7

‘ತ್ರಿಕೂಟೇಶ್ವರ ರಥ ಬೀದಿ’ ಸಂಚಾರಕ್ಕೆ ಮುಕ್ತ

Published:
Updated:
‘ತ್ರಿಕೂಟೇಶ್ವರ ರಥ ಬೀದಿ’ ಸಂಚಾರಕ್ಕೆ ಮುಕ್ತ

ಗದಗ: ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ನಗರದ ತ್ರಿಕೂಟೇಶ್ವರನ ದೇವಸ್ಥಾನಕ್ಕೆ ಭಕ್ತರು ಇನ್ನು ಸುಲಭವಾಗಿ ತಲುಪಬಹುದು. ಮುಳಗುಂದ ನಾಕಾದಿಂದ ದೇವಸ್ಥಾನದವರೆಗೆ ಸಂಪರ್ಕ ಕಲ್ಪಿಸಲು ಹೊಸದಾಗಿ ನಿರ್ಮಾಣವಾದ ಸಿಮೆಂಟ್‌ ರಸ್ತೆಯು ಕಳೆದ ವಾರದಿಂದ ಸಾರ್ವಜನಿಕರ ಬಳಕೆಗೆ ಮುಕ್ತಗೊಂಡಿದೆ. ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಈ ರಸ್ತೆಗೆ ‘ತ್ರಿಕೂಟೇಶ್ವರ ರಥ ಬೀದಿ’ ಎಂದೇ ನಾಮಕರಣ ಮಾಡಲಾಗಿದೆ.

ಹೊಸ ರಸ್ತೆ ನಿರ್ಮಾಣಗೊಂಡ ಬೆನ್ನಲ್ಲೇ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಸಾರ್ವಜನಿಕ ವಲಯದಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ಹಿಂದೆ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲು ಮುಳಗುಂದ ನಾಕಾದಿಂದ ಅರ್ಧ ಕಿ.ಮೀ. ಕಚ್ಚಾ ರಸ್ತೆ ಮೂಲಕ ಹಲವು ಒಣಿ, ಬಡಾವಣೆಗಳನ್ನು ದಾಟಿ ಬರಬೇಕಿತ್ತು. ಸದ್ಯ ಹೆಸ್ಕಾಂ ಕಚೇರಿ ಎದುರಿನ ರಸ್ತೆಯಿಂದ ಮುಖ್ಯ ರಸ್ತೆ ನಿರ್ಮಾಣವಾಗಿರುವುದು ಹೆಚ್ಚು ಅನುಕೂಲವಾಗಿದೆ.

ಈ ದೇವಸ್ಥಾನದ ವಿಶೇಷತೆಯನ್ನು ಶಾಸನ ಕವಿ ಮಲ್ಲ ರಚಿಸಿರುವ ಗದುಗಿನ ಸ್ಥಳಪುರಾಣ ಕೃತಪುರ ಮಹಾತ್ಮೆಯಲ್ಲಿ ವರ್ಣಿಸಲಾಗಿದೆ. ಬ್ರಹ್ಮ, ವಿಷ್ಣು, ಮಹೇಶ್ವರ ಮೂರ್ತಿಗಳನ್ನು ಇಲ್ಲಿ ಕಾಣಬಹುದು. ಶಿಲ್ಪಕಲೆ ಮತ್ತು ಧಾರ್ಮಿಕತೆಯ ಅಪರೂಪದ ಸಂಗಮವಾದ. ಇಲ್ಲಿ ವರ್ಷವೀಡಿ ಉತ್ಸವ, ಹೋಮ, ಹವನ, ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕರ್ಮಗಳು ನಡೆಯುತ್ತಿರುತ್ತವೆ. ಪಕ್ಕದಲ್ಲೇ ಇರುವ ಸರಸ್ವತಿ ದೇವಸ್ಥಾನದಲ್ಲಿ ಮಕ್ಕಳ ಅಕ್ಷರಾಭ್ಯಾಸಕ್ಕೆ ಅವಕಾಶ ನೀಡಲಾಗಿದೆ.

ಇಲ್ಲಿ ತ್ರಿಕೂಟೇಶ್ವರ, ಸರಸ್ವತಿ, ಅಷ್ಟಭುಜ ಮಹಾಗಣಪತಿ, ಹಾವಳಿ ತ್ರಯಂಬಕೇಶ್ವರ, ರಾಮೇಶ್ವರ, ಅಖಿಲಾಂಡೇಶ್ವರ, ನಂದಿ, ಗಾಯತ್ರಿ, ಸಾವಿತ್ರಿ, ಶಂಕರಾಚಾರ್ಯರು, ಸ್ವಾಮಿ ಬ್ರಹ್ಮಚೈತನ್ಯ ಮಹಾರಾಜರ ಮೂರ್ತಿಗಳನ್ನು ಪೂಜಿಸಲಾಗುತ್ತಿದೆ.

‘ಬ್ರಹ್ಮನ ಮಾನಸ ಪುತ್ರರಲ್ಲಿ ಆರನೇಯವನಾದ ಕೃತುವು ಭೂಲೋಕದಲ್ಲಿ ತಪಸ್ಸು ಮಾಡಲು ಕೃತಪುರಕ್ಕೆ ಬಂದನು. ಆಗ ಕೃತುವಿನ ಪ್ರಾರ್ಥನೆಗೆ ಮೆಚ್ಚಿ ನಾರಾಯಣ, ಶಿವ, ಬ್ರಹ್ಮ ಪ್ರತ್ಯಕ್ಷರಾದರು. ಶಿವನು ಕೃತುವಿಗೆ ‘ನಾವು ಮೂವರು ಒಂದೇ, ನಮ್ಮಲ್ಲಿ ತಾತ್ವಿಕ ಬೇಧವಿಲ್ಲ, ನಾವು ಇಲ್ಲೇ ನೆಲೆಸುವುದರಿಂದ ನೀನು ಒಂದೇ ಪೀಠದಲ್ಲಿ ಮೂರು ಲಿಂಗಗಳನ್ನು ಪ್ರತಿಷ್ಠಾಪಿಸು’ ಎಂದು ಹೇಳಿದನು. ಇದರಂತೆ ಕೃತುವು ಘಂಟಾಕರ್ಣನಿಗೆ ಈ ಪ್ರದೇಶವನ್ನು ಸ್ವಚ್ಛಗೊಳಿಸಿ, ಶಿಲ್ಪಿಗಳಿಂದ ತ್ರಿಕೂಟೇಶ್ವರ ದೇವಸ್ಥಾನ ನಿರ್ಮಿಸಲು ಹೇಳಿದ. ನೂರಾರು ವರ್ಷಗಳಿಂದ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮುಂದುವರಿಯುತ್ತಾ ಬಂದಿವೆ. ‘1850ರಿಂದ ನರಸಿಂಹಭಟ್, ತೃಯಂಬಕ ಭಟ್ ಪೂಜಾರ ಅವರು ಅರ್ಚಕರಾಗಿದ್ದರು. ಸದ್ಯ ಅದೇ ಮನೆತನದವರು ಅರ್ಚಕರಾಗಿ ಕಾರ್ಯನಿರ್ವಹಿಸುತ್ತಾದ್ದಾರೆ’ ಎಂದು ತ್ರಿಕೂಟೇಶ್ವರ ಭಕ್ತ ಮಂಡಳಿಯ ಸಂಚಾಲಕ ರಮೇಶ ಪೂಜಾರ ತಿಳಿಸಿದರು.

‘ಮೂರು ವರ್ಷದ ಹಿಂದೆ ಗದುಗಿನ ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನ ವೀಕ್ಷಿಸಲು ಬಂದಾಗ, ಕೆಲವು ಓಣಿಗಳನ್ನು ಸುತ್ತು ಹಾಕಿಕೊಂಡು ಕಚ್ಚಾ ರಸ್ತೆ ಮೂಲಕ ಬರಬೇಕಾಯಿತು. ಈಗ ಹೊಸದಾಗಿ ನಿರ್ಮಿಸಿರುವ ರಥಬೀದಿಯಿಂದ ನಾಲ್ಕು ನಿಮಿಷದಲ್ಲಿ ದೇವಸ್ಥಾನವನ್ನು ತಲುಪಿದೆವು’ ಎಂದು ಪ್ರವಾಸಿ ಹಾವೇರಿಯ ಜಿಲ್ಲೆಯ ಮೋಹನ ಸಿಂಗ್ ಅಭಿಪ್ರಾಯಪಟ್ಟರು.

* * 

ಆಧ್ಯಾತ್ಮಿಕ, ವಾಸ್ತುಶಿಲ್ಪ ಕೇಂದ್ರವಾದ ತ್ರಿಕೂಟೇಶ್ವರ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸಲು ರಥಬೀದಿ ನಿರ್ಮಿಸಿರುವುದರಿಂದ ಪ್ರವಾಸಿಗರಿಗೆ, ಭಕ್ತರಿಗೆ ಅನುಕೂಲವಾಗಿದೆ.

ರಮೇಶ ಪೂಜಾರ

ತ್ರಿಕೂಟೇಶ್ವರ ಭಕ್ತ ಮಂಡಳಿಯ ಸಂಚಾಲಕ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry