೈತರು ಸತ್ತಿದ್ದಾರೆ. ಅವರ ಬಗ್ಗೆ ಹಗುರವಾಗಿ ಪರಿಗಣಿಸಿದವರೇ ಮುಖ್ಯಮಂತ್ರಿ ಸಿದ್ದರಾಮಯ್ಯ. ಮರಳು ಸಾಗಾಟದ ಅವ್ಯವಹಾರದಲ್ಲಿ ಕ್ಷೇತ್ರದ ಶಾಸಕರು ಮತ್ತು ಅವರ ಬೆಂಬಲಿಗರೇ ಶಾಮೀಲಾಗಿದ್ದಾರೆ' ಎಂದರು.

ಶಾಸಕರಾದ ಸಿ.ಟಿ.ರವಿ, ದೊಡ್ಡನ ಗೌಡ ಪಾಟೀಲ, ಮಾಜಿ ಸಚಿವ ಗೋವಿಂದ ಕಾರಜೋಳ, ಮುಖಂಡರಾದ ಸಿ.ವಿ.ಚಂದ್ರಶೇಖರ, ಈಶಾನ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಕೆ.ಬಿ.ಶ್ರೀನಿವಾಸ್‌, ಮಾಜಿ ಶಾಸಕರಾದ ಕೆ.ಶರಣಪ್ಪ, ಪರಣ್ಣ ಮುನವಳ್ಳಿ, ಕನಕಗಿರಿ ಕ್ಷೇತ್ರದ ಅಭ್ಯರ್ಥಿ ಬಸವರಾಜ ದಡೇಸೂಗೂರು, ಚಂದ್ರು ಕವಲೂರು, ಅಮರೇಶ್‌ ಕರಡಿ ಇದ್ದರು. ಹಾಲೇಶ್‌ ಕಂದಾರಿ, ತೋಟಪ್ಪ ಕಾಮನೂರು ಕಾರ್ಯಕ್ರಮ ನಿರೂಪಿಸಿದರು. ಶಿವಕುಮಾರ ಹಕ್ಕಾಪಿಕ್ಕಿ ವಂದಿಸಿದರು.

‘ಸೀರೆ ಹರಿದಿದ್ದರೆ ರಾಜಕೀಯ ನಿವೃತ್ತಿ’

'ಸಿದ್ದರಾಮಯ್ಯ ತಮ್ಮ ಭಾಷಣಗಳಲ್ಲಿ ನನ್ನ ಸರ್ಕಾರದ ಅವಧಿಯಲ್ಲಿ ಕೊಟ್ಟಿದ್ದು ಹರಿದ ಸೀರೆ, ಮುರುಕು ಸೈಕಲ್‌ ಎಂದು ಅಣಕಿಸುತ್ತಿದ್ದಾರೆ. ಭಾಗ್ಯಲಕ್ಷ್ಮೀ ಯೋಜನೆ ಅಡಿಯಲ್ಲಿ ಹೆಣ್ಣುಮಕ್ಕಳಿಗೆ ಕೊಟ್ಟ ಸೀರೆಗಳಲ್ಲಿ ಒಂದಾದರೂ ಹರಿದ ಉದಾಹರಣೆ ಇದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ' ಎಂದು ಯಡಿಯೂರಪ್ಪ ಹೇಳಿದರು.

'18 ಲಕ್ಷ ಹೆಣ್ಣುಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಭಾಗ್ಯಲಕ್ಷ್ಮ್ಮೀ ಯೋಜನೆ, ವಿಧವಾ ಮಾಸಾಶನ, ಸುವರ್ಣ ಗ್ರಾಮ ಯೋಜನೆ, ವೃದ್ಧಾಪ್ಯ ವೇತನ ಇಂಥ ಯೋಜನೆಗಳನ್ನು ತಂದದ್ದು ನಮ್ಮ ಸರ್ಕಾರವಲ್ಲವೇ' ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರನ್ನು ತಲೆತಿರುಕರು ಎಂದು ಕೆಣಕಿದ ಅವರು, 'ಈ ಇಬ್ಬರು ಮಾತನಾಡುವುದನ್ನು ನೋಡಿದರೆ ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗುತ್ತದೆ. ಈ ದರಿದ್ರ ಸರ್ಕಾರ ಯಾವಾಗ ಹೋಗುತ್ತದೋ ಎಂದು ಜನ ಕಾಯುತ್ತಿದ್ದಾರೆ' ಎಂದರು.

ಕಾಂಗ್ರೆಸ್‌ನಿಂದಲೆ ಅಕ್ಕಿ ಲೂಟಿ

ಅನ್ನಭಾಗ್ಯದ ಅಕ್ಕಿಯನ್ನು ಯಲಬುರ್ಗಾದಲ್ಲಿ ಕಾಂಗ್ರೆಸ್‌ ಬೆಂಬಲಿಗರೇ ಕದ್ದು ಮಾರುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಗೋಧಿ ಬರುತ್ತಿದ್ದರೂ ಅದು ಜನರಿಗೆ ತಲುಪುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಅವರು ಲ್ಯಾಪ್‌ಟಾಪ್‌ ಹಗರಣ ಮತ್ತು ಅಂಕಪಟ್ಟಿ ಹಗರಣಗಳಲ್ಲಿ ಸಿಲುಕಿದ್ದಾರೆ. ಅವೆಲ್ಲಾ ಆರೋಪಗಳು ಸಾಬೀತಾದರೆ ಅವರೂ ಮನೆಗೆ ಹೋಗುವುದು ನಿಶ್ಚಿತ' ಎಂದು ಬಿಎಸ್‌ವೈ ಹೇಳಿದರು.

* * 

ಗುಜರಾತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತು ನೆಲಕಚ್ಚಿದಾಗ ಅಚ್ಚೇದಿನ್‌ ಬರುತ್ತದೆ.

ಬಿ.ಎಸ್‌.ಯಡಿಯೂರಪ್ಪ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry